ಕಳೆದ 50 ವರ್ಷಗಳಿಂದ ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಧಾರ್ಮಿಕ, ಸಾಮಾಜಿಕ, ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿದ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರನ್ನು ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈರವರು ತನ್ನ ಹಾಗೂ ಮನೆಯವರ ಪರವಾಗಿ ಸನ್ಮಾನಿಸಿ ಗೌರವಿಸಿದರು. ನವತಿ ಸಂಭ್ರಮದಲ್ಲಿರುವ ಪುತ್ತೂರಿನ ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರ ಕೊಂಬೆಟ್ಟಿನಲ್ಲಿರುವ ನಿವಾಸಕ್ಕೆ ಮಾ.25 ರಂದು ಆಗಮಿಸಿದ ಮಿತ್ರಂಪಾಡಿ ಜಯರಾಮ ರೈ ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಎಂ.ಆರ್ ಜಯಕುಮಾರ್ ರೈ, ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ. ಹರ್ಷ ಕುಮಾರ್ ರೈ ಮಾಡಾವು, ಚಿಕ್ಕಪ್ಪ ನಾಯ್ಕ್ ರವರ ಪುತ್ರಿ ಚೈತನ್ಯ ರೈ ಮಂಗಳೂರು ಉಪಸ್ಥಿತರಿದ್ದರು. ಚಿಕ್ಕಪ್ಪ ನಾಯ್ಕ್ ಅವರ ನವತಿ ಸಂಭ್ರಮ ಕಾರ್ಯಕ್ರಮದಲ್ಲಿ ಅನಿವಾರ್ಯವಾಗಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆ ಕಾರಣಕ್ಕೆ ಅವರನ್ನು ಭೇಟಿಯಾಗಿ ಗೌರವಿಸಿದ್ದೇನೆ ಎಂದು ಮಿತ್ರಂಪಾಡಿ ಜಯರಾಮ್ ರೈ ಅವರು ತಿಳಿಸಿದ್ದಾರೆ.