ಐಕ್ಯತೆ, ಒಗ್ಗಟ್ಟು ಮತ್ತು ಏಕತೆಯಿಂದ ಕೂಡಿಕೊಂಡು ಸಂಘಟನೆಗಳು ಆಯೋಜಿಸುವ ಯಾವುದೇ ರೀತಿಯ ಕಾರ್ಯವಿರಲಿ ಅದರಲ್ಲಿ ಯಶಸನ್ನು ಗಳಿಸಲು ಸಾಧ್ಯ. ಪರಸ್ಪರ ಚರ್ಚಿಸಿ ವಿಮರ್ಶೆ ಮಾಡುವ ಮೂಲಕ ಸಂಘಟನಾತ್ಮಕವಾಗಿ ಮತ್ತು ಸಮಾಜಮುಖಿಯಾಗಿ ಕೈಗೊಳ್ಳುವ ಕಾರ್ಯ ಯೋಜನೆಗಳು ಕೈಗೂಡಿದಾಗ ಸಂಘಟನೆಗಳು ಮತ್ತಷ್ಟು ಬಲಗೊಳ್ಳುತ್ತದೆ. ಸಮಾನ ಮತ್ತು ಸಶಕ್ತ ಸಮಾಜವನ್ನು ನಿರ್ಮಿಸಲು ಇಂತಹ ಮೌಲ್ಯಯುತವಾದ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಕ್ರೀಡೆ, ಕಲೆ, ಧಾರ್ಮಿಕ, ಸಾಮಾಜಿಕ, ಅಥವಾ ಇನ್ನಿತರ ಯಾವುದೇ ರೀತಿಯ ಕಾರ್ಯಕ್ರಮಗಳಲ್ಲಿ ಸಮೂಹವಾಗಿ ಮನಸ್ಸುಗಳು ಒಂದುಗೂಡಿದಾಗ ಬಲವರ್ಧನೆಯಾಗುತ್ತದೆ. ಕ್ರೀಡೆ ಅಥವಾ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಮೂಲಕ ಸ್ವಾಭಿಮಾನ, ನೈತಿಕತೆ, ಧೈರ್ಯ, ಶಾಂತಿ, ಮತ್ತು ಸಂತೋಷವನ್ನು ಪ್ರಸಾರ ಮಾಡುವ ಮೂಲಕ ಸಹಬಾಳ್ವೆಯನ್ನು ಬೆಂಬಲಿಸಲು ಇಂತಹ ಕೂಟಗಳ ಆಯೋಜನೆ ಬಹಳ ಮುಖ್ಯ ಮತ್ತು ಮಾನವ ಸಂಪನ್ಮೂಲ ಕ್ರೋಡಿಕರಿಸುವಲ್ಲಿ ವೇದಿಕೆಗಳಾಗುತ್ತವೆ. ಪುಣೆ ತುಳುಕೂಟ ಸುಮಾರು 25 ವರ್ಷಗಳಿಂದ ಪುಣೆ ತುಳುವರ ಸಂಘಟನೆಯಾಗಿ ಉತ್ತಮ ಕಾರ್ಯ ಮಾಡುತ್ತಿದ್ದು, ಯುವ ವಿಭಾಗದ ವತಿಯಿಂದ ಆಯೋಜಿಸಿರುವ ಈ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ತುಳುವರಿಗೆ ಮತ್ತು ಯುವ ಜನತೆಗೆ ಉತ್ತಮ ಪ್ರೋತ್ಸಾಹದಾಯಕ ಅವಕಾಶ ಒದಗಿಸಿಕೊಟ್ಟಿದ್ದಾರೆ. ಇದು ಮುಂದೆಯೂ ಇನ್ನಷ್ಟು ಉತ್ತಮ ರೀತಿಯಲ್ಲಿ ಮುಂದುವರಿಯಲಿ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ನುಡಿದರು.
ಪುಣೆ ತುಳುಕೂಟದ ಯುವ ವಿಭಾಗದ ವತಿಯಿಂದ ಡಿ 17ರಂದು ಪುಣೆಯ ವಡಗಾಂವ್ ನಹತಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಪುಣೆಯ ತುಳುವರಿಗಾಗಿ ಆಯೋಜಿಸಿದ್ದ ಬ್ಯಾಡ್ಮಿಂಟನ್ ಪಂದ್ಯಾಟದ ಅತಿಥಿಯಾಗಿ ಆಗಮಿಸಿದ್ದ ಸಂತೋಷ್ ಶೆಟ್ಟಿಯವರು ಮಾತನಾಡಿ ಎಲ್ಲರನ್ನು ಒಂದೇ ವೇದಿಕೆಯಡಿಯಲ್ಲಿ ಸೇರಿಸಿ ಸಮಾನ ರೀತಿಯಲ್ಲಿ ಸದವಕಾಶವನ್ನು ನೀಡಿ ತುಳುವರ ಶ್ರೇಯೋಭಿವೃದ್ಧಿಗೆ ತುಳುಕೂಟ ತುಂಬಾ ಶ್ರಮಿಸುತ್ತಾ ಇದೆ. ಪುಣೆ ಬಂಟರ ಸಂಘವು ಕೂಡ ತುಳುವರ ಕಾರ್ಯಕ್ರಮಗಳಿಗೆ ಮತ್ತು ತುಳುಕೂಟಕ್ಕೆ ಪ್ರೋತ್ಸಾಹಕವಾಗಿ ಸದಾ ನಿಮ್ಮೊಂದಿಗೆ ಇರುತ್ತದೆ ಎಂದರು ಹಾಗೂ ಈ ಸಂದರ್ಭದಲ್ಲಿ ಅಗಲಿದ ಸಮಾಜ ರತ್ನ, ಮಹಾದಾನಿ, ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿಯವರ ಬಗ್ಗೆ ದುಃಖ ವ್ಯಕ್ತಪಡಿಸಿ ಮೌನ ಪ್ರಾರ್ಥನೆ ಸಲ್ಲಿಸಿದರು.
ಪುಣೆ ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರುರವರ ಅಧ್ಯಕ್ಷತೆಯಲ್ಲಿ ನಡೆದ ಈ ಉದ್ಘಾಟನಾ ಸಮಾರಂಭದಲ್ಲಿ ತುಳುಕೂಟದ ಉಪಾಧ್ಯಕ್ಷರುಗಳಾದ ಮಾಧವ ಶೆಟ್ಟಿ, ಉದಯ್ ಶೆಟ್ಟಿ ಕಳತ್ತೂರು, ಬಂಟರ ಸಂಘದ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಗಣೇಶ್ ಪೂಂಜಾ ಕಾರ್ಯಾಧ್ಯಕ್ಷರು ಉತ್ತರ ಪ್ರಾದೇಶಿಕ ಸಮಿತಿ ಬಂಟರ ಸಂಘ ಪುಣೆ, ಪುಣೆ ತುಳುಕೂಟದ ಪ್ರ. ಕಾರ್ಯದರ್ಶಿ ರಾಜಾರಾಂ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್. ದೇವಾಡಿಗ, ಕ್ರೀಡಾ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ, ಕ್ಯಾಟರಿಂಗ್ ವಿಭಾಗದ ಕಾರ್ಯಾಧ್ಯಕ್ಷ ಯಶವಂತ್ ಶೆಟ್ಟಿ ಉಳಾಯಿಬೆಟ್ಟು, ಮಹಿಳಾ ಉಪ ಕಾರ್ಯಾಧ್ಯಕ್ಷೆ ಶಶಿಕಲಾ ಶೆಟ್ಟಿ, ಕಾರ್ಯದರ್ಶಿ ನಯನಾ ಶೆಟ್ಟಿ, ಮಹಿಳಾ ಕ್ರೀಡಾ ಕಾರ್ಯಾಧ್ಯಕ್ಷೆ ರಂಜಿತಾ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿಜಿತ್ ಶೆಟ್ಟಿ, ಯುವ ಮಹಿಳಾ ಕಾರ್ಯಾಧ್ಯಕ್ಷೆ ಶ್ರುತಿ ಜೆ. ಶೆಟ್ಟಿ, ಯುವ ವಿಭಾಗ ಪ್ರದಾನ ಸಮನ್ವಯಕರಾದ ಸುಮಿತ್ ಶೆಟ್ಟಿಯವರು ವೇದಿಕೆಯಲ್ಲಿದ್ದರು. ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಈ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಉದ್ಘಾಟಿಸಿದರು. ಯುವ ವಿಭಾಗದ ಅಭಿಜಿತ್ ಶೆಟ್ಟಿ, ಶ್ರುತಿ ಶೆಟ್ಟಿ ಮತ್ತು ಪದಾಧಿಕಾರಿಗಳು ಅತಿಥಿ ಗಣ್ಯರನ್ನು ಮತ್ತು ವೇದಿಕೆಯಲ್ಲಿದ್ದ ಪ್ರಮುಖರನ್ನು ಶಾಲು ಫಲಪುಷ್ಪ ನೀಡಿ ಸತ್ಕರಿಸಿದರು.
ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಮತ್ತು ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಮತ್ತಿತರರು ಶಟಲ್ ಬ್ಯಾಡ್ಮಿಂಟನ್ ಆಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಪ್ರಿಯಾ ಎಚ್. ದೇವಾಡಿಗ ಮತ್ತು ಉದಯ್ ಶೆಟ್ಟಿ ಕಳತ್ತೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ, ವರದಿ : ಹರೀಶ್ ಮೂಡಬಿದಿರೆ