ಯುವಶಕ್ತಿ ನಿಜವಾದ ರಾಷ್ಟ್ರಶಕ್ತಿ ಎಂಬ ಘೋಷ ವಾಕ್ಯವನ್ನು ಆಗಾಗ ಉಲ್ಲೇಖಿಸುವ ನಮ್ಮ ನೆಚ್ಚಿನ ಪ್ರಧಾನಮಂತ್ರಿ ಮೋದೀಜಿಯವರ ಮಹಾದಿಚ್ಛೆಗೆ ಬಲ ತುಂಬುವ ಮಹಾನ್ ಕಾರ್ಯನಿರತ ರಾಕೇಶ್ ಅಜಿಲರ ಸಾಧನೆಯ ಕತೆ ನಿಜಕ್ಕೂ ರೋಚನೀಯ. ಅಜಿಲರು ಆರಿಸಿದ ಕ್ಷೇತ್ರ ಹಣ ಸಂಪಾದನೆಯದಲ್ಲ. ಆದರೆ ಅದೆಷ್ಟೋ ರಾಷ್ಟ್ರಪ್ರೇಮಿ ಯುವಕರಿಗೆ ಯೋಗ್ಯ ತರಬೇತಿ ನೀಡಿ NCC ಮತ್ತು ARMY ಗೆ ಆಯ್ಕೆಯಾಗಲು ಬೇಕಾಗುವ ಶಿಸ್ತು, ಆತ್ಮಸ್ಥೈರ್ಯ, ಕಷ್ಟ ಸಹಿಷ್ಣುತೆ, ದೇಹಬಲ ಹಾಗೂ ರಾಷ್ಟ್ರ ಪ್ರೇಮದ ತೇಜಸ್ಸು ತುಂಬುವ ಮಹಾನ್ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದನ್ನು ನೆನೆಸಿಕೊಂಡರೆ ಯಾರಿಗಾದರೂ ಅಭಿಮಾನ ಮೂಡದೇ ಇರದು.
ರಾಕೇಶ್ ಅಜಿಲರು ಕವತ್ತಾರು ಬೈಲಗುತ್ತು ರಮೇಶ್ ಅಜಿಲ ಹಾಗೂ ಪಾಂಡ್ಯಾರು ಬರ್ಪಾಣಿ ಪ್ರಮೀಳಾ ಅಜಿಲ ದಂಪತಿಯರಿಗೆ ಹಿರಿಯ ಪುತ್ರನಾಗಿ ಜನಿಸಿದರು. ಹಾಸನದ ಕಡ್ಲೂರು ಎಂಬಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಮುಂದೆ STDP ಕಟೀಲು ಹಾಗೂ ಪೂರ್ಣ ಪ್ರಜ್ಞ ಅದಮಾರು ಇಲ್ಲಿ ಶಿಕ್ಷಣ ಮುಂದುವರಿಸಿದರು. ಪದವಿ ಪೂರ್ವ ತರಗತಿಯ ಹನ್ನೆರಡನೆ ತರಗತಿಯ ಇತಿಹಾಸ ವಿಷಯದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಗಿಟ್ಟಿಸಿಕೊಂಡರು. ಮುಂದೆ ಸಿದ್ಧವನ ಗುರು ಕುಲ ಮತ್ತು ಉಜಿರೆಯ ಎಸ್.ಡಿ.ಎಮ್ ಕಾಲೇಜು ಮುಖಾಂತರ ಅತ್ಯುತ್ತಮ ಅಂಕಗಳೊಂದಿಗೆ ಪದವಿ ಶಿಕ್ಷಣ ಪೂರೈಸಿದರು.
ಶ್ರೀಯುತರು ರಾಜ್ಯ ಮಟ್ಟದ ಉತ್ತಮ ಎನ್.ಸಿ.ಸಿ. ಕ್ಯಾಡೆಟ್ ಆಗಿ ಗುರುತಿಸಿಕೊಂಡು ಕರ್ನಾಟಕ, ಗೋವಾ ರಾಜ್ಯಗಳ ಪ್ರತಿನಿಧಿ ಸ್ಥಾನದ ಗೌರವ ಹೊಂದಿದ್ದರು. ಗೋಲ್ಡನ್ ಜುಬಿಲಿ ವರ್ಷದಲ್ಲಿ ತನ್ನ ಪ್ರಸ್ತುತಿಯಿಂದ ನವದೆಹಲಿ ಹಾಗೂ ಗಣರಾಜ್ಯೋತ್ಸವ ಪಥ ಸಂಚಲನ ರಾಜಪಥದಲ್ಲಿ ಗೌರವ ಪಡೆದಿದ್ದರು. ಅದೇ ರೀತಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಿಂದ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಎಂಬ ಪುರಸ್ಕಾರವನ್ನು ಮಾನ್ಯ ವೀರೇಂದ್ರ ಹೆಗ್ಗಡೆಯವರ ಕರಕಮಲಗಳಿಂದ ಸ್ವೀಕರಿಸಿದ ಧನ್ಯತೆಯೂ ಇವರಿಗಿದೆ.
ಶಿಕ್ಷಣ ಮುಂದುವರಿಸಿದ ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಹಾಗೂ ಚೆನ್ನೈನ ಇನ್ಸ್ಟಿಟ್ಯೂಟ್ ಆಫ್ ಎಕ್ಸ್ಪೋರ್ಟ್ ಮ್ಯಾನೇಜ್ಮೆಂಟ್ ಮೂಲಕ ಎಕ್ಸ್ಪೋರ್ಟ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಡಿಪ್ಲೊಮಾ ಪಡೆದರು. IIMM ಪುಣೆಯಿಂದ MBA in PM and HR ಪದವಿ ಗಳಿಸಿದ ಬಳಿಕ ಬಲು ಪ್ರತಿಷ್ಠಿತ ಗಾಜಿಯಾಬಾದ್ ಉತ್ತರ ಪ್ರದೇಶ IMT ಯಿಂದ MBA in Strategic Management ವಿಶೇಷ ಪದವಿ ಗಳಿಸಿದ ಧೀಮಂತರು ಅಜಿಲರು. ಇವರ ಸಾಧನೆಯ ಪಥ ಸುದೀರ್ಘ ಹಾಗೂ ರೋಚಕ ಮುಂಬಯಿಯ UCCA ಮುಖಾಂತರ Black Belt Post 3 ಇದರ ಮೂರು ವರ್ಷಗಳ ಸಫಲ ತರಬೇತಿ ಪಡೆದು ಪ್ರತಿಷ್ಠಿತ Un Armed Commando Close Combat Cource ಪೂರೈಸಿದ ಹೆಗ್ಗಳಿಕೆ ಇವರಿಗಿದೆ. ಬಳಿಕ ಪಶ್ಚಿಮ ಮತ್ತು ದಕ್ಷಿಣ ಭಾರತ ವಲಯದ Cafe Coffee Day ವ್ಯವಹಾರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ಅದೇ ರೀತಿ ಡೊಮಿನೋಸ್ ಪಿಜ್ಝ ಮತ್ತು ಡಂಕಿನ್ ಡೋನಟ್ಸ್ ಇಂಡಿಯಾ ಇದರ ಡೆವೆಲಪ್ ಮೆಂಟ್ ಹೆಡ್ ಆಗಿಯೂ ಕಾರ್ಯ ನಿರ್ವಹಿಸಿದರು. ಪ್ರಸ್ತುತ ಭಾರತ ಅಮೆರಿಕ ವ್ಯಾಪಾರ ಒಪ್ಪಂದ ಹೊಂದಿದ Real estate expansion for cult.fit health care pvt Ltd ಸಂಸ್ಥೆಯಲ್ಲಿ ಸೀನಿಯರ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಾ ಇದ್ದಾರೆ.
ಗ್ರಾಮೀಣ ಪ್ರದೇಶದ ಯುವಕರನ್ನು ಮುಖ್ಯ ವಾಹಿನಿಗೆ ತಂದು ಅವರ ಯೋಗ್ಯತೆ ಅನುಸಾರವಾಗಿ ಉತ್ತಮ ಹುದ್ದೆಗಳಿಗೆ ಸೇರ್ಪಡೆಗೊಳಿಸುವ ಉದಾತ್ತ ಕೆಲಸವನ್ನು ಮಾಡುವ ಉದ್ದೇಶದಿಂದ ಉಡುಪಿ ತಾಲೂಕಿನ ಪಡುಬಿದ್ರಿಯಲ್ಲಿ ಆದ್ಯ ಫೌಂಡೇಶನ್ ಎಂಬ ಸರಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿ ಅನೇಕ ಯುವಕರಿಗೆ ತರಬೇತಿ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಯುವಕರಲ್ಲಿ ದೇಶ ಪ್ರೇಮ ಮೂಡಿಸಿ ಯೋಗ್ಯ ನಾಗರೀಕರನ್ನಾಗಿ ರೂಪಿಸುವ ಹೊಣೆ ಈ ಸಂಸ್ಥೆ ಹೊಂದಿದೆ. ಸಾಮಾಜಿಕ ಸೌಹಾರ್ದ ಹಾಗೂ ರಾಷ್ಟ್ರೀಯ ಮನೋಭಾವವನ್ನು ಯುವಕರಲ್ಲಿ ಉದ್ದೀಪನಗೊಳಿಸುವ ಉದ್ದೇಶದಿಂದ ಪ್ರತಿ ವರ್ಷ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು, ದೇಹದಾರ್ಢ್ಯ ಸ್ಫರ್ಧೆ, ಕ್ವಿಜ್ ಪ್ರತಿಭಾ ಸ್ಪರ್ಧೆ, ಕೌಶಲ್ಯ ನೈಪುಣ್ಯ ಜಾಣತನ ಸ್ಪರ್ಧೆಗಳನ್ನು ಏರ್ಪಡಿಸಿ ಯುವಕ ಯುವತಿಯರನ್ನು ಅವರ ಸಾಮರ್ಥ್ಯಗಳಿಗನುಸಾರದ ಉದ್ಯೋಗ ಕಲ್ಪಿಸಿ ಕೊಡುವ ವಿಶೇಷ ಜವಾಬ್ದಾರಿಯನ್ನು ಈ ಸಂಸ್ಥೆ ಹೊಂದಿರುತ್ತದೆ. ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿ ರೂಪಿಸುವ ಉದ್ದೇಶ ಹೊಂದಿದ ಈ ಸಂಸ್ಥೆ ರಾಷ್ಟ್ರದ ಉನ್ನತ ನಾಯಕರ ಗಮನಕ್ಕೂ ಬಂದಿದ್ದು ಇವರ ಈ ರಾಷ್ಟ್ರಪ್ರೇಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ನವ್ಯಾ ಎಂಬ ತರುಣಿಯೊಂದಿಗಿನ ವಿವಾಹ ಬಂಧದಿಂದ ಶೌರ್ಯಾಧ್ಯ ಮತ್ತು ಶಾರಾಧ್ಯ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದು ನೆಮ್ಮದಿಯ ಸಾಂಸಾರಿಕ ಜೀವನ ನಡೆಸುತ್ತಿರುವ ಅಜಿಲರ ಸಾಧನೆ ಮುಂದಿನ ಯುವ ಪೀಳಿಗೆಗೆ ಮಾದರಿಯಾಗಬಲ್ಲುದು. ಅಜಿಲರ ಸಾಧನೆಯ ಮಿತಿ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗಿ ಪ್ರವಹಿಸಲಿ. ತನ್ಮೂಲಕ ರಾಷ್ಟ್ರ ಪ್ರಗತಿಯ ಮಂತ್ರದ ಸೇವಾಭಾವ ಸಾರ್ಥಕ್ಯ ಹೊಂದಲಿ ಎಂಬ ಆಶಯದ ಜೊತೆಗೆ ಇವರಿಗೆ ಕುಟುಂಬಿಕರಿಗೆ ಆಯುರಾರೋಗ್ಯ ಭಾಗ್ಯ, ನೆಮ್ಮದಿ, ಸಮೃದ್ಧಿ ಸದಾ ಇರಲಿ ಎಂದು ಸಮಸ್ತ ಸಮಾಜ ಬಾಂಧವರ ಪರವಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಸರ್ವರಿಗೂ ಶುಭವಾಗಲಿ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು