ಬಂಟರ ಸಂಘ ಮುಂಬಯಿ ಕ್ರೀಡಾ ಸಮಿತಿಯ ಆಶ್ರಯದಲ್ಲಿ ಪ್ರತೀ ವರ್ಷ ಆಚರಿಸಿಕೊಂಡು ಬರುತ್ತಿರುವ ಕ್ರೀಡಾಕೂಟವು ಸಂಘದ ಮಹತ್ವದ ಕಾರ್ಯಕ್ರಮಗಳಲ್ಲಿ ಅತೀ ಹೆಚ್ಚಿನ ಪ್ರಾಧಾನ್ಯತೆ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಆರಂಭದಿಂದ ಇಂದಿನವರೆಗೂ ಕ್ರೀಡಾಕೂಟ ಬಂತೆಂದರೆ ಬಂಟರಲ್ಲಿ ನವೋಲ್ಲಾಸ ಸಂತಸ ತುಂಬಿ ತುಳುಕುವುದನ್ನು ಕಾಣಬಹುದಾಗಿದೆ. ಬಂಟರ ಕ್ರೀಡಾಕೂಟವೆನ್ನುವುದು ಬಂಟರಿಗೆ ಸ್ನೇಹ ಸಮ್ಮಿಲನವೂ ಹೌದು. ಪ್ರೀತಿ, ಸೌಹಾರ್ದತೆ ಮತ್ತು ಬಾಂಧವ್ಯದ ಸಂಕೇತವೂ ಹೌದು ಎಂದು ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ನುಡಿದರು. ಮಾ.17ರಂದು ರವಿವಾರ ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದಲ್ಲಿ ಜರಗಿದ ಸಂಘದ 36ನೇ ವಾರ್ಷಿಕ ಬಂಟರ ಕ್ರೀಡಾಕೂಟ -2024ನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಕ್ರೀಡಾಕೂಟದಲ್ಲಿ ಮೈದಾನವಿಡೀ ತುಂಬಿ ತುಳುಕುತ್ತಿರುವ ಕ್ರೀಡಾ ಸ್ಪರ್ಧಿಗಳು, ಮಕ್ಕಳಿಂದ ಹಿಡಿದು ಯುವಕ, ಯುವತಿಯರು, ಮಹಿಳೆಯರು ಹಾಗೂ ವಯಸ್ಕರ ಕ್ರೀಡಾಸಕ್ತಿಯನ್ನು ಕಂಡು ಅಚ್ಚರಿಯಾಗುತ್ತಿದೆ. ಕ್ರೀಡೆಯು ದೈಹಿಕ, ಮಾನಸಿಕ ಬೆಳವಣಿಗೆಗೆ ಚೇತೋಹಾರಿ. ಅದನ್ನು ಸದಾ ಮುಂದುವರೆಸಿಕೊಂಡು ಬರುವ ಅಗತ್ಯವಿದೆ. ಹಬ್ಬದ ವಾತಾವರಣವನ್ನು ಕಾಣುವ ಇಂತಹ ಕ್ರೀಡಾಕೂಟದ ಮೂಲಕ ನಮ್ಮ ಸಂಬಂಧಗಳು ಬೆಸೆದು ಗಟ್ಟಿಯಾಗಲೆಂದು ಅವರು ಆಶಿಸಿದರು. ಗೌ. ಅತಿಥಿ, ಕರ್ನಾಟಕ ರಾಜ್ಯ ಬಿಜೆಪಿ ಕಾರ್ಯದರ್ಶಿ ಕ್ಯಾಪ್ಟನ್ ಬೃಜೇಶ್ ಚೌಟ ಅವರು ಮಾತನಾಡಿ ಮುಂಬಯಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕ್ರೀಡಾಕೂಟವನ್ನು ಆಯೋಜಿಸಿರುವುದನ್ನು ಕಂಡು ಅಚ್ಚರಿಯಾಗುತ್ತಿದೆ.ಅದಕ್ಕಾಗಿ ಮುಂಬಯಿ ಬಂಟರನ್ನು, ಬಂಟರ ಸಂಘವನ್ನು ಅಭಿನಂದಿಸುತ್ತೇನೆಂದು ನುಡಿದರು. ದ. ಕನ್ನಡದಂತಹ ಕರಾವಳಿ ಪ್ರದೇಶ ಬೇರೆಲ್ಲಿ ಸಿಗಲು ಸಾಧ್ಯವಿಲ್ಲ. ಕರಾವಳಿ ಅಭಿವೃದ್ಧಿಗೋಸ್ಕರ ಸೇವೆ ಮಾಡುವ ಭಾಗ್ಯ ನನಗೀಗ ದೊರೆತಿದೆ. ಲೋಕಸಭೆಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನನ್ನನ್ನು ಆಶೀರ್ವದಿಸಿ ಎಂದು ಅವರು ಮನವಿ ಮಾಡಿದರು. ಚುನಾವಣೆಯ ಬಳಿಕ ಮತ್ತೊಮ್ಮೆ ನಿಮ್ಮೆಲ್ಲರನ್ನು ನೋಡುವ ಭಾಗ್ಯ ಸಿಗಲೆಂದು ಅವರು ನುಡಿದು ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು.
