ಭಾರತದಲ್ಲಿ 28 ವರ್ಷಗಳ ಬಳಿಕ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿಗೆ ಕಿರೀಟ್ ಜಸ್ಟ್ ಮಿಸ್ ಆಗಿದೆ. ಟಾಪ್ 8ಗೆ ಬಂದರೂ ಟಾಪ್ 4ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ. 112 ಸ್ಪರ್ಧಿಗಳಲ್ಲಿ ಟಾಪ್ 8 ಕ್ಕೆ ಹೋಗುವುದು ಕೂಡಾ ಸಣ್ಣ ಮಾತಲ್ಲ. ಆದರೂ ಕೊನೆಯ ಗಳಿಗೆಯಲ್ಲಿ ಕಿರೀಟ ತಮ್ಮದಾಗಿಸಿಕೊಳ್ಳುವಲ್ಲಿ ಸಿನಿ ಶೆಟ್ಟಿ ವಿಫಲರಾದರು. ಜೆಕ್ ಗಣರಾಜ್ಯದ ಸುಂದರಿ 25 ವರ್ಷದ ಕ್ರಿಸ್ಟೈನಾ ಪಿಸ್ಕೋವಾ (Krystyna Pyszkova) ಅವರು ಮಿಸ್ ವರ್ಲ್ಡ್ ಆಗಿ ಹೊರಹೊಮ್ಮಿದರು. ವಜ್ರಗಳಿಂದ ಕೂಡಿದ ಕಿರೀಟ, ರೂ 10 ಕೋಟಿ ನಗದು, ಫ್ರೀ ವರ್ಲ್ಡ್ ಟೂರ್ ಇವೆಲ್ಲವನ್ನೂ ಈಗ ಕ್ರಿಸ್ಟೈನಾ ಪಿಸ್ಕೋವಾ ಪಡೆದುಕೊಂಡಿದ್ದಾರೆ.


ಮುಂಬಯಿ ಹೋಟೆಲ್ ಉದ್ಯಮಿ ಸದಾನಂದ ಶೆಟ್ಟಿ ಇನ್ನಂಜೆ ಅವರ ಸುಪುತ್ರಿ, ಫೆಮಿನಾ ಮಿಸ್ ಇಂಡಿಯಾ 2022 ವಿಜೇತ 21 ವರ್ಷದ ಸಿನಿ ಶೆಟ್ಟಿ ಮಿಸ್ ವರ್ಲ್ಡ್ 2023 ಸ್ಪರ್ಧೆಯಲ್ಲಿ ಇವರು ದೇಶವನ್ನು ಪ್ರತಿನಿಧಿಸಿದ್ದರು. ಟಾಪ್ 8 ಕ್ಕೆ ಬಂದು ಭಾರತದ ಹೆಮ್ಮೆ ಹೆಚ್ಚಿಸಿದ ಸಿನಿ ಶೆಟ್ಟಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಸದ್ಯ ಇವರು ಮುಂಬಯಿಯಲ್ಲಿ ನೆಲೆಸಿದ್ದಾರೆ. ಈ ಸಂದರ್ಭದಲ್ಲಿ ತನ್ನವರನ್ನು ನೋಡಿ ಸಿನಿ ಕಣ್ಣೀರಾಗಿದ್ದರು. ಮಿಸ್ ವರ್ಲ್ಡ್ ಕಿರೀಟ ಸಿಗಲಿಲ್ಲ ಎನ್ನುವ ನೋವು ಕೂಡಾ ಅವರ ಮುಖದಲ್ಲಿ ಕಾಣಿಸುತ್ತಿತ್ತು. ಅವರನ್ನು ಸಂಬಂಧಿಕರು ಸಂತೈಸಿದರು. ಸಿನಿ ಶೆಟ್ಟಿ ಅವರು, ಮುಂಬೈನ ಕಾಲೇಜೊಂದರಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿದ್ಯಾಭ್ಯಾಸ ಮಾಡುತ್ತಿದ್ದು, 2ನೇ ವರ್ಷದ ಪದವಿಯಲ್ಲಿ ಓದುತ್ತಿದ್ದಾರೆ.

ಸಿನಿ ಶೆಟ್ಟಿ ಅವರು ಉಡುಪಿಯ ಇನ್ನಂಜೆ ಮೂಲದವರು. ವಿಶ್ವ ಸುಂದರಿ ಸ್ಪರ್ಧೆಗೆ ತಯಾರಿ ನಡೆಸಿರುವ ನಡುವೆಯೇ, ಕನ್ನಡತಿ ಸಿನಿ ಶೆಟ್ಟಿ ಕೆಲವೊಂದು ಮಹತ್ವಪೂರ್ಣ ಹೇಳಿಕೆಯನ್ನು ನೀಡಿದ್ದರು. ಭಾರತವು ಅಭಿವೃದ್ಧಿಶೀಲ ರಾಷ್ಟ್ರವಾಗುವಲ್ಲಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ನನಗೆ ಈ ಅವಕಾಶ ಸಿಕ್ಕಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ. ಹಿಂದೆಲ್ಲಾ ಭಾರತವನ್ನು ಹಾವಾಡಿಗರ ನಾಡು ಎಂದು ಕರೆಯಲಾಗುತ್ತಿತ್ತು. ವಿಶ್ವದ ದೃಷ್ಟಿಯಲ್ಲಿ ಭಾರತವನ್ನು ತೋರಿಸುವಾಗ ಹಾವಾಡಿಗರನ್ನೇ ತೋರಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಇಡೀ ವಿಶ್ವಕ್ಕೇ ಮೋಡಿ ಮಾಡುತ್ತಿದೆ ಭಾರತ. ಇಲ್ಲಿಗೆ ಬರುವ ಪ್ರತಿಯೊಬ್ಬರೂ ನಮ್ಮ ಸಂಪ್ರದಾಯಗಳು, ನಮ್ಮ ಆತಿಥ್ಯದಿಂದ ಮೋಡಿಯಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.






































































































