ಮುಲುಂಡ್ ಪರಿಸರದ ಪ್ರಸಿದ್ಧ ವಿದ್ಯಾಸಂಸ್ಥೆ ನವೋದಯ ಇಂಗ್ಲಿಷ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಸಂಚಾಲಕ ಸಂಸ್ಥೆ ನವೋದಯ ಕನ್ನಡ ಸೇವಾ ಸಂಘದ ವತಿಯಿಂದ ಅಯೋಧ್ಯೆಯ ಶ್ರೀರಾಮ ದೇವಾಲಯದಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆಯ ಶುಭ ಸಂದರ್ಭ ಶ್ರೀರಾಮೋತ್ಸವ – ನವೋದಯ ದೀಪೋತ್ಸವ ಎಂಬ ವಿಶೇಷ ಕಾರ್ಯಕ್ರಮವು ಸಂಸ್ಥೆಯ ನವೋದಯ ಸದನ ಸಭಾಗೃಹದಲ್ಲಿ ಜರಗಿತು.
ಸಂಘದ ಅಧ್ಯಕ್ಷರು ಮತ್ತು ಸಂಸ್ಥೆಯ ಕಾರ್ಯಾಧ್ಯಕ್ಷ ಎಳತ್ತೂರುಗುತ್ತು ದಯಾನಂದ್ ಎಸ್ ಶೆಟ್ಟಿಯವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಮತ್ತು ಯುವ ವಿಭಾಗದ ಸರ್ವ ಸದಸ್ಯರು, ಶಾಲೆಯ ಮುಖ್ಯ್ಯೊಪಾಧ್ಯಾಯಿನಿ, ಶಿಕ್ಷಕ ಶಿಕ್ಷಕಿಯರು, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಂಘದ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಿತು.
ನವೋದಯ ಭಜನಾ ಮಂಡಳಿಯ ಸದಸ್ಯರಿಂದ, ವಿಜಯ್ ಶೆಟ್ಟಿ ಮೂಡುಬೆಳ್ಳೆ ಮತ್ತು ತಂಡದವರಿಂದ ಭಜನೆ ಹಾಗೂ ನವೋದಯದ ಮಕ್ಕಳಿಂದ ಕುಣಿತ ಭಜನಾ ಕಾರ್ಯಕ್ರಮವು ಸರ್ವರ ಮೆಚ್ಚುಗೆಗೆ ಪಾತ್ರವಾಯಿತು. ನವೋದಯ ದೀಪೋತ್ಸವದಲ್ಲಿ ಭಕ್ತರು ಜತೆಗೂಡಿ ಸುಮಾರು 1000 ಹಣತೆಗಳ ದೀಪ ಪ್ರಜ್ವಲನೆ ಮಾಡುವುದರೊಂದಿಗೆ ನವೋದಯದ ಆವರಣದಲ್ಲಿ ಶ್ರೀರಾಮೋತ್ಸವ ವೈಭವದಿಂದ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ನವೋದಯ ಕನ್ನಡ ಸೇವಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಮತ್ತು ಸಂಸ್ಥೆಯ ಅಡ್ಮಿನಿಸ್ಟ್ರೇಟರ್ ಸುನಿಲ್ ಎಸ್. ಶೆಟ್ಟಿ ಪೂಜಾ ಕಾರ್ಯ ನೆರವೇರಿಸಿದರು. ಸಂಘದ ಮಾಜಿ ಪದಾಧಿಕಾರಿಗಳು, ಸಮಿತಿಯ ಸದಸ್ಯರು, ಸಂಘದ ಸದಸ್ಯರು, ಪಾಲಕ ಪೋಷಕರು ಮತ್ತು ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಶ್ರೀರಾಮ ದೇವರ ಅನುಗ್ರಹಕ್ಕೆ ಪಾತ್ರರಾದರು.