ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು. ಆದರೆ ಬಡ ಸಮಾಜಕ್ಕಾಗಿ ಸೇವಾ ಕಾರ್ಯ ಮಾಡುವಾಗ ಸಂಘ ನನಗಾಗಿ ಅಲ್ಲ ಸಮಾಜಕ್ಕಾಗಿ ಇರುವುದು ಎಂಬ ಆತ್ಮ ಸ್ಮರಣೆ ಇರಲಿ ಹಾಗೂ ಸೇವೆ ಕೂಡಾ ಸಮಾಜಕ್ಕಾಗಿ ಮಾಡಿದೆ ಎಂಬ ಹೆಮ್ಮೆ ನಮ್ಮಲ್ಲಿರಲಿ. ಸಮಾಜ ಕಾರ್ಯ ಯಾವುದೇ ಇರಲಿ ಧನಾತ್ಮಕವಾಗಿ ನಡೆದಾಗ ಅದಕ್ಕೆ ಫಲ ಸಿಗುವುದು ಸೃಷ್ಟಿಯ ನಿಯಮ. ನಿರ್ಮಲ ಮನಸ್ಸಿನ ಸೇವೆಯಿಂದ ಚಿತ್ತ ಶುದ್ಧಿಯನ್ನು ಪಡೆಯಲು ಸಾಧ್ಯ. ನಮ್ಮನ್ನು ನಾವು ಗಟ್ಟಿಗೊಳಿಸಿದಂತೆ ನಮ್ಮವರನ್ನು ಗಟ್ಟಿಗೊಳಿಸುವ ಕಾರ್ಯ ಅಗಲಿ. ನಮ್ಮ ಶ್ರೀಮಂತ ಸಂಸ್ಕ್ರತಿಗೆ ತಕ್ಕಂತೆ ಕೈಗೊಂಡ ಕಾರ್ಯ ಪರಿಪೂರ್ಣಗೊಳ್ಳುವ ತನಕ ವಿರಮಿಸದೇ ಸಮಾಜಕ್ಕಾಗಿ ಅರ್ಪಣೆ ಮಾಡುವ ಛಲವೊಂದಿದ್ದರೆ ಅದು ಬಂಟರಲ್ಲಿ ಕಾಣಬಹುದು. ನಮಗೆ ಬಂದ ಶ್ರೀಮಂತಿಕೆಯಲ್ಲಿ ಮೆರೆಯದೆ ದಾನ ಧರ್ಮದ ಮೂಲಕ ನಾವು ಸಮಾಜದಲ್ಲಿ ಶ್ರೇಷ್ಠರಾಗಬೇಕು ಎಂದು ಹೇರಂಬ ಇಂಡಸ್ಟ್ರೀಸ್ ಪ್ರೈ ಲಿಮಿಟೆಡ್ ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ನುಡಿದರು.
ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಇದರ ವಾರ್ಷಿಕೊತ್ಸವ, ಸ್ನೇಹ ಸಮ್ಮಿಲನ ಸಮಾರಂಭವು ಮಾರ್ಚ್ 10ರಂದು ಚಿಂಚ್ವಾಡ್ ನ ಪ್ರೊ ರಾಮಕೃಷ್ಣ ಮೋರೆ ಆಡಿಟೋರಿಯಂನಲ್ಲಿ ಜರಗಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸದಾಶಿವ ಶೆಟ್ಟಿಯವರು ಮಾತನಾಡಿ ನಾವು ಧೈವ ದೇವರ ಆಶೀರ್ವಾದಿಂದ ಪ್ರಯತ್ನ ಮತ್ತು ಸಾಹಸ ಮಾಡಿ ಆರ್ಥಿಕವಾಗಿ ಬೆಳೆದವರು. ವಿಶ್ವ ಬಂಟರ ಶ್ರೆಯೋಭಿವೃದ್ದಿಗಾಗಿ ಸಂಘಟನಾತ್ಮಕ ಹಲವಾರು ಕಾರ್ಯ ಯೋಜನೆಗಳು ನಡೆಯುತ್ತಿವೆ. ವಿಶ್ವ ಬಂಟ ಕೋಶ ಎಂಬ ಕಾರ್ಯವು ಆರಂಭವಾಗಿದೆ. ನಮ್ಮ ಬಡ ಕುಟುಂಬಗಳ ಉದ್ದಾರ ಕೂಡಾ ನಮ್ಮ ಕರ್ತವ್ಯ ಎಂದು ಅರಿತು ಸೇವಾ ಕಾರ್ಯದಲ್ಲಿ ಮುನ್ನಡೆಯೋಣ. ಈ ಎಲ್ಲಾ ಕಾರ್ಯಗಳು ಅರ್ಥಪೂರ್ಣವಾಗಿ ನಡೆಯಲು ತಮ್ಮೆಲ್ಲರ ಸಹಕಾರ ಸದಾ ಇರಲಿ. ಇಲ್ಲಿ ಇಂದು ಉತ್ತಮ ಸಂದೇಶ ನೀಡುವ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮತ್ತು ಸಂಘಟಿತ ಸಮಾರಂಭ ನಡೆದಿದೆ. ಹೃದಯ ತುಂಬಿ ಬಂದಿದೆ ಎಂದರು.
