“ಕನ್ನಡದಲ್ಲಿ ಓದುಗರಿಲ್ಲ ಅನ್ನುವುದು ಸುಳ್ಳು. ಅಂಥವರನ್ನು ಹುಡುಕಿ ಪುಸ್ತಕ ಮುಟ್ಟಿಸುವುದಲ್ಲ. ಪುಸ್ತಕಗಳನ್ನು ಅವರು ಮುಟ್ಟುವ ಹಾಗೆ ಮನುಷ್ಯ ಎಲ್ಲೆಲ್ಲಿ ಓಡಾಡುತ್ತಾನೆ ಅಲ್ಲೆಲ್ಲಾ ಪುಸ್ತಕಗಳೇ ಇರಬೇಕು. ಆಗ ಅವುಗಳನ್ನು ತಗೊಳ್ಳದೆ ಜನ ಎಲ್ಲಿ ಹೋಗುತ್ತಾರೆ?” ಹೀಗೆನ್ನುತ್ತಾರೆ ಕ್ರಿಯೇಟಿವ್ ಪಿಯು ಕಾಲೇಜಿನ ಪ್ರಾಚಾರ್ಯ ಅಶ್ವಥ್. ಈ ಕಾಲೇಜು ಇರುವುದು ಕಾರ್ಕಳದ ನಡುನಾಗರಿಕ ಜಗತ್ತಿನಿಂದ ಸ್ವಲ್ಪ ದೂರದ ಹಸಿರು ಪರಿಸರದಲ್ಲಿ.
ಕರ್ನಾಟಕದ ಪಿಯು ಕಾಲೇಜುಗಳಿಗೆ ಅದರಲ್ಲೂ ಕರಾವಳಿಯ ಕಾಲೇಜುಗಳಿಗೆ ಸಾಮಾನ್ಯವಾಗಿ ಇರುವುದು ಒಂದೇ ಪ್ರಭೆ. ಅದು ವಿಜ್ಞಾನ ಮತ್ತು ಲೆಕ್ಕಕೇಂದ್ರಿತ ಪ್ರಖರತೆ. ಡಾಕ್ಟರ್ ಇಂಜಿನಿಯರ್ ಶ್ರೇಣಿಗೆ ಸುಲಭದಲ್ಲಿ ಮಕ್ಕಳನ್ನು ಎತ್ತಿ ಹಾಕುವ ಹತ್ತಾರು ಕಾಲೇಜುಗಳು ನಮ್ಮ ಕರಾವಳಿಯಲ್ಲಿವೆ. ಪಿಯು ಫಲಿತಾಂಶಗಳು ಪ್ರಕಟವಾಗುವ ಹೊತ್ತಿಗೆ ಕರಾವಳಿಯ ಅಡ್ಡಡ್ಡ ರಸ್ತೆಗಳಲ್ಲಿ ಒಮ್ಮೆ ಓಡಾಡಿ ನೋಡಿ. ಗೆದ್ದ ಮಕ್ಕಳ ಫೋಟೋಗಳಡಿಯಲ್ಲಿ ಅವರು ಪಡೆದ ಅಂಕಗಳ ಪಟ್ಟಿ ರಾರಾಜಿಸುತ್ತವೆ. ವಿಚಿತ್ರ ಎಂದರೆ ಆ ಮಗುವಿನ ಚಿತ್ರದಡಿಯಲ್ಲಿ ಭಾಗಶ: ಸೈನ್ಸ್ ಮ್ಯಾಕ್ಸ್ ಸಬ್ಜೆಕ್ಟ್ ಗಳ ಅಂಕಗಳಿರುತ್ತವೆ ಹೊರತು ಕನ್ನಡ ಭಾಷೆಯಲ್ಲಿ ಮಗು ಪಡೆದ ಅಂಕಗಳಿರುವುದು ಬಹಳ ಕಡಿಮೆ.
ಕರಾವಳಿಯ ಕ್ರಿಯೇಟಿವ್ ಕಾಲೇಜು ಇದೀಗ ಒಂದು ಹೊಸ ವಿಕ್ರಮಕ್ಕೆ ಹೆಜ್ಜೆ ಇಟ್ಟಿದೆ. ಅದೇ ‘ಪುಸ್ತಕ ಮನೆ’. ಸಾಹಿತ್ಯ ಕೃತಿಗಳನ್ನು ಮಾರುವ ಮತ್ತು ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸುವುದನ್ನು ಆರಂಭಿಸಿದೆ. ಈಗಾಗಲೇ ಕಾರ್ಕಳ ಮತ್ತು ಮೂಡುಬಿದ್ರೆಯಲ್ಲಿ ಬ್ರಾಂಚ್ ತೆರೆದು ಮೂರು ಸಾವಿರಕ್ಕಿಂತ ಹೆಚ್ಚು ಪುಸ್ತಕಗಳನ್ನು ಓದುಗರ ಕೈಗೆ ತಲುಪಿಸಿದೆ. ‘ಮೊಬೈಲ್ ಬಿಡಿ ಪುಸ್ತಕ ಹಿಡಿಯಿರಿ’ ಎನ್ನುವ ಪರಿಕಲ್ಪನೆಯಲ್ಲಿ ಓದುಗರನ್ನು ವಿಸ್ತರಿಸುವ ಇವರ ಒಂದು ಯೋಜನೆ ತುಂಬಾ ಆಕರ್ಷಕವಾಗಿದೆ. ಸಾಹಿತ್ಯ ಪೋಷಕರೊಬ್ಬರು ಕೊಡುವ ನೂರ ಎಂಬತ್ತು ರೂಪಾಯಿಯಲ್ಲಿ ಈ ಸಂಸ್ಥೆ ಬಯಸಿದ ಶಾಲಾ ಮಗುವೊಂದಕ್ಕೆ ಪುಸ್ತಕ ಒಂದನ್ನು ಕಳಿಸಿಕೊಡುತ್ತದೆ. ಪುಸ್ತಕದ ಜತೆಗೆ ಒಂದು ಅಂಚೆ ಕಾರ್ಡ್. ಆ ಮಗು ಪುಸ್ತಕ ಪಡೆದು ಅದನ್ನು ಓದಿ ಆ ಕಾರ್ಡ ನಲ್ಲಿ ಸ್ವ ಅಕ್ಷರದಲ್ಲಿ ಅಭಿಪ್ರಾಯ ಬರೆದು ತನಗೆ ಪುಸ್ತಕ ಒದಗಿಸಿದ ದಾನಿಗೆ ನೇರವಾಗಿ ಕೃತಜ್ಞತೆ ಅರ್ಪಿಸುವ ಸಾಹಿತ್ಯ ಮತ್ತು ಮನಸ್ಸು ಕೂಡಿಸುವ ಒಂದು ವಿಶಿಷ್ಟ ಕೂಡು ಕಾರ್ಯಕ್ರಮ.
ಪುಸ್ತಕ ಮನೆ ಪ್ರಥಮ ಕಂತಿನಲ್ಲಿ ಪ್ರಕಟಿಸಿದ ನಾಡಿನ ಹೆಸರಾಂತ ೧೫ ಲೇಖಕರ ಪುಸ್ತಕವನ್ನು ಕನ್ನಡದ ಕಥೆಗಾರ ಜೋಗಿ ಬಿಡುಗಡೆಗೊಳಿಸಿದ್ದಾರೆ. ಲೇಖಕರನ್ನು ಗೌರವಯುತ ಸಂಭಾವನೆ ಸನ್ಮಾನದ ಮೂಲಕ ಘನತೆಯಿಂದ ಕ್ರಿಯೇಟಿವ್ ನೋಡಿಕೊಂಡಿದೆ. ‘ಸಾಹಿತ್ಯ ಸಾಂಗತ್ಯ’ ಕ್ರಿಯೇಟಿವ್ ಪ್ರತಿ ತಿಂಗಳು ನಡೆಸುವ ಮತ್ತೊಂದು ಕಾರ್ಯಕ್ರಮ. ಹೆಸರಾಂತ ಸಾಹಿತಿಗಳನ್ನು ಕಾಲೇಜಿಗೆ ಕರೆದು ಮಕ್ಕಳೊಂದಿಗೆ ಸಂವಾದ ಏರ್ಪಡಿಸುತ್ತದೆ. ಕಾರ್ಕಳದ ಜೋಡು ರಸ್ತೆಯಲ್ಲಿರುವ ಪುಸ್ತಕ ಮನೆಯಲ್ಲಿ ರೀಡರ್ಸ್ ಕ್ಲಬ್ ಎನ್ನುವ ಇನ್ನೊಂದು ಅರಿವಿನ ಜೋಡಣೆಯೂ ಇದೆ. ಪುಸ್ತಕ ಖರೀದಿಸಲು ಸಾಧ್ಯವಾಗದ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳುವ ಮಗುವೊಂದು ಇಲ್ಲಿ ಬಂದು ಪ್ರತ್ಯೇಕವಾಗಿ ಕೂತು ಅಂತಹ ಪುಸ್ತಕಗಳನ್ನು ಉಚಿತವಾಗಿ ಅಧ್ಯಯನ ಮಾಡಿ ಪರೀಕ್ಷೆಗೆ ಸಿದ್ಧವಾಗಬಹುದು.
