ಚುಕ್ಕಿ ಸಂಕುಲ ಆಯೋಜಿಸಿದ ಡಾ. ಕರುಣಾಕರ ಶೆಟ್ಟಿ ಪಣಿಯೂರು (10 ಕೃತಿಗಳು), ಪಾಂಗಾಳ ವಿಶ್ವನಾಥ್ ಶೆಟ್ಟಿ (3 ಕೃತಿಗಳು) ಹಾಗೂ ಶ್ರುತಿ ಅಭಿಷೇಕ್ ಶೆಟ್ಟಿ (1 ಕೃತಿ) ಇವರ ಒಟ್ಟು14 ಕೃತಿಗಳು ಡಿಸೆಂಬರ್ 30 ರಂದು ಥಾಣೆ ಪೂರ್ವದ ವುಡ್ ಲ್ಯಾಂಡ್ ರೆಟ್ರೀಟ್ ನಲ್ಲಿ ಬಿಡುಗಡೆಗೊಂಡವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಚಂದ್ರಹಾಸ್ ಶೆಟ್ಟಿ ವಹಿಸಿದ್ದರು. ಗೌರವ ಅತಿಥಿಗಳಾಗಿ ಆನಂದ್ ಶೆಟ್ಟಿ ಎಕ್ಕಾರು, ಡಿ. ಜಿ. ಬೋಳಾರ್ ಹಾಗೂ ನ್ಯಾಯವಾದಿ ಪದ್ಮನಾಭ ಶೆಟ್ಟಿ ಭಾಗವಹಿಸಿದ್ದರು. ಮುಂಬಯಿಯಲ್ಲಿ ಒಂದೇ ವೇದಿಕೆಯಲ್ಲಿ 14 ಕೃತಿಗಳು ಬಿಡುಗಡೆಗೊಳ್ಳುತ್ತಿರುವುದು ಮುಂಬಯಿ ಸಾಹಿತ್ಯ ಲೋಕಕ್ಕೆ ಒಂದು ಹೆಮ್ಮೆಯ ಸಂಗತಿ.
ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಚಂದ್ರಹಾಸ ಶೆಟ್ಟಿ ಅವರು ಸಾಹಿತ್ಯ ಲೋಕ ಒಂದು ಸುಂದರ ಲೋಕ. ಸಾಹಿತಿ ತನ್ನ ಅನುಭವವನ್ನು ಅಕ್ಷರ ರೂಪದಲ್ಲಿ ಲೋಕಕ್ಕೆ ಉಣಬಡಿಸುತ್ತಾನೆ. ಆಧುನಿಕ ಯುಗದಲ್ಲಿ ಸಾಹಿತಿಗಳ ಜವಾಬ್ದಾರಿ ದೊಡ್ಡದು ಎಂದು ಅಭಿಪ್ರಾಯಪಟ್ಟರು. ಕವಿಗಳು ಸಮಾಜವನ್ನು ಸುಧಾರಿಸುವವರು ಎಂಬ ಅನಿಸಿಕೆಯನ್ನು ಡಿ. ಜಿ. ಬೋಳಾರ್ ಅವರು ಹಂಚಿಕೊಂಡರು. ಆನಂದ ಶೆಟ್ಟಿ ಅವರು ಮಾತನಾಡುತ್ತಾ ಕವಿಗಳು ಮತ್ತು ಸಾಹಿತಿಗಳು ಸಜ್ಜನರು, ಸಮಾಜಕ್ಕೆ ಅವರ ಅಗತ್ಯ ತುಂಬಾ ಇದೆ ಎಂಬ ಆಶಯವನ್ನು ವ್ಯಕ್ತ ಪಡಿಸಿದರು. ನ್ಯಾಯವಾದಿ ಪದ್ಮನಾಭ ಶೆಟ್ಟಿ ಮಾತಾನಾಡುತ್ತ ಇಂದು ಲೋಕಾರ್ಪಣೆಗೊಂಡ ಸಾಹಿತಿಗಳ ಕೃತಿ ವಿಶ್ವ ವ್ಯಾಪಿಯಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಂಡ 14 ಕೃತಿಗಳ ಪರಿಚಯವನ್ನು ಮಾಡಿಕೊಡಲಾಯಿತು. ಡಾ. ಜಿ. ಪಿ.ಕುಸುಮ ಅವರು ಬೋಗನ್ ವಿಲ್ಲಾ ಬಾಳೊಂದು ಉಯ್ಯಾಲೆ ಹಾಗೂ ಓದಿದ್ದು ಹೊಳೆದದ್ದು ಈ ಕೃತಿಗಳನ್ನು ಪರಿಚಯಿಸಿದರು. ಅಶೋಕ್ ವಳದೂರು ಮಣ್ಣಿನ ಕರೆ ಹಾಗೂ ದೂರದ ಬೆಟ್ಟ ಕೃತಿಗಳ ಸಾರವನ್ನು ತಿಳಿಸಿದರು. ಡಾ. ದಾಕ್ಷಾಯಿಣಿ ಯಡಹಳ್ಳಿ ಕಾರಂತ ಪ್ರೇಮಚಂದ್ ಅನುಸಂಧಾನ, ವಿಚಾರ ವಿಮರ್ಶೆ – 4 ಹಾಗೂ ಅನಾವರಣ ಈ ಕೃತಿಗಳ ಒಳನೋಟಗಳನ್ನು ತೆರೆದಿಟ್ಟರು. ಸವಿತಾ ಶೆಟ್ಟಿ ಅವರು ಸಾವಿರ ನೆನಪಿನ ಗೂಡು ಈ ಕೃತಿಯನ್ನು ಪರಿಚಯಿಸಿದರು. ಲತಾ ಸಂತೋಷ ಶೆಟ್ಟಿ ಮಾತು ಮುತ್ತಾದಾಗ ಹಾಗೂ ಧರೆಗಿಳಿದ ಸೂರ್ಯ ಕೃತಿಗಳನ್ನು ಪರಿಚಯಿಸಿದರು. ಮಹೇಶ್ ಹೆಗ್ಡೆ ಅವರು LIFE TOOLS, ಪಾಂಗಾಳದ ಪಿಂಗಾರ ಹಾಗೂ ಪ್ರದೀಪ ಅನಾವರಣ ಕೃತಿಗಳ ಒಳನೋಟವನ್ನು ಪ್ರಸ್ತುತ ಪಡಿಸಿದರು.
ಕೃತಿಕಾರರಾದ ಡಾ. ಕರುಣಾಕರ ಶೆಟ್ಟಿ ಪಣಿಯೂರು ಮಾತನಾಡುತ್ತಾ ತನಗೆ ಸಾಹಿತ್ಯ ಕ್ಷೇತ್ರದಲ್ಲಿ ನೆರವಾದವರನ್ನು ನೆನಪಿಸಿದರು ಹಾಗೂ ಹತ್ತು ಕೃತಿಗಳನ್ನು ಲೋಕಾರ್ಪಣೆಗೊಳಿಸಲು ಸಹಕರಿಸಿದ ಎಲ್ಲರನ್ನು ನೆನಪಿಸಿ, ಅವರಿಗೆ ವಂದನೆಗಳನ್ನು ಸಲ್ಲಿಸಿದರು. ಕೃತಿಕಾರ ಪಾಂಗಾಳ ವಿಶ್ವನಾಥ ಶೆಟ್ಟಿ ಮಾತನಾಡಿ ಆಧುನಿಕ ವಾಟ್ಸಪ್ ಯುಗದಲ್ಲಿ ಪುಸ್ತಕಗಳನ್ನು ಓದುವುದು ಇನ್ನೂ ಹೆಚ್ಚಾಗಬೇಕು. ತಮ್ಮ ಕೃತಿಗಳನ್ನು ಓದಿ ಮೆಚ್ಚುಗೆಗಳಿಸಿದ ಎಲ್ಲರನ್ನು ನೆನೆದು ಅವರಿಗೆ ವಂದನೆಯನ್ನು ಸಲ್ಲಿಸಿದರು. ಇಂಗ್ಲಿಷ್ ಕಾದಂಬರಿಕಾರರಾದ ಶೃತಿ ಅಭಿಷೇಕ್ ಶೆಟ್ಟಿ ಮಾತನಾಡಿ ತನ್ನ ಕಾದಂಬರಿಯ ಕೆಲವು ಸಾಲುಗಳನ್ನು ವಾಚಿಸಿದರು. ಕೃತಿ ಲೋಕಾರ್ಪಣೆಯ ಕಾರ್ಯಕ್ರಮಗಳನ್ನು ಹಿರಿಯ ಸಾಹಿತಿ ಕವಿ ನಾಟಕಕಾರ ಸಾ. ದಯಾ ನಿರೂಪಿಸಿ ವಂದಿಸಿದರು.
ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಉದಯೋನ್ಮುಖ ಕವಿಗಳು ಭಾಗವಹಿಸಿ ಸಾಹಿತ್ಯ ಸಂಜೆಯ ಮೆರುಗನ್ನು ಹೆಚ್ಚಿಸಿದರು. ಕವಿ ಸುಧಾಕರ್ ಆಲೂರ್ ಆಯುಷ್ಯ ಕವಿತೆಯನ್ನು ವಾಚಿಸಿದರು. ಹರಿಣಿ ಶೆಟ್ಟಿಯವರು ಬಾಲೆ ಕೃಷ್ಣ ಎಂಬ ತುಳು ಕವಿತೆಯನ್ನು, ಕೆ. ಎನ್. ಸತೀಶ್ ನಾವು ಭಾರತೀಯರು ಕವಿತೆಯನ್ನು, ದೀಪ ಹರೀಶ್ ಶೆಟ್ಟಿ ಅವರು ಕವಿತೆ ಎಂದರೆ ಎಂಬ ಕವಿತೆಯನ್ನು, ರಜನಿ ತೋಳಾರ್ ಹೊಸವರ್ಷ ಕವಿತೆಯನ್ನು, ಸೋಮನಾಥ್ ಕರ್ಕೇರ ಅವರು ತಮ್ಮ ಚುಟುಕು ಸನ್ಮಾನ ಹಾಗೂ ಇತರ ಚಟಾಕಿಗಳನ್ನು ಪ್ರಸ್ತುತ ಪಡಿಸಿ ಪ್ರೇಕ್ಷಕರಲ್ಲಿ ನಗೆ ಚಿಮ್ಮಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಕರುಣಾಕರ್ ಶೆಟ್ಟಿ ಪಣಿಯೂರು ವಹಿಸಿದ್ದರು. ತಮ್ಮ ಅಧ್ಯಕ್ಷಿಯ ಮಾತಿನಲ್ಲಿ, ಅರ್ಥಪೂರ್ಣವಾದ ಕವಿತೆಗಳನ್ನು ಸಾದರಪಡಿಸಿದರು. ಹೆಚ್ಚಿನವರು ಉದಯೋನ್ಮುಖ ಕವಿಗಳು ಎನ್ನುತ್ತಾ ಅವರ ಮುಂದಿನ ಕಾವ್ಯ ದಾರಿಗೆ ಶುಭವನ್ನು ಹಾರೈಸಿದರು ಹಾಗೂ ತನ್ನ ತುಳು ಕವಿತೆ ‘ನೂದು ವರ್ಷ ಬದುಕುಲ’ ವನ್ನು ಪ್ರಸ್ತುತ ಪಡಿಸಿ, ಭಾಗವಹಿಸಿದ ಎಲ್ಲಾ ಕವಿಗಳಿಗೆ ಕೃತಜ್ಞತೆಯನ್ನು ಅರ್ಪಿಸಿದರು. ಕವಿಗೋಷ್ಠಿಯನ್ನು ಕವಿ ಗೋಪಾಲ್ ತ್ರಾಸಿಯವರು ನಿರೂಪಿಸಿ ವಂದಿಸಿದರು.