ದೇವನೂರು ಮಹದೇವ ಅವರ ‘ಎದೆಗೆ ಬಿದ್ದ ಅಕ್ಷರ’ ದಲ್ಲಿ ಇರುವ ಒಂದು ಕಥೆ ಅಸ್ಪಷ್ಟವಾಗಿ ನೆನಪಿಗೆ ಬರುತ್ತಿದೆ. ಒಬ್ಬ ಯುವಕ ಜಗತ್ತನ್ನು ಬದಲಾಯಿಸಿಬಿಡಬೇಕು, ಕ್ರಾಂತಿ ಮಾಡಬೇಕು, ಭ್ರಷ್ಟಾಚಾರವನ್ನು ಕಿತ್ತೆಸೆಯಬೇಕೆಂದು ಆ ದಿಕ್ಕಿನ ಕಡೆಗೆ ಹೊರಾಡುತ್ತಾನೆ. ಯಾರೋ ಒಬ್ಬರು ಹೇಳುತ್ತಾರೆ, ನಿನ್ನೆಲ್ಲ ಸಮಸ್ಯೆಗೆ ಪರಿಹಾರ ಸೂಚಿಸುವ ಮಾಂತ್ರಿಕ ಶಕ್ತಿ- ವ್ಯಕ್ತಿಯೊಂದಿಗೆ ಇಂಥ ಕಡೆ ಕಟ್ಟಡದ 5 ನೇ ಮಹಡಿಯ ಮೇಲಿದ್ದಾನೆ ಎಂದು. ಯುವಕ ಆಸೆಗಣ್ಣಿನಿಂದ ಆ ಕಟ್ಟಡವನ್ನು ಹುಡುಕಿಕೊಂಡು ಹೋಗಿ ಇನ್ನೇನು ಮಹಡಿ ಮೆಟ್ಟಲು ಏರಬೇಕೆನ್ನುವಾಗ 1ನೇ ಮಹಡಿಯ ಕಾವಲುಗಾರ ಮೇಲೆ ಹತ್ತಬೇಕಾದರೆ ನಿನ್ನ ಕಿವಿ ಕೊಡಬೇಕು ಎಂದು ಕೇಳುತ್ತಾನೆ. ಯುವಕ ಕಿವಿ ಕೊಡಬೇಕು ಎಂದು ಕೇಳುತ್ತಾನೆ. ಯುವಕ ಕಿವಿ ಕೊಟ್ಟು 2 ನೇ ಮಹಡಿಗೆ ಹೆಜ್ಜೆ ಇಡುವ ಹೊತ್ತಿಗೆ ಅಲ್ಲಿಯ ರಕ್ಷಕ ಬಾಯಿಯನ್ನು ಬೇಡುತ್ತಾನೆ. 3ನೇ ಹಂತದಲ್ಲಿ ನಿನ್ನ ನೆನಪಿನ ಶಕ್ತಿಯನ್ನು ಕೊಡು ಎಂದು ಕಾವಲುಗಾರ ವಶಪಡಿಸಿಕೊಳ್ಳುತ್ತಾನೆ. 4ನೇ ಮಹಡಿಯಲ್ಲಿರುವವ ಹೃದಯವನ್ನೇ ಕಿತ್ತುಕೊಳ್ಳುತ್ತಾನೆ. ಇವೆಲ್ಲವನ್ನು ಕಳೆದುಕೊಂಡ ಯುವಕ 5ನೇ ಮೆಟ್ಟಲು ಏರಿದಾಗ ಅಲ್ಲಿ ಆ ಶಕ್ತಿ ಕೊಡಬಲ್ಲ ರಾಕ್ಷಸ ವಿಕಾರವಾಗಿ ನಗುತ್ತಿದ್ದಾನೆ. ಅವನ ಮುಂದೆ ಈ ಮುಂಚೆ ಕ್ರಾಂತಿ ಮಾಡಲು ಹೊರಟವರೆಲ್ಲ ನೆನಪು ಹೃದಯ ಕಣ್ಣು ಕಿವಿ ಎಲ್ಲವನ್ನೂ ಕಳಕೊಂಡು ಪ್ರೇತ ನೃತ್ಯ ಮಾಡುತ್ತಿರುತ್ತಾರೆ.
