ಪುರಾಣದ ಸತ್ವ ಸಾರುತ್ತಾ, ಭಕ್ತಿ ಭಾವನೆ ಪಸರಿಸುತ್ತಾ, ಮಾನವೀಯ ಹಾಗೂ ಕೌಟುಂಬಿಕ ಮೌಲ್ಯದ ಸಾರ ಹೆಚ್ಚಿಸುವ ಚಲಿಸುವ ವಿಶ್ವವಿದ್ಯಾಲಯ ಯಕ್ಷಗಾನ. ಕಲೆ ಕಾಸು, ಕಾಲಯಾಪನೆಗೆ ಹುಟ್ಟಿಕೊಂಡಿರುವ ಹರಕೆ, ಡೇರೆ ಮೇಳವಾದರೂ ಸಹ ಸಾರುವುದು ಮಾತ್ರ ಸನಾತನ ಸಂಸ್ಕೃತಿಯ ಮೌಲ್ಯ. ಗಂಡು ಕಲೆಯೆನಿಸಿದ ಯಕ್ಷಗಾನ ರಂಗದಲ್ಲಿ ದುಡಿದವರು ಅದೆಷ್ಟೊ ಮಂದಿ. ಕಲೆಯ ಕಂಪನ್ನು ಸೂಸುತ್ತಾ, ಪುರಾಣದ ಸತ್ವವನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಬಯಲಾಟ ಅಥವಾ ಡೇರೆ ಮೇಳಗಳ ಕಲಾವಿದರ ಪಾತ್ರ ಹಿರಿದು. ಅನೇಕ ಕಲಾವಿದರು ಯಕ್ಷಗಾನ ರಂಗದಲ್ಲಿ ಅವಿರತವಾಗಿ ದುಡಿದು ಯಕ್ಷಗಾನದಿಂದಲೆ ಬದುಕು ಕಟ್ಟಿಕೊಂಡ ಅನೇಕ ಕಲಾ ಕುಸುಮಗಳಿದ್ದಾರೆ.
ನಿಜ ಜೀವನದಲ್ಲಿ ಅನೇಕ ನೋವುಗಳಿದ್ದರೂ ಸಹ ಅದನ್ನು ರಂಗದಲ್ಲಿ ತೋರಗೊಡದೆ, ಜೀವನ ಮೌಲ್ಯ, ನವರಸಾದಿಗಳನ್ನು ಮೇಳವಿಸಿ ಮಹಾನ್ ಪುರುಷರ ಜೀವನದೊಳಗೆ ಪರಾಕಾಯ ಪ್ರವೇಶ ಮಾಡಿ, ತಾನು ತಾನಾಗಿರದೆ, ಕಥಾವಸ್ತುವಿನ ಪ್ರಮುಖ ಪಾತ್ರವಾಗಿ, ಮನರಂಜನೆ ನೀಡುವಲ್ಲಿ ಸತತ ಪ್ರಯತ್ನ ಮಾಡುವ ಗುಣ ನೈಜ ಕಲಾವಿದನದಾಗಿದೆ. ಅಂಥ ಬಂಟ ಸಮುದಾಯದ ಕಲಾವಿದರುಗಳಿಗೆ ಸಮುದಾಯದ ಸಂಸ್ಥೆ ಗೌರವ ಸೂಚಿಸಲು ವೇದಿಕೆ ನಿರ್ಮಾಣ ಮಾಡಿದೆ ಎಂದಾಗ ಸಂತೋಷ ವಾಗದೆ ಇರುತ್ತದೆಯೆ!! ಬಾಹ್ಯ ಪ್ರಪಂಚದಲ್ಲಿ ಸಮಾಜದ ಬಂಧುಗಳು ಹೊಗಳಿದರೂ, ಮನೆಯಲ್ಲಿ ತಂದೆ ತಾಯಿ ಸಂತೋಷ ವ್ಯಕ್ತಪಡಿಸಿದರೆ ಆಗುವ ಸಂತಸ ನೂರ್ಮಡಿಗೂ ಮಿಗಿಲು. ಆ ರೀತಿಯ ಸಂತಸದ ಅನುಭಾವ ಬಡಗುತಿಟ್ಟು ಬಂಟ ಕಲಾವಿದರದಾಗಿದೆ.
ಕಲಾವಿದರನ್ನು ಒಗ್ಗೂಡಿಸುವುದು ಒಂದೇ! ಕಪ್ಪೆಯನ್ನು ಹಿಡಿದು ತುಲಾಭಾರ ಮಾಡುವುದು ಒಂದೇ!!- ಇದು ಕಾರ್ಯದೊತ್ತಡ ಅಥವಾ ವೃತ್ತಿ ಮಾತ್ಸರ್ಯ!ಇರಬಹುದಾದರೂ ಅದರ ವಿಮರ್ಶೆ ಈಗ ಅಪ್ರಸ್ತುತ. ಆದರೂ ವಾಡಿಕೆಯ ಮಾತನ್ನು ಅಲ್ಲಗಳೆದು ಕಲಾವಿದರನ್ನು ಒಗ್ಗೂಡಿಸುತ್ತೇವೆ ಎಂದು ಪಣತೊಟ್ಟವರು ಕುಂದಾಪುರ ಯುವ ಬಂಟರ ಸಂಘ.Leadership is an action, not a position.” ಸಂಸ್ಥೆಯಲ್ಲಿನ ನಾಯಕತ್ವ ನಮ್ಮ ಪಾಲಿಗೆ ಕೇವಲ ಹುದ್ದೆಯಲ್ಲ! ಅದು ನಾವು ಮಾಡುವ ಕ್ರಿಯೆಯನ್ನು ಅವಲಂಬಿಸಿದೆ ಎನ್ನುವುದನ್ನು ಸಂಘದ ಸರ್ವ ಸದಸ್ಯರು ತೋರ್ಪಡಿಸಿದ್ದಾರೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಂದಾಪುರ ತಾಲೂಕು ಯುವ ಬಂಟರ ಸಂಘ ಹಮ್ಮಿಕೊಂಡ ಬಡಗುತಿಟ್ಟಿನ ಬಂಟ ಕಲಾವಿದರಿಂದ ಬಂಟರ ಯಕ್ಷ ಸಂಭ್ರಮ ನಾಳೆಯ ದಿನ ಕುಂದಾಪುರ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಬಿ ಉದಯ ಕುಮಾರ ಶೆಟ್ಟಿ ಗೌರವಾಧ್ಯಕ್ಷತೆ, ಡಾ. ಅಂಪಾರು ನಿತ್ಯಾನಂದ ಶೆಟ್ಟಿಯವರ ಅಧ್ಯಕ್ಷತೆ ಹಾಗೂ ಸರ್ವ ಸದಸ್ಯರು ಮತ್ತು ಕಾರ್ಯಕ್ರಮದ ಸಂಚಾಲಕರಾಗಿ ಸುಕುಮಾರ ಶೆಟ್ಟಿ ಕಮಲಶಿಲೆ ಇವರ ಸಂಘಟನಾತ್ಮಕ ಶ್ರಮದಿಂದ ಬಡಗು ತಿಟ್ಟಿನ ಬಂಟ ಕಲಾವಿದರಿಗೆ ವೇದಿಕೆ ನಿರ್ಮಾಣ ಮಾಡಿರುವುದು ಶ್ಲಾಘನೀಯ. ನಾಳೆ ಮಧ್ಯಾಹ್ನ ೨ ರಿಂದ ಕುಂದಾಪುರ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಸಮುದಾಯದ ಹಿರಿಯ ಕಲಾವಿದರು, ಯಕ್ಷ ಸಾಹಿತಿಗಳು, ಸಂಘಟಕರಿಗೆ ಬಂಟ ಯಕ್ಷ ಭೂಷಣ ಪ್ರಶಸ್ತಿ ಹಾಗೂ ಕಲಾವಿದರಿಗೆ ಗೌರವ ಸಮ್ಮಾನ ನಡೆಯಲಿದೆ. ನಂತರ ಆಯ್ದ ಕಲಾವಿದರಿಂದ ಮಾಯಾಪುರಿ, ವೀರಮಣಿ ಹಾಗೂ ಅಭಿಮನ್ಯು ಕಾಳಗ ಎನ್ನುವ ಪೌರಾಣಿಕ ಆಖ್ಯಾನ ಪ್ರದರ್ಶನಗೊಳ್ಳಲಿದೆ.
ಕಾಲಕ್ಕೆ ತಕ್ಕಂತೆ ಎಂತಹ ಬದಲಾವಣೆಗಳಾದರೂ ಸಹ ಸಿದ್ದ ಶೈಲಿಗೆ ಹಾಗೂ ಅದರ ನಿಯಮಿತವಾದ ಚೌಕಟ್ಟಿಗೆ ಬದ್ದವಾಗಿರಬೇಕೆ ಹೊರತು ಅವುಗಳನ್ನು ಅತಿಕ್ರಮಿಸಿ ಅಲ್ಲ. ಯಕ್ಷಗಾನದ ಸಂಪ್ರದಾಯ, ರೀತಿ ನೀತಿ ನಿಯಮಗಳನ್ನು ಪಾಲಿಸಿ, ಬಾನಿನೆತ್ತರಕ್ಕೆ ಏರಿಸುವ ಗುರಿ ಪ್ರಸಂಗಕರ್ತರ ಮತ್ತು ಕಲಾವಿದರ ಧ್ಯೇಯವಾಗಬೇಕು ಎನ್ನುವ ಅಂಶವನ್ನು ಮನಗಾಣಬೇಕು. ಸಂಗತವಲ್ಲದ ಮೌಲ್ಯ ಕೈಬಿಟ್ಟು, ಸಂಗತವಾದ ಜೀವನಮೌಲ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡು ಯಕ್ಷಗಾನದ ಕಂಪನ್ನು ದಿಗಂತದೆಡೆಗೆ ಸಾಗಿಸುವಂತಾಗಲಿ. ಬಂಟ ಕಲಾವಿದರುಗಳಿಗೂ ಗೌರವದ ಜೀವನವಿದೆ ಎನ್ನುವುದನ್ನು ಕುಂದಾಪುರ ಯುವ ಬಂಟರ ಸಂಘ ತೋರಿಸಿದೆ. ಅವರಿಂದ ಇಂಥ ಇನ್ನಷ್ಟು ಪ್ರೋತ್ಸಾಹದಾಯಕ ಕಾರ್ಯಕ್ರಮ ಮೂಡಿಬರಲಿ ಎನ್ನುವ ಆಶಯದೊಂದಿಗೆ. ಪತ್ರಕರ್ತನಾಗಿ ನನಗೆ ತೋಚಿದ್ದನ್ನು ಗೀಚಿದೆ!ಕಲಾವಿದನಾಗಿ ನಾಳೆ ದುಶ್ಯಾಸನನಾಗಿ ಕಾಣಿಸಿಕೊಳ್ಳುವೆ!!
ಸಂದೇಶ್ ಶೆಟ್ಟಿ ಆರ್ಡಿ-ಕಲಾವಿದ, ಪತ್ರಕರ್ತ