ತುಳುನಾಡಿನಲ್ಲಿ ಜಾನಪದೀಯ ಆಚರಣೆಗಳಿವೆ. ಈ ನಾಡಿನ ಜನರಿಗೆ ಧರ್ಮ ಮುಖ್ಯ. ಧರ್ಮ ಬಿಟ್ಟು ತುಳುನಾಡಿನವರು ಬದುಕಲಾರರು. ನಾಗಾರಾಧನೆಗೆ ತುಳುನಾಡಿನಲ್ಲಿ ಬಹಳ ಮಹತ್ವವಿದೆ. ಇದು ಜನಪದೀಯವಾಗಿ ಬೆಳೆದು ಬಂದಿದೆ. ಇದರಿಂದ ಜೀವನ ಮೌಲ್ಯ, ನಂಬಿಕೆ, ಶ್ರದ್ಧೆ, ಭಕ್ತಿ ವೃದ್ಧಿಯಾಗಿ ಮಾನಸಿಕವಾಗಿ ಬಲಿಷ್ಠರಾಗುವೆವು ಎಂದು ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ನುಡಿದರು. ಅವರು ಅಡ್ವೆ ಕೆಳಗಿನಮನೆ ಕುಟುಂಬಸ್ಥರ ಮೂಲ ನಾಗಬನದಲ್ಲಿ ನಡೆದ ಏಕ ಪವಿತ್ರ ನಾಗಮಂಡಲೋತ್ಸವ ನಿಮಿತ್ತ ಜರಗಿದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ನಾಗರಾಧನೆಯಲ್ಲಿ ಭಕ್ತಿಯ ಪ್ರಧಾನ, ನಾಗದೇವರ ಋಣ ತೀರಿಸಲು ಸಾಧ್ಯವಿಲ್ಲ. ನಾಗಮಂಡಲ ಉತ್ಸವ ಪವಿತ್ರ ಕಾರ್ಯ. ಎಲ್ಲರಿಗೂ ನಾಗದೇವರು ಅನುಗ್ರಹಿಸಲಿ ಎಂದರು. ಪಂಜ ಭಾಸ್ಕರ್ ಭಟ್ ಧಾರ್ಮಿಕ ಉಪನ್ಯಾಸವನ್ನು ನೀಡಿ, ನಾಗರಾಧನೆ ತುಳುನಾಡಿನ ಅವಿಭಾಜ್ಯ ಅಂಗ. ಕೃಷಿ ಭೂಮಿಯು ನಾಗಭೂಮಿಯಿಂದ ವಿರಹಿತವಾಗಿದ್ದು ಉಳದೇ ಇದ್ದಲ್ಲಿ ಅದು ನಾಗಭೂಮಿ ಎನಿಸುವುದು ಎಂದರು.
ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಮಧ್ವರಾಯ ಭಟ್, ಖ್ಯಾತ ಜ್ಯೋತಿಷಿ ಕೆಮ್ಮಣ್ಣು ಕೆ.ಪ್ರಸನ್ನ ಆಚಾರ್ಯ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಲಕ್ಷಣ ಶೆಟ್ಟಿ ವಾಳ್, ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಇನ್ನಾ ಬಾಳಿಕೆ ಸ್ವಾಗತಿಸಿದರು. ಭಾಸ್ಕರ್ ರೈ ಕುಕ್ಕುವಳ್ಳಿ ವಂದಿಸಿ ನಿರೂಪಿಸಿದರು.