ವಿಶೇಷವೆಂದರೆ ಈ ಕ್ರಿಯೇಟಿವ್ ಹಿಂದೆ ಏಳು ತಲೆಗಳಿವೆ. ಕೂಡು ಕ್ರಿಯಾಶೀಲತೆಯ ಅಪರೂಪದ ಸೃಜನ ಬಂಧವಿದು. ಅಶ್ವಥ್, ಗಣಪತಿ ಭಟ್, ಗಣನಾಥ ಶೆಟ್ಟಿ, ವಿಮಲ್ ರಾಜ್, ಅಮೃತ ರೈ, ಗಣಪತಿ ಕೆ ಎಸ್, ಆದರ್ಶ ಎಂ ಕೆ ಎನ್ನುವ ಆರು ಜನ ಶಿಕ್ಷಕರು ಈ ಸಂಸ್ಥೆಯ ನಿರ್ಮಾಪಕರು. ಒಂದು ಕಾಲದಲ್ಲಿ ಇವರೆಲ್ಲರೂ ವಿರಾಸತ್- ನುಡಿಸಿರಿ ಖ್ಯಾತಿಯ ಆಳ್ವಾಸಿನಲ್ಲಿ ವಿಜ್ಞಾನ ಲೆಕ್ಕ ಕಳಿಸುತ್ತಿದ್ದವರು. ನನಗೆ ಗೊತ್ತಿರುವ ಹಾಗೆ ಇವರ ಪೈಕಿ ಒಬ್ಬರು ಮಾತ್ರ ಭಾಷಾ ಪ್ರಾಧ್ಯಾಪಕರಿದ್ದಾರೆ. ಉಳಿದಂತೆ ಬೇರೆ ವಿಷಯದವರೇ. ಒಬ್ಬರ ಚಿಂತನೆ ಅಭಿವ್ಯಕ್ತಿ ಹೊಳಹುವುಗಳಿಗೆ ಇನ್ನೊಬ್ಬರು ಗೌರವ ಕೊಡುತ್ತಲೇ ಸಂಸ್ಥೆಯನ್ನು ಭಿನ್ನ ರೀತಿಯಲ್ಲಿ ಕಟ್ಟಬೇಕು ಎನ್ನುವ ತುಡಿತ ಈ ಆರು ಮಂದಿಯಲ್ಲೂ ಇದೆ.
ಇಂಥಹ ಶಿಕ್ಷಣಾಲಯಗಳ ಬಗ್ಗೆ ವಾದಗಳು ಏನೇ ಇರಲಿ ತಮ್ಮದು ನಿಲುವು ಮಾತ್ರ ಸಾಹಿತ್ಯ ಸಂಸ್ಕೃತಿ ಪರವೇ ಎನ್ನುವುದನ್ನು ಆರಂಭದಲ್ಲೇ ದಾಖಲಿಸುತ್ತಿರುವ ಈ ಸಂಸ್ಥೆ ಮುಂದೊಂದು ದಿವಸ ಪುಸ್ತಕ ಮನೆಯನ್ನು ಕರ್ನಾಟಕದಾದ್ಯಂತ ವಿಸ್ತರಿಸುವ ಯೋಚನೆಯನ್ನು ಮಾಡುತ್ತಿರುವುದು ಅಭಿನಂದನೀಯ. ಅಂದ ಹಾಗೆ ನಾನು ಮರೆತ ವಿಚಾರ ಅನು ಬೆಳ್ಳೆ ಎನ್ನುವ ಕನ್ನಡದ ಖ್ಯಾತ ಕಾದಂಬರಿ ಕಥೆಗಾರ ಇದೇ ಕಾಲೇಜಿನ ವಾಣಿಜ್ಯ ಶಾಸ್ತ್ರದ ಉಪನ್ಯಾಸಕರು. ಈ ಸಂಸ್ಥೆಯೊಳಗಡೆ ಚಿಗುರಿದ ಇಂಥಹ ಸಾಹಿತ್ಯದ ಯೋಜನೆಯ ಹಿಂದೆ ಬೆಳ್ಳೆಯವರ ಪಾತ್ರ ಇದ್ದೇ ಇರಬಹುದು.
ನರೇಂದ್ರ ರೈ ದೇರ್ಲ