ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದ ವತಿಯಿಂದ ಆರಸಿನ ಕುಂಕುಮ ಕಾರ್ಯಕ್ರಮವು ಜೂಯಿ ನಗರದಲ್ಲಿರುವ ಬಾಂಬೆ ಬಂಟ್ಸ್ ಅಸೋಸಿಯೇಶನ್ನ ಬಂಟ್ಸ್ ಸೆಂಟರ್ ಸಭಾಗೃಹದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ ಮಾತನಾಡಿ, ಸನಾತನ ಧರ್ಮದಲ್ಲಿ ಅರಸಿನ ಕುಂಕುಮಕ್ಕೆ ವಿಶೇಷ ಮಾನ್ಯತೆಯಿದೆ. ಅರಸಿನ ಕುಂಕುಮ ಮಹಿಳೆಯರ ಸೌಭಾಗ್ಯದ ಸಂಕೇತ. ಕುಂಕುಮವನ್ನು ಹಚ್ಚುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಮಹಿಳೆಯರು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ನಮ್ಮ ಪರಂಪರೆ ಜತೆಗೆ ಆಧುನಿಕತೆಯನ್ನೂ ಅಳವಡಿಸಿಕೊಂಡು ತಮ್ಮ ಪ್ರತಿಭೆ ಮೂಲಕ ಅಸೋಸಿಯೇಷನ್ ನಲ್ಲಿ ಮಹಿಳಾ ವಿಭಾಗದಲ್ಲಿ ಸಕ್ರಿಯರಾಗಿರುವುದು ಅಭಿನಂದನೀಯವೆಂದು ನುಡಿದರು.
ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ ಮತ್ತು ಪ್ರಭಾ ಎಸ್. ಶೆಟ್ಟಿ ದಂಪತಿ, ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿ ಶೆಟ್ಟಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತೇಜಾಕ್ಷಿ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿ, ಮಹಿಳಾ ವಿಭಾಗದ ಕಾರ್ಯ ವೈಖರಿಯನ್ನು ವಿವರಿಸಿದರು. ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶಾಂತಾ ಎನ್ ಶೆಟ್ಟಿ, ಕಾರ್ಯದರ್ಶಿ ಸಹಾನಿ ವಾಮನ್ ಶೆಟ್ಟಿ, ಕೋಶಾಧಿಕಾರಿ ಉಷಾ ಶೆಟ್ಟಿ, ಜತೆ ಕಾಯದರ್ಶಿ ಲಲಿತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್ ಶೆಟ್ಟಿ ಉಪಸ್ಥಿತಿಯಲ್ಲಿ ಅಸೋಸಿಯೇಶನ್ ಮಹಿಳಾ ವಿಭಾಗದ ಹಿರಿಯ ಸಾಧಕಿ ಜಯಂತಿ ಎಸ್. ಶೆಟ್ಟಿ ಅವರನ್ನು ಮಹಿಳಾ ವಿಭಾಗದ ವತಿಯಿಂದ ಗೌರವಿಸಲಾಯಿತು.
ಗೌರವ ಪ್ರಧಾನ ಕಾರ್ಯದರ್ಶಿ ಕಿಶೋರ್ ಕೆ ಶೆಟ್ಟಿ ಮಾತನಾಡಿ, ಮಕ್ಕಳನ್ನು ಸನಾತನ ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಕಾರ್ಯಕ್ರಮಗಳಿಗೆ ಕರೆ ತಂದಲ್ಲಿ ಅವರು ಸಂಸ್ಕಾರವಂತರಾಗಿ ಬೆಳೆಯಲು ಸಾಧ್ಯವಿದೆ. ಹಣೆಯ ಮೇಲೆ ಅರಸಿನ ಕುಂಕುಮವನ್ನು ಹಚ್ಚಿದರೆ ದೇಹದ ಅರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಇದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು, ಸಮಿತಿಯ ಸದಸ್ಯರು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯೆಯರು, ಮಾಜಿ ಕಾರ್ಯಾಧ್ಯಕ್ಷೆಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಸಮಾಜದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಹಾನಿ ವಾಮನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು.
ಚಿತ್ರ, ವರದಿ : ದಿನೇಶ್ ಕುಲಾಲ್