ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿ ಸುರೇಖಾ ಹರಿಪ್ರಸಾದ್ ಶೆಟ್ಟಿ ಅವರ ಎಂ.ಎ. ಶೋಧ ‘ಮುಂಬಯಿಯಲ್ಲಿ ಕನ್ನಡದ ಕಂಪು ಸೂಸುವ ಗೋರೆಗಾಂವ್ ಕರ್ನಾಟಕ ಸಂಘ’ ಕೃತಿ ಬಿಡುಗಡೆ ಕಾರ್ಯಕ್ರಮವು ಫೆ.25 ರಂದು ಬೆಳಗ್ಗೆ 10.30 ರಿಂದ ಗೋರೆಗಾಂವ್ ಪೂರ್ವದ ಜಯಪ್ರಕಾಶ್ ನಗರದ ನಂದಾದೀಪ ಹೈಸ್ಕೂಲ್ ಸಭಾಗೃಹದಲ್ಲಿ ನಡೆಯಲಿದೆ.
ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಘದ ನಾಡಹಬ್ಬ ಸಮಾರಂಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎಸ್ ಉಪಾಧ್ಯ ಅವರು ಕೃತಿ ಬಿಡುಗಡೆಗೊಳಿಸಲಿದ್ದಾರೆ. ಗೋರೆಗಾಂವ್ ಕರ್ನಾಟಕ ಸಂಘ ಪ್ರಕಟಿಸಿರುವ ಈ ಕೃತಿಯನ್ನು ರಂಗಕಲಾವಿದೆ, ಲೇಖಕಿ, ಸಂಶೋಧನ ವಿದ್ಯಾರ್ಥಿ ನಳಿನಾ ಪ್ರಸಾದ್ ಅವರು ಪರಿಚಯಿಸಲಿದ್ದಾರೆ.
ಸುರೇಖಾ ಹರಿಪ್ರಸಾದ್ ಶೆಟ್ಟಿ ಅವರು ಮೂಲತಃ ಉಡುಪಿಯ ಕೊಡವೂರಿನವರು. ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಅವರು ಸಾಹಿತ್ಯಾಸಕ್ತರು. ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಡೆದಿರುವ ಸುರೇಖಾ ಅವರ ಕವಿತೆ, ಕಥೆ, ಬಿಡಿ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಸುರೇಖಾ ಅವರು ಡಾ.ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ರಚಿಸಿದ್ದ ಎಂ.ಎ ಸಂಪ್ರಬಂಧ ಮುಂಬಯಿ ತುಳು ಕನ್ನಡಿಗರ ರಾಯಭಾರಿ ಎಂ.ಡಿ.ಶೆಟ್ಟಿ ಕೃತಿ ರೂಪದಲ್ಲಿ ಲೋಕಾರ್ಪಣೆಗೊಂಡಿದೆ.
ಅಭಿಜಿತ್ ಪ್ರಕಾಶನ ಹೊರ ತಂದಿರುವ ಈ ಕೃತಿಗೆ 2019-20 ನೇ ಸಾಲಿನಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪುರಸ್ಕಾರವೂ ದೊರೆತಿದೆ. ಸುರೇಖಾ ಅವರು ಪ್ರಸ್ತುತ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎನ್ ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ದಿನಕರ ದೇಸಾಯಿ ಒಂದು ಅಧ್ಯಯನ ವಿಷಯದ ಕುರಿತು ಪಿಎಚ್ ಡಿ ಅಧ್ಯಯನದಲ್ಲಿ ತೊಡಗಿದ್ದಾರೆ.