ಮೂಡುಬಿದಿರೆ: ‘ಕೃತಕ ಬುದ್ಧಿಮತ್ತೆ(ಎ.ಐ.) ತಂತ್ರಜ್ಞಾನದೊಂದಿಗೆ ನಾವು ನಡೆಯಬಹುದು. ಅದರ ಮೇಲೆ ಕೂತು ಸಾಗಬಹುದು. ಆದರೆ ಅದನ್ನು ಮಲಗಿಸಲು ಸಾಧ್ಯವಿಲ್ಲ. ಜೊತೆ ಸಾಗುವುದು ಅನಿವಾರ್ಯ ಎಂದು ಮಿಜಾರಿನ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ.ಗಣೇಶ್ ಕೆ ಹೇಳಿದರು.
ಇಲ್ಲಿನ ಮಿಜಾರು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಕಂಪ್ಯೂಟರ್ ಪ್ರಯೋಗಾಲಯದಲ್ಲಿ ಸೋಮವಾರ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ವೇದಿಕೆ ಹಮ್ಮಿಕೊಂಡ ನೆಕ್ಸ್ಟ್-ಜೆನ್ ಜರ್ನಲಿಸಂ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ತಂತ್ರಜ್ಞಾನದ ಕಲಿಕೆಯೊಂದಿಗೆ, ಕಲಿತವರೊಂದಿಗೆ ನಮ್ಮ ಒಡನಾಟವೂ ಮುಖ್ಯ ಎಂದ ಅವರು, ಹದಿನೈದು ವರ್ಷಗಳ ಹಿಂದೆ ಬ್ರಾಂಡ್ ಎನಿಸಿಕೊಂಡಿದ್ದ ನೋಕಿಯಾ ಫೆÇೀನ್ನ ಬಳಕೆ ಇಂದು ಕಡಿಮೆಯಾಗಿದೆ. 2014 ರಲ್ಲಿ ಮೈಕ್ರೋಸಾಫ್ಟ್ ಗಳ ಒಡನಾಟದ ನಂತರ ವಿವೊ, ಸ್ಯಾಮ್ ಸಾಂಗ್ ಗಳ ಬಳಕೆ ಹೆಚ್ಚಾದವು ಎಂದರು.
ಹೊಸದಾಗಿ ಬಂದ ಕೃತಕಬುದ್ಧಿಮತ್ತೆ (ಎ.ಐ.)ಯು ಪತ್ರಿಕಾರಂಗಕ್ಕೆ ಸವಾಲು. ಐದು ವರ್ಷಗಳ ಹಿಂದೆ ಸ್ವಬುದ್ಧಿಯಿಂದ ವಿಷಯ ರಚನೆ ಮಾಡುತ್ತಿದ್ದ ವರದಿಗಾರ, ಸಂಪಾದಕ, ನಿರೂಪಕನ ಕಾರ್ಯವನ್ನು ಇಂದು ಎ.ಐ. ನಿರ್ವಹಿಸುತ್ತಿದೆ ಎಂದರು. ವಿಷಯ ರಚನೆ ಮಾತ್ರವಲ್ಲದೆ, ವಿಷಯ ವಿತರಣೆಯನ್ನು ಎ.ಐ. ಮಾಡುತ್ತದೆ. ಬದಲಾದ ಹೊಸ ತಂತ್ರಜ್ಞಾನದೊಂದಿಗೆ ಈ ಸವಾಲುಗಳನ್ನು ಹೇಗೆ ಎದುರಿಸಬೇಕು? ಎಂಬುದನ್ನು ನಾವು ತಿಳಿದಿರಬೇಕು, ನಾವು ಇನ್ನೂ ಅಪಡೇಟ್ ಆಗದೇ ಹೋದರೆ ನಮಗೆ ವೃತ್ತಿ ಕ್ಷೇತ್ರವಿಲ್ಲ. ಒಂದು ಹೆಚ್ಚಿನ ಹಂತದಲ್ಲಿ ನಾವು ತಂತ್ರಜ್ಞಾನವನ್ನು ಕಲಿಯುವುದು ಮುಖ್ಯ ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹ ಪ್ರಾಧ್ಯಾಪಕ ಡಾ ಶ್ರೀನಿವಾಸ ಹೊಡೆಯಾಲ ಹಾಗೂ ಸಹಾಯಕ ಪ್ರಾಧ್ಯಾಪಕ ನಿಶಾನ್ ಕೋಟ್ಯಾನ್, ಅಭಿವ್ಯಕ್ತಿ ವೇದಿಕೆಯ ವಿದ್ಯಾರ್ಥಿ ಸಂಯೋಜಕ ವೈಶಾಕ್ ಮಿಜಾರ್ ಹಾಗೂ ಇನ್ನಿತರ ಸದಸ್ಯರು ಇದ್ದರು.