ಬಾಂಬೆ ಬಂಟ್ಸ್ ಆಸೋಸಿಯೇಶನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಇಂದು ಉತ್ತಮವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಉತ್ತಮ ಪ್ರದರ್ಶನಗಳನ್ನು ನೀಡುವುದರೊಂದಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಸಂಸ್ಥೆಯು ದಶಮಾನೋತ್ಸವವನ್ನು ಆಚರಿಸಿರುವುದು ಹೆಮ್ಮೆಯ ವಿಷಯವಾಗಿದೆ. ಸಂಸ್ಥೆಯ ಅಭಿವೃದ್ಧಿಯಲ್ಲಿ ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ. ತಂದೆ-ತಾಯಿ ಮತ್ತು ಶಿಕ್ಷಕರು ವಿದ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನತ್ತ ಕೊಂಡೊಯ್ಯುವವರು. ಆದ್ದರಿಂದ ಗುರುಗಳು ಮತ್ತು ತಂದೆ-ತಾಯಿಯನ್ನು ಅತ್ಯಂತ ಗೌರವದಿಂದ ಕಾಣುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದು ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ಅವರು ನುಡಿದರು.
ಫೆಬ್ರವರಿ 5 ರಂದು ಜೂಯಿ ನಗರದ ಬಾಂಬೆ ಬಂಟ್ಸ್ ಅಸೋಸಿಯೇಶನ್ ಇದರ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ ಶೆಟ್ಟಿ ಕಾಂಪ್ಲೆಕ್ಸ್ನ ಸೌಮ್ಯಲತಾ ಸದಾನಂದ ಶೆಟ್ಟಿ ಅಡಿಟೋರಿಯಂನಲ್ಲಿ ನಡೆದ ಆಸೋಸಿಯೇಶನ್ನ ಉನ್ನತ ಶಿಕ್ಷಣ ಸಂಸ್ಥೆಯ ರಾತ್ರಿ ಶಾಲೆಯ ದಶಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಯುವ ಮನಸ್ಸನ್ನು ಹೊಂದಿದ್ದು ನಮ್ಮ ದೇಶದ ಮುಂದಿನ ಭವಿಷ್ಯವು ನೀವಾಗಿದ್ದೀರಿ. ನಮ್ಮ ಹಿರಿಯರು ಮುಖ್ಯವಾಗಿ ನಮ್ಮ ಮಾಜಿ ಟ್ರಸ್ಟಿ ಹಾಗೂ ಮಾಜಿ ಅಧ್ಯಕ್ಷರು, ದಾನಿಗಳ ಪ್ರಯತ್ನದಿಂದ ಇಂದು ಈ ಶಿಕ್ಷಣ ಸಂಸ್ಥೆಯು ಎಲ್ಲಾ ಸೌಲಭ್ಯವನ್ನು ಹೊಂದಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಬೇಕು. ನಮ್ಮ ಶಿಕ್ಷಣ ಸಂಸ್ಥೆಯ ಮಕ್ಕಳು ಅಂತರ್ ಕಾಲೇಜ್ ಸ್ಪರ್ಧೆಯಲ್ಲಿ ಯಶಸ್ಸನ್ನು ಸಾಧಿಸಿ ಶಿಕ್ಷಣ ಸಂಸ್ಥೆಗೆ ಹೆಸರು ತರುತ್ತಿದ್ದಾರೆ. ವಿದ್ಯಾರ್ಥಿಗಳು ಚೆನ್ನಾಗಿ ಕಲಿಯುವುದರೊಂದಿಗೆ ತಾಯಿ-ತಂದೆ ಶಿಕ್ಷಕರನ್ನು ಹಿರಿಯರನ್ನು ಹಾಗೂ ಶಿಕ್ಷಣ ಸಂಸ್ಥೆಯನ್ನು ಪ್ರೀತಿಸಿದ್ದಲ್ಲಿ ಯಶಸ್ಸು ಖಂಡಿತವಾಗಿ ಲಭಿಸುತ್ತದೆ ಎಂದರು.
ಬಾಂಬೆ ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ನ್ಯಾಯವಾದಿ ಡಿ. ಕೆ. ಶೆಟ್ಟಿ ಮಾತನಾಡುತ್ತಾ, ಇಲ್ಲಿ ಸೇರಿದ ವಿದ್ಯಾರ್ಥಿಗಳ ಟೀಂವರ್ಕ್, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸ್ಫೂರ್ತಿಯನ್ನು ನೋಡಿ ಸಂತೋಷವಾಗಿದೆ. ಮುಂದೆಯೂ ಇದನ್ನು ಇದೇ ರೀತಿಯಲ್ಲಿ ನೀವು ಮುಂದುವರಿಸಬೇಕು. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅತೀ ಮುಖ್ಯ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ. ಈ ಕಾಲೇಜಿನಲ್ಲಿ ಕಲಿತ ನೀವು ಮುಂದೆ ಈ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸುವಂತಾಗಬೇಕು. ಕಳೆದ ಹತ್ತು ವರ್ಷಗಳಲ್ಲಿ ಸಂಸ್ಥೆಯ ಸಾಧನೆ ಅಪಾರವಾಗಿದೆ ಎಂದು ನುಡಿದರು.
ಉನ್ನತ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ನ್ಯಾಯವಾದಿ ರತ್ನಾಕರ್ ವಿ. ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಶ್ರೀಧರ ಕೆ. ಶೆಟ್ಟಿ, ಆಸೋಸಿಯೇಶನ್ ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ. ಶೆಟ್ಟಿ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಅಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಅಶೋಕ್ ಡಿ. ಶೆಟ್ಟಿ, ಅಸೋಸಿಯೇಶನ್ನ ಕೋಶಾಧಿಕಾರಿ ಸಿಎ ವಿಶ್ವನಾಥ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷೀ ಎಸ್. ಶೆಟ್ಟಿ, ಪ್ರಾಂಶುಪಾಲ ಎಸ್ ಎಸ್ ಭಂಡಾರಿ ಉಪಸ್ಥಿತರಿದ್ದರು.
ಶಿಕ್ಷಕರಾದ ಯೋಗಿತಾ ಪಾಟೀಲ್ ಮತ್ತು ಪ್ರೊ| ಗುರಾವ್, ಮನೀಷಾ ಪೂಜಾರಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಕೊನೆಗೆ ಮನೋರಂಜನ ಕಾರ್ಯಕ್ರಮ ನಡೆಯಿತು. ಬಾಂಬೆ ಬಂಟ್ಸ್ ಅಸೋಸಿಯೇಶನ್ ಇದರ ಪದಾಧಿಕಾರಿಗಳು, ಶಿಕ್ಷಣ ಸಮಿತಿಯ ಪದಾಧಿಕಾರಿಗಳು, ಉಪ ಸಮಿತಿಯ ಪದಾಧಿಕಾರಿಗಳು, ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.