ನನಗೆ ಇವತ್ತಿನ ಪರಿಸ್ಥಿತಿಯನ್ನು ಕಂಡಾಗ ನಮ್ಮ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಭಾಗಶಃ ಕೆಲಸ ಮಾಡುವವರೆಲ್ಲ ನೆನಪು ಹೃದಯ ಕಣ್ಣು ಕಿವಿ ಸಂಬಂಧಿ ಸೂಕ್ಷ್ಮತೆ ಸಂವೇದನೆಗಳನ್ನು ಕಳೆದುಕೊಂಡವರ ಹಾಗೆಯೇ ವಿಕಾರವಾಗಿ ಕೇಕೆ ಹಾಕುವುದು ನರ್ತಿಸುವುದು ಕಾಣಿಸುತ್ತದೆ. ಸಾಮಾನ್ಯವಾಗಿ ನಮ್ಮಲ್ಲಿ ಟಿವಿಯ ರಿಯಾಲಿಟಿ ಶೋ, ಧಾರವಾಹಿ, ಸಿನಿಮಾ ಇತ್ಯಾದಿಗಳಿಗಿಂತ ವಾರ್ತೆಗಳನ್ನು ನೋಡುವುದು ಹೆಚ್ಚು ಸಜ್ಜನಿಕೆಯ ದಿನವಹಿ ಬದ್ಧತೆಯ ಮತ್ತು ಘನತೆಯದೆಂದು ನಂಬಿಕೊಂಡಿದ್ದ ಕಾಲವಿತ್ತು. ಮಾಧ್ಯಮ ಪ್ರಜಾಪ್ರಭುತ್ವದ 4ನೇ ಕಂಬ, ಮೊದಲ 3 ಅಂಗಗಳು ಒಂದು ಇಂಚು ಆಯ ತಪ್ಪುವಾಗ ಅದರ ಬುಡ ಹಿಡಿದು ಅಲುಗಾಡಿಸುವ ತಾಕತ್ತು ಗುಣಗ್ರಾಹಿತ್ವ ಮತ್ತು ವೇಗ ಮಾಧ್ಯಮಗಳಿಗೆ ಇತ್ತು ಎಂದು ನಂಬಿಕೊಂಡಿದ್ದ ಕಾಲವಿತ್ತು. ಅದೇ ಧನಾತ್ಮಕ ಪೂರ್ವಗ್ರಹವೊಂದು ಈಗಲೂ ನಮ್ಮನ್ನು ಮತ್ತೆ ಮತ್ತೆ ನ್ಯೂಸ್ ನೋಡುವ ಹಾಗೆ ಪ್ರೇರೇಪಿಸುವುದಿದೆ. ನಾನೀಗ ಟಿವಿಯೇ ನೋಡುವುದಿಲ್ಲವೇ, ನ್ಯೂಸ್ ನೋಡೋದಿಲ್ಲ ಹೀಗೆಲ್ಲ ಎಷ್ಟೋ ಜನ ಹೇಳುತ್ತಿದ್ದರೂ ಮತ್ತೆ ಮತ್ತೆ ವಾಹಿನಿಗಳಲ್ಲಿ ವಾರ್ತೆಗಳನ್ನು ಗಮನಿಸುವವ ಕಳ್ಳ ಕಿವಿ ಕಣ್ಣು ಮನಸುಗಳನ್ನು ಕಂಡಿದ್ದೇನೆ. ಚಾನೆಲ್ ಗಳಿಗೆ ಪತ್ರಿಕೆಗಳಿಗೆ ಟೀಕಿಸುತ್ತಲೇ ಮತ್ತೆ ಮತ್ತೆ ಅದನ್ನೇ ನೋಡುವ ಓದುವ ಒಂದು ದೊಡ್ಡ ವರ್ಗವೇ ಇದೆ.
ನಮ್ಮೊಳಗಡೆ ವಿಕೃತಗಳನ್ನು ತುಂಬಿಸುತ್ತಾ ಭಾಷೆ ಕೆಡಿಸುವ ಮಾಧ್ಯಮ ದಾರಿಗಳಿಗೆ ನಾವು ಮತ್ತೆ ಮತ್ತೆ ಮುಖ ಮನಸ್ಸು ಕೊಡುವುದರಿಂದ ಏನಾಗಬಹುದು ಎನ್ನುವುದಕ್ಕೆ ಮತ್ತೊಂದು ಕಥೆಯನ್ನು ಹೇಳಲೇಬೇಕು. ಒಂದು ಊರಿನಲ್ಲಿ ಒಬ್ಬ ಸೇನಾಧಿಪತಿ ಮತ್ತು ಸೈನಿಕ ಇದ್ದರಂತೆ. ಜೀವನಪೂರ್ತಿ ಇವರಿಬ್ಬರ ಕೆಲಸ ಅಪರಾಧಿಯನ್ನು ಬಂಡೆಯ ಮೇಲೆ ನಿಲ್ಲಿಸಿ ಶೂಟ್ ಮಾಡಿ ಸಾಯಿಸುವುದು. ಸೇನಾಧಿಪತಿ ಸ್ಟಾರ್ಟ್, ಸ್ಟಡಿ, ಶೂಟ್ ಅಂತ 3 ಶಬ್ದಗಳನ್ನು ಪ್ರತಿ ಬಾರಿಯೂ ಹೇಳುತ್ತಿದ್ದ. ಸೈನಿಕ ಇದನ್ನು ನಿಯತ್ತಿಂದ ಪರಿಪಾಲಿಸುತ್ತಿದ್ದ. ಅಪರಾಧಿಯನ್ನು ಬಂಡೆಯ ಮೇಲೆ ನಿಲ್ಲಿಸುವುದು, ಸೇನಾಧಿಪತಿ ಸ್ಮಾರ್ಟ್ ಸ್ಟಡಿ ಶೂಟ್ ಅನ್ನುವುದು, ಸೈನಿಕ ಶೂಟ್ ಮಾಡಿ ಸಾಯಿಸುವುದು, ಇದೇ ಇವರಿಬ್ಬರು ಮಾಡುತ್ತಿದ್ದ ಕೆಲಸ.
ಒಂದು ಬಾರಿ ನಿರಪರಾಧಿಯೊಬ್ಬನಿಗೆ ಶಿಕ್ಷೆಯಾಯಿತು. ಅವನು ಬಂಡೆಗೆ ಏರುವ ಹೊತ್ತಿಗೇ ಅವನ ಮನೆಯವರು ರಾಷ್ಟ್ರಪತಿಯಿಂದ ಕ್ಷಮಾದಾನದ ಪತ್ರವನ್ನು ತಂದು ಸೇನಾಧಿಪತಿಯ ಕೈಗಿಟ್ಟರಂತೆ. ನಿರಪರಾಧಿಗೆ ಜೀವದಾನ ಸಿಗುತ್ತದೆ ಎಂದು ಮನೆಯವರು ನಿಟ್ಟುಸಿರು ಬಿಡುವ ಹೊತ್ತಿಗೆ ಸ್ಟಾರ್ಟ್ ಸ್ಟಡಿ ಎಂದ ಸೇನಾಧಿಪತಿ ಕ್ಷಮಾದಾನದ ಪತ್ರ ಓದಿ ತಕ್ಷಣ ‘ಸ್ಟಾಪ್’ ಎನ್ನುತ್ತಾನೆ. ಆದರೆ ಸೈನಿಕರಿಗೆ ಈ ಶಬ್ದ ಸೂಟ್ ಆಗಿ ಕೇಳಿಸುತ್ತದೆ. ಕಣ್ಣೆದುರೇ ನಿರಪರಾಧಿಯ ಸಾವು ಘಟಿಸುತ್ತದೆ. ‘ಸ್ಟಾಪ್’ ಅನ್ನುವ ಶಬ್ದ ‘ಸೂಟ್’ ಆಗಿ ಯಾವಾಗ ಕೇಳಿಸುತ್ತದೆ ಎಂದರೆ ನಾವು ಆ ಶಬ್ದವನ್ನು ಪದೇಪದೆ ಕೇಳಿರುವುದರಿಂದ, ಕೆಟ್ಟದನ್ನೇ ಕೇಳುವುದರಿಂದ, ನೋಡುವುದರಿಂದ ನಮ್ಮ ಮನಸ್ಸು ಎಷ್ಟು ವಿಕಾರವಾಗಿದೆ ಎಂದರೆ ಯಾವುದೂ ನಮಗೀಗ ಒಳ್ಳೆಯದಾಗಿ ಒಳ್ಳೆಯವರಾಗಿ ಕಾಣಿಸುವುದಿಲ್ಲ, ಕೇಳಿಸುವುದಿಲ್ಲ.
ಕೊರೊನೋತ್ತರ ಜಗತ್ತಿನಲ್ಲಿ ಮನುಷ್ಯನ ಮನಸ್ಸು ಬದಲಾಗುವುದಕ್ಕೆ ತೀರಾ ಯಾಂತ್ರಿಕರಣಗೊಂಡಿರುವುದಕ್ಕೆ ನಮ್ಮ ಮಾಧ್ಯಮಗಳ ಕೊಡುಗೆ ತುಂಬಾ ಇದೆ. ಮನೆಯ ಟಿವಿ, ಅಂಗೈಯಗಲದ ಮೊಬೈಲ್ ಪ್ರತಿಕ್ಷಣ ಪ್ರತಿದಿನ ನಮ್ಮನ್ನು ಎಡಬಲ ಅಂತ ವಿಂಗಡಿಸಿ ವಿಲೇವಾರಿ ಮಾಡುತ್ತಿರುವುದು ಬೇಡದನ್ನೆಲ್ಲ ನಮ್ಮ ಮುಂದೆ ರಾಶಿ ಸುರಿಯುವುದು ಮತ್ತೊಂದು ಸಮಸ್ಯೆ. ಈ ಶತಮಾನದ ಮುಂದಿನ 2050 ರವರೆಗಿನ ಲೆಕ್ಕ ತೆಗೆದುಕೊಂಡರೆ ಜಗತ್ತಿನಲ್ಲೇ 15ರಿಂದ 45 ರ ವಯೋಮಾನದ ಅತ್ಯಂತ ಹೆಚ್ಚು ಯುವಕರಿರುವುದು ಭಾರತದಲ್ಲಿ, ಇಂಥ ಯುವ ಸಮೃದ್ಧ ಭಾರತದ ಮನಸ್ಥಿತಿಯನ್ನು ಭಗ್ನಗೊಳಿಸಿದರೆ ಪರಿಣಾಮವೇನಾಗಬಹುದು ಎನ್ನುವುದನ್ನು ಗಂಭೀರವಾಗಿ ಯೋಚಿಸಬೇಕು.
ರಾತೋ ರಾತ್ರಿ ಕಟ್ಟಿಗೆ ಸುಟ್ಟು ಅಕ್ಷರ ಕಟ್ಟಿದ ಸ್ವಾತಂತ್ರ್ಯ ಹೋರಾಟದಲ್ಲಿ ಭೂಗತರಾಗಿ ಕೆಲಸ ಮಾಡಿದ್ದ, ಲಾಭವೆಂದರೆ ಮೌಲ್ಯವೆಂದು ಭಾವಿಸಿಕೊಂಡಿದ್ದ ಪತ್ರಿಕೋದ್ಯಮ ಇವತ್ತು ನಿಧಾನವಾಗಿ ಕರಗುತಿದೆ. ಪ್ರಜೆಗಳ ಬದುಕಿನ ಗಂಭೀರತೆಯನ್ನು ಅವಶ್ಯಕತೆಗಳನ್ನು ಸೂಕ್ಷ್ಮವಾಗಿ ಬಗೆದು ಬರೆದು ನೆರವಾಗುವ ಮಾಧ್ಯಮ ದಾರಿ ತಿರುವಿಗೆ ಜಾರಿದೆ. ಕೊಲೆ, ಕಾಮ, ಹಸು, ಜ್ಯೂಸ್, ಪಬ್, ಲವ್ ಜಿಹಾದ್ ಇವತ್ತಿನ ಮಾಧ್ಯಮದಲ್ಲಿ ಬಹು ಜಾಗ ಸಮಯವನ್ನು ಆಕ್ರಮಿಸಿಕೊಳ್ಳುತ್ತಿದೆ. ಈ ದೇಶದ ಪ್ರಜೆಗಳು ಕೊಡುವ ತೆರಿಗೆಯ ಕಾಸು ಎಲ್ಲಿಗೆ ಹೋಗುತ್ತಿದೆ? ನಮ್ಮ ವಿವಿಗಳ ಶೈಕ್ಷಣಿಕ ಸ್ಥಿತಿ ಗತಿಗಳು, ಕುಡಿಯುವ ನೀರು, ಅಂತರ್ಜಲ, ಇಂಗಾಲದ ಆರ್ಥಿಕತೆ, ಪರಿಸರ ನಾಶ,. ಇತ್ಯಾದಿಗಳ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿ ಪ್ರಭುತ್ವದ ಗಮನ ಸೆಳೆಯುವ, ಅಧಿಕಾರಸ್ಥರನ್ನು ಬಡಿದು ಬಗ್ಗಿಸುವ ಮಾಧ್ಯಮಗಳು ಈಗ ಎಲ್ಲಿವೆ ಅನ್ನುವುದೇ ದೊಡ್ಡ ಪ್ರಶ್ನೆ.
ನರೇಂದ್ರ ರೈ ದೇರ್ಲ