ದಾಖಲೆಗಳ ವೀರ, ಬದಲಾವಣೆಯ ಹರಿಕಾರ, ಪ್ರಶಸ್ತಿಗಳ ಸರದಾರ, ಸರಸ್ವತಿ ವರಪುತ್ರ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮಾಡಿದ, ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಬತ್ತಳಿಕೆಯಿಂದ ಬಂತೊಂದು ಪ್ರಬಲ ಅಸ್ತ್ರ (ಮೂಲ ಮರಾಠಿ ನಾಟಕ, ಕಾಶೀನಾಥ್ ಘಾಣೇಕಾರ್ ರ ಮಹಾನ್ ಕೃತಿ) ‘ಗುರು‘ನಾಟಕದ ಪ್ರಥಮ ಪ್ರದರ್ಶನ ಮೊನ್ನೆ ಬಂಟರ ಭವನದಲ್ಲಿ ಜರುಗಿತು. ಸತ್ಯ,ಧರ್ಮ, ನ್ಯಾಯ, ನೀತಿ ಎಂಬ ಆದರ್ಶಗಳನ್ನು ಪಾಲಿಸಿಕೊಂಡು, ಸಮಾಜಕ್ಕೆ ತನ್ನಿಂದಾದ ಉಪಕಾರ ಗೈಯುತ್ತಾ ಇರುವ ಓರ್ವ ಕಾಲೇಜು ಪ್ರಿನ್ಸಿಪಾಲ್ ವಿದ್ಯಾನಂದ್ ಆತನೊಟ್ಟಿಗೆ ಕೆಲವು ಕಾಲೇಜು ಪ್ರೊಫೆಸರ್ ಗಳು ಆತನ ಕುತಂತ್ರ ಬುದ್ಧಿ ತಿಳಿಯದಷ್ಟು ಒಳ್ಳೆಯ ಮನಸ್ಸಿನವರಾಗಿದ್ದರು. ಈ ಪ್ರಿನ್ಸಿಪಾಲ್ ಅದರಲ್ಲೂ ಶ್ಯಾಮ್ ಸುಂದರ್ ಅಚ್ಚು ಮೆಚ್ಚಿನ ಮನೆಮಗ. ಇನ್ನಿತರರು ಕ್ಷೀರಸಾಗರ್, ಪಿ. ಎನ್. ರಾವ್. ಇದ್ದೊಬ್ಬ ಮಗನನ್ನು ಕಳಕೊಂಡಿದ್ದರೂ ಮಡದಿ ಡಾ. ಸುಮಿತ್ರಾಳೊಂದಿಗೆ ಅಪ್ತ ಮಿತ್ರ ಶಂಭು ಹಾಗೂ ಆತನ ಮಡದಿ ನೀಲಮ್ ಳೊಂದಿಗೆ ಬಹಳ ಸಂತೋಷವಾಗಿ ದಿನ ಕಳೆಯುತ್ತಿದ್ದರು ಈ ಪ್ರಾಚಾರ್ಯರು.
