ಓರ್ವ ಶಾಲಾ ಶಿಕ್ಷಕ ನಾಡಿನ ನವ ಜನಾಂಗವನ್ನು ಸುಶಿಕ್ಷಿತರನ್ನಾಗಿಸುವುದರ ಜೊತೆಗೆ ನಾಡು ಅಭಿಮಾನ ಪಡುವ ಪ್ರಜೆಗಳನ್ನಾಗಿ ರೂಪಿಸುವ ಶಿಲ್ಪಕಾರರು ಎಂದರೆ ವರ್ಣನೆಯ ಮಾತಾಗದು. ಅದರಲ್ಲೂ ತಾನು ಓರ್ವ ಶಿಕ್ಷಕನಾಗಿ ತನ್ನ ಸಾಮಾಜಿಕ, ಸಾರ್ವಜನಿಕ ಜೀವನದ ಬದ್ಧತೆಯನ್ನೂ ಚೆನ್ನಾಗಿ ಅರ್ಥಮಾಡಿಕೊಂಡು ತನ್ನ ಜೀವನವನ್ನು ಹೇಗೆ ಸಾರ್ಥಕಪಡಿಸಿ ಕೊಳ್ಳಬಹುದೆನ್ನುವುದಕ್ಕೆ ಆದರಣೀಯ ಆದರ್ಶ ಶಿಕ್ಷಕ ಶ್ರೀ ಎಮ್ ಜಗನ್ನಾಥ ಶೆಟ್ಟಿ ಅವರು ಉತ್ತಮ ಉದಾಹರಣೆ ಆಗಬಲ್ಲರು.
ಅಂಪಾರು ಎಂಬಲ್ಲಿಯ ಕೋಟೆ ಬೆಟ್ಟು ಮೂಲದ ದಿವಂಗತ ಮಾದಯ್ಯ ಶೆಟ್ಟಿ ಹಾಗೂ ದಿವಂಗತ ಚಿಕ್ಕಮ್ಮ ಶೆಟ್ಟಿ ದಂಪತಿಯರಿಗೆ ದ್ವಿತೀಯ ಪುತ್ರನಾಗಿ ಜನಿಸಿದ ಶೆಟ್ಟರು ತನ್ನ ಪ್ರಾಥಮಿಕ ಶಿಕ್ಷಣವನ್ನು ಅಂಪಾರು ಮೂಡುಬಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಶಂಕರನಾರಾಯಣದಲ್ಲಿ ಪಡೆದು ಪದವಿ ಪೂರ್ವ ತರಗತಿ ಶಿಕ್ಷಣವನ್ನು ಬಸ್ರೂರು ಶಿಕ್ಷಣ ಸಂಸ್ಥೆಯ ಮುಖಾಂತರ ಪೂರ್ತಿಗೊಳಿಸಿ ನಂತರ ಶಿಕ್ಷಕ ತರಬೇತಿಗಾಗಿ ತುಮಕೂರಿಗೆ ತೆರಳಿ ಅಲ್ಲಿನ ಬೇಸಿಕ್ ಎಜ್ಯುಕೇಶನ್ ಟ್ರೈನಿಂಗ್ ಸೆಂಟರ್ ಮೂಲಕ ಶಿಕ್ಷಕ ತರಬೇತಿ ಪೂರ್ಣಗೊಳಿಸಿದರು. ತನ್ನ ವೃತ್ತಿ ಜೀವನವನ್ನು ಸುಳ್ಯ ತಾಲೂಕಿನ ನೆಟ್ಟಾರು ಎಂಬಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೂಲಕ ಆರಂಭಿಸಿದರು.
ಅಲ್ಲಿಂದ ವರ್ಗಾವಣೆಗೊಂಡ ಶೆಟ್ಟರು ಉಡುಪಿ ಸಂತೆಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ವರ್ಷಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿದ ಬಳಿಕ ಕುಂದಾಪುರ ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ ಶಿಕ್ಷಣ ಸಂಸ್ಥೆಯ ಹೆಸರನ್ನು ಪ್ರಸಿದ್ಧಿಗೊಳಿಸಿದರು. ಅಲ್ಲಿಂದಲೂ ವೃತ್ತಿಯಲ್ಲಿ ಸ್ಥಳಾಂತರ ಹೊಂದಿದ ಮೇಷ್ಟ್ರು ತನ್ನ ತವರು ನೆಲ ಮೂಡುಬಗೆಗೆ ಬಂದು ಸೇರಿಕೊಂಡು ಅಲ್ಲಿ ಸರಿ ಸುಮಾರು ಇಪ್ಪತ್ತನಾಲ್ಕು ವರ್ಷಗಳಷ್ಟು ಕಾಲ ಸುದೀರ್ಘ ಸೇವೆ ಸಲ್ಲಿಸಿ ಓರ್ವ ಜನಾದರಣೆ ಗಳಿಸಿದ ಶಿಕ್ಷಕರೆಂಬಂತೆ ಗುರುತಿಸಿಕೊಂಡರು. ಬಳಿಕ ಇವರ ಅರ್ಪಣಾ ಭಾವದ ವೃತ್ತಿ ನಿಷ್ಠೆ ಹಾಗೂ ಮಕ್ಕಳ ಸರ್ವತೋಮುಖ ಬೌದ್ಧಿಕ ಬೆಳವಣಿಗೆಯಲ್ಲಿ ಇವರ ಪಾತ್ರವನ್ನು ಗುರುತಿಸಿದ ಶಿಕ್ಷಣ ಇಲಾಖೆ ಇವರಿಗೆ ಮುಖ್ಯೋಪಾಧ್ಯಾಯರನ್ನಾಗಿ ಪದೋನ್ನತಿ ನೀಡಿ ಹಳ್ಳಿಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಳುಹಿಸಿಕೊಟ್ಟಿತು.
ಅನೇಕ ಪ್ರಶಸ್ತಿ ಗೌರವ ಅಭಿನಂದನೆಗಳಿಗೆ ಪಾತ್ರರಾದ ಶೆಟ್ಟಿ ಅವರು ತಾನು ಶಿಕ್ಷಕನಾಗಿರುತ್ತಲೇ ಪರಿಸರದ ಸಾರ್ವಜನಿಕ ಸಂಸ್ಥೆಗಳ ಸಂಪರ್ಕದಿಂದ ಅಭಿವೃದ್ಧಿ ಕಾರ್ಯಗಳಲ್ಲಿ ಕೈ ಜೋಡಿಸಿಕೊಂಡು ಓರ್ವ ಸಜ್ಜನ ಸಮಾಜ ಬಾಂಧವ ಎಂಬ ಹೆಗ್ಗಳಿಕೆಗೆ ಭಾಜನರಾದರು. ಶಿಕ್ಷಕ ಕಾಯಕದ ಹಿರಿಮೆ ಗರಿಮೆಗಳನ್ನು ಸಮಾಜಕ್ಕೆ ಸಾರಿದ ಜಗನ್ನಾಥ ಶೆಟ್ಟಿ ಅವರು ನಿಜಕ್ಕೂ ಗೌರವಾಭಿನಂದನೆಗಳಿಗೆ ಅರ್ಹರು. ವಿವೇಕ ಯುವಕ ಮಂಡಲ ಅಂಪಾರು, ಶಿಕ್ಷಕರ ರಾಜ್ಯ ಸಂಘಟನೆ, ಶಾಲಾಭಿವೃದ್ಧಿ ಸಮಿತಿ, ಗ್ರಾಮೀಣ ವಿಕಾಸ ಯೋಜನೆ ಹೀಗೆ ಒಂದೇ ಎರಡೇ ಸತತ ಸಮಾಜಪರ ಚಟುವಟಿಕೆಗಳೊಂದಿಗೆ ಆಯುಷ್ಯ ಸವೆಸಿದ ಪೂಜನೀಯ ಶೆಟ್ಟಿ ಅವರೆಂದೂ ಪ್ರಸಿದ್ಧಿ ಬಯಸಿದವರಲ್ಲ. ಪ್ರಭಾವ ಬೀರಿದವರಲ್ಲ. ಸಾಮಾನ್ಯರಲ್ಲಿ ಸಾಮಾನ್ಯರೆಂಬಂತೆ ಕಾಯಕವೇ ಕೈಲಾಸ ಎಂಬ ಸಿದ್ಧಾಂತದೊಂದಿಗೆ ಬಾಳುತ್ತಿರುವ ಶೆಟ್ಟಿ ಅವರಿಗೆ ನಮ್ಮೆಲ್ಲರ ಗೌರವದ ವಂದನೆಗಳು. ಶಾಲಾ ಶಿಕ್ಷಕ ರಕ್ಷಕ ಸಂಘ, ರೋಟರಿ ಕ್ಲಬ್, ಸಹಕಾರಿ ವ್ಯವಸಾಯ ಬ್ಯಾಂಕ್ ಹೀಗೆ ಅದೃಷ್ಟೋ ಸಂಘಟನೆಗಳನ್ನು ಜನತಾ ಸೇವೆಗಾಗಿ ಬಳಸಿ, ಜನರಲ್ಲಿ ಸ್ವಾಭಿಮಾನ ಸ್ವಾಲಂಬನೆಯ ಬದುಕಿಗೆ ಹಾದಿ ತೋರಿಸಿದ ಆದರ್ಶ ಮೇಷ್ಟ್ರಿಗೆ ನಮ್ಮದೊಂದು ಗೌರವದ ಸೆಲ್ಯೂಟ್.
ಸಾಂಸಾರಿಕ ಜೀವನದಲ್ಲಿ ಸುಶೀಲಾ ಶೆಟ್ಟಿ ಅವರನ್ನು ಬಾಳ ಸಂಗಾತಿಯನ್ನಾಗಿ ಆರಿಸಿ, ಮನೋ ಅನುಕೂಲೆ ಕಾರ್ಯಾನುಕಾಲೆ ಧರ್ಮಪತ್ನಿಯಲ್ಲಿ ಜನಿಸಿದ ಇಬ್ಬರು ಸುಪುತ್ರಿಯರು ಸುಜಾತಾ ಸವಿತಾ ಇನ್ನೊಬ್ಬ ಕುಲದೀಪಕ ಸತೀಶ ಅವರೊಂದಿಗೆ ನೆಮ್ಮದಿಯ ಬಾಳನ್ನು ಬಾಳುತ್ತಿರುವ ಜಯರಾಮ ಮೇಷ್ಟ್ರಿಗೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾಗೂ ತನ್ನ ಸಹಸ್ರ ಸಹಸ್ರ ಸಂಖ್ಯೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಹಿತೈಷಿಗಳ ಶುಭ ಕಾಮನೆಗಳು.
ಶುಭಮಸ್ತು.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು