ಪುಣ್ಯಭೂಮಿ ತುಳುನಾಡಿನಿಂದ ಕರ್ಮಭೂಮಿ ಮಹಾರಾಷ್ಟ್ರ ಸೇರಿದ ಬಂಟರು ಥಾಣೆ ಪರಿಸರದಲ್ಲಿ 19 ವರ್ಷಗಳ ಹಿಂದೆ ಒಟ್ಟು ಸೇರಿ ಸಮಾಜದ ಉನ್ನತಿಗಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಪ್ರಸ್ತುತ ಸಾಮಾಜಿಕ ಸೇವೆಯಲ್ಲಿ ಥಾಣೆ ಬಂಟ್ಸ್ ಬಲಿಷ್ಠ ಹಾಗೂ ಪರಿಪೂರ್ಣವಾದ ಸಂಸ್ಥೆಯಾಗಿದೆ. ಇದರ ಶ್ರೇಯಸ್ಸು ಅಸೋಸಿಯೇಷನನ್ನು ಕಟ್ಟಿ ಬೆಳೆಸಿದ ನಮ್ಮ ಹಿರಿಯರಿಗೆ ಸಲ್ಲುತ್ತದೆ. ವರ್ಷ ಕಳೆದಂತೆ ಸಂಘ-ಸಂಸ್ಥೆಗಳು ಗಟ್ಟಿಯಾಗುತ್ತದೆ. ಅಂತೆಯೇ ಥಾಣೆ ಬಂಟ್ಸ್ ಕೂಡಾ ತುಂಬಾ ಗಟ್ಟಿಯಾಗಿದ್ದು ಬೆಳೆಯುತ್ತಿದೆ. ಸಾವಿರಾರು ಮಂದಿ ಸಮಾಜ ಬಾಂಧವರು ಪಾಲ್ಗೊಂಡ ಈ ವಾರ್ಷಿಕೋತ್ಸವದಲ್ಲಿ ಥಾಣೆ ಬಂಟ್ಸ್ ನ ಶಕ್ತಿ ಸಾಮರ್ಥ್ಯ ಕೂಡಾ ತೋರಿ ಬಂದಿದೆ. ಎಲ್ಲಾ ಮಾಜಿ ಅಧ್ಯಕ್ಷರುಗಳೆಲ್ಲಾ ಈಗಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆಯನ್ನು ಸಲ್ಲಿಸಿ ಮಾರ್ಗದರ್ಶನ ನೀಡುತ್ತಿರುವುದು ಅಸೋಸಿಯೇಷನ್ ನ ಉತ್ತಮ ಬೆಳವಣಿಗೆ ಪೂರಕವಾಗಿದೆ.
ಸದಸ್ಯತ್ವ ಸಂಘ ಸಂಸ್ಥೆಗಳ ಬುನಾದಿ. ಹಾಗಿರುವಾಗ ಥಾಣೆ ಪರಿಸರದವರೆಲ್ಲರೂ ಥಾಣೆ ಬಂಟ್ಸ್ ನಲ್ಲಿ ಸದಸ್ಯರಾಗಬೇಕು. ಸದಸ್ಯತ್ವ ಹೆಚ್ಚಾದಂತೆ ಸಂಸ್ಥೆ ಮತ್ತಷ್ಟು ಬಲಿಷ್ಠಗೊಳ್ಳುತ್ತದೆ. ನಾವು ಮಾಡಿರುವ ಆಸ್ತಿ, ದುಡ್ಡು, ಸಂಪತ್ತು ಯಾವತ್ತೂ ನಮ್ಮ ರಕ್ಷಕವಾಗಿರುವುದಿಲ್ಲ. ನಾವು ಪಡೆದಿರುವ ವಿದ್ಯೆ, ಮಾಡಿರುವ ದಾನ, ಧರ್ಮ- ಸತ್ಕಾರ್ಯಗಳ ಫಲಗಳು ನಮ್ಮನ್ನು ಕಾವಲುಗಾರನಂತೆ ರಕ್ಷಿಸುತ್ತಿರುತ್ತದೆ. ಮನುಷ್ಯ ಅಳಿದ ಮೇಲೂ ಬದುಕಬೇಕು ಅಂದರೆ ನಾವು ಅಳಿದ ಬಳಿಕವೂ ಸಮಾಜವು ಸ್ಮರಣೆ ಮಾಡುವಂತಹ ಕಾಯಕವನ್ನು ಜೀವಿತಾವಧಿಯಲ್ಲಿ ಮಾಡಬೇಕು. ಆಗ ನಮ್ಮ ಬದುಕು ಸಾರ್ಥಕತೆಯನ್ನು ಪಡೆಯುತ್ತದೆ. ಮಾತೃ ಭಾಷೆಗೆ ನಾವು ಹೆಚ್ಚಿನ ಮಹತ್ವವನ್ನು ನೀಡಬೇಕು. ಭಾಷೆ ಕೇವಲ ಸಂವಾದ ಮಾತ್ರವಲ್ಲ ಅದು ನಮ್ಮ ಸಂಸ್ಕೃತಿಯ ಆತ್ಮ. ಇಂದು ಭಾಷೆ ಸಂಸ್ಕೃತಿ, ಸಂಸ್ಕಾರ ಉಳಿದು ಬೆಳೆಯುತ್ತಿದ್ದರೆ ಅದರ ಮೇಲಿನ ನಮ್ಮ ಅಭಿಮಾನ, ಪ್ರೀತಿ, ನಂಬಿಕೆಯು ಕಾರಣವಾಗಿದೆ. ಒಳ್ಳೆಯ ಸಮಾಜ ಪರ ಕಾರ್ಯಗಳೊಂದಿಗೆ ಥಾಣೆ ಬಂಟ್ಸ್ ಮತ್ತಷ್ಟು ಅಭಿವೃದ್ಧಿಯನ್ನು ಕಾಣಲಿ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಹೇಳಿದರು.
ಅವರು. ಮಾ.13ರ ಬುಧವಾರದಂದು ಥಾಣೆ ಪಶ್ಚಿಮದ ಡಾ. ಕಾಶೀನಾಥ್ ಘಾಣೇಕರ್ ಸಭಾಗೃಹದಲ್ಲಿ ಥಾಣೆ ಬಂಟ್ಸ್ ಅಸೋಸಿಯೇಷನ್ ನ 19ನೇ ವಾರ್ಷಿಕೋತ್ಸವವನ್ನು ಹಿಂಗಾರವನ್ನು ಅರಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಸಮಾಜದ ಆರ್ಥಿಕವಾಗಿ ಹಿಂದುಳಿದವರ ಕೋಟ್ಯಾಂತರ ರೂಪಾಯಿಯನ್ನು ಬಂಟರ ಸಂಘವು ವಿವಿಧ ರೀತಿಯಲ್ಲಿ ವ್ಯಯಿಸುತ್ತಿದೆ ಎಂದು ಪ್ರವೀಣ್ ಭೋಜ ಶೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕರುಗಳಾದ ಥಾಣೆ ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಕುಶಾಲ್ ಸಿ ಭಂಡಾರಿ ದಂಪತಿ, ಹೋಟೆಲ್ ಉದ್ಯಮಿ ಚಂದ್ರಶೇಖರ್ ಎಮ್.ಶೆಟ್ಟಿ ದಂಪತಿಯನ್ನು ಪೇಟ ತೊಡಿಸಿ, ಶಾಲು ಹೊದಿಸಿ, ಫಲ-ಪುಷ್ಪ, ಸನ್ಮಾನ ಪತ್ರವನ್ನು ನೀಡಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಥಾಣೆ ಬಂಟ್ಸ್ ಅಧ್ಯಕ್ಷ ಸುನಿಲ್ ಜೆ. ಶೆಟ್ಟಿ ಮತ್ತು ಅತಿಥಿ ಗಣ್ಯರು, ಪದಾಧಿಕಾರಿಗಳು ಸನ್ಮಾನಿಸಿದರು. ಸನ್ಮಾನಿತರನ್ನು ಎಲ್ ಇಡಿ ಸ್ಕ್ರೀನ್ ಮೂಲಕ ಪರಿಚಯಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಕುಶಾಲ್ ಸಿ. ಭಂಡಾರಿ ಮಾತನಾಡಿ, ಸಮಾನ ಸದಸ್ಯರು ಸೇರಿ ಕಟ್ಟಿ ಬೆಳೆಸಿರುವ ಈ ಸಂಸ್ಥೆಯಲ್ಲಿ ಕಳೆದ 18 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ಸಂಪಾದಿಸಿರುವ ಅಲ್ಪಾಂಶವನ್ನು ಸಮಾಜಕ್ಕಾಗಿ ವಿನಿಯೋಗಿಸುವ ಅವಕಾಶ ಹಾಗೂ ಭಾಗ್ಯವು ಥಾಣೆ ಬಂಟ್ಸ್ ಮೂಲಕ ನನಗೆ ಒದಗಿದೆ. ಎರಡು ವರ್ಷಗಳ ಕಾಲ ಅಧ್ಯಕ್ಷನಾಗಿಯೂ ಅಸೋಸಿಯೇಷನ್ ನಲ್ಲಿ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷನಾಗುವುದಕ್ಕಿಂತ ಆತ ಜೀವನ ಪರ್ಯಂತ ಅದರ ಸದಸ್ಯನಾಗಿ ಸೇವೆಯನ್ನು ಸಲ್ಲಿಸುವುದು ದೊಡ್ಡದು. ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ದುಡಿದ ಸಂಸ್ಥೆಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ. ಅಧ್ಯಕ್ಷನಾದವನು ತಮ್ಮ ಕಾರ್ಯಾವಧಿ ಮುಗಿದ ಬಳಿಕವೂ ಸಂಸ್ಥೆಗೆ ಸಕ್ರಿಯವಾಗಿ ಸೇವೆಯನ್ನು ಮುಂದುವರಿಸಬೇಕು. ಅಸೋಸಿಯೇಷನ್ ಮೂಲಕ ನಾನು ಮಾಡಿರುವ ಸಮಾಜ ಪರ ಸೇವೆಯನ್ನು ಮುಂದುವರಿಸಬೇಕು. ನಾನು ಮಾಡಿರುವ ಸಮಾಜ ಪರ ಸೇವೆಯನ್ನು ಗುರುತಿಸಿ ನನ್ನ ಪರಿವಾರ ಸಹಿತ ನೀವು ಇಂದು ಸನ್ಮಾನಿಸಿದ್ದೀರಿ. ನನ್ನ ಕಾರ್ಯಾವಧಿಯಲ್ಲಿ ಸಮಾಜ ಪರ ಕಾರ್ಯಗಳು ಯಶಸ್ವಿಯಾಗಲು ನನ್ನ ಜೊತೆಗಿದ್ದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ, ಮಾಜಿ ಅಧ್ಯಕ್ಷರುಗಳು ತುಂಬಾ ಶ್ರಮಿಸಿದ್ದಾರೆ. ಇಂದು ನನಗೆ ಸಂದ ಸನ್ಮಾನವನ್ನು ನನ್ನ ಜೊತೆಗಿದ್ದ ಅವರಿಗೆಲ್ಲ ಅರ್ಪಣೆ ಮಾಡುತ್ತೇನೆ. ಥಾಣೆ ಬಂಟ್ಸ್ ನಲ್ಲಿ ಉತ್ಪತ್ತಿ ಇಲ್ಲ. ಸದಸ್ಯರೆಲ್ಲರ ದೇಣಿಗೆಯ ನೆರವಿನಿಂದ ಸಮಾಜಕ್ಕೆ ಸೇವೆಯನ್ನು ಒದಗಿಸುತ್ತಿದ್ದೇವೆ. ಪರಿಸರದ ಹೋಟೆಲ್ ಉದ್ಯಮಿಗಳು ಥಾಣೆ ಬಂಟ್ಸ್ ನ ಆಧಾರ ಸ್ಥಂಭ. ಅವರಿಗೆಲ್ಲ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಸನ್ಮಾನವನ್ನು ಸ್ವೀಕರಿಸಿ ನವೋದಯ ಕನ್ನಡ ಸೇವಾ ಸಂಘದ ಮಾಜಿ ಅಧ್ಯಕ್ಷ ಜಯ.ಕೆ.ಶೆಟ್ಟಿ ಮಾತನಾಡಿ, ಸುಮಾರು 40 ವರ್ಷಗಳ ಕಾಲ ನವೋದಯ ಕನ್ನಡ ಸೇವಾ ಸಂಘದಲ್ಲಿ ವಿವಿಧ ಹುದ್ದೆಯಲ್ಲಿ ತನ್ನ ಅಳಿಲ ಸೇವೆಯನ್ನು ಸಲ್ಲಿಸಿರುವೆನು. ಸಂಘದಲ್ಲಿನ ಎಲ್ಲಾ ಹಿರಿಯರ, ಪದಾಧಿಕಾರಿಗಳ ಪ್ರಾಮಾಣಿಕ ಹಾಗೂ ನಿಷ್ಠೆಯ ಸೇವೆಯಿಂದಲೇ ಸಂಘ ಹಾಗೂ ನಮ್ಮ ಆಡಳಿತದಲ್ಲಿ ಶೈಕ್ಷಣಿಕ ಸಂಸ್ಥೆ
ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಸ್ಥೆ ಎಂಬುದಾಗಿ ಖ್ಯಾತಿಯನ್ನು ಗಳಿಸಿದೆ. ಸತ್ಕಾರ್ ಶಿವರಾಮ್ ಶೆಟ್ಟಿ ಅವರಂತಹ ಅನೇಕ ಮಂದಿ ದಾನಿಗಳ ಕೊಡುಗೆ ನಮ್ಮ ಸಂಸ್ಥೆಯ ಉನ್ನತಿಗೆ ಸಂದಿದೆ. ಸಮಾಜ ಸೇವೆಯಿಂದಾಗಿ ಎಲ್ಲಾ ಸಮಾಜ ಬಾಂಧವರು ನನ್ನ ಮೇಲೆ ತೋರುವ ಪ್ರೀತಿ, ವಿಶ್ವಾಸವೇ ನನಗೆ ದೊಡ್ಡ ಸನ್ಮಾನವಾಗಿದೆ. ಥಾಣೆ ಬಂಟ್ಸ್ ಸಮಾಜಪರ ಸೇವಾ ಕಾರ್ಯಗಳೊಂದಿಗೆ ಮತ್ತಷ್ಟು ಪ್ರಸಿದ್ದಿಯನ್ನು ಪಡೆಯಲಿ. ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಥಾಣೆ ಬಂಟ್ಸ್ ನ ಅಧ್ಯಕ್ಷ ಸುನಿಲ್ ಜೆ. ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಅಲ್ಲದೇ ಕಳೆದ 25 ವರ್ಷಗಳಿಂದ ಕಲಾ ಸೇವೆಯನ್ನು ಮಾಡುತ್ತಿರುವ ರಂಗ ನಿರ್ದೇಶಕ, ನಟ ಬಾಬಾ ಪ್ರಸಾದ್ ಅರಸ ಕುತ್ಯಾರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಲತಾ ರಾಜೇಶ್ ಶೆಟ್ಟಿ ವಾಚಿಸಿದರು. ಅಲ್ಲದೇ ಉನ್ನತ ಶಿಕ್ಷಣವನ್ನು ಪಡೆದವರಾದ ಹಾಗೂ ಪ್ರತಿಭಾವಂತರಾದ ಡಾ. ವೀಕ್ಷಾ ವೇಣುಗೋಪಾಲ್ ಶೆಟ್ಟಿ, ಸಿಎ ಸನತ್ ರತ್ನಾಕರ್ ಶೆಟ್ಟಿ ಪರವಾಗಿ ಆಶಾಲತಾ ಶೆಟ್ಟಿ, ಸಿಎ ನೇಹಾ ಶಿವಾನಂದ ಶೆಟ್ಟಿ, ತಿತಿಕ್ಷಾ ನಿತ್ಯಾನಂದ ಶೆಟ್ಟಿ ಬೆಳುವಾಯಿ, ನಿಷ್ಠಾ ಗಿರೀಶ್ ಶೆಟ್ಟಿ ಅಲ್ಲದೇ ಕಂಬಳ ಸಾಧಕರಾದ ಐಕಳ ಭಾವ ಕುಶಾಲ್ ಸಿ. ಭಂಡಾರಿ, ಬೋಳದ ಗುತ್ತು ಸತೀಶ್ ಶೆಟ್ಟಿ, ಕಾಡಬೆಟ್ಟು ದಿವಂಗತ ನಾರಾಯಣ ರೈ ಸ್ಮರಣಾರ್ಥ ರೇವತಿ ಶೆಟ್ಟಿ ಮತ್ತು ಸದಾನಂದ ಶೆಟ್ಟಿ, ಮಂದಾಡಿ ಹೋರ್ವರ ಮನೆ ಆದರ್ಶ್ ಶೆಟ್ಟಿ, ಮಾಳ ಆನಂದ ನಿಲಯ ಶೇಖರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಅಲ್ಲದೆ ಥಾಣೆ ಬಂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳನ್ನು, ಮಹಿಳಾ ವಿಭಾಗದ, ಯುವ ವಿಭಾಗದ ಪದಾಧಿಕಾರಿಗಳನ್ನು, ಮಾಜಿ ಅಧ್ಯಕ್ಷರುಗಳನ್ನು ವಿವಿಧ ಸಮಿತಿಯ ಕಾರ್ಯಾಧ್ಯಕ್ಷರುಗಳನ್ನು ಗೌರವಿಸಲಾಯಿತು.
ಥಾಣೆ ಬಂಟ್ಸ್ ಅಧ್ಯಕ್ಷ ಸುನಿಲ್ ಜೆ. ಶೆಟ್ಟಿ, ಅತಿಥಿ ಗಣ್ಯರು ಹಾಗೂ ಅಸೋಸಿಯೇಷನ್ ನ ಉಪಾಧ್ಯಕ್ಷ ಅಶೋಕ್ ಎಮ್. ಶೆಟ್ಟಿ, ಗೌ. ಪ್ರ. ಕಾರ್ಯದರ್ಶಿ ಚಂದ್ರಶೇಖರ್ ಎಸ್. ಶೆಟ್ಟಿ, ಗೌ. ಕೋಶಾಧಿಕಾರಿ ಪುಷ್ಪರಾಜ್ ಎಲ್. ಶೆಟ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಾರಾ ಪಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಡಿ.ಜಿ. ಬೋಳಾರ್, ಸಿಎ ಕರುಣಾರ್ ಶೆಟ್ಟಿ, ಸಿಎ ಜಗದೀಶ್ ಶೆಟ್ಟಿ, ಕುಶಾಲ್ ಸಿ. ಭಂಡಾರಿ, ವೇಣುಗೋಪಾಲ್ ಎಲ್. ಶೆಟ್ಟಿ ದೀಪ ಪ್ರಜ್ವಲಿಸಿದರು.
ಜ್ಯೋತಿ ಎಮ್. ಶೆಟ್ಟಿ ಮತ್ತು ಶಶಿಪ್ರಭಾ ಶೆಟ್ಟಿ ಪ್ರಾರ್ಥನೆಗೈದರು. ಆ ಬಳಿಕ ಬಂಟಗೀತೆ ಹಾಡಲಾಯಿತು. ಥಾಣೆ ಬಂಟ್ಸ್ ಉಪಾಧ್ಯಕ್ಷ ಅಶೋಕ್ ಎಮ್. ಶೆಟ್ಟಿ ಸ್ವಾಗತಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಎಸ್. ಶೆಟ್ಟಿ ಅಸೋಸಿಯೇಷನ್ ಸಮಾಜಪರ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಾರಾ ಪ್ರಕಾಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುಶಾಂತ್ ಎಸ್. ಶೆಟ್ಟಿ ತಮ್ಮ ವಿಭಾಗದ ಕಾರ್ಯ ಸಾಧನೆಯ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮವನ್ನು ಥಾಣೆ ಬಂಟ್ಸ್ ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ, ಸಾಹಿತ್ಯ ಸಮಿತಿಯ ಕಾರ್ಯಾಧ್ಯಕ್ಷ ನಿತ್ಯಾನಂದ ಶೆಟ್ಟಿ ಬೆಳುವಾಯಿ ನಿರೂಪಿಸಿದರು.
ಕೋಶಾಧಿಕಾರಿ ಜಗದೀಶ್ ಶೆಟ್ಟಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಶ್ವಿನಿ ಎಸ್. ಶೆಟ್ಟಿ, ಪೂಜಾ ಪಿ.ಶೆಟ್ಟಿ ಹಾಗೂ ಕರುನಾಡ ಮಣಿಗಳು ಕಾರ್ಯಕ್ರಮವನ್ನು ಮೋಹಿನಿ ರಮೇಶ್ ಶೆಟ್ಟಿ ನಿರೂಪಿಸಿದರು. ಬಂಟರ ಸಂಘ ಮುಂಬಯಿ, ಅಲ್ಲದೇ ಬಂಟ ಸಮಾಜದ ಇತರ ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು,ಸದಸ್ಯರು, ನಗರದ ವಿವಿಧ ಸಾಮಾಜಿಕ ಧಾರ್ಮಿಕ ಹಾಗೂ ಜಾತೀಯ ಸಂಸ್ಥೆಗಳ ಪದಾಧಿಕಾರಿಗಳು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಕೊನೆಗೆ ಪ್ರೀತಿ ಭೋಜನ ನಡೆಯಿತು.