ಕುಂದಾಪುರ ತಾಲೂಕು ಯುವ ಬಂಟರ ಆಶ್ರಯದಲ್ಲಿ ಯುವ ಮೆರಿಡಿಯನ್ ಸಂಕೀರ್ಣ ಕೋಟೇಶ್ವರದ ಕುಂದಾಪುರ ರೂರಲ್ ಮೆಡಿಕಲ್ ಕಾಲೇಜು ಕ್ರೀಡಾಂಗಣದಲ್ಲಿ ಫೆಬ್ರವರಿ 11ರಂದು ನಡೆಯುವ ಭಾವೈಕ್ಯ ಬಂಟರ ಮಹಾಸಮಾಗಮ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆದಿದೆ.
ಇದು ಕುಂದಾಪುರ ಪರಿಸರದಲ್ಲಿ ನಡೆಯುತ್ತಿರುವ ಮೊದಲ ಬಂಟರ ಸಮಾವೇಶವಾಗಿದ್ದು, ವಿದೇಶಗಳಲ್ಲೂ ಒಳಗೊಂಡಂತೆ ಭಾರತದ ವಿವಿಧೆಡೆಗಳಲ್ಲಿ ನೆಲೆಸಿರುವ ಸುಮಾರು 10 ಸಾವಿರಕ್ಕೂ ಹೆಚ್ಚು ಬಂಟ ಸಮುದಾಯ ಬಾಂಧವರು ಈ ಮಹಾಸಮಾವೇಶದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಬೃಹತ್ ಮೈದಾನದಲ್ಲಿ ಕೃಷಿ ಪದ್ಧತಿ ಪ್ರತಿಬಿಂಬಿಸುವ ವಿಶಾಲ ವೇದಿಕೆ ನಿರ್ಮಿಸಲಾಗಿದೆ.
ಬಂಟರ ಮಹಾಸಮಾಗಮದ ಅಂಗವಾಗಿ ‘ಬಂಟರ ಸಾಂಸ್ಕೃತಿಕ ಸಂಭ್ರಮ’ ಎಂಬ ರಾಷ್ಟ್ರಮಟ್ಟದ ಬಂಟರ ವೈವಿಧ್ಯಮಯ ಸಮೂಹ ನೃತ್ಯ ಸ್ವರ್ಧೆ ನಡೆಯಲಿದೆ. ಶಿಕ್ಷಣ ಆರೋಗ್ಯ ಅವಕಾಶಗಳಿಂದ ವಂಚಿತರಾದವರಿಗಾಗಿ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಪ್ರಮುಖವಾಗಿ ಆಯೋಜಿಸಲಾಗಿದೆ. ವಿದ್ಯಾದೀವಿಗೆ ಯೋಜನೆಯಡಿ ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ ಸರಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಮುದಾಯದ ಒಂದು ಸಾವಿರ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ನವಚೇತನ ಯೋಜನೆಯಡಿ 200 ವಿಶೇಷ ಚೇತನರಿಗೆ ಪ್ರೋತ್ಸಾಹಧನ ವಿತರಣೆ ನಡೆಯಲಿದೆ. ಅರಿವು ಯೋಜನೆಯಲ್ಲಿ ಸರಕಾರಿ ಪ್ರೌಢಶಾಲೆಗಳ ಓದುತ್ತಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಕಲಿಕಾ ಸಾಧನಗಳ ವಿತರಣೆ ನಡೆಯಲಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಾಗಿ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ವರ್ಧೆ, ರಂಗೋಲಿ ಸ್ವರ್ಧೆ ಹಾಗೂ ಧ್ಯೇಯವಾಕ್ಯ ರಚನಾ ಸ್ವರ್ಧೆ ಸಂಘಟಿಸಲಾಗಿದೆ. ಯಡ್ತರೆ ನರಸಿಂಹ ಶೆಟ್ಟಿಯವರು ಕುಂದಾಪುರದಲ್ಲಿ ಬಂಟರ ಸಂಘಟನೆ ಮೊದಲು ಆರಂಭಿಸಿದರು. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಉದ್ದೇಶಿಸಿದ್ದು ಈ ಪ್ರಶಸ್ತಿ ಎಂ.ಆರ್.ಜಿ ಗ್ರೂಪ್ಸ್ ನ ಕೆ.ಪ್ರಕಾಶ್ ಶೆಟ್ಟಿ ಅವರಿಗೆ ನೀಡಲಾಗುವುದು.
ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಎಲ್ಲಾ ಸಾರ್ವಜನಿಕರಿಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಪ್ರಸಾದ್ ನೇತ್ರಾಲಯ ಹಾಗೂ ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಸಂಜೆ ನಡೆಯಲಿರುವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ಎಂ.ಡಿ. ಪಲ್ಲವಿ, ಮಾನಸ ಹೊಳ್ಳ ಮೊದಲಾದವರು ಭಾಗವಹಿಸಲಿದ್ದಾರೆ. ವೈವಿಧ್ಯಮಯ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ ಏರ್ಪಡಿಸಲಾಗಿದ್ದು, ಈಗಾಗಲೇ 20 ಸ್ಟಾಲ್ ಗಳು ನೋಂದಣಿಯಾಗಿವೆ. ಇವುಗಳಲ್ಲಿ ಬಟ್ಟೆ, ಸಾವಯವ ಕೃಷಿ, ಔಷಧೀಯ ಉತ್ಪನ್ನ, ಗೃಹಾಧಾರಿತ ಉದ್ಯಮದ ಉತ್ಪನ್ನ, ಕೃತಕ ಆಭರಣ ಮೊದಲಾದ ಮಳಿಗೆಗಳಿವೆ. ಚಿತ್ರ ಕಲಾ ಪ್ರದರ್ಶನ, ಪುಸ್ತಕ ಮಳಿಗೆ ಇದೆ.