ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಇದರ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ಸಂಘಟನೆಯ ಮಹಾಪೋಷಕರಾದ ಎಸಿಪಿ ಎಸ್. ಮಹೇಶ್ ಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ಇಲ್ಲಿನ ಗೋವಿಂದ ದಾಸ್ ಕಾಲೇಜ್ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಖ್ಯಾತ ಜ್ಯೋತಿಷಿ ನಾಗೇಂದ್ರ ಭಾರಧ್ವಾಜ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ಬಾಲ್ಯ ಕಾಲದ ನೆನಪುಗಳು ಜೀವನದ ಕೊನೆಯ ತನಕ ನೆನಪಲ್ಲಿ ಉಳಿಯುವಂತದ್ದು. ಅದನ್ನು ಮತ್ತೆ ನೆನಪಿಸುತ್ತಿರುವ ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ಸುರತ್ಕಲ್ ಸ್ಪೋರ್ಟ್ಸ್ ಕಲ್ಚರಲ್ ಕ್ಲಬ್ ಈ ಮೂಲಕ ಪ್ರಶಂಸಾರ್ಹ ಕೆಲಸವನ್ನು ಮಾಡಿದೆ. ಹಿರಿಯರ ಕ್ರಿಕೆಟ್ ಪಂದ್ಯಾವಳಿಯನ್ನು ಪ್ರೋತ್ಸಾಹಿಸುತ್ತಿರುವ ಎಸಿಪಿ ಮಹೇಶ್ ಕುಮಾರ್ ಅವರಿಗೆ ಅಭಿನಂದನೆಗಳು. ಇಂತಹ ಕಾರ್ಯಕ್ರಮ ಇನ್ನಷ್ಟು ಆಯೋಜನೆಗೊಳ್ಳಲಿ” ಎಂದು ಶುಭ ಹಾರೈಸಿದರು.
ಸಂಘಟನೆಯ ಮಹಾಪೋಷಕರಾಗಿದ್ದುಕೊಂಡು ಮಂಗಳೂರಿನಿಂದ ಮಡಿಕೇರಿಗೆ ವರ್ಗಾವಣೆಗೊಂಡಿರುವ ಎಸಿಪಿ ಮಹೇಶ್ ಕುಮಾರ್ ಅವರನ್ನು ವೇದಿಕೆಯಲ್ಲಿ ಅತಿಥಿಗಳು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು, “ಹಿರಿಯರಾದ ಮಹಾಬಲ ಪೂಜಾರಿ ಕಡಂಬೋಡಿ ಅವರ ಕ್ರಿಕೆಟ್ ಕುರಿತ ಆಸಕ್ತಿಯಿಂದ ಸುರತ್ಕಲ್ ಸ್ಪೋರ್ಟ್ಸ್ ಕಲ್ಚರಲ್ ಕ್ಲಬ್ ಉದಯವಾಯಿತು. 60 ವರ್ಷಕ್ಕೂ ಮೇಲ್ಪಟ್ಟ ಅನೇಕ ಕ್ರಿಕೆಟ್ ಪಟುಗಳು ಹಿರಿಯರ ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಲ್ಲಿ ಪಾಲ್ಗೊಂಡಿದ್ದಾರೆ. ಇಂದು ಮಾದಕ ವಸ್ತುಗಳ ದಾಸರಾಗಿ ಯುವಜನತೆ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ. ಅವರನ್ನು ಸರಿದಾರಿಗೆ ತರುವಲ್ಲಿ ಇಂತಹ ಸಂಘಟನೆ ಮತ್ತು ಕ್ರಿಕೆಟ್ ಪಂದ್ಯಾಟದ ಶ್ರಮ ಶ್ಲಾಘನೀಯ. ನಾನು ಎಲ್ಲೇ ವರ್ಗಾವಣೆಯಾಗಿ ಹೋದ್ರೂ ಈ ಸಂಘಟನೆ, ಕ್ರೀಡಾಕೂಟ ನಿಲ್ಲಬಾರದು. ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿಯಿಂದ ತೊಡಗಿಕೊಳ್ಳುವಂತೆ ಪ್ರೇರೇಪಿಸಿ, ಅವರಿಗೆ ಹೊರ ಜಗತ್ತನ್ನು ತೋರಿಸಿ. ಸುರತ್ಕಲ್ ಭಾಗದ ಜನರ ಪ್ರೀತಿಗೆ ನಾನು ಅಭಾರಿ” ಎಂದರು.
ಖ್ಯಾತ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾತಾಡುತ್ತಾ, “ಸಾಮಾನ್ಯವಾಗಿ ಒಬ್ಬ ಪೊಲೀಸ್ ಅಧಿಕಾರಿ ವರ್ಗಾವಣೆ ಆಗಿ ಹೋದ ಬಳಿಕ ಜನರು ಮರೆಯುತ್ತಾರೆ. ಆದರೆ ಎಸಿಪಿ ಮಹೇಶ್ ಕುಮಾರ್ ಅವರಂತಹ ಪೊಲೀಸ್ ಅಧಿಕಾರಿ ಜನರ ಮನಸ್ಸನ್ನು ಗೆದ್ದಿರುವ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಮರೆತಿಲ್ಲ. ವರ್ಗಾವಣೆ ಆಗಿ ಹೋದ ಬಳಿಕವೂ ಕರೆದು ಸನ್ಮಾನ ಮಾಡುತ್ತಾರೆ. ಅವರ ಸ್ನೇಹಪರ ವ್ಯಕ್ತಿತ್ವ, ಕರ್ತವ್ಯ ನಿರ್ವಹಣೆಯ ಶೈಲಿ ಎಲ್ಲರಿಗೂ ಮಾದರಿ” ಎಂದರು. ವೇದಿಕೆಯಲ್ಲಿ ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ್ ಪೂಂಜಾ, ಉದ್ಯಮಿ ಅಶೋಕ್ ತಾವ್ರೊ, ಮಲ್ಲಿಕಾ ಯಶವಂತ ಶೆಟ್ಟಿ ಬಳ್ಕುಂಜೆಗುತ್ತು, ದಿನೇಶ್ ಪೂಜಾರಿ ಕುಂದಾಪುರ, ಕೆ.ಕೆ. ನೌಶಾದ್, ಉದ್ಯಮಿ ಅನಿಲ್ ಶೆಟ್ಟಿ ಮುಂಬಯಿ, ಸಂಘಟಕರಾದ ಮನೋಹರ್ ಶೆಟ್ಟಿ ಸೂರಿಂಜೆ ಮತ್ತಿತರರು ಉಪಸ್ಥಿತರಿದ್ದರು.
ಸಂಘಟನೆಯ ಕಾರ್ಯದರ್ಶಿ ಕಿರಣ್ ಕುಮಾರ್ ಪ್ರಸ್ತಾವನೆಗೈದರು. ರಾಜೇಶ್ವರಿ ಡಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.