ಮೂಲ್ಕಿ ತಾಲೂಕಿನ ಕರ್ನಿರೆ ಗ್ರಾಮದ ಗ್ರಾಮ ದೇವರಾದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜನವರಿ 17 ರಿಂದ 23 ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಈ ಬಗ್ಗೆ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಗೋರೆಗಾಂ ಪೂರ್ವದ ಹೋಟೆಲ್ ಬಾಂಬೆ 63, ಇಲ್ಲಿ ಮುಂಬಯಿಯಲ್ಲಿ ವಾಸವಾಗಿರುವ ಗ್ರಾಮದ ಪ್ರಮುಖರೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಸಭೆಯನ್ನು ಊರಿನ ಮತ್ತು ಮುಂಬಯಿಯ ಬ್ರಹ್ಮಕಲಶ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಬ್ರಹ್ಮಕಲಶೋತ್ಸವ ಗೌರವ ಅಧ್ಯಕ್ಷ ರವೀಂದ್ರ ಸಾಧು ಶೆಟ್ಟಿಯವರು ದೀಪ ಪ್ರಜ್ವಲಿಸಿ ಉದ್ಘಾಟನೆ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಾದ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಸಭೆಯಲ್ಲಿ ಭಾಗವಹಿಸಿದ ಪ್ರಮುಖರ ಪರಿಚಯ ನೀಡಿ ಕರ್ನಿರೆ ಗ್ರಾಮದಲ್ಲಿರುವ ದೈವಸ್ಥಾನವಾಗಲಿ, ದೇವಸ್ಥಾನವಾಗಲಿ, ಮತ್ತು ಧಾರ್ಮಿಕ ಸಾಮಾಜಿಕ ಚಟುವಟಿಕೆಗಳಿಗೆ ಮುಂಬಯಿಯಲ್ಲಿ ನೆಲೆ ನಿಂತಿರುವ ಗ್ರಾಮಸ್ಥರ ಕೊಡುಗೆ ಅಪಾರವಾಗಿದೆ. ಗ್ರಾಮದ ದೈವ ದೇವರುಗಳ ಮೇಲೆ ಅವರಿಟ್ಟಿರುವ ಭಕ್ತಿ ಎಲ್ಲಿ ಹೋದರೂ ಗ್ರಾಮದತ್ತ ಸೆಳೆಯುತ್ತದೆ ಮತ್ತು ಅದರ ಯಾವುದೇ ಅಭಿವೃದ್ಧಿಯ ಕಾರ್ಯದಲ್ಲಿ ತ್ವರಿತವಾಗಿ ಸ್ಪಂದಿಸುವಂತೆ ಪ್ರೇರೇಪಿಸುತ್ತದೆ. ದೇವಸ್ಥಾನಗಳು, ದೈವಸ್ಥಾನಗಳು ಜೀರ್ಣೋದ್ಧಾರಗೊಂಡಾಗ ಸಮಗ್ರ ಗ್ರಾಮ ಅಭಿವೃದ್ಧಿಗೊಳ್ಳುತ್ತದೆ ಎಂದು ನುಡಿದರು.
ಕರ್ನಿರೆ ಗ್ರಾಮದ ಮುಖ್ಯಸ್ಥರಾದ (ಗುತ್ತಿನಾರ್) ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾದ್ಯಕ್ಷರಾದ ಕರ್ನೀರೆ ಹರೀಶ್ಚಂದ್ರ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಗ್ರಾಮದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಲ್ಲಿ ಮುಂಬಯಿಯ ಗಣ್ಯರೇ ಅಲ್ಲದೇ ಸಾಮಾನ್ಯರಲ್ಲಿ ಸಾಮಾನ್ಯರು ಕೈಜೋಡಿಸುತ್ತಿರುವುದು ಗ್ರಾಮದ ದೈವ ದೇವರುಗಳ ಮೇಲಿರುವ ಭಕ್ತಿ, ಗ್ರಾಮದ ಮೇಲಿನ ಕಾಳಜಿಯಾಗಿದೆ. ಅವರು ಗ್ರಾಮದೈವ ಧರ್ಮ ಜಾರಂದಾಯ ದೈವಸ್ಥಾನದ ಜೀರ್ಣೋದ್ಧಾರ ಮತ್ತು ಅದಕ್ಕೆ ಬೇಕಾದ ಬೆಳ್ಳಿ ಬಂಗಾರದ ನಗ ನಾಣ್ಯಗಳಿಗೆ ಮಾಡಿದ ಕೊಡುಗೆಯನ್ನು ಸ್ಮರಿಸುತ್ತಾ ಗ್ರಾಮ ದೇವರ ಬ್ರಹ್ಮಕಲಶೋತ್ಸವ ಮತ್ತು ದೇವಸ್ಥಾನದ ಜೀರ್ಣೋದ್ಧಾರಕ್ಕೆ ತಗಲುವ ವೆಚ್ಚ ಮತ್ತು ಉತ್ಸವದಲ್ಲಿ ಆಚರಿಸಲಾಗುವ ಪೂಜೆಗಳ ವಿವರ ನೀಡಿ ಕಾರ್ಯಕ್ರಮದ ಕರೆಯೋಲೆಯನ್ನು ಬಿಡುಗಡೆ ಮಾಡಿ, ದೇವರ ಸಂಭ್ರಮಾಚರಣೆ ಈ ಉತ್ಸವದಲ್ಲಿ ಎಲ್ಲರ ವೈಯಕ್ತಿಕ ಉಪಸ್ಥಿತಿ ಮತ್ತು ಸಹಕಾರ ಕೋರಿದರು.
ಸಮಿತಿಯ ಸದಸ್ಯರಾದ ಗಂಗಾಧರ ಎನ್ ಅಮೀನ್ ಕರ್ನಿರೆ ಮಾತನಾಡುತ್ತ, ಗ್ರಾಮದ ಯಾವುದೇ ಕಾರ್ಯಗಳಿಗೆ ಹೊರ ರಾಜ್ಯದಲ್ಲಿರುವ ಸದಸ್ಯರ ಕೊಡುಗೆ ಸದಾ ಕಾಲ ಇರುತ್ತದೆ ಮತ್ತು ಗ್ರಾಮ ದೇವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವವು ಗಣ್ಯರ ಸಹಕಾರದಿಂದ ಯಾರೂ ಎಣಿಸದ ರೀತಿಯಲ್ಲಿ ಸಫಲತೆಯನ್ನು ಕಾಣುತ್ತದೆ ಎಂಬ ಭರವಸೆಯ ನುಡಿ ನುಡಿದರು. ಗ್ರಾಮದ ಸದಸ್ಯರಾದ ಕರ್ನಿರೆ ಹರೀಶ್ಚಂದ್ರ ಕುಂದರ್ ಮಾತನಾಡುತ್ತ, ಕರ್ನಿರೆ ಒಂದು ಸಣ್ಣ ಗ್ರಾಮವಾದರೂ ಅದರ ಹೆಸರು ವಿಶ್ವದಾದ್ಯಂತ ಹರಡಬೇಕಾದರೆ ಹೊರ ರಾಜ್ಯ ಮತ್ತು ದೇಶದಲ್ಲಿ ಗ್ರಾಮದ ಸದಸ್ಯರು ಮಾಡಿದ ಸಾಧನೆಗಳು ಕಾರಣವಾಗಿದೆ ಮತ್ತು ಕರ್ನಿರೆ ವಿಶ್ವನಾಥ್ ಶೆಟ್ಟಿ ಒಬ್ಬ ಉತ್ತಮ ನಾಯಕನಾಗಿ ಮುಂದಾಳುತ್ವ ವಹಿಸುತ್ತಿದ್ದಾರೆ. ಗ್ರಾಮ ದೈವ ಜಾರಂದಾಯ ತಾನು ತನ್ನ ಕಾರ್ಣಿಕ ಪ್ರದರ್ಶಿಸಿ ಬಂದು ನೆಲೆನಿಂತ ಊರು ಮತ್ತು ಊರ ಸಮಸ್ತರು ತೆಗೆದುಕೊಂಡ ಯಾವುದೇ ನಿರ್ಣಯಗಳು ಕಾರ್ಣಿಕ ರೂಪವಾಗಿ ಈಡೇರುತ್ತದೆ. ಈ ಕಾರ್ಯಕ್ರಮವೂ ಅದಕ್ಕೆ ಅಪವಾದವಾಗದು ಎಂದರು.
ಕರ್ನಿರೆ ಸಚಿನ್ ಶೆಟ್ಟಿಯವರು ಮಾತನಾಡುತ್ತ, ನೀರ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿರುವ ವಿಷ್ಣುಮೂರ್ತಿ ದೇವಸ್ಥಾನದ ಇತಿಹಾಸ ಮತ್ತು ಬೆಳೆದು ಬಂದ ರೀತಿ ವಿವರಿಸಿ ತನ್ನವರ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಮುಂಬಯಿ ಬಂಟರ ಸಂಘದ ಎಸ್ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಕಿರಣ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಮುಂತಾದವರು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳಾದ ರವಿ ಶೆಟ್ಟಿ ಕರ್ನಿರೆ, ಮೋಹನ್ ಶೆಟ್ಟಿ ಮತ್ತು ಮೋಹನ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮದ ಮುಂಬಯಿಯ ಉದ್ಯಮಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.