ವಿಶೇಷ ಅತಿಥಿ ಶಂಕರ್ ಎಲೆಕ್ಟ್ರಿಕಲ್ಸ್ ಸರ್ವಿಸಸ್ (ಇಂಡಿಯಾ) ಪ್ರೈ. ಲಿ. ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ರಾಜೇಶ್ ಶೆಟ್ಟಿ ಮಾತನಾಡಿ, ನನ್ನನು ಮುಂಬಯಿಯ ಬಂಟರು ಗುರುತಿಸುವಂತೆ ಮಾಡಿದ ಡಾ.ಪಿ.ವಿ. ಶೆಟ್ಟಿಯವರಿಗೆ ಚಿರಋಣಿಯಾಗಿರುವುದಾಗಿ ನುಡಿದರು. ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯ ಸಂದರ್ಭ ಲೈಟಿಂಗ್ ವ್ಯವಸ್ಥೆ ಮಾಡಲು ಅವಕಾಶ ದೊರೆತಿರುವುದು ಶ್ರೀರಾಮಚಂದ್ರನ ಆಶೀರ್ವಾದದಿಂದ ಮಾತ್ರ ಸಾಧ್ಯವಾಗಿದೆ ಎಂದು ನುಡಿದ ಅವರು, ಎಲ್ಲರನ್ನೂ ಶ್ರೀರಾಮ ದೇವರು ಕಾಪಾಡಲೆಂದು ಭಕ್ತಿಪೂರ್ವಕವಾಗಿ ನಮಿಸಿದರು. ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಶಿವಪ್ರಸಾದ್ ಆರ್. ಶೆಟ್ಟಿ ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಿದರು.
ಸಂಸದ ಗೋಪಾಲ್ ಸಿ. ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಸದಾಶಿವ ಶೆಟ್ಟಿ ಕನ್ಯಾನ, ರಾಜೇಂದ್ರ ವಿ. ಶೆಟ್ಟಿ (ಸಿಎಂಡಿ, ಪಂಜುರ್ಲಿ ಗ್ರೂಪ್), ಕ್ಯಾಪ್ಟನ್ ಬೃಜೇಶ್ ಚೌಟ, ರಾಜೇಶ್ ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ (ಉಪಾಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ), ಅರವಿಂದ್ ಶೆಟ್ಟಿ (ಸಿಎಂಡಿ, ಶುಭಾರಂಭ ಇನ್ಫ್ರಾ) ಇವರನ್ನು ಸನ್ಮಾನಿಸಲಾಯಿತು. ಕ್ರಿಕೆಟ್ ಪಟುಗಳಾದ ಸರ್ಫರಾಜ್ ಖಾನ್, ಮುಶೀರ್ ಖಾನ್, ತನುಷ್ ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು. ಇವೆರೆಲ್ಲರನ್ನೂ ಬಂಟರ ಸಂಘ ಕ್ರೀಡಾಸಮಿತಿ, ಪಯ್ಯಡೆ ಸ್ಪೋರ್ಟ್ಸ್ ಕ್ಲಬ್ ಹಾಗೂ ಪೋಯಿಸರ್ ಜಿಮ್ಖಾನದ ವತಿಯಿಂದ ತಲಾ ಒಂದು ಲಕ್ಷ ರೂ. ನಗದು ಮೊತ್ತ ನೀಡಿ ಗೌರವಿಸಲಾಯಿತು. ಗೌರವ್ ಪಯ್ಯಡೆ, ಡಾ.ಪಿ.ವಿ. ಶೆಟ್ಟಿ, ಪೊಯಿಸರ್ ಜಿಮ್ಖಾನದ ಅಧ್ಯಕ್ಷ ಮುಕೇಶ್ ಭಂಡಾರಿ, ಉಪಾಧ್ಯಕ್ಷ ಕರುಣಾಕರ ಎಸ್. ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಮಹೇಶ್ ಎಸ್.ಶೆಟ್ಟಿ, ಗೌ. ಪ್ರ. ಕಾರ್ಯದರ್ಶಿ ಡಾ. ಆರ್.ಕೆ. ಶೆಟ್ಟಿ, ಗೌ. ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ, ವಿಶ್ವಸ್ಥ ರತ್ನಾಕರ ಶೆಟ್ಟಿ ಮುಂಡ್ಕೂರು, ಮಾತೃಭೂಮಿ ಕ್ರೆಡಿಟ್ ಕೋ. ಆಪ್ ನ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಜೊತೆ ಕೋಶಾಧಿಕಾರಿ ಶಶಿಧರ್ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್ ಜೆ. ಶೆಟ್ಟಿ ಗೌರವಿಸಿದರು.
ವಿಶೇಷ ಅತಿಥಿ, ಸಿನಿ ಸ್ಟಾರ್ ಸೋನು ಸೂದ್ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋನು ಸೂದ್ ಅವರು ಶೆಟ್ಟಿ ಪರಿವಾರದ ಪ್ರೀತಿ, ವಿಶ್ವಾಸಕ್ಕೆ ನಾನು ತಲೆಬಾಗುವುದಾಗಿ ನುಡಿದರು. ಹೊಟ್ಟೆಗೆ ಹಸಿವಾದಾಗ ನಮ್ಮೆಲ್ಲರಿಗೂ ನೆನಪಾಗುವವರು ಶೆಟ್ಟಿ ಹೋಟೆಲಿನವರು. ಅವರನ್ನು ಹೇಗೆ ಮರೆಯಲು ಸಾಧ್ಯ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು. ಸೋನು ಸೂದು ಫೌಂಡೇಶನ್ ವತಿಯಿಂದ ಅಗತ್ಯವಿರುವ ಬಂಟ ಪರಿವಾರಕ್ಕೆ ಸಹಾಯ ನೀಡಲು ನಾನು ಸದಾ ಸಿದ್ಧನಿರುವುದಾಗಿ ಭರವಸೆ ನೀಡಿದರು.
ಕ್ರಿಕೆಟಿಗರಾದ ಸರ್ಫರಾಜ್ ಖಾನ್ ಮತ್ತು ಮುಶೀರ್ ಖಾನ್ ಸಹೋದರರ ತಂದೆ ನೌಶಾದ್ ಖಾನ್ ಮಾತನಾಡಿ, ನಮ್ಮ ಇಬ್ಬರು ಮಕ್ಕಳಿಗೆ ಕ್ರಿಕೆಟ್ ನಲ್ಲಿ ಅವಕಾಶ ದೊರಕಲು ಕಾರಣಕರ್ತರಾದ ಡಾ.ಪಿ.ವಿ. ಶೆಟ್ಟಿಯವರನ್ನು ಸದಾ ಸ್ಮರಿಸುವುದಾಗಿ ಅವರು ನುಡಿದರು. ಆರಂಭದಲ್ಲಿ ದೇವರ ಪೂಜೆಯ ಬಳಿಕ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಬಂಟ ಧ್ವಜಾರೋಹಣಗೈದರು. ಬಳಿಕ ಅಧ್ಯಕ್ಷರು ಮತ್ತು ಅತಿಥಿಗಣ್ಯರು ಜ್ಯೋತಿ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ವಿಜಯ್ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥನೆ ಹಾಡಿದರು. ಬಳಿಕ ಪಥ ಸಂಚಲನಕ್ಕೆ ಐಕಳ ಹರೀಶ್ ಶೆಟ್ಟಿ ಚಾಲನೆ ನೀಡಿದರು.
ರಾಷ್ಟ್ರ ಮಟ್ಟದ ಕ್ರೀಡಾ ಪಟುಗಳಾದ ದಿಗಾನಾಥ್ ಟಿ. ಶೆಟ್ಟಿ, ಅಕ್ಷಯ್ ಶೆಟ್ಟಿ, ಹಿತ್ ಶೆಟ್ಟಿ, ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಮೈದಾನಕ್ಕೆ ತಂದರು. ಸರೋಜಾ ಶೆಟ್ಟಿ ಸ್ವರ್ಧಿಗಳಿಗೆ ಪ್ರತಿಜ್ಞಾ ವಚನ ಬೋಧಿಸಿದರು. ಅತಿಥಿ ಗಣ್ಯರು ಬಲೂನನ್ನು ಆಕಾಶದೆತ್ತರಕ್ಕೆ ಹಾರಿಸಿದರು. ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಶಿವಪ್ರಸಾದ್ ಆರ್. ಶೆಟ್ಟಿ ವೇದಿಕೆಯಲ್ಲಿದ್ದ ಅತಿಥಿ ಗಣ್ಯರನ್ನು ಸ್ವಾಗತಿಸಿ ಮಾತನಾಡಿದರು. ಮುಖ್ಯವಾಗಿ ಮೀರಾ- ಭಾಯಂದರ್ ಪ್ರಾದೇಶಿಕ ಸಮಿತಿಯ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಆರಂಭದಲ್ಲಿ ಜರಗಿದ ಪಥ ಸಂಚಲನದಲ್ಲಿ ಸುಮಾರು 17 ತಂಡಗಳು ಭಾಗವಹಿಸಿದವು. ಮೈದಾನದಲ್ಲಿ ಹೆಸರಾಂತ ಕ್ರೀಡಾಪಟುಗಳಾದ ಜಯ ಎ. ಶೆಟ್ಟಿ, ವಿಠಲ ಎಸ್. ಆಳ್ವ, ಕೇಶವ ಆಳ್ವ, ಭೋಜ ಶೆಟ್ಟಿ, ಜಯ ದೇವಾಡಿಗ ಸಹಕರಿಸಿದರು. ಕಾರ್ಯಕ್ರಮವನ್ನು ಅಶೋಕ ಪಕ್ಕಳ ನಿರೂಪಿಸಿದರು.