ಮೂಡುಬಿದಿರೆ: ವಿದ್ಯಾವಂತರಾದ ನೀವು ಮತದಾನ ಮಾಡುವುದರ ಜೊತೆಗೆ ಸಾರ್ವಜನಿಕರಲ್ಲಿ ಮತದಾನದ ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವ ಕೆಲಸಮಾಡಬೇಕು ಜಿಲ್ಲಾ ಮಟ್ಟದ ಸ್ವೀಪ್ ತರಬೇತುದಾರ ಚಂದ್ರನಾಥ್ ಎಂ ತಿಳಿಸಿದರು. ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಕೇಂದ್ರ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್ ಹಾಗೂ ವಿಘ್ನೇಶ್ವರ ಸ್ಪೋಟ್ರ್ಸ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ‘ಮತದಾನ ಜಾಗೃತಿ ಅಭಿಯಾನ’ ದಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಶ್ರೇಷ್ಠ ಕಾರ್ಯ. ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ಸ್ವಾತಂತ್ರ್ಯ ನಂತರ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡೆವು. ಈ ವ್ಯವಸ್ಥೆಯಲ್ಲಿ ನಮ್ಮಿಂದ ಆಯ್ಕೆ ಆದ ಪ್ರತಿನಿಧಗಳೇ ನಮ್ಮನ್ನು ಆಳುವಂತವರು. ‘ಚುನಾವಣಾ ಪರ್ವ ದೇಶದ ಗರ್ವ’ ಈ ವರ್ಷದ ಚುನಾವಣಾ ಧ್ಯೇಯವಾಕ್ಯವಾಗಿ ಚುನಾವಣಾ ಆಯೋಗ ಘೋಷಿಸಿದೆ.
ಉತ್ತಮ ವ್ಯಕ್ತಿಗಳ ಆಯ್ಕೆಯ ಮೂಲಕ ಸಧೃಡ ಸರಕಾರದ ನಿರ್ಮಾಣ ಸಾಧ್ಯ. ಮತದಾನ ದಿನ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸ, ಭವ್ಯ ಭಾರತದ ಏಳಿಗೆಗೆ ಕೊಡುಗೆ ನೀಡಿ ಎಂದರು. ತಾಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮತದಾನದ ಪ್ರತಿಜ್ಞಾ ವಿಧಿ ಭೋಧಿಸಿದರು. ಮತದಾನ ಜಾಗೃತಿ ಅಭಿಯಾನದ ಭಿತ್ತಿಚಿತ್ರವನ್ನು ಈ
ಸಂಧರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ದ.ಕ ಜಿಲ್ಲಾ ಸ್ವೀಪ್ ಸಮಿತಿಯ ಸಂಯೋಜಕ ಮತ್ತು ಸದಸ್ಯ ಡೊಂಬಯ್ಯ ಇಡ್ಕಿದು, ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಶಶಾಂಕ್ ಕಾರ್ಯಕ್ರಮ ನಿರ್ವಹಿಸಿದರು.