ಪ್ರಪಂಚದಾದ್ಯಂತ ತನ್ನ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಪ್ರಸಿದ್ದಿ ಪಡೆದ ದೇಶವೆಂದರೆ ಅದು ನಮ್ಮ ಭಾರತ. ಭಾರತೀಯರಾಗಿ ನಮಗೆಲ್ಲರಿಗೂ ಬಹಳಷ್ಟು ಹೆಮ್ಮೆತರುವ ವಿಷಯವಿದು. ಭಾರತ ಎಂದ ಕೂಡಲೇ ವಿದೇಶಿಯರ ಮನದಲ್ಲಿ ಮೂಡುವುದು ಇಂದಿಗೂ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ, ಸಂಸ್ಕೃತಿ, ವಿವಿಧ ಹಬ್ಬಗಳು, ಮನ ಸೆಳೆಯುವ ಮೆರವಣಿಗೆಗಳು. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮದು. ವಿವಿಧ ಧರ್ಮದ ಜನರು ತಮ್ಮದೇ ಆದ ಸಂಸ್ಕೃತಿ ಮತ್ತು ಸಂಪ್ರದಾಯದೊಂದಿಗೆ ಶಾಂತಿಯುತವಾಗಿ ವಾಸಿಸುತ್ತಾರೆ. ವಿವಿಧ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ, ಆಚಾರ-ವಿಚಾರ, ಉಡುಪು ಇತ್ಯಾದಿಗಳನ್ನು ಹೊಂದಿದ್ದಾರೆ.
“ಅತಿಥಿ ದೇವೋ ಭವ” ಎಂಬ ಮಾತಿನಂತೆ ನಮ್ಮ ಮನೆಗೆ, ನಮ್ಮಲ್ಲಿಗೆ ಬಂದವರು ನಮ್ಮ ಪಾಲಿಗೆ ದೇವರಂತೆ, ದೇವರಿಗೆ ಸಲ್ಲುವ ಮರ್ಯಾದಿ, ಗೌರವ ಅವರಿಗೂ ಸಿಗುತ್ತದೆ. ಇನ್ನು ನಮ್ಮ ಪಾಲಿಗೆ ಹಿರಿಯರ ಆಶೀರ್ವಾದ ಎಂದರೆ ದೇವರ ವರಕ್ಕೆ ಸಮಾನ. ಯಾವುದೇ ಶುಭಕಾರ್ಯ ಪ್ರಾರಂಭಗೊಳ್ಳುವ ಮೊದಲು ದೇವರ ಬಳಿಕ ಹಿರಿಯರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಪರರನ್ನೂ ತನ್ನಂತೆಯೇ ಗೌರವದಿಂದ ಕಾಣುವುದು ಪ್ರತೀ ಭಾರತೀಯನಿಗೆ ಹುಟ್ಟಿನಿಂದಲೇ ಹಿರಿಯರು ಕಲಿಸಿಕೊಟ್ಟ ಸಂಸ್ಕಾರ. ಭಾರತವು ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಭೂಮಿಯಾಗಿದ್ದು,ಇಲ್ಲಿ ಜನರು ಮಾನವೀಯತೆ, ಉದಾರತೆ, ಏಕತೆ, ಜಾತ್ಯತೀತತೆ, ಬಲವಾದ ಸಾಮಾಜಿಕ ಸಂಬಂಧಗಳು ಮತ್ತು ಇತರ ಉತ್ತಮ ಗುಣಗಳನ್ನು ಹೊಂದಿದ್ದಾರೆ. ಭಾರತೀಯ ಸಂಸ್ಕೃತಿ ಪ್ರಪಂಚದ ಅತ್ಯಂತ ಆಸಕ್ತಿದಾಯಕ ಮತ್ತು ಪ್ರಾಚೀನ ಸಂಸ್ಕೃತಿಯಾಗಿ ಕಂಡು ಬರುತ್ತದೆ. ವಿವಿಧ ಧರ್ಮಗಳ, ಸಂಸ್ಕೃತಿಗಳ ಮತ್ತು ಸಂಪ್ರದಾಯದ ಜನರು ಇಲ್ಲಿ ಸಾಮಾಜಿಕ ಮುಕ್ತರಾಗಿದ್ದಾರೆ. ಅದಕ್ಕಾಗಿಯೇ ವಿವಿಧ ಧರ್ಮಗಳಲ್ಲಿ ಏಕತೆಯು ಬಲವಾದ ಸಂಬಂಧಗಳು ಇಲ್ಲಿ ಅಸ್ತಿತ್ವದಲ್ಲಿದೆ. ಒಟ್ಟಿನಲ್ಲಿ ಹೇಳುವುದದರೆ ಭಾರತೀಯ ಸಂಸ್ಕೃತಿಯ ಕಲೆ ಮತ್ತು ವೈವಿಧ್ಯತೆಯ ನೆಲೆಯಾಗಿದೆ. ಇದನ್ನ ಉಳಿಸಿಕೊಳ್ಳುವ ಜವಾಬ್ದಾರಿ ಭಾರತೀಯರಾಗಿ ನಮ್ಮೆಲ್ಲರದ್ದು.
ಶ್ರೇಯಾ ಮಿಂಚಿನಡ್ಕ, ಉಜಿರೆ