ಒಳ್ಳೆಯವರು ಇರುವಲ್ಲಿ ಕೆಟ್ಟವರು ಇರಲೇಬೇಕಂತೆ. ಇಲ್ಲದಿದ್ದರೆ ಆತನ ಒಳ್ಳೆಯತನ ಸಮಾಜಕ್ಕೆ ತಿಳಿಯುವುದಾದರೂ ಹೇಗೆ? ಇಲ್ಲಿಯೂ ದುರ್ಜನ ವ್ಯಕ್ತಿ ಒಬ್ಬನಿದ್ದ. ಮಾಡುವುದು ಹಾಳು ಕೆಲಸವಾದರೂ ಹೆಸರು ಧರ್ಮರಾಜ್. ತನಗಡ್ಡಿ ಬಂದವರು ಯಾರೇ ಆಗಿದ್ದರೂ ಅವರನ್ನು ಬದಿಗೆ ಸರಿಸುತ್ತಿದ್ದ. ಇಲ್ಲವೇ ಮುಗಿಸುತ್ತಿದ್ದ. ಇಲ್ಲಿಯೂ ಧರ್ಮರಾಜನ ಮಗನ ವಿರುದ್ಧ ಸೂರ್ಯ ಎಂಬ ಕಾಲೇಜು ವಿದ್ಯಾರ್ಥಿಯೊಬ್ಬ ನಿಂತಾಗ ಧರ್ಮರಾಜ್ ಕೆಂಡಾಮಂಡಲವಾದ. ಆತನನ್ನು ಮುಗಿಸಲು ನೋಡಿದಾಗ ಪ್ರಿನ್ಸಿಪಾಲ್ ಆ ವಿದ್ಯಾರ್ಥಿಗೆ ಸಪೋರ್ಟ್ ಇರುವನೆಂದು ತಿಳಿದು ಇಬ್ಬರ ಬಾಳಲ್ಲೂ ಬಿರುಗಾಳಿ ಎಬ್ಬಿಸಲು ಪ್ರಯತ್ನಿಸಿದ. ಅದರಲ್ಲಿ ಆತ ಸಫಲನಾಗುತ್ತಾನೋ ಎಂದು ತಿಳಿಯಲು ಹಾಗೂ ಕೊನೆಯ ಕ್ಲೈಮಾಕ್ಸ್ ದೃಶ್ಯವನ್ನು ನೋಡಲು ನೀವು ನಾಟಕವನ್ನು ಕೊನೆಯವರೆಗೂ ಸಂಪೂರ್ಣವಾಗಿ ನೋಡಲೇಬೇಕು.
ಪ್ರಿನ್ಸಿಪಾಲ್ ವಿದ್ಯಾನಂದರ ಪಾತ್ರದಲ್ಲಿ ನಟ, ನಿರ್ದೇಶಕ, ಸಂಭಾಷಣೆಗಾರ ತೋನ್ಸೆ ವಿಜಯ್ ಕುಮಾರ್ ಶೆಟ್ಟಿಯವರು ನಟಿಸಿದ್ದಾರೆ. ಅವರ ಪಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಕಾರಣ ಮೂರು ವಿಭಿನ್ನ ಗೆಟಪ್( ಪ್ರಿನ್ಸಿಪಾಲ್, ಲಾಕಪ್ನಲ್ಲಿರುವ ಕೈದಿ ಹಾಗೂ ಇಂಟರ್ ನ್ಯಾಷನಲ್ ಡಾನ್) ಇದನ್ನು ಅವರಿಂದ ಮಾತ್ರ ಮಾಡಲು ಸಾಧ್ಯ ಎನ್ನುವಂತಿದೆ. ಅವರ ಪತ್ನಿ ಡಾ.ಸುಮಿತ್ರಾಳ ಪಾತ್ರದಲ್ಲಿ ಪ್ರತಿಮಾ ಬಂಗೇರ ಅದ್ಬುತ ಅಭಿನಯ ನೀಡಿದ್ದು, ಪಾತ್ರದ ಒಳಹೊಕ್ಕು ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಹಾಗೂ ತಾನೋರ್ವ ಬಹುಮುಖ ಪ್ರತಿಭೆಯ ಕಲಾವಿದೆ ಎಂಬುದನ್ನು ನಿರೂಪಿಸಿದ್ದಾರೆ.
ವಿದ್ಯಾರ್ಥಿ, ಸಿ.ಬಿ.ಐ. ಇನ್ಸ್ಪೆಕ್ಟರ್ ಸೂರ್ಯನ ಪಾತ್ರದಲ್ಲಿ ಊರಿನಿಂದ ಬಂದಿರುವ ನಾಯಕ ನಟ ಅಕ್ಷತ್ ಅಮೀನ್ ಮತ್ತೊಮ್ಮೆ ಅಮೋಘವಾಗಿ ಅಭಿನಯ ನೀಡಿದ್ದಾರೆ. ರಂಗ ಕಲಾವಿದನಾಗಿರುವ ಈತ ಒಬ್ಬ ಅಪ್ಪಟ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಖಳನಾಯಕ ಧರ್ಮರಾಜನ ಪಾತ್ರದಲ್ಲಿ ಮುಂಬಯಿಯ ಮಹಾನ್ ಕಲಾವಿದ, ವಾಗ್ಮಿ, ಲೇಖಕ, ಬಂಟರ ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಅಶೋಕ್ ಪಕ್ಕಳ ಅವರದ್ದು ಅವಿಸ್ಮರಣೀಯ ನಟನೆ. ಅವರ ವಿಭಿನ್ನ ಗೆಟಪ್ ಗೆ ಜನರಿಂದ ಶಿಳ್ಳೆ, ಚಪ್ಪಾಳೆಯ ಸುರಿಮಳೆ. ಇನ್ನೊಬ್ಬ ಮುಂಬಯಿಯ ಪ್ರಸಿದ್ಧ ನಟ, ಸಂಘಟಕ ಮುಂಬಯಿ ಬಂಟರ ಸಂಘದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಅವರದ್ದು ಕುತಂತ್ರಿ ಪ್ರೊಫೆಸರ್ ಶ್ಯಾಮ್ ಸುಂದರ್ ನ ಪಾತ್ರ. ಅದನ್ನು ತನ್ನದೇ ಶೈಲಿಯಲ್ಲಿ ನಿರ್ವಹಿಸಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.
ಮೀರಾ- ಭಾಯಂದರ್ ನ ಉದ್ಯಮಿ, ಸಮಾಜ ಸೇವಕ, ರಂಗ ಕಲಾವಿದ ಜಿ.ಕೆ. ಕೆಂಚನಕೆರೆ ಅವರು ಪ್ರಿನ್ಸಿಪಾಲ್ ನ ಆತ್ಮೀಯ ಗೆಳೆಯ ಶಂಭುವಿನ ಪಾತ್ರದಲ್ಲಿ ಲವಲವಿಕೆಯಿಂದ ಅಭಿನಯಿಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ ಹಾಗೂ ತಾನೋರ್ವ ಬಹುಮುಖ ಪ್ರತಿಭೆಯ ಕಲಾವಿದ ಎಂದು ಇನ್ನೊಮ್ಮೆ ನಿರೂಪಿಸಿದ್ದಾರೆ. ಕಲಾ ಜಗತ್ತು ತಂಡದ ಹೆಚ್ಚಿನ ನಾಟಕದಲ್ಲಿ ಅಭಿನಯಿಸಿದ ಹಾಗೂ ‘ಪತ್ತಾನಾಜೆ‘ ತುಳು ಸಿನಿಮಾದಲ್ಲೂ ಅಭಿನಯಿಸಿದ ಖ್ಯಾತಿಯುಳ್ಳ ಕಲಾವಿದ ಪೃಥ್ವಿರಾಜ್ ಮುಂಡ್ಕೂರು ಪ್ರೊಫೆಸರ್ ಕ್ಷೀರಸಾಗರನ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿ ಪ್ರೇಕ್ಷಕರ ಹಾಗೂ ನಿರ್ದೇಶಕರ ಮೆಚ್ಚುಗೆ ಪಡೆದಿದ್ದಾರೆ. ಇನ್ನೋರ್ವ ಕಲಾ ಜಗತ್ತು ತಂಡದ ನೇಪಥ್ಯದ ಸಾರಥಿ ಇದೀಗ ಪ್ರಥಮ ಬಾರಿಗೆ ನಾಟಕದಲ್ಲಿ ಅಭಿನಯಿಸಿ ಪ್ರೊಫೆಸರ್ ಪಿ.ಎನ್.ರಾವ್ ಪಾತ್ರಕ್ಕೆ ಜೀವ ತುಂಬಿದ ಉತ್ತಮ್ ಅವರು ಲವಲವಿಕೆಯಿಂದ ಅಭಿನಯಿಸಿ ಸೈ ಏನಿಸಿಕೊಂಡಿದ್ದಾರೆ. ಇನ್ನೋರ್ವ ಕಲಾ ಜಗತ್ತು ತಂಡದ ಬೆನ್ನೆಲುಬು, ತಂಡದ ಸೆಕ್ರಟರಿ ಕೃಷ್ಣರಾಜ್ ವಕೀಲನಾಗಿ ಉತ್ತಮ ಅಭಿನಯ ನೀಡಿದ್ದಾರೆ ಹಾಗೂ ಹಿಂದಿನಿಂದಲೂ ತಂಡದ ಹಿತೈಷಿಯಾಗಿ, ಸಲಹೆಗಾರನಾಗಿ ಕೆಲಸ ಮಾಡುತ್ತಿರುವ ಶ್ಯಾಮ್, ಇನ್ಸ್ಪೆಕ್ಟರ್ ಆಗಿ, ಮೊದಲು ಧರ್ಮರಾಜನ ಪಿ. ಎ. ಆಗಿದ್ದು, ಬದಲಾದ ಪರಿಸ್ಥಿತಿಯಲ್ಲಿ ವಿದ್ಯಾನಂದನ ಕಡೆ ಕೆಲಸ ಮಾಡುವ ಪಿಂಕಿಯಾಗಿ ಮೀರಾ- ಭಾಯಂದರ್ ನ ಸಂಘಟಕಿ ಸುಜಾತಾ ಕೋಟ್ಯಾನ್ ಅತ್ಯುತ್ತಮ ಅಭಿನಯ ನೀಡಿದ್ದಾರೆ ಹಾಗೂ ಮೀರಾ- ಭಾಯಂದರ್ ನ ಇನ್ನೋರ್ವ ಸಂಘಟಕಿ, ಲೇಖಕಿ ಲೀಲಾ ಗಣೇಶ್ ಶಂಭುವಿನ ಪತ್ನಿಯಾಗಿ ಲವಲವಿಕೆಯಿಂದ ಅಭಿನಯಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
ಹೀಗೆ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾಲು ಪಡೆದಿದ್ದಾರೆ ಎನ್ನಲು ಸಂತೋಷವೆನಿಸುತ್ತದೆ. ರಾಜೇಶ್ ಹೆಗ್ಡೆಯವರ ಸುಮಧುರ ಸಂಗೀತ ನಾಟಕಕ್ಕೆ ಇನ್ನಷ್ಟು ಮೆರುಗು ನೀಡಿತು. ಮಂಜುನಾಥ ಶೆಟ್ಟಿಗಾರ್ ರವರ ವೇಷ, ಭೂಷಣ ನಾಟಕದ ಹೈಲೈಟ್ ಎನಿಸಿತು. ಲೈಟಿಂಗ್ ಕೂಡ ಅತ್ಯುತ್ತಮವಾಗಿತ್ತು. ಅಲ್ಲದೇ ಪ್ರತಿಯೊಂದು ದೃಶ್ಯಕ್ಕೂ ಬೇರೆ ಬೇರೆ ಸೆಟ್ಟಿಂಗ್ ಕಷ್ಟಕರವಾದರೂ ಇದು ನಾಟಕದ ಗುಣಮಟ್ಟಕ್ಕೆ ಹಾಗೂ ವಿಜಯ್ ಕುಮಾರ್ ಶೆಟ್ಟಿಯವರ ಎತ್ತರಕ್ಕೆ ಅಗತ್ಯವಾಗಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ಬಹಳ ದಿನಗಳ ನಂತರ ಮುಂಬಯಿ ಮಹಾನಗರಕ್ಕೆ ಒಂದು ಅತ್ಯುತ್ತಮ ನಾಟಕ ಬಂದಿದೆ ಎಂದು ಘಂಟಾಘೋಷವಾಗಿ ಹೇಳಬಹುದಾಗಿದೆ. ಹಾಗಾಗಿ ಮುಂದಿನ ‘ಗುರು‘ ನಾಟಕದ ಪ್ರದರ್ಶನಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೋಡಿ ಕಲಾವಿದರನ್ನು ಹರಸಿ, ಹಾರೈಸಬೇಕೆಂದು ವಿನಂತಿ.
ಸತೀಶ್ ಶೆಟ್ಟಿ ಕಣಂಜಾರ್