ಸಂಘದ ಅಧ್ಯಕ್ಷರಾದ ಶ್ರೀ ರಾಕೇಶ್ ಶೆಟ್ಟಿ ಬೆಳ್ಳಾರೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ವಾರ್ಷಿಕೋತ್ಸವ ಸಮಾರಂಭದ ವೇದಿಕೆಯಲ್ಲಿ ಗೌರವ ಅತಿಥಿಗಳಾದ ಕರ್ನಾಟಕ ವಿಧಾನಸಭಾ ಬೈಂದೂರು ಕ್ಷೇತ್ರದ ಶಾಸಕ ಶ್ರೀ ಗುರುರಾಜ್ ಗಂಟಿಹೊಳೆ, ಗುಜರಾತ್ ನ ಸಿಲ್ವಾಸ ದಾದರ್ ನಗರ ಹವೇಲಿ ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ರಜನಿ ಜಿ ಶೆಟ್ಟಿ, ಸಂಘದ ಉಪಾಧ್ಯಕ್ಷ ಶ್ರೀ ಜಗದೀಶ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ವಿಜಯ್ ಶೆಟ್ಟಿ ಬೋರ್ಕಟ್ಟೆ, ಪ್ರಧಾನ ಕಾರ್ಯದರ್ಶಿ ಶ್ರೀ ಅರುಣ್ ಶೆಟ್ಟಿ, ಕೋಶಾಧಿಕಾರಿ ಶ್ರೀ ಸುಧಾಕರ್ ಶೆಟ್ಟಿ ಪೆಲತ್ತೂರು, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ದಿನೇಶ್ ಶೆಟ್ಟಿ ಉಜಿರೆ, ಸಮಾಜ ಕಲ್ಯಾಣ ಮತ್ತು ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ವಿಶ್ವನಾಥ್ ಕೆ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಜಯಾನಂದ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜ್ಯೋತಿ ವಿ ಶೆಟ್ಟಿ, ಸುನಿತಾ ರಾಕೇಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಆಕಾಶ್ ಜೆ ಶೆಟ್ಟಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ವೇದಿಕೆಯಲ್ಲಿದ್ದ ಅತಿಥಿ ಗಣ್ಯರು, ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಿಂಪ್ರಿ ಚಿಂಚ್ವಾಡ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ್ ಡಿ ಶೆಟ್ಟಿ, ರಘುರಾಮ್ ಶೆಟ್ಟಿ, ಎರ್ಮಾಳ್ ನಾರಾಯಣ ಶೆಟ್ಟಿ, ಎರ್ಮಾಳ್ ವಿಶ್ವನಾಥ್ ಶೆಟ್ಟಿ, ಪದ್ಮನಾಭ ಕೆ ಶೆಟ್ಟಿ, ಎರ್ಮಾಳ್ ಸೀತಾರಾಂ ಶೆಟ್ಟಿ, ಮಹೇಶ್ ಹೆಗ್ಡೆಯವರು ಉಪಸ್ಥಿತರಿದ್ದರು. ನಳಿನಿ ಶೆಟ್ಟಿ, ಶೋಭಾ ಶೆಟ್ಟಿ, ರೇಖಾ ಶೆಟ್ಟಿ ಪ್ರಾರ್ಥನೆಗೈದರು.
ನಿಕಟ ಪೂರ್ವ ಅಧ್ಯಕ್ಷ ವಿಜಯ್ ಶೆಟ್ಟಿ ಸ್ವಾಗತಿಸಿದರು. ಸಂಘದ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ಎಲ್.ಇ.ಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು. ಅತಿಥಿ ಗಣ್ಯರನ್ನು ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಮತ್ತು ಪದಾಧಿಕಾರಿಗಳು ಪುಷ್ಪಗುಚ್ಛ ನೀಡಿ ಗೌರವಿಸಿದರು ಹಾಗೂ ವಿವಿದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘಕ್ಕೆ ಆಗಮಿಸಿದ ಗಣ್ಯರು ತಮ್ಮ ಸಂದೇಶಗಳನ್ನು ತಿಳಿಸುವ ಅತಿಥಿ ದೇವೋಭವ ಎಂಬ ಪುಸ್ತಕವನ್ನು ಕನ್ಯಾನ ಸದಾಶಿವ ಶೆಟ್ಟಿಯವರು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಗೌರವ ಅತಿಥಿಗಳಾದ ಗುರುರಾಜ್ ಗಂಟಿಹೊಳೆ, ರಜನಿ ಜಿ .ಶೆಟ್ಟಿಯವರನ್ನು ಶಾಲು, ಹಾರ, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇವರ ಪರಿಚಯವನ್ನು ಕ್ರಮವಾಗಿ ಅವಿನಾಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಸ್ಮಿತಾ ಎಂ ಹೆಗ್ಡೆ ಓದಿದರು. ಇದೇ ಸಂದರ್ಭದಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘಕ್ಕೆ ಹಲವಾರು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆಗೈದ ಸಮಿತಿಯ ಸೇವಾ ಪ್ರಮುಖರಾದ ಪುಚ್ಚೊಟ್ಟು ಬೀಡು ಎರ್ಮಾಳ್ ಬಾಲಚಂದ್ರ ಶೆಟ್ಟಿ, ಅವಿನಾಶ್ ಶೆಟ್ಟಿ ಮಂದಾಡಿಗುತ್ತು, ಜಯಾನಂದ ಶೆಟ್ಟಿ ಪುತ್ತೂರುರವರನ್ನು ಸನ್ಮಾನಿಸಲಾಯಿತು. ಇವರ ಸಾಧನೆಗಳ ವರದಿಯನ್ನು ಕೋಶಾಧಿಕಾರಿ ಸುಧಾಕರ್ ಶೆಟ್ಟಿ ಪೆಲತ್ತೂರು ಪರಿಚಯಿಸಿದರು.
ಸಂಘದ ನಾಯಕತ್ವ ವಹಿಸಿ ಪಾದರಸದಂತೆ ಕಾರ್ಯಗೈದು ಕಳೆದ ವರ್ಷ ರಜತ ಸಂಭ್ರಮ ಹಾಗೂ ಸಂಘವನ್ನು ಉತ್ತಮ ರೀತಿಯಲ್ಲಿ ಸಂಘಟಿಸಿದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಸುನಿತಾ ಅರ್ ಶೆಟ್ಟಿ ದಂಪತಿಗಳನ್ನು ಸಮಾಜ ಬಾಂಧವರ ಪರವಾಗಿ ಅತಿಥಿಗಳು ಸನ್ಮಾನಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಸಮಾಜಕ್ಕೆ ಮತ್ತು ಸಮಾಜ ಸೇವೆಗೆ ಉತ್ತೇಜನ ನೀಡುವಂತಹ ನುಡಿ ನಮನಗಳನ್ನು ಸಲ್ಲಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರು ಮತ್ತು ಬಂಟ ಸಮಾಜ ಬಾಂಧವರಿಂದ ವಿವಿದ ವೈವಿಧ್ಯಮಯ ನೃತ್ಯ ಪ್ರದರ್ಶನಗೊಂಡಿತು ಹಾಗೂ ಅರ್ಥಗರ್ಭಿತ ಸಂದೇಶ ನೀಡುವ ಹಾಸ್ಯ ಪ್ರಹಸನ ತುಂಬಿದ ಸಭಾಂಗಣದಲ್ಲಿದ್ದ ಭಾಂದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು. ಸಾವಿರಾರು ಸಂಖ್ಯೆಯ ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳು, ಹಿರಿಯರು, ದಾನಿಗಳು, ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗದವರು, ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮದ ನಂತರ ತುಳುನಾಡ ಶೈಲಿಯ ಪ್ರೀತಿ ಭೋಜನ ನಡೆಯಿತು. ಅಭಿಷೇಕ್ ಶೆಟ್ಟಿ ಪಡೀಲ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಶೆಟ್ಟಿ ಪೆಲತ್ತೂರು ವಂದಿಸಿದರು.
ಚಿತ್ರ, ವರದಿ : ಹರೀಶ್ ಮೂಡಬಿದ್ರಿ