ಅರ್ಥಪೂರ್ಣ ಹದಿನಾಲ್ಕು ವರ್ಷಗಳನ್ನು ಪೂರೈಸಿದ ನವಚೇತನ ಹಣಕಾಸು ಸಂಸ್ಥೆಯ ಯಶಸ್ಸಿನ ಗಾಥೆ ಮತ್ತದರ ಪ್ರಗತಿ ಶಿಲ್ಪಿ ಲೋಕೇಶ್ ಶೆಟ್ಟರ ಕಿರು ಪರಿಚಯ ಕುರಿತಂತೆ ಪ್ರಸ್ತುತ ಲೇಖನವನ್ನು ಸಮಸ್ತ ಬಂಟ ಸಮಾಜದ ಮುಂದೆ ಇಡಲು ಇಷ್ಟಪಡುತ್ತಿದ್ದೇವೆ. ನವಚೇತನ ಚಿಟ್ಸ್ ಕಂ ಫ್ರೈ.ಲಿ. ಸಂಸ್ಥೆಯು ಜೂನ್ 17, 2009 ರಲ್ಲಿ ತನ್ನ ವ್ಯವಹಾರವನ್ನು ಪ್ರಾರಂಭಿಸಿದ್ದು, ಮಂಗಳೂರಿನಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿರುತ್ತದೆಯಲ್ಲದೆ ಕ್ರಮೇಣ ವರ್ಷಾಂತರಗಳಲ್ಲಿ ಮಂಗಳೂರು, ಉಡುಪಿ, ಪುತ್ತೂರು, ಹುಬ್ಬಳ್ಳಿ, ಬೆಳಗಾಂ, ಬಳ್ಳಾರಿ ಮೊದಲಾದ ಕಡೆಗೆ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡು ಯಶಸ್ಸಿನ ಪಥದಲ್ಲಿ ಮುನ್ನಡೆಯುತ್ತಿದೆ. ತನ್ನ ನೋಂದಣಿತ ಕಛೇರಿಯು ಮಂಗಳೂರಿನ ಬಲ್ಮಠ ರಸ್ತೆಯಲ್ಲಿರುವ ಬ್ಯೂಟಿ ಪ್ಲಾಜಾ ಕಟ್ಟಡದ ತಳಮಹಡಿಯಲ್ಲಿ ಗುರುತಿಸಲ್ಪಟ್ಟು ಆಡಳಿತ ಕಛೇರಿಯಾಗಿಯೂ ಕಾರ್ಯ ನಿರ್ವಹಿಸಿಕೊಂಡು ತನ್ನ ವ್ಯವಹಾರಗಳನ್ನು ನಿಯಂತ್ರಿಸುತ್ತಿದೆ.
ಲೋಕೇಶ್ ಶೆಟ್ಟಿ ಅವರು ಬಂಟ್ವಾಳ ವಲಯದ ಬಂಟರ ಸಂಘದ ಕೋಶಾಧಿಕಾರಿ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕರಾಗಿದ್ದುಕೊಂಡು ಬಿಡುವಿಲ್ಲದ ದುಡಿಮೆಯ ನಡುವೆಯೂ ಸಮಯ ಹೊಂದಿಸಿಕೊಂಡು ಸ್ವಜಾತಿ ಬಾಂಧವರ ಅಭ್ಯುದಯಕ್ಕಾಗಿ ಕಾರ್ಯಪ್ರವೃತ್ತರಾಗಿ ಸಮುದಾಯ ಬಾಂಧವರ ಪ್ರೀತಿ ಪಾತ್ರರಾಗಿದ್ದಾರೆ. ತನ್ನ ದೀರ್ಘಾವಧಿ ಸೇವೆಯ ಮೂಲಕ ಪ್ರಾಮಾಣಿಕ ವ್ಯವಹಾರಗಳಿಂದ ತನ್ನ ಎರಡು ದಶಕಗಳ ಸಾರ್ಥಕ ಸೇವೆಯನ್ನು ಪೂರೈಸಲಿರುವ ನವಚೇತನ ಹಣಕಾಸು ಸಂಸ್ಥೆ ಇಂದು ಹಣಕಾಸು ಸಂಬಂಧಿ ವ್ವಹಾರಗಳಲ್ಲೊಂದು ದೈತ್ಯ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಂಸ್ಥೆಯ ನಿರ್ದೇಶಕ ಮಂಡಳಿಯ ಪ್ರತಿಯೋರ್ವ ಸದಸ್ಯರು ಸುಮಾರು ಇಪ್ಪತ್ತು ವರ್ಷಗಳ ವೃತ್ತಿ ಅನುಭವ ಹೊಂದಿದ್ದು ಹಣಕಾಸು ಕ್ಷೇತ್ರದ ಪಂಡಿತರೆನಿಸಿಕೊಂಡವರು. ಈ ಹಣಕಾಸು ಸಂಸ್ಥೆಯಲ್ಲಿ ವಿವಿಧ ಠೇವಣಿ ಬಂಡವಾಳ ಹೂಡಿದವರಿಗೆ ಯಾವುದೇ ಅಪಾಯ ಸಾಧ್ಯತೆ ಇಲ್ಲದಂತೆ ಯೋಗ್ಯ ಭದ್ರತೆ ಇರಿಸಿಕೊಂಡು ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಹಣ ಮರುಪಾವತಿ ಪಡೆಯುವವರಿಗೆ ನಿರ್ಧರಿತ ಅವಧಿಯಲ್ಲಿ ದೊರೆಯುತ್ತಿರುವುದರಿಂದ ಗ್ರಾಹಕರಿಗೆ ಸಂಸ್ಥೆಯ ಮೇಲೆ ವಿಶ್ವಾಸ ಮೂಡಿರುತ್ತದೆ.
ಜೀವವಿಮಾ ಪಾಲಿಸಿ, ಸ್ಥಿರ ಚರಾಸ್ತಿ ಮೌಲೀಕರಣ ಹಾಗೂ ಸಾಲ ಪಡೆವವರ ವ್ಯವಹಾರ ಇತಿಹಾಸಗಳ ಅಧ್ಯಯನ ಬಳಿಕವೆ ಸಾಲ ನೀಡುತ್ತಿರುವುದರಿಂದ ಬಂಡವಾಳ ಹೂಡಿದವರಿಗೆಂದೂ ರಿಸ್ಕ್ ಇರದು. ನೂರು ಕೋಟಿಗಳಿಗೂ ಮೀರಿದ ಹಣಕಾಸು ವ್ಯವಹಾರ ಇರುವ ನವಚೇತನಕ್ಕೆ ಹದಿನಾಲ್ಕು ಸಾವಿರಕ್ಕೂ ಮೀರಿದ ಸದಸ್ಯರನ್ನು ಹೊಂದಿರುತ್ತದೆ. ಸಣ್ಣ ಪುಟ್ಟ ಲೋನ್ ಗಳು ಸೇರಿದಂತೆ ಕೆಲವು ಸಲ ಬ್ಯಾಂಕ್ ಸವಲತ್ತುಗಳಿಂದ ವಂಚಿತರಾಗಿರುವ ಸ್ಥಿತಿವಂತ ಗ್ರಾಹಕರಿಗೆ ಅವರ ಭದ್ರತಾ ಕಾಗದ ಪತ್ರಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಲೋನ್ ವ್ಯವಸ್ಥೆ ಮಾಡಿಸುತ್ತಾರೆ. ಕೆಲವು ಸಲ ತುರ್ತು ಲೋನ್ ನೀಡಬೇಕಾದ ಸನ್ನಿವೇಷಗಳಲ್ಲಿ ಪೂರ್ಣ ಪ್ರಮಾಣದ ರಿಸ್ಕ್ ಕವರ್ ಆಗಬಲ್ಲ ಕಾಗದ ಪತ್ರಗಳ ಮೇಲೆ ಲೋನ್ ಪಾವತಿಸುತ್ತಾರೆ. ಇನ್ನು ಇವರ ಸಹೋದರ ಸಂಸ್ಥೆ ನವಚೇತನ ಫೈನಾನ್ಸ್ ಕಂಪೆನಿಯಿಂದ ಸಾಂದರ್ಭಿಕವಾಗಿ ಸಾಲ ಒದಗಿಸಿಕೊಡುವ ವ್ಯವಸ್ಥೆ ಇದೆ. ಸದಸ್ಯರು ಪಾವತಿಸುವ ಮಾಸಿಕ ಮೊತ್ತದ ಮೇಲೆ ಮಾಸಿಕ, ವಾರ್ಷಿಕ ರೀತಿಯಲ್ಲಿ ನಿರ್ದಿಷ್ಟ ಮೊತ್ತದ ಹಣ ದೊರೆಯುತ್ತದೆ.
ನವಚೇತನ ಚಿಟ್ಸ್ ಸಂಸ್ಥೆ ಗ್ರಾಹಕರು ಇತರ ಮನಿ ಲೆಂಡರ್ಸ್ ಗಳಿಂದ ಮೋಸ ಹೋಗದ ರೀತಿಯಲ್ಲಿ ತನ್ನ ಗ್ರಾಹಕರಿಗೆ ಅರಿವು ನೀಡುತ್ತಾ ಅವರ ಅವಶ್ಯಕತೆ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿ ನಿಯಮಬದ್ಧ ರೀತಿಯಲ್ಲಿ ಸಾಲ ಒದಗಿಸುತ್ತದೆ. ತಮ್ಮ ಒಂದೊಂದು ಶಾಖೆಗಳಿಂದ ವಿಭಿನ್ನ ರೀತಿಯ ಸವಲತ್ತುಗಳನ್ನು ನೀಡುತ್ತಾ ಪ್ರಾದೇಶಿಕ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸುತ್ತಿರುವುದು ಇದು ಈ ಸಂಸ್ಥೆಯ ವೈಶಿಷ್ಟ್ಯ. ಕಾನೂನು ರೀತ್ಯಾ ಸಾಲ ವಸೂಲಿ ಬಂಡವಾಳ ತೊಡಗಿಸಿದವರಿಗೆ ಆಕರ್ಷಕ ವಿಶೇಷ ಮೊತ್ತ ಪಾವತಿ ಹಾಗೂ ಅವರ ಹಣಕ್ಕೆ ಗರಿಷ್ಟ ಮಟ್ಟದ ಭದ್ರತೆಗಳಿಂದ ನವಚೇತನ ಹಣಕಾಸು ಸಂಸ್ಥೆ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದರ ಮಾರ್ಗದರ್ಶನ ಷರತ್ತುಗಳನ್ನು ಮೀರದೇ ಸಾಲ ಮತ್ತು ಭದ್ರತೆಯ ಉಳಿತಾಯ ಕಾನೂನಿನನ್ವಯವೇ ಕಾರ್ಯ ನಿರ್ವಹಿಸುತ್ತಿದ್ದು ಸಕಾಲಿಕ ಮುಕ್ತ ಸಲಹೆ ಮಾರ್ಗದರ್ಶನಗಳಿಂದ ಮಾದರಿ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನವ ಚೇತನ ಸಂಸ್ಥೆ ನೇರ ಸೇವೆಗಳ ಜೊತೆಗೆ ಕೆಲವು ಪರೋಕ್ಷ ಕನ್ಸಲ್ಟೆನ್ಸಿ ಸೇವೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತದೆ.
ಕಷ್ಟಪಟ್ಟು ಸಂಪಾದಿಸಿದ ಹಣ ಕಳೆದುಕೊಳ್ಳದ ರೀತಿಯಲ್ಲಿ ಪೂರ್ಣ ಪ್ರಮಾಣದ ವಿಶ್ವಾಸ ಮೂಡಿಸಿ ವ್ಯವಹಾರ ನಿರತವಾದ ನವಚೇತನ ನಿಜವಾದ ಅರ್ಥದಲ್ಲಿ ಅರ್ಥಾರ್ಥಿಗಳಿಗೆ ಯೋಗ್ಯ ಮಾರ್ಗದರ್ಶನ ಜೊತೆಗೆ ಆರ್ಥಿಕ ಸವಲತ್ತುಗಳನ್ನು ನೀಡುತ್ತಾ ಬಂದಿರುವ ಕಾರಣ ಇಷ್ಟು ವರ್ಷಗಳಲ್ಲಿ ಹಣ ತೊಡಗಿಸುವ ಜನರ ವಿಶ್ವಾಸ ಉಳಿಸಿ ಕೊಂಡಿದೆ. ಒಬ್ಬ ನೆರೆ ಮನೆಯ ಸನ್ಮಿತ್ರನಂತೆ ಆಪತ್ ಬಾಂಧವನಾಗಿ ಉಪಕಾರಿ ಸಹಕಾರಿ ರೀತಿಯಲ್ಲಿ ಕಾರ್ಯನಿರತ ನವಚೇತನ ಸಂಸ್ಥೆಯ ಯಶಸ್ಸಿನ ಹಿಂದೆ ಲೋಕೇಶ್ ಶೆಟ್ಟಿ ಅವರಂತಹ ಆರ್ಥಿಕ ತಜ್ಞ, ಮೆಧಾವಿತನದ ಯೋಗದಾನವಿದೆ. ಕರ್ನಾಟಕದಾದ್ಯಂತ ಏಳು ಶಾಖೆಗಳನ್ನು ಹೊಂದಿದ್ದು ಇನ್ನೂ ವಿಸ್ತಾರಗೊಳ್ಳುವ ದೂರಾಲೋಚನೆ ಯೋಜನೆಗಳನ್ನು ಹೊಂದಿದೆ. ಬಹೂದ್ಧೇಶ ಸಾಲ ಸೌಲಭ್ಯ, ನಗುಮೊಗದ ಸೇವೆ, ಲಾಭದಾಯಕ ಹಣ ಹೂಡಿಕೆ ಯೋಜನೆಗಳು, ಹಣಕಾಸು ಸಂಬಂಧಿ ಮುಕ್ತ ಸಲಹೆಗಳಿಂದ ನವಚೇತನ ಕರ್ನಾಟಕದ ಮುಖ್ಯ ನಗರಗಳಲ್ಲಿ ಭದ್ರ ನೆಲೆ ಕಂಡಿದ್ದು ಹಣಕಾಸು ಕ್ಷೇತ್ರದ ಗಮನೀಯ ಸಂಸ್ಥೆ ಎನಿಸಿದೆ. ಇಲ್ಲಿ ಆರ್ಥಿಕ ಸೌಲಭ್ಯ ಪಡೆದ ಗ್ರಾಹಕು ಖಾಯಂ ಆಗಿ ಈ ಸಂಸ್ಥೆ ಯನ್ನು ಆಶ್ರಯಿಸುವುದರ ಹಿಂದೆ ಈ ಸಂಸ್ಥೆಯ ಪ್ರಾಮಾಣಿಕ ವಿಶ್ವಾಸಾರ್ಹ ಸೇವೆಯ ಮಹತ್ತಿಕೆಯ ಅರಿವಾಗದಿರದು.
ಇನ್ನು ನಿರ್ಧಿಷ್ಟ ಅವಧಿ ನಂತರ ಏಲಂ ಪದ್ಧತಿ ಹಾಗೂ ಹಣ ಹೂಡಿದವರ ಅದೃಷ್ಟ ಪರೀಕ್ಷೆ ಬಹುಮಾನ ಮೊದಲಾದ ಆಕರ್ಷಕ ಲಾಭದಾಯಕ ಯೋಜನೆಗಳಿವೆ. ಈ ಸಂಸ್ಥೆಯ ಗುರುತರ ಜವಾಬ್ದಾರಿ ಇರುವ ಲೋಕೇಶ್ ಶೆಟ್ಟಿ ಅವರ ಪರಿಶ್ರಮ ಸಂಸ್ಥೆಯ ಪ್ರಗತಿಯ ಹಾದಿಯಲ್ಲಿ ಇವರು ಸವೆಸಿದ ದಾರಿ ಶ್ಲಾಘನೆಗೆ ಯೋಗ್ಯ. ಈ ಸಂಸ್ಥೆ ಇನ್ನಷ್ಟು ಪ್ರಗತಿ ಹೊಂದಿ ಸಹಕಾರಿ ಬ್ಯಾಂಕ್ ಆಗಿ ರೂಪಾಂತರಗೊಳ್ಳಲಿ. ತನ್ಮೂಲಕ ಇನ್ನಷ್ಟು ವಿಸ್ತೃತ ಸೇವಾ ಸೌಲಭ್ಯ ಗ್ರಾಹಕರಿಗೆ ದೊರೆಯಲಿ. ಲೋಕೇಶ್ ಶೆಟ್ಟಿ ಅವರಿಗೆ ಈ ಸಂಸ್ಥೆಯನ್ನು ಸುದೀರ್ಘ ಕಾಲ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯವನ್ನು ದೇವರು ಕರುಣಿಸಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಶುಭವಾಗಲಿ ಸರ್ವರಿಗೆ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು