ಪ್ರತೀ ವರ್ಷ ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ಕ್ರೆಡಿಟ್ ಸೊಸೈಟಿಗಳಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾದ ‘ಬ್ಯಾಂಕೋ ಬ್ಲೂ ರಿಬ್ಬನ್‘ ಪ್ರಶಸ್ತಿಯು ಮುಂಬಯಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ್ನು ಗುರುತಿಸಿ 2022-23 ರ ಸಾಲಿನ ಠೇವಣಿ ವರ್ಗದ ಅಡಿಯಲ್ಲಿ ಈ ಪ್ರಶಸ್ತಿ ಲಭಿಸಿದೆ. ಬ್ಯಾಂಕೋ 1990 ರಲ್ಲಿ ಸ್ಥಾಪಿಸಲಾದ ಏವಿಎಸ್ ಪಬ್ಲಿಕೇಷನ್ ನ ಅತ್ಯಂತ ಪ್ರಸಿದ್ದ ಮತ್ತು ವಿಶ್ವಾಸಾರ್ಹ ಬಿಎಫ್ ಎಸ್ ಬಿ (ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ವಲಯ) ಪ್ರಕಾಶನ ಬ್ರಾಂಡ್ ಆಗಿದೆ. ಬ್ಯಾಂಕೋ ಬ್ಲೂ ರಿಬ್ಬನ್ ಎಲ್ಲಾ ಸಹಕಾರಿ ಬ್ಯಾಂಕ್ ಗಳು ಮತ್ತು ಕ್ರೆಡಿಟ್ ಸೊಸೈಟಿಗಳಿಗೆ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.
ಇಂತಹ ವೇದಿಕೆಯಲ್ಲಿ ಬಂಟ ಸಮಾಜದ ಪ್ರತಿಷ್ಠಿತ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಆರ್ಥಿಕ ಸೇವಾ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದೆ. ಈ ಹಿಂದೆಯೂ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಗೆ 4 ಬಾರಿ ಈ ಪ್ರಶಸ್ತಿಯು ಲಭ್ಯವಾಗಿರುವುದಲ್ಲದೇ, ಈ ಬಾರಿಯ ಪ್ರಶಸ್ತಿಯೂ ಸೊಸೈಟಿಯ ಕಿರೀಟಕ್ಕೆ ಮುಕುಟುಪ್ರಾಯವಾಗಿ ಲಭಿಸಿದೆ ಎನ್ನುವುದು ಅತ್ಯಂತ ಅಭಿಮಾನದ ವಿಷಯ. ಬ್ಯಾಂಕೋ ವಿವಿಸ್ ಪಬ್ಲಿಕೇಶನ್, ಕೊಲ್ಲಾಪುರ ಮತ್ತು ಗ್ಯಾಲಕ್ಸಿ ಇನ್ಮಾ ಪುಣೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಪ್ರಶಸ್ತಿ ಪ್ರಧಾನ ಸಮಾರಂಭವು ಫೆ.13 ರಂದು ಡೆಲ್ಟಿನ್ ರೆಸಾರ್ಟ್ ನಲ್ಲಿ ನಡೆಯಿತು.
ಸಹಕಾರಿ ಇಲಾಖೆ ಪುಣೆಯ ಮಾಜಿ ಆಯುಕ್ತರಾದ ಮಧುಕರ ರಾವ್ ಚೌಧರಿ, ಅಶೋಕ್ ನಾಯಕ್, ನಿರ್ದೇಶಕ ಗ್ಯಾಲಕ್ಸಿ ಇನ್ಮಾ ಪುಣೆ ಮತ್ತು ಅವಿನಾಶ್ ಶಿಂತ್ರೆ, ಮುಖ್ಯ ಸಂಪಾದಕ ಬ್ಯಾಂಕೋ, ವಿವಿಸ್ ಪಬ್ಲಿಕೇಶನ್, ಕೊಲ್ಲಾಪುರ ಇವರ ಉಪಸ್ಥಿತಿಯಲ್ಲಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಡಾ. ಆರ್ ಕೆ ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿಯನ್ನು ಸ್ವೀಕರಿಸಿದ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನದಾಸ್ ಶೆಟ್ಟಿ ಅವರು ಸೊಸೈಟಿಯ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಬೆಂಬಲಿಸಿದ ನಮ್ಮ ಎಲ್ಲಾ ಷೇರುದಾರರು, ಠೇವಣಿದಾರರು, ನಿರ್ದೇಶಕರ ಮಂಡಳಿ ಮತ್ತು ಸಲಹಾ ಮಂಡಳಿಯ ಸದಸ್ಯರಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿ, ನಿರ್ದೇಶಕರ ಮಂಡಳಿ ಮತ್ತು ಸಲಹಾ ಮಂಡಳಿ, ಎಲ್ಲಾ ಮಾಜಿ ಕಾರ್ಯಾಧ್ಯಕ್ಷರು ಹಾಗೂ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾಗಿರುವ ಪ್ರವೀಣ್ ಭೋಜ ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಬಂಟರ ಸಂಘ ಮುಂಬಯಿ ಇದರ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದವರು, ಮಾತೃಭೂಮಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವನ್ನು ಅಭಿನಂದಿಸಿದ್ದಾರೆ.