ಪೆರ್ಡೂರು ಬಂಟರ ಸಂಘದ ವ್ಯಾಪ್ತಿಯ ಸಮಾಜ ಬಾಂಧವರ ಸಹಕಾರ, ದಾನಿಗಳ ನೆರವಿನೊಂದಿಗೆ ಗ್ರಾಮೀಣ ಪ್ರದೇಶ ಪೆರ್ಡೂರಿನಲ್ಲಿ ನಗರ ಪ್ರದೇಶದ ಸೌಲಭ್ಯ ಹೊಂದಿರುವ ಅತ್ಯಾಕರ್ಷಕ ವಿನ್ಯಾಸದ ಅತ್ಯಾಧುನಿಕ ಸೌಲಭ್ಯದ ಬಂಟರ ಸಮುದಾಯ ಭವನ ಫೆ. 11ರಂದು ಲೋಕಾರ್ಪಣೆಗೊಳ್ಳಲಿದ್ದು ಎಲ್ಲರೂ ಪಾಲ್ಗೊಳ್ಳಿ ಎಂದು ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಶಾಂತಾರಾಮ ಸೂಡ ಕೆ. ಹೇಳಿದರು. ಅವರು ಪೆರ್ಡೂರು ಬಂಟರ ಸಂಘದ ಸಭಾಂಗಣದಲ್ಲಿ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನದ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫೆ. 11ರಂದು ಗಣ್ಯರ ಉಪಸ್ಥಿತಿಯಲ್ಲಿ ದಿನವಿಡೀ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮುದಾಯ ಭವನ ಲೋಕಾರ್ಪಣೆಗೊಳ್ಳಲಿದೆ. ಸಭಾಂಗಣವು ಸಹಸ್ರಾರು ಸಂಖ್ಯೆಯ ಜನರನ್ನು ಸೇರಿಸಿ ಸಮಾರಂಭ ಆಚರಿಸಲು ಯೋಗ್ಯವಾಗಿದೆ. ಜತೆಗೆ ವಾಹನ ನಿಲುಗಡೆಗೆ ವಿಶಾಲ ವ್ಯವಸ್ಥೆ ಇದೆ ಎಂದರು. ಸಂಘದ ಕೋಶಾಧಿಕಾರಿ ಪ್ರಮೋದ್ ರೈ ಪಳಜೆ, ಉಪಾಧ್ಯಕ್ಷ ಮಹೇಶ್ ಶೆಟ್ಟಿ ಪೈಬೆಟ್ಟು, ಸುಧಾಕರ ಶೆಟ್ಟಿ ಸಾಯಿಷಾ, ಸುರೇಶ್ ಹೆಗ್ಡೆ ಪಳಜೆ ಕಟ್ಟ, ಸತೀಶ್ ಶೆಟ್ಟಿ ಕುತ್ಯಾರು ಬೀಡು, ಶಿವರಾಮ ಶೆಟ್ಟಿ ಬೆಳ್ಳರ್ಪಾಡಿ, ಪ್ರಕಾಶ್ ಹೆಗ್ಡೆ ಬಣ್ಣಂಪಳ್ಳಿ,ಗೌರವ ಸಲಹೆಗಾರ ಶಂಭು ಶಂಕರ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಕೆ. ಶೆಟ್ಟಿ ಕುತ್ಯಾರುಬೀಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.