ವಿದ್ಯಾಗಿರಿ (ಮೂಡುಬಿದಿರೆ): ‘ಯಾವುದೇ ಸೃಜನಶೀಲ ಕೆಲಸ ಸಾಕಾರಗೊಳ್ಳಲು ಬರಹವೇ ಬುನಾದಿ’ ಎಂದು ಜೀ ಕನ್ನಡ ವಾಹಿನಿಯ ನಿರ್ದೇಶಕ (ಫಿಕ್ಶನ್ ಪ್ರೋಗ್ರಾಮಿಂಗ್) ಸುಧೀಂದ್ರ ಭಾರದ್ವಾಜ್ ಹೇಳಿದರು. ಆಳ್ವಾಸ್ ಕಾಲೇಜಿನ
ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಆಳ್ವಾಸ್ ಫಿಲಂ ಸೊಸೈಟಿ ಹಮ್ಮಿಕೊಂಡ ‘ಸೃಜನಶೀಲತೆಯ ಸಂಕಿರಣ- ಜೀ ಕನ್ನಡ ವಾಹಿನಿ ಜೊತೆ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.
ಒಂದು ಉತ್ತಮ ಸಿನಿಮಾ, ವಿಡಿಯೊ, ಫಿಕ್ಶನ್, ರಿಯಾಲಿಟಿ ಷೋ ಯಾವುದೇ ಇದ್ದರೂ, ಅದರ ಚಿತ್ರಕತೆ ಬರೆದು ರೂಪಿಸಿದಾಗ ಮಾತ್ರ ಗುಣಮಟ್ಟದಲ್ಲಿ ನಿರ್ಮಾಣಗೊಳ್ಳಲು ಸಾಧ್ಯ. ಉತ್ತಮ ಬರಹದ ಮೂಲಕ ಉತ್ತಮವಾಗಿ
ಸೃಜಿಸಬಹುದು ಎಂದರು. ಮನೋರಂಜನಾ ಮಾಧ್ಯಮದಲ್ಲಿ ಕೆಲಸ ಮಾಡುವವರು ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಹೆಚ್ಚು ಇಷ್ಟಪಡುತ್ತೇವೆ. ಏಕೆಂದರೆ, ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ನಮ್ಮ ಓಟವನ್ನು ನಾವು ನಿಮಗೆ ಒಪ್ಪಿಸಬೇಕಾಗಿದೆ ಎಂದರು.
ಸೃಜನಶೀಲ ಮಾಧ್ಯಮದಲ್ಲಿ ಕೆಲಸ ಮಾಡುವವರೆಲ್ಲ ಹುಚ್ಚರಂತೆ. ಹೊಸತನಕ್ಕಾಗಿ ಹಂಬಲಿಸುತ್ತಾ, ಕೆಲಸದಲ್ಲೇ ತನ್ಮಯ, ತಲ್ಲಿನ ಎಲ್ಲವೂ ಆಗಬೇಕು. ಆಗಲೇ ಯಶಸ್ಸು ಅರಸಿ ಬರಲು ಸಾಧ್ಯ. ನೀವೆಲ್ಲ ಬರಹದಲ್ಲಿ ಮುಳುಗಬೇಕು. ಅನಿಸಿದ್ದನ್ನು, ತೋಚಿದ್ದನ್ನು ಗೀಚಬೇಕು ಎಂದರು. ಪ್ರತಿ ವ್ಯಕ್ತಿಯ ಒಳಗೂ-ಹೊರಗೂ ಕತೆ ಇದೆ. ಆದರೆ, ಆ
ಕತೆಯನ್ನು ಯಾವ ದೃಷ್ಟಿಕೋನದಿಂದ ನೋಡಬೇಕು, ಹೇಗೆ ನಿರೂಪಿಸಬೇಕು ಎಂಬುದೇ ನಿಮ್ಮ ಸೃಜನಶೀಲತೆಗೆ ಸವಾಲು ಎಂದರು.
ನಮ್ಮಲ್ಲಿನ ಅಹಂ, ಗತ್ತು ಜೊತೆ ನಾವು ಹಿಂದೆ ಕಲಿತದ್ದನ್ನು ತ್ಯಜಿಸಿ ಆಲಿಸುವುದನ್ನು ಕಲಿಯಬೇಕು. ಕಲಿಕೆಯ ಜೊತೆ ಕಲಿತದ್ದನ್ನು ಬಿಡುವುದೂ ಬದುಕಿನಲ್ಲಿ ಮುಖ್ಯ ಎಂದರು. ಸಹ ನಿರ್ದೇಶಕ (ಐಡಿಯೇಷನ್) ವಿಕಾಸ ನೇಗಿಲೋಣಿ ಮಾತನಾಡಿ, ‘ ಒಂದು ಕಥೆಯನ್ನು ಇತರರಿಗೆ ತಿಳಿಸಲು, ಬರಹ ಬಲ್ಲವರು ಬೇಕು. ಆ ಬರಹದ ಸೃಷ್ಟಿ ನಮ್ಮಿಂದಾಗಬೇಕು.
ಇತ್ತೀಚಿಗೆ ದೂರದರ್ಶನದಲ್ಲಿ ಕಾರ್ಯಕ್ರಮಗಳನ್ನು ನೋಡುವ ರೀತಿ, ಅಭಿರುಚಿ ಬದಲಾದಂತೆ ನಾವು ಬದಲಾಗಬೇಕು. ಇದು ಓದುವ ಯುಗವಾಗದೆ, ನೋಡುವ ಯುಗವಾಗಿದೆ ಎಂದರು. ಯಾವುದೇ ಸಿನಿಮಾವೂ ಬರೀ ಕ್ಯಾಮೆರಾದ ಮೇಲೆ ಅವಲಂಬಿತವಲ್ಲ, ಅದಕ್ಕಿಂತ ಮೊದಲು ಬರಹದ ಕಾರ್ಯ ಬಹಳಷ್ಟಿದೆ. ಬರವಣಿಗೆಯ ತಾಕತ್ತು ಕಥೆಗಳನ್ನು ಸೃಷ್ಟಿಸುತ್ತೆ ಎಂದರು. ಬರವಣಿಗೆಯ ಭಾಷೆ ಬೇರೆಯಾದರು, ನಮ್ಮ ಮನಸ್ಸಿನ ಭಾಷೆ ಕನ್ನಡವಾಗಿರಬೇಕು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ಆಳ್ವಾಸ್ ವಿದ್ಯಾರ್ಥಿಗಳು ಅದೃಷ್ಟವಂತರು, ಒಳ್ಳೆ ಅವಕಾಶಗಳು ನಿಮಗಾಗಿ ಸಿಕ್ಕಿದೆ. ಅವಕಾಶದ ಸದ್ಬಳಕೆ ಮಾಡಿಕೊಳ್ಳಿ’ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಆಳ್ವಾಸ್ ಫಿಲಂ ಸೊಸೈಟಿ ಸಂಯೋಜಕ ಹರ್ಷವರ್ಧನ ಪಿ.ಆರ್. ಇದ್ದರು. ವಿದ್ಯಾರ್ಥಿಗಳಾದ ಪ್ರಖ್ಯಾತ್ ಬೆಳುವಾಯಿ ಹಾಗೂ ಅವಿನಾಶ್ ಕಟೀಲ್ ಕಾರ್ಯಕ್ರಮ ನಿರೂಪಿಸಿದರು. ಜೀ ಕನ್ನಡ ವಾಹಿನಿಯು ನಡೆಸಿಕೊಟ್ಟ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು.