ಪುಣೆ ಬಂಟ್ಸ್ ಅಸೋಸಿಯೇಷನ್ ನ ಹನ್ನೊಂದನೇ ವಾರ್ಷಿಕೊತ್ಸವ ಸಮಾರಂಭವು ಫೆಬ್ರವರಿ 3 ರಂದು ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನ ಬಂಟರ ಭವನ ಬಾಣೇರ್ ಇಲ್ಲಿ ಜರಗಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಹರೀಶ್ ಪೂಂಜಾರವರು, ನಮ್ಮ ಸಂಸ್ಕ್ರತಿ ಸಂಸ್ಕಾರವೇ ನಮ್ಮ ವೈಭವಕ್ಕೆ ಮೂಲ ಕಾರಣ. ಈ ಸಂಸ್ಕಾರದ ಮೂಲ ನಮ್ಮ ಪೂರ್ವಜರು ಹಿರಿಯರು ಹಾಕಿಕೊಂಡಿರುವ ಸಾಂಸಾರಿಕ, ಪ್ರಾಕೃತಿಕವಾದ ಆಚಾರ ವಿಚಾರಗಳ ಸಂಸ್ಕ್ರತಿಯಿಂದ ಬಂದಿದೆ. ನಮ್ಮವರು ಸಮಾಜವನ್ನು ಬೆಳೆಸಿದ ರೀತಿ ಕಲ್ಪನಾತೀತವಾದುದು. ಅದೇ ರೀತಿ ಇಂದಿನ ಯುವ ಜನತೆಗೆ ಶಕ್ತಿ ನೀಡಿ ಮುಂದೆ ತಂದು ಸಮಾಜ ಕಟ್ಟುವ ಕಾರ್ಯ ಆಗಬೇಕಾಗಿದೆ. ಯುವಕರ ಕಲ್ಪನೆಯಂತೆ ವಿಭಿನ್ನ ರೀತಿಯಲ್ಲಿ ಉದ್ಯಮ ಸೃಷ್ಟಿಯಾಗಿ ಉದ್ಯೋಗ ನೀಡುವ ಶಕ್ತಿ ಯುವಕರಲ್ಲಿ ಬರಲಿ. ಅದೇ ರೀತಿ ನಮ್ಮ ಶ್ರೀಮಂತ ಕಲೆ ಸಂಸ್ಕ್ರತಿಯನ್ನು ಉಳಿಸಿ ಬೆಳೆಸಿಕೊಂಡು ಬರುವ ನಾಯಕತ್ವ ಗುಣ ಕೂಡಾ ಯುವಕರಲ್ಲಿ ಮತ್ತು ಮಹಿಳೆಯರಲ್ಲಿ ಬರಲಿ. ಉತ್ತಮ ಕಾರ್ಯ ಮಾಡಿದರೆ ಸಮಾಜದಲ್ಲಿ ಗುರುತಿಸುತ್ತಾರೆ. ಇದೇ ದ್ಯೇಯ ನಮ್ಮಲ್ಲಿರಲಿ. ಬಂಟರಲ್ಲಿ ನಮ್ಮ ಜನ್ಮ ಭೂಮಿಯ ಮಣ್ಣಿನ ಗುಣದ ಶಕ್ತಿಯಿಂದ ಮತ್ತು ನಾಯಕತ್ವ ಗುಣದಿಂದ ಎಲ್ಲರನ್ನೂ ಸೇರಿಸಿಕೊಂಡು ಸಮಾಜವನ್ನು ಬೆಳೆಸುವ ಶಕ್ತಿ ಬಂದಿದೆ.
ಬಂಟ ಸಮಾಜದಲ್ಲಿ ಇನ್ನಷ್ಟು ಸೂಕ್ತ ಬದಲಾವಣೆ ತರಬಲ್ಲ ಪ್ರತಿಭೆಗಳು ನಮ್ಮಲ್ಲಿದ್ದಾರೆ. ಅವರಿಗೆ ಭಕ್ತಿ ಶ್ರೆದ್ದೆಯಿಂದ ಗೌರವ ತರುವಂತಹ ಕಾರ್ಯ ಮಾಡುವಲ್ಲಿ ಪ್ರೋತ್ಸಾಹ ಸಿಗಬೇಕಿದೆ. ಮಾತೃ ಶಕ್ತಿ ಪ್ರಧಾನವಾದ ನಮ್ಮ ಈ ಭೂಮಿಯಲ್ಲಿ ಈ ಕಾಲದಲ್ಲಿರುವ ನಾವೆಲ್ಲರೂ ಪುಣ್ಯವಂತರು. ಶ್ರೀ ರಾಮ ಮಂದಿರದಲ್ಲಿ ಶ್ರೀರಾಮ ಪ್ರತಿಷ್ಠೆ ಕಾಣುವ ಭಾಗ್ಯ ನಮಗೆ ಒದಗಿ ಬಂದಿದೆ. ಪುಣೆಗೆ ನನ್ನ ಅವಿನಾಭಾವ ಸಂಬಂಧವಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಣೇಶ್ ಹೆಗ್ಡೆಯವರ ನೇತೃತ್ವದಲ್ಲಿ ಬಂಟ್ಸ್ ಅಸೋಸಿಯೇಷನ್ ಸಂಭ್ರಮದಲ್ಲಿ ಸಮಾಜಕ್ಕೆ ಸಂದೇಶ ನೀಡುವ ಮೂಲಕ ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ ಎಂದರು.
ಅಧ್ಯಕ್ಷ ಗಣೇಶ್ ಹೆಗ್ಡೆ ಮಾತನಾಡಿ, ಒಗ್ಗಟ್ಟು ಮತ್ತು ಶ್ರದ್ದೆಯಿಂದ ಕಾರ್ಯ ಕೈಗೊಂಡರೆ ಸಮಾಜದ ಸಂಘಟನೆ ಗಟ್ಟಿಯಾಗಿ ಸಮಾಜದ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡಲು ಸಾದ್ಯ. ಉತ್ತಮ ವಿಚಾರಗಳನ್ನು ಮುಂದಿಟ್ಟುಕೊಂಡು ನಮ್ಮ ಬಾಂಧವ್ಯ ಮತ್ತು ಸಂಘಟನೆಗಳನ್ನು ಬೆಳೆಸುವ ಪರಿ ನಮ್ಮವರದು. ಕಷ್ಟ ಸುಖವನ್ನು ಒಂದೇ ರೀತಿಯಲ್ಲಿ ಸ್ವೀಕರಿಸಿ ಶಕ್ತಿಯಾಗಿ ಬೆಳೆದು ನಿಂತವರು ನಾವು. ತಾನು ಬದುಕಿ ಮತ್ತಿತರರಿಗೂ ಬದುಕಲು ದಾರಿ ಮಾಡಿ ಕೊಟ್ಟಿದ್ದೇವೆ. ನಮ್ಮ ಸಂಸ್ಕ್ರತಿ ಅಚಾರ ವಿಚಾರಗಳನ್ನು ಪಾಲಿಸಿಕೊಂಡು ಮಾತೃ ಪ್ರಧಾನವಾದ ಸಮಾಜದಲ್ಲಿ ಕಾರ್ಯ ಮಾಡುವವರನ್ನು ಗುರುತಿಸಿ ಸನ್ಮಾನಿಸುವ ಗುಣವನ್ನು ಹೊಂದಿರಬೇಕು. ನಮ್ಮವರಿಗಾಗಿ ನಮ್ಮಲ್ಲಿರುವ ನಾಯಕರು ಬ್ಯಾಂಕ್ ಅಥವಾ ಬೇರೆ ಬೇರೆ ರೀತಿಯ ಸಂಸ್ಥೆಗಳನ್ನು ಪ್ರಾರಂಭಿಸಿ ಉದ್ಯೋಗದಾತರಾಗಿ ಕೊಡುಗೆ ನೀಡಲಿ. ಮಹಿಳಾ ಶಕ್ತಿ ಹೆಗಲಿಗೆ ಹೆಗಲು ಕೊಟ್ಟು, ಮುನ್ನಡೆಯುವ ನಮ್ಮ ಸದಸ್ಯರು, ಯುವ ಶಕ್ತಿಯಿಂದ ನಮ್ಮ ಸಂಘ ಬಲಿಷ್ಟವಾಗಿ ಬೆಳೆಯುತ್ತಿದೆ. ಈ ಸಂಭ್ರಮದಲ್ಲಿ ಪಾಲ್ಗೊಂಡು ಸಮಾಜಕ್ಕೆ ಉತ್ತಮ ನುಡಿ ನಮನ ನೀಡಿದ ಗಣ್ಯರು, ಸಮಾರಂಭಕ್ಕೆ ಪ್ರೋತ್ಸಾಹಿಸಿದ ಪುಣೆ ಬಂಟರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಹಕರಿಸಿದ ಸಮಾಜ ಬಾಂಧವರಿಗೆ, ಅಸೋಸಿಯೇಷನ್ ನ ಎಲ್ಲಾ ಸಮಿತಿ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಧಾರ್ಮಿಕ ಮುಖಂಡ ಕೆರಾಡಿ ಚಂದ್ರಶೇಖರ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ಸಾಧನೆ ಮಾಡಲು ಅವಕಾಶಗಳು ಬಹಳಷ್ಟಿವೆ. ನಮ್ಮ ಪ್ರತಿಭೆಗಳಿಗೆ ಸ್ಪಂದಿಸುವ ಯೋಜನೆಯಂತೆ ನಿರ್ಧರಿಸಿ ಸತ್ಕರ್ಮಗಳನ್ನು ಮಾಡುವ ಮೂಲಕ ಗುರುತಿಕೊಳ್ಳಬೇಕು. ಈ ಕಲಿಯುಗದಲ್ಲಿ ನಮಗೆ ಶಕ್ತಿ ಇದೆ. ಆದರೆ ಧಾರ್ಮಿಕತೆಯನ್ನು ಮೈಗೂಡಿಸಿಕೊಂಡು ಸ್ವಸಾಮರ್ಥ್ಯದಿಂದ ನಮ್ಮನ್ನು ನಾವು ಬೆಳೆಸಿಕೊಳ್ಳುವ ಪ್ರಜ್ಞೆ ನಮ್ಮಲ್ಲಿರಬೇಕು. ಸೇವೆಯಿಂದ ಸಂತೃಪ್ತಿಯನ್ನು ಹೊಂದಲು ಸಾದ್ಯ. ಎಲ್ಲೇ ಇರಲಿ ಎಲ್ಲೇ ಹೋದರೂ ನಮ್ಮ ಸಂಸ್ಕ್ರತಿಗೆ ತಕ್ಕಂತೆ ಸಮಾಜವನ್ನು ಕಟ್ಟಿದವರು ಬಂಟರು. ಸಂಘಟನೆಯಿಂದ ಮತ್ತು ಸಂಘಟಕರಿಂದ ಬಂಟ ಸಮಾಜ ಇಂದು ಅದ್ಬುತವಾಗಿ ಬೆಳೆದು ನಿಂತಿದೆ. ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಹೆಗ್ಡೆಯವರು ಎಲ್ಲಾ ಬಾಂಧವರನ್ನು ಸೇರಿಸಿಕೊಂಡು ಉತ್ತಮ ಕಾರ್ಯವನ್ನೇ ಮಾಡುತ್ತಾ ಇದ್ದಾರೆ ಎಂದರು.
ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಗಣೇಶ್ ಹೆಗ್ಡೆಯವರ ಅದ್ಯಕ್ಷತೆಯಲ್ಲಿ ವಾರ್ಷಿಕೋತ್ಸವ ಸಂಭ್ರಮದ ಸಮಾರಂಭದ ವೇದಿಕೆಯಲ್ಲಿ ಗೌರವ ಅತಿಥಿಗಳಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಕೆರಾಡಿ ಚಂದ್ರಶೇಖರ್ ಶೆಟ್ಟಿ, ಪುಣೆಯ ಖ್ಯಾತ ಕೈಗಾರಿಕೋದ್ಯಮಿ ಶ್ರೀ ಜೀತೇಂದ್ರ ಹೆಗ್ಡೆ, ಬಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷರುಗಳಾದ ಸತೀಶ್ ರೈ ಕಲ್ಲಂಗಳ ಗುತ್ತು, ರೋಹಿತ್ ಶೆಟ್ಟಿ ನಗ್ರಿ ಗುತ್ತು, ನಿಕಟ ಪೂರ್ವ ಅಧ್ಯಕ್ಷ ಆನಂದ್ ಶೆಟ್ಟಿ ಮಿಯ್ಯಾರ್, ಪ್ರಧಾನ ಕಾರ್ಯದರ್ಶಿ ಅರವಿಂದ್ ರೈ ಅರ್ಪಿಣಿ ಗುತ್ತು, ಕೋಶಾಧಿಕಾರಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಯು ಶೆಟ್ಟಿ, ನಿಕಟಪೂರ್ವ ಅಧ್ಯಕ್ಷೆ ದೀಪಾ ಎ ರೈ, ಮಹಿಳಾ ವಿಭಾಗದ ಕಾರ್ಯದರ್ಶಿ ಲತಾ ಎಸ್ ಶೆಟ್ಟಿ, ಯುವ ವಿಬಾಗದ ಅಧ್ಯಕ್ಷ ನ್ಯಾಯವಾದಿ ರೋಹನ್ ಶೆಟ್ಟಿಯವರು ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಲ್ಪವೃಕ್ಷ ಹೂ ಅರಳಿಸಿ ವಾರ್ಷಿಕೋತ್ಸವ ಸಂಭ್ರಮದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಿನಿ ಎಂ ಶೆಟ್ಟಿ, ಸೌಮ್ಯ ಎಸ್ ಶೆಟ್ಟಿ ಪ್ರಾರ್ಥನೆಗೈದರು. ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ ಸ್ವಾಗತಿಸಿದರು. ಸಂಘದ ವಾರ್ಷಿಕ ವರದಿಯನ್ನು ಪ್ರ ಕಾರ್ಯದರ್ಶಿ ಅರವಿಂದ್ ರೈ ಮತ್ತು ಮಹಿಳಾ ವಿಭಾಗದ ವರದಿಯನ್ನು ಕಾರ್ಯದರ್ಶಿ ಲತಾ ಎಸ್ ಶೆಟ್ಟಿ, ಯುವ ವಿಭಾಗದ ವರದಿಯನ್ನು ಪ್ರಮೋದ್ ರೈ ಮಂಡಿಸಿದರು.
ಹರೀಶ್ ಪೂಂಜಾರವರನ್ನು ಬಂಟ್ಸ್ ಅಸೋಸಿಯೇಷನ್ ವತಿಯಿಂದ ಶಾಲು ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ಗೌರವ ಅತಿಥಿಗಳಾದ ಕೆರಾಡಿ ಚಂದ್ರಶೇಖರ್ ಶೆಟ್ಟಿ, ಜಿತೇಂದ್ರ ಹೆಗ್ಡೆಯವರನ್ನು ಶಾಲು ಫಲಪುಷ್ಪ ಸ್ಮರಣಿಕೆ ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು. ವಿಶೇಷವಾಗಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಮತ್ತು ದಿವ್ಯಾ ಎಸ್ ಶೆಟ್ಟಿ ದಂಪತಿಗಳನ್ನು ಬಂಟ್ಸ್ ಅಸೋಸಿಯೇಷನ್ ವತಿಯಿಂದ ಗಣೇಶ್ ಹೆಗ್ಡೆಯವರು ಸತ್ಕರಿಸಿದರು. ಪುಣೆ ಬಂಟರ ಸಂಘದ ವತಿಯಿಂದ ಸಂತೋಷ್ ಶೆಟ್ಟಿಯವರು ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆಯವರನ್ನು ಸತ್ಕರಿಸಿದರು. ಸಂಘದ ಬೆಳವಣಿಗೆಯಲ್ಲಿ ದುಡಿದ ಸಂಘದ ಪದಾಧಿಕಾರಿಗಳಾದ ಸುಧಾಕರ್ ಶೆಟ್ಟಿ ಕೆಮ್ತೂರು, ಸತೀಶ್ ಶೆಟ್ಟಿ ಯೆರವಾಡ, ರವೀಂದ್ರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ತಾರಾನಾಥ್ ರೈ ಸೂರಂಬೈಲುರವರನ್ನು ಗಣೇಶ್ ಹೆಗ್ಡೆ ಸನ್ಮಾನಿಸಿದರು. ಅಲ್ಲದೇ ಬಂಟ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾದನೆ ಮಾಡಿದ ಸಾಧಕರನ್ನು, ವಿಧ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಸ್ನೇಹಾ ಶೆಟ್ಟಿ, ಭವ್ಯಾ ಎಸ್.ಶೆಟ್ಟಿ, ಶಾಲಿನಿ ಎಂ .ಶೆಟ್ಟಿ, ರೋಹಿತ್ ಶೆಟ್ಟಿ ನಗ್ರಿ ಗುತ್ತುರವರು ಸನ್ಮಾನಿತರನ್ನು ಪರಿಚಯಿಸಿದರು. ಅತಿಥಿ ಗಣ್ಯರು ಸಾಂದರ್ಭಿಕವಾಗಿ ಮಾತನಾಡಿದರು.
ಅಲ್ಲದೇ ಇದೇ ಸಂದರ್ಭದಲ್ಲಿ ಗಣೇಶ್ ಹೆಗ್ಡೆಯವರ ಅಭಿಮಾನಿ ಬಳಗದವರು ಊರಿನಿಂದ ಆಗಮಿಸಿದ್ದ ಸಮಾಜ ಸೇವಕ ವಸಂತ್ ಶೆಟ್ಟಿ ಬೆಳ್ವೆ, ರಾಜಕೀಯ ದುರೀಣ ದಿನಕರ್ ಶೆಟ್ಟಿ ಹೆರ್ಗ, ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿಯವರನ್ನು ಸತ್ಕರಿಸಲಾಯಿತು. ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಗಣೇಶ್ ಹೆಗ್ಡೆಯವರು ಸತ್ಕರಿಸಿ ಅಭಿನಂದನೆ ಸಲ್ಲಿಸಿದರು. 11 ನೇವಾರ್ಷಿಕೋತ್ಸವ ಸಂಭ್ರಮಕ್ಕೆ ಪೂರಕವಾಗಿ ನಡೆದ ಕ್ರಿಕೆಟ್ ಮತ್ತು ಇತರ ಕ್ರೀಡಾ ವಿಜೇತರಿಗೆ ಟ್ರೋಪಿಯನ್ನು ನೀಡಲಾಯಿತು. ಇದರ ಯಾದಿಯನ್ನು ರೇಷ್ಮಾ ಆರ್ ಶೆಟ್ಟಿ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಬಂಟ್ಸ್ ಅಸೋಸಿಯೇಷನ್ ನ ಸದಸ್ಯರು, ಮಹಿಳಾ ವಿಬಾಗ ಮತ್ತು ಯುವ ವಿಭಾಗದವರಿಂದ ವೈವಿದ್ಯಮಯ ನೃತ್ಯ ಕಾರ್ಯಕ್ರಮ ಮತ್ತು ಸ್ವರ ಮಾಧುರ್ಯ ತಂಡ ಪುಣೆಯ ಕಲಾವಿದರಿಂದ ಶ್ವೇತಾ ಎಚ್ ಮೂಡಬಿದ್ರಿಯವರ ಕಥೆ, ಸಾಹಿತ್ಯ ನಿರ್ದೇಶನದಲ್ಲಿ ತಾದಿ ತತ್ತ್ಂಡ ಎಂಬ ಸಾಂಸಾರಿಕ ನಾಟಕ ಪ್ರದರ್ಶನಗೊಂಡಿತು.
ರಾಮ್ ಕುಮಾರ್ ಮಾರ್ನಾಡ್, ಸುಧಾಕರ್ ಶೆಟ್ಟಿ ಕೆಮ್ತೂರು, ಶರ್ಮಿಳಾ ಟಿ ರೈಯವರು ಕಾರ್ಯಕ್ರಮ ನಿರೂಪಿಸಿ, ಅಸೋಸಿಯೇಷನ್ ನ ಉಪಾಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಧನ್ಯವಾದಗೈದರು. ಅಸೋಸಿಯೇಷನ್ ಸಮಿತಿಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಎಲ್ಲಾ ಸಮಿತಿ ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಚಿತ್ರ ವರದಿ : ಹರೀಶ್ ಮೂಡಬಿದ್ರಿ ಪುಣೆ