ಯಕ್ಷ ಮಿತ್ರರು ಸುರತ್ಕಲ್ ಇದರ 18 ನೇ ವರ್ಷದ ಪ್ರಯುಕ್ತ ಅ.8 ರಂದು ಭಾನುವಾರ ಸುರತ್ಕಲ್ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ವೇದಿಕೆಯಲ್ಲಿ ಕರ್ಣಾವಸಾನ ಯಕ್ಷಗಾನ ತಾಳಮದ್ದಳೆ ನಡೆಯಿತು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ, ಅರ್ಥಧಾರಿ ಸದಾಶಿವ ಆಳ್ವ ತಲಪಾಡಿ ಅವರನ್ನು ಸನ್ಮಾನಿಸಲಾಯಿತು. ದಿನೇಶ್ ಶೆಟ್ಟಿ ಕಾವಳಕಟ್ಟೆ ಅಭಿನಂದನಾ ಭಾಷಣದಲ್ಲಿ ಸದಾಶಿವ ಆಳ್ವರ ಕಲಾ ಸೇವೆಯನ್ನು ಕೊಂಡಾಡಿದರು. ತಾಳಮದ್ದಲೆ ಅರ್ಥಧಾರಿ ಯಾಗಿ ಸದಾಶಿವ ಆಳ್ವರವರ ಮಾತುಗಾರಿಕೆ, ತುಳು ಭಾಷೆಯಲ್ಲಿ ಅವರಿಗಿರುವ ಹಿಡಿತ ಇಂದಿನ ಯುವ ಕಲಾವಿದರಿಗೆ ಸ್ಪೂರ್ತಿಯಾಗಿದ್ದಾರೆ. ಈ ಹಿಂದೆ ಕಾಂಚನ ಸಂಜಿವ ರೈ, ಬೆಳ್ಳಾರೆ ವಿಶ್ವನಾಥ ಶೆಟ್ಟಿ ತುಳು ಭಾಷೆಯ ಬಗ್ಗೆ ಇದ್ದ ಒಲವು, ಭಾಷಾ ಶುದ್ಧತೆಯನ್ನು ಈಗ ನಾವು ಸದಾಶಿವ ಆಳ್ವರಲ್ಲಿ ಕಾಣಬಹುದು ಎಂದರು.
ಇಡ್ಯಾ ದೇವಸ್ಥಾನದ ಆಡಳಿತ ಮೊಕ್ತೇಸರ ಐ. ರಮಾನಂದ ಭಟ್ ರವರ ಆಶೀರ್ವಚನದಲ್ಲಿ ಯಕ್ಷಮಿತ್ರರು ಯಕ್ಷಗಾನ ಕಲೆಯನ್ನು ಆರಾಧಿಸುತ್ತಾರೆ. ನಿರಂತರ ತಾಳಮದ್ದಳೆಯನ್ನು ಮಾಡುವ ಮೂಲಕ ಯಕ್ಷ ಕಲೆಗೆ ಪ್ರೋತ್ಸಾಹ ನೀಡುತ್ತಾರೆ. ಸದಾಶಿವ ಆಳ್ವರಂತಹ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಗೌರವಿಸುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ ಎಂದರು. ಸುರತ್ಕಲ್ ನಿನಾದ ಟ್ರಸ್ಟ್ ನ ಸಂಚಾಲಕ ಕಡಂಬೋಡಿ ಮಹಾಬಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಎಸಿಪಿ ಮಹೇಶ್ ಕುಮಾರ್, ಎಎಸ್ ಐ ಕುಶಲ ಮಣಿಯಾಣಿ, ಕಲಾಪೋಷಕ ಪ್ರೇಮ್ ಶೆಟ್ಟಿ ಸುರತ್ಕಲ್ ಶುಭ ಹಾರೈಸಿದರು.
ಯಕ್ಷಮಿತ್ರರು ಸಂಘಟನೆಯ ಅಧ್ಯಕ್ಷ ಜಗದೀಪ್ ಶೆಟ್ಟಿ, ಕಾರ್ಯದರ್ಶಿ ನಾಗರಾಜ್ ಕಡಂಬೋಡಿ, ಕೋಶಾಧಿಕಾರಿ ರಾಜೇಶ್ ಕೆ ಮುಂಚೂರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಮಹೇಶ್ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು. ಕಿರಣ್ ಆಚಾರ್ಯ ಧನ್ಯವಾದವಿತ್ತರು.