ಪರಸ್ಪರ ಸಹಕಾರದಿಂದಲೇ ಸಂಘಟನೆಗಳು ಬೆಳೆಯಲು ಸಾಧ್ಯ. ಸಂಘಟನೆಗಳನ್ನು ಬಳಪಡಿಸುವ ಮೂಲಕ ಕಾರ್ಯ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಶಮಿಸಬೇಕು ಎಂದು ಹಿರಿಯ ಲೆಕ್ಕ ಪರಿಶೋಧಕ ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಮಿತ್ರವೃಂದ ತುಮಕೂರು ವಿಶ್ವ ವಿದ್ಯಾಲಯ ಕಲಾ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕರಾವಳಿಯಿಂದ ತುಮಕೂರಿಗೆ ಬಂದು ಉದ್ದಿಮೆ, ಉದ್ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲ ಮಂದಿ ತುಮಕೂರಿನ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದರು.
ಸಂಘಟನೆಯ ಬೆಳವಣಿಗೆಗೆ ಎಲ್ಲರೂ ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕು. ಸಂಘಟನೆಯ ಅಭಿವೃದ್ಧಿಯಿಂದಷ್ಟೇ ಸಮಾಜದ ಅಭಿವೃದ್ಧಿ ಸಾಧ್ಯ. ಮಿತ್ರವೃಂದ ನಡೆಸುತ್ತಿರುವ ವಿವಿಧ ಸಮಾಜಪರ ಚಟುವಟಿಕೆ ಈ ನಿಟ್ಟಿನಲ್ಲಿ ಹೆಚ್ಚಿನ ಪರಿಣಾಮ ಬೀರಲಿವೆ ಎಂದರು.
ಕ್ರೀಡಾಕೂಟದ ಅಂಗವಾಗಿ ವಿವಿಧ ವಯೋಮಾನದ ಕ್ರೀಡಾಸಕ್ತರಿಗೆ ಆಟೋಟ ಸ್ವರ್ಧೆ ನಡೆಸಲಾಯಿತು. ಓಟ, ವೇಗದ ನಡಿಗೆ, ಗುಂಡು ಎಸೆತ, ವಾಲಿಬಾಲ್, ಥ್ರೋಬಾಲ್, ಕ್ರಿಕೆಟ್, ಹಗ್ಗಜಗ್ಗಾಟ ಸೇರಿದಂತೆ ಅನೇಕ ಸಾಂಪ್ರದಾಯಿಕ ಸ್ವರ್ಧೆಗಳಲ್ಲಿ ದಕ್ಷಿಣ ಕನ್ನಡದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು.
ಉದ್ಯಮಿ ಎಚ್.ಜಿ. ಚಂದ್ರಶೇಖರ್, ವಾಸುದೇವ ಶೆಟ್ಟಿ, ದ.ಕ. ಮಿತ್ರ ವೃಂದದ ಅಧ್ಯಕ್ಷ ಅಮರನಾಥ ಶೆಟ್ಟಿ, ಕಾರ್ಯದರ್ಶಿ ವೆಂಕಟೇಶ್ ಕಾರಂತ ಎಂ.ಎಸ್, ಉಪಾಧ್ಯಕ್ಷ ಸುಧೀರ್ ಹೆಗ್ಡೆ, ಪದಾಧಿಕಾರಿಗಳಾದ ಯು. ಭಾಸ್ಕರ ಅಡಿಗ, ಸುಶೀಲ ರಮೇಶ್, ಜಯ ಪೂಜಾರಿ ಮತ್ತಿತರರು ಹಾಜರಿದ್ದರು.