ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಭಾರತ ಸರ್ಕಾರ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಹಾಗೂ ಬಂಟರ ಸಂಘ (ರಿ) ಸುರತ್ಕಲ್ ಇದರ ಸಹಯೋಗದೊಂದಿಗೆ ಸುರತ್ಕಲ್ ವ್ಯಾಪ್ತಿಯ 17 ಗ್ರಾಮಗಳನ್ನೊಳಗೊಂಡ ಸಾರ್ವಜನಿಕರಿಗೆ ಅಯುಷ್ಮಾನ್ ಭಾರತ ಕಾರ್ಡ್ ಮತ್ತು ಇ ಶ್ರಮ ಕಾರ್ಡ್ ಗಳ ವಿತರಣಾ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಮನಪಾ ಸದಸ್ಯೆ ನಯನಾ ಕೋಟ್ಯಾನ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮನಪಾ ಸದಸ್ಯೆ ಶ್ವೇತಾ ಪೂಜಾರಿ ಮಾತನಾಡಿ, ಸುರತ್ಕಲ್ ಬಂಟರ ಸಂಘವು ಸುಮಾರು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವುದು ಶ್ಲಾಘನೀಯ. ಸಂಘವು ಕ್ರೀಡೆ ಮತ್ತು ಸಾಂಸ್ಕತಿಕ ಕ್ಷೇತ್ರದಲ್ಲಿ ಹೆಚ್ಚು ಜನಮನ್ನಣೆ ಪಡೆಯುತ್ತಿರುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಉತ್ತಮ ಕಾರ್ಯ ಮಾಡುತ್ತಿರುವುದು ಇತರ ಸಂಘಗಳಿಗೆ ಮಾದರಿಯಾಗಿದೆ. ಮುಂದೆಯೂ ಸಂಘದಿಂದ ಇಂತಹ ಹತ್ತು ಹಲವು ಕಾರ್ಯಕ್ರಮ ನಡೆಯಲಿ ಎಂದರು.
ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರತಿಯೊಬ್ಬರೂ ಕೈ ಜೋಡಿಸಿದಾಗ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತದೆ ಎಂದರು. ವೇದಿಕೆಯಲ್ಲಿ ಕಾಟಿಪಳ್ಳ ಅರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಭರತ್ ಕುಮಾರ್, ಉಪಾಧ್ಯಕ್ಷ ಪುಷ್ಷರಾಜ್ ಶೆಟ್ಟಿ ಕುಡುಂಬೂರು, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷೆ ಭವ್ಯ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಪುಷ್ಷರಾಜ್ ಶೆಟ್ಟಿ ಮಧ್ಯ ಕಾರ್ಯಕ್ರಮ ನಿರೂಪಿಸಿದರು.