ಮೂಡುಬಿದಿರೆ: ಸೈಬರ್ ದಾಳಿಯ ತೀವ್ರತೆಯನ್ನು ಅರಿಯದೇ ಮುಚ್ಚಿಡಬೇಡಿ. ವೈಯಕ್ತಿಕ ಬದುಕಿಗೆ ಅಪಾಯ ಎಂದು ಮಂಗಳೂರಿನ ಕೋಡ್ಕ್ರಾಫ್ಟ್ ಟೆಕ್ನಾಲಜಿ ಸಹ ಸಂಸ್ಥಾಪಕ ಹಾಗೂ ಸಿಟಿಒ ಪ್ರವೀಣ್ ಕ್ಯಾಸ್ಟೆಲಿನೊ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ರಾಜ್ಯ ಸರ್ಕಾರದ ಸೈಸೆಕ್(ಸೈಬರ್ ಸೆಕ್ಯುರಿಟಿ ಕರ್ನಾಟಕ) ಮತ್ತು ಚೆನ್ನೈ ತ್ರಿಶಾಕ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡ ಕರ್ನಾಟಕದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ 35 ದಿನಗಳ(ಫೆಬ್ರುವರಿ 19ರಿಂದ ಮಾರ್ಚ್22) ತರಬೇತಿ (ಸಿಎಸ್ಎಫ್ಎಸ್ ತರಬೇತಿ)ಯ ಉದ್ಘಾಟನಾ ಕಾರ್ಯಕ್ರಮ ‘ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್ (ಸಿಎಸ್ಎಫ್ಎಸ್)’ನಲ್ಲಿ ಸೋಮವಾರ ಅವರು ಮಾತನಾಡಿದರು. ‘ಹೆಚ್ಚಿನ ಜನರು ಪ್ರತಿಷ್ಠೆಯ ಕಾರಣಕ್ಕಾಗಿ ತಮ್ಮ ವಿರುದ್ಧ ನಡೆದ ದಾಳಿಯನ್ನೇ ಮುಚ್ಚಿಡುತ್ತಾರೆ. ಇದು ಜೀವಕ್ಕೂ ಅಪಾಯ ತಂದ ನಿದರ್ಶನಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಾಗ ಎಚ್ಚರ ವಹಿಸಿ’ ಎಂದರು.
ಸೈಸೆಕ್ ಕೇಂದ್ರದ ಮುಖ್ಯಸ್ಥ ಕಾರ್ತಿಕ್ ರಾವ್ ಬಿ. ಮಾತನಾಡಿ, ‘ನಾವು ಫಿನಿಶಿಂಗ್ ಸ್ಕೂಲ್ ಕಾರ್ಯಕ್ರಮವನ್ನು ಮಾದರಿಯಾಗಿ ಆರಂಭಿಸಿದ್ದೇವೆ. ಭವಿಷ್ಯದಲ್ಲಿ ವ್ಯಾಪಕವಾಗಿ ಮಾಡುವ ಆಶಯ ಇದೆ. ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಇದರ ಆರಂಭದ ಆತಿಥ್ಯ ವಹಿಸಿದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ಸಾಮಾಜಿಕ ಜಾಲತಾಣದಲ್ಲಿ ಫೇಕ್ ಖಾತೆಗಳು ಹಾಗೂ ತಪ್ಪು ಮಾಹಿತಿಗಳೇ ಹೆಚ್ಚು. ಆದರೆ, ಹೆಚ್ಚಿನ ಜನರು ಯಾವುದೇ ಚಿಂತನೆ ನಡೆಸದೇ ಇಂತಹ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ.
ಕೊನೆಗೆ ಸುಳ್ಳೇ ಬದುಕಿನ ಸತ್ಯವಾಗುತ್ತದೆ. ದಯವಿಟ್ಟು ವಿವೇಚಿಸಿ ಮಾಹಿತಿಯನ್ನು ಹಂಚಿಕೊಳ್ಳಿ. ಸೈಬರ್ ದಾಳಿಕೋರರು ಬದುಕಿನ ಸೂಕ್ಷ್ಮತೆ ಹಾಗೂ ಪ್ರತಿಷ್ಠೆಯನ್ನು ಹೊಂದಿರುವುದಿಲ್ಲ ಎಂದರು. ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ.ಮಂಜುನಾಥ ಕೊಟ್ಟಾರಿ ಮಾತನಾಡಿನ 35 ದಿನಗಳ ತರಬೇತಿ ಕುರಿತು ವಿವರ ನೀಡಿದರು. ಕಾಲೇಜಿನ ಸೈಬರ್ ಸೆಕ್ಯುರಿಟಿ ಕ್ಲಬ್ ಸಂಯೋಜಕರಾದ ದೀಪಿಕಾ ಕಾಮತ್ ಸ್ವಾಗತಿಸಿದರು. ಉಪನ್ಯಾಸಕರಾದ ದೀಕ್ಷಾ ಮತ್ತು ವಿದ್ಯಾ ಅತಿಥಿಗಳನ್ನು ಪರಿಚಯಿಸಿದರು. ಭಾಗ್ಯಶ್ರೀ ವಂದಿಸಿದರು.
ಕರ್ನಾಟಕದ 15 ಇಂಜಿನಿಯರಿಂಗ್ ಕಾಲೇಜುಗಳಿಂದ ಆಯ್ದ 50 ಜನ ವಿದ್ಯಾರ್ಥಿಗಳು ಈ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೈಬರ್ ಸೆಕ್ಯುರಿಟಿಗೆ ಸಂಬಂದಿಸಿದ 200 ಘಂಟೆಗಳ ತರಬೇತಿ ಯನ್ನು ನೀಡಲಿದ್ದಾರೆ. ತ್ರಿಶಾಕ ಫೌಂಡೇಶನ್ ಯೋಜನಾ ನಿರ್ದೇಶಕ ಮೋಹನ್ ರಾಮ್, ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಸೈಬರ್ ಸೆಕ್ಯುರಿಟಿ ಎಂಜಿನಿಯರ್ ವಿನೀತ್ ಶೆಟ್ಟಿ ಮತ್ತು ಕೌಶಿಕ್ ಶೆಟ್ಟಿ ಇದ್ದರು.