ಮೂಡುಬಿದಿರೆ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಜೈನ ಬಾಂಧವರ ಸಹಯೋಗದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವವನ್ನು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಯಿತು. ಸಂಜೆ 4:30ಕ್ಕೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಹೊರನಾಡಿನ ಜಯಶ್ರೀ ಧರಣೇಂದ್ರ ಜೈನ್ ಮತ್ತು ಬಳಗದವರಿಂದ ಜಿನಭಕ್ತಿ ಗಾಯನ ನಡೆಯಿತು. ಉತ್ತರ ಭಾರತದಿಂದ ವಿಶೇಷವಾಗಿ ತರಿಸಿದ ನಾಲ್ಕೂವರೆ ಅಡಿ ಎತ್ತರದ ಮಹಾವೀರ ಸ್ವಾಮಿ ಜಿನಬಿಂಬದ ಮೆರವಣಿಗೆ, ತೋರಣ ಮುಹೂರ್ತ, ದ್ರವ್ಯಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಯಿತು.
ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ಗೈದ ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಾತ್ವಿಕ ಆಹಾರ, ಸ್ವಚ್ಚ ಚಿಂತನೆಯಿಂದ ಮಾನವ ಧರ್ಮವು ಸುಂದರಗೊಳ್ಳುತ್ತದೆ. ಸರಳವಾದ ಜೀವನ ಕ್ರಮ, ಕರ್ಮಗಳ ಬಂಧನಗಳಿಂದ ಮುಕ್ತಿ ಪಡೆದ ಮಹಾವೀರ ಸ್ವಾಮಿಯ ಜೀವನದ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡು ಬದುಕಿದಾಗ ವೀತರಾಗಿಗಳು ಆಗಲು ಸಾಧ್ಯ ಎಂದರು. ಹಿಂಸೆಯನ್ನು ನಿಗ್ರಹಿಸುವ ನಡತೆ ಇದ್ದಾಗ ಪೊಲೀಸ್ ಮಿಲಿಟರಿಗಳ ಭೀತಿ ಇರುವುದಿಲ್ಲ. ಆದ್ದರಿಂದ ಜನರ ಮನಸು ಹೂವಿನಂತೆ, ಜ್ಞಾನ ದೀಪದಂತೆ ಆಗಲಿ ಎಂದು ಹಾರೈಸಿದರು.
ಧಾರ್ಮಿಕ ಸಂದೇಶ ನೀಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಧಾರ್ಮಿಕ ಶ್ರದ್ಧೆ ಇದ್ದಾಗ ಮಾತ್ರ ದೇಶ ಉಳಿಯುತ್ತದೆ. ಜೈನ ಸಮಾಜದ ಜನರು ವೈಯಕ್ತಿಕ ಚಿಂತನೆ, ಉತ್ತಮ ಆಚಾರಗಳಿಂದ ಭಿನ್ನವಾಗಿ ಗುರುತಿಸಿಕೊಳ್ಳಿ. ಬಂಧನಗಳನ್ನು ಕಳಚಿಕೊಂಡು, ಕರ್ಮಗಳನ್ನು ಶುದ್ಧೀಕರಣ ಮಾಡಿಕೊಳ್ಳಬೇಕು. ಪ್ರತಿಯೊಂದು ಧರ್ಮವನ್ನು ಸಮಾನತೆಯಿಂದ ಕಾಣುವ ಆಳ್ವಾಸ್ ಕ್ಯಾಂಪಸ್ ನಲ್ಲಿ ಮಹಾವೀರ ಜಯಂತಿಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಭವ್ಯಾತ್ಮರು ಎಂದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸಾಧಕಿ ವೀಣಾ ಬಿ. ಆರ್ ಶೆಟ್ಟಿ, ಸಂಗೀತ ಕಲಾವಿದೆ ಜಯಶ್ರೀ ಡಿ ಅವರನ್ನು
ಸನ್ಮಾನಿಸಲಾಯಿತು. ಮಾಜಿ ಸಚಿವ ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್ ಜೈನ್, ಪಟ್ನಶೆಟ್ಟಿ ಸುಧೀಶ್ ಕುಮಾರ್, ಆಲಡ್ಕ ದಿನೇಶ್ ಕುಮಾರ್, ಚೌಟರ ಅರಮನೆಯ ಆದರ್ಶ್ ಜೈನ್, ಜೈನ್ ಮಿಲನ್ ರಾಜ್ಯಾಧ್ಯಕ್ಷ ಯುವರಾಜ್ ಭಂಡಾರಿ ಉಪಸ್ಥಿತರಿದ್ದರು. ಡಾ. ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್:
ಜೈನ ಧರ್ಮದ ಸಿರಿತನ ಇಮ್ಮಡಿಗೊಳಿಸುವ ವಾತಾವರಣ: ರಾಜಸ್ಥಾನದ ಜೈಪುರದಲ್ಲಿ ಸುಮಾರು 6ಲಕ್ಷ ವೆಚ್ಚದಲ್ಲಿ ತಯಾರಾದ 5 ಅಡಿಯ ಮಹಾವೀರ ಸ್ವಾಮಿಯ ಜಿನಬಿಂಬವು ಹಾಲು ಬಿಳಿಯ ವರ್ಣ ಹೊಂದಿದ್ದು, ಇದು ಶಾಂತಿಯ ಸಂಕೇತವನ್ನು ಸೂಚಿಸುತ್ತದೆ. ಜತೆಗೆ ಸುತ್ತಲಿನ ವಾತವರಣದ ಧಾರ್ಮಿಕ ವೈಭವವನ್ನು ಹೆಚ್ಚಿಸಲು ಮಾದರಿಯಂತೆ 24 ತೀಥರ್ಂಕರರ ವಿಗ್ರಹಗಳ ಕೆತ್ತನೆ , 100ಕ್ಕೂ ಮಿಗಿಗಾದ ವಿವಿಧ ಪ್ರಾಣಿ ಪ್ರಕ್ಷಿಗಳ ಆಕೃತಿ, ಮಹಾವೀರ ಸ್ವಾಮಿಯ ಸಂದೇಶಗಳನ್ನು ಬರೆದು ವೇದಿಕೆಯ ಸುತ್ತಮುತ್ತ ಪ್ರಕಟಿಸಲಾಗಿತ್ತು. ಹೂವಿನಿಂದ ಮಾಡಲ್ಪಟ್ಟ ಆನೆಯ
ಆಕೃತಿಯು ಬಹಳ ಸುಂದರವಾಗಿ ಮೂಡಿ ಬಂದಿದೆ. ಜೈನ ಸಂಪ್ರದಾಯದಂತೆ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು. 18 ಮೆಟ್ಟಿಲು, ವೇದಿಕೆಯ ಮೇಲೆ ಅಲಂಕರಿಸಿದ್ದ ತುಪ್ಪದ ದೀಪಗಳು ಅಜ್ಞಾನವನ್ನು ಹೋಗಲಾಡಿಸಿ, ಶಾಂತಿಯ ಜ್ಞಾನವನ್ನು ಪಸರಿಸುವ ಸಂದೇಶ ನೀಡುತ್ತವೆ.
-ಡಾ. ಎಂ. ಮೋಹನ್ ಆಳ್ವ