ಒಬ್ಬನೇ ವ್ಯಕ್ತಿಯಲ್ಲಿ ಅನೇಕ ಪ್ರತಿಭಾ ಸಾಮರ್ಥ್ಯಗಳು ಮೇಳವಿಸಿದರೆ ಆತ ಸಮಾಜದಲ್ಲಿ ಭಿನ್ನ ಪಂಕ್ತಿಯಲ್ಲಿ ಗೌರವಿಸಲ್ಪಡುತ್ತಾನೆ. ಅಂಥವರಲ್ಲಿ ವಿರಳಾತಿ ವಿರಳ ವ್ಯಕ್ತಿ ವಿಶೇಷ ನಮ್ಮ ಅಶೋಕ ಪಕ್ಕಳರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಸನ್ನಿಧಿ ಗುತ್ತು ಮನೆತನದ ಸಂಜಾತ ಎಂ ಎ ಪಕ್ಕಳ ಮತ್ತು ಶ್ರೀಮತಿ ನಾಗಮ್ಮ ಪಕ್ಕಳ ದಂಪತಿಯರಿಗೆ ಮೂರನೆಯ ಹಾಗೂ ಕಿರಿಯ ಮುದ್ದಿನ ಮುದ್ದು ಮುದ್ದಾದ ಮಗನಾಗಿ ಜನಿಸಿದವರು ಅಶೋಕ್. ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿ ಮುಗಿಸಿದ ಬಳಿಕ ಜೈನಕಾಶಿ ಎಂಬ ಪ್ರಸಿದ್ಧಿ ಪಡೆದ ಮೂಡಬಿದಿರೆಯ ಧವಳ ಕಾಲೇಜಿನ ಮುಖಾಂತರ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪೂರೈಸಿಕೊಂಡರು. ತನ್ನ ಶಾಲಾ ಕಾಲೇಜು ದಿನಗಳಲ್ಲಿ ದೈನಂದಿನ ಪಾಠ ವಿಷಯಗಳ ಜೊತೆಗೆ ಪಾಠೇತರ ಚಟುವಟಿಕೆಗಳಲ್ಲಿ ಸದಾ ಮುಂದಿದ್ದು ಶಿಕ್ಷಕರ ಪ್ರಾಧ್ಯಾಪಕರ ಅಚ್ಚು ಮೆಚ್ಚಿನ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದರು.
ಮುಂದೆ ಈ ಕನಸು ಕಂಗಳ ಯುವಕ ಹಿರಿಯಣ್ಣನ ಕರೆಯನ್ನು ಗೌರವಿಸಿ ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬಯಿಗೆ ಆಗಮಿಸಿ ಅಣ್ಣನ ಜೊತೆಗೆ ಹೊಟೇಲ್ ಉದ್ಯಮದ ಜೊತೆ ತನ್ನನ್ನು ತೊಡಗಿಸಿಕೊಂಡು ಆ ಬಗ್ಗೆ ವಿಶೇಷ ಅನುಭವ ಪಡೆದು ಈಗಲೂ ಹೊಟೇಲ್ ಉದ್ಯಮದೊಂದಿಗೆ ಗುರುತಿಸಿಕೊಂಡಿದ್ದಾರೆ. ಆದರೆ ಪ್ರವೃತ್ತಿಯಲ್ಲಿ ತನ್ನ ಪ್ರೀತಿಯ ಹವ್ಯಾಸಗಳಾದ ನಿರೂಪಣೆ, ರಂಗಭೂಮಿ, ಯಕ್ಷಗಾನಗಳಲ್ಲಿ ವಿಭಿನ್ನ ಪಾತ್ರ ನಿರ್ವಹಣೆ, ಕಾರ್ಯಕ್ರಮ ಸಂಯೋಜನೆ, ನಿರ್ವಹಣೆ, ಸಾಹಿತ್ಯ ಬರಹಗಳಲ್ಲಿ ತೊಡಗಿಸಿಕೊಂಡು ತನ್ನ ಹರೆಯ ತನಗಾಗಲಿ ಪರರಿಗಾಗಲಿ ಅರಿವಿಗೆ ಬಾರದ ರೀತಿಯಲ್ಲಿ ಜೀವನೋತ್ಸಾಹ ಪುಷ್ಕಳತೆಯೊಂದಿಗೆ ಸದಾ ಆತ್ಮ ಸಂತುಷ್ಟಿಯ, ಆತ್ಮ ಸಂಯಮದ ಸಜ್ಜನಿಕೆಯ ಬಾಳನ್ನು ಬಾಳುತ್ತಿದ್ದಾರೆ. ನಟನೆ, ಯಕ್ಷಗಾನ ಪಾತ್ರ, ತಾಳಮದ್ದಳೆ, ಅರ್ಥಗಾರಿಕೆ ಕಾರ್ಯಕ್ರಮ ನಿರೂಪಣೆ, ಬರಹ ಭಾಷಣ, ಸಂಸ್ಕೃತಿ ಪೋಷಣೆ, ಚಲನ ಚಿತ್ರದಲ್ಲಿ ನಟನೆ, ಧಾರ್ಮಿಕ ಸಾಂಸ್ಕೃತಿಕ ಸಂಘಟನೆ ಹೀಗೆ ಸ್ವಸ್ಥ ಮನಸ್ಸಿನ ಹತ್ತು ಮುಖಗಳನ್ನು ಪಕ್ಕಳರಲ್ಲಿ ಕಾಣಬಹುದು.
ಪ್ರಸ್ತುತ ದೇಶ ವಿದೇಶಗಳಲ್ಲಿ ಹೆಸರು ಮಾಡಿದ ಬಂಟ ಸಮುದಾಯದ ಸಾಮಾಜಿಕ ಸಂಸ್ಥೆ ಬಂಟರ ಸಂಘ ಮುಂಬಯಿಯ ಹೆಮ್ಮೆಯ ಮುಖವಾಣಿ ಮಾಸಿಕ ಬಂಟರವಾಣಿಯಲ್ಲಿ ಪ್ರಧಾನ ಸಂಪಾದಕರಾಗಿ ದೀರ್ಘ ಕಾಲದ ಸರಸ್ವತಿ ಸೇವೆಯಿಂದ ಸಮಿತಿಯ ಉನ್ನತ ಮಟ್ಟದ ಸದಸ್ಯರು ಹಾಗೂ ಸಮುದಾಯದ ಜನರ ಪ್ರೀತಿ ವಿಶ್ವಾಸ ಗಳಿಸುವುದರ ಮೂಲಕ ಕೀರ್ತಿ ಶೇಷ ಬಂಟರವಾಣಿ ಸಂಪಾದಕ ವೈ. ಜಿ. ಶೆಟ್ಟಿ ಸಂಸ್ಮರಣಾ ಪ್ರಶಸ್ತಿಗೆ ಭಾಜನರಾದ ಹೆಗ್ಗಳಿಕೆ ಇವರಿಗಿದೆ. ಬಂಟರ ಸಂಘ ಮುಂಬಯಿಯ ಸಾಹಿತ್ಯ ಸಾಂಸ್ಕೃತಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಉತ್ತಮ ಕಾರ್ಯಕ್ರಮ ಸಂಯೋಜನೆಯ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಬಂಟರ ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿಯಾಗಿ ದುಡಿದಿದ್ದ ಇವರು ಕರ್ನಾಟಕ ಜಾನಪದ ಪರಿಷತ್ತಿನ ಮಹಾರಾಷ್ಟ್ರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಂಟರ ಸಂಘದ ಶ್ರೀ ಮಹಾವಿಷ್ಣು ದೇವಸ್ಥಾನದ ಕೋಶಾಧಿಕಾರಿಯ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವವೂ ಇದೆ. ಶ್ರೀಯುತರ ಕಾರ್ಯಕ್ಷಮತೆ ಪ್ರತಿಭಾ ಸಾಮರ್ಥ್ಯ ಜೀವನೋತ್ಸಾಹವನ್ನು ಗಮನಿಸಿ ಗುರುತಿಸಿ ಬಂಟರ ಸಂಘದ ಹಲವಾರು ಕಾರ್ಯಕ್ರಮಗಳಲ್ಲಿ ಇವರನ್ನು ಗೌರವಿಸಿ ಸನ್ಮಾನ ನೀಡಿದೆ. ಬಂಟರ ಸಂಘ ಪುಣೆ ವತಿಯಿಂದ ಕಲ್ಪವೃಕ್ಷ ಸೇವಾ ಪ್ರಶಸ್ತಿ, ಅಜೆಕಾರು ಕಲಾಭಿಮಾನಿ ಬಳಗದಿಂದ ಮಾತೃ ಯಕ್ಷರಕ್ಷಾ ಪ್ರಶಸ್ತಿಗಳೂ ಸಂದಿವೆ.
ವೈವಿಧ್ಯಮಯ ಕಾರ್ಯಕ್ರಮಗಳ ಅಚ್ಚುಕಟ್ಟಿನ ಸೊಗಸಾದ ಹಾಸ್ಯ ಮಿಶ್ರಿತ ಮಾತುಗಳ ರಂಜನೀಯ ನಿರೂಪಣೆಗೆ ಇವರ ಹೆಸರು ಒಳನಾಡು ಹೊರನಾಡು ಹಾಗೂ ಕನ್ನಡಿಗರು ವಾಸ್ತವ್ಯ ಹೊಂದಿರುವ ವಿದೇಶಗಳಿಗೂ ಹಬ್ಬಿದೆ. ಇವರ ಪ್ರಕೃತಿ ಪ್ರೀತಿ, ಕೃಷಿಗಾರಿಕೆ ಆಸಕ್ತಿ ಅನನ್ಯವಾದುದು. ಈಗಲೂ ವಿರಾಮದ ವೇಳೆ ಹುಟ್ಟೂರ ಪ್ರವಾಸದಲ್ಲಿ ಇರುವ ಹೊತ್ತು ಕೃಷಿಗಾರಿಕೆ ಇವರ ಮನಸ್ಸಿಗೆ ಮುದ ನೀಡುವ ಹವ್ಯಾಸವಾಗಿದೆ. ಇದೀಗ ಸಮಾನಾಸಕ್ತ ಸನ್ಮಿತ್ರರಾದ ಕರ್ನೂರು ಮೋಹನ ರೈ ಹಾಗೂ ನವೀನ್ ಶೆಟ್ಟಿ ಇನ್ನಬಾಳಿಕೆ ಇವರ ಜೊತೆ ಸೇರಿ ತ್ರಿರಂಗ ಸಂಗಮ ಎಂಬ ಸಾಂಸ್ಕೃತಿಕ ಕಲಾಪ್ರಧಾನ ಸಂಘಟನೆಯನ್ನು ಹುಟ್ಟು ಹಾಕಿ ಮುಂಬಯಿ ನಗರ ಉಪನಗರಗಳಲ್ಲಿ ಹೆಸರಾಂತ ಕಲಾವಿದರ ಸಂಘಟನೆಗಳಿಂದ ಯಕ್ಷಗಾನ, ನಾಟಕ ಹಾಗೂ ಕೆಲವು ಚಲನಚಿತ್ರ ಪ್ರದರ್ಶನಗಳನ್ನು ಸಂಯೋಜಿಸಿ ಜನಪ್ರಿಯತೆಯನ್ನು ಪಡೆದಿರುವುದರ ಜೊತೆಗೆ ದೂರದ ಕೊಲ್ಲಿ ರಾಷ್ಟ್ರ ದುಬಾಯಿಯಲ್ಲಿ ಅಭೂತ ಪೂರ್ವ ತ್ರಿರಂಗ ವಾರ್ಷಿಕೋತ್ಸವ ಆಚರಿಸಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಕೀರ್ತಿ ಪಡೆದ ಹೆಗ್ಗಳಿಕೆ ಇವರಿಗಿದೆ. ಮುಂಬಯಿಯ ಹೆಸರಾಂತ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಪ್ರಧಾನ ಸಂಘಟನೆಯಿಂದ ಕಲಾಸೌರಭ ಪ್ರಶಸ್ತಿ, ಬಹು ಪ್ರತಿಷ್ಠಿತ ಮುಂಬಯಿ ಕನ್ನಡಿಗರ ಹೆಮ್ಮೆಯ ಮುಂಬಯಿ ವಿಶ್ವವಿದ್ಯಾಲಯದಿಂದ ತನ್ನ ಬಹುಮುಖ ಪ್ರತಿಭೆಗೆ ವಿಶೇಷ ಮನ್ನಣೆ ಸಂಮಾನವನ್ನು ಸ್ವೀಕರಿಸಿದ್ದಾರೆ.
ಈ ಹತ್ತಾರು ಮನಸ್ಥಿತಿಯ ಅಪರೂಪದ ಪತಿಯ ಜೊತೆ ಅನುರಾಗದ ದಾಂಪತ್ಯ ಹೊಂದಿದ ಧರ್ಮಪತ್ನಿ ಶ್ರೀಮತಿ ಹರಿಣಾಕ್ಷಿ ಪಕ್ಕಳ ಇವರ ದಾಂಪತ್ಯದ ಪ್ರೀತಿಯಲ್ಲಿ ನಳನಳಿಸುವ ವಲ್ಲರಿಯಲ್ಲಿ ಅರಳಿಬಂದ ಸಂತಾನ ಪುಷ್ಪ ಡಾ.ಅಖಿಲಾ ಶೆಟ್ಟಿ ಅಳಿಯ ಸುಧೀರ್ ಮೊಮ್ಮಗ ಅಧ್ವೀರ್ ಇವರೊಂದಿಗಿನ ಚಿಕ್ಕ ಚೊಕ್ಕ ಸಂಸಾರದ ಸಂತೃಪ್ತಿ ಭಾವ ಶ್ರೀ ಅಶೋಕ್ ಪಕ್ಕಳ ಅವರಿಗಿದ್ದು, ತನ್ನ ಬಿಡುವಿಲ್ಲದ ಚಟುವಟಿಕೆಗಳ ಜೊತೆಗೆ ಇದೀಗ ಬಂಟರ ಸಂಘ ಮುಂಬಯಿ ಇದರ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನದ ಬಲು ದೊಡ್ಡ ಜವಾಬ್ದಾರಿ ಪಕ್ಕಳ ಅವರ ಹೆಗಲೇರಿದೆ. ಈ ಸ್ಥಾನವನ್ನೂ ಅತ್ಯಂತ ಸಮರ್ಥ ರೀತಿಯಲ್ಲಿ ನಿರ್ವಹಿಸುವ ದೈವದತ್ತ ಸಾಮರ್ಥ್ಯ ಇವರಿಗಿದೆ. ಸಮಾಜ ಬಾಂಧವರ ಕೌಟುಂಬಿಕ ಕಾರ್ಯಕ್ರಮಗಳಾದ ವಿವಾಹ ನಿಶ್ಚಿತಾರ್ಥ, ಮೆಹೆಂದಿ, ವಿವಾಹ ಸಮಾರಂಭದಲ್ಲಿ ಪೊಣ್ಣು ಒಚ್ಚಿ ಕೊಡುವ ಮಾಮಿಸೆಕೆ ಹೀಗೆ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಾಂದರ್ಭಿಕ ಮಾತುಗಾರಿಕೆಗಳಿಂದ ಸಮರ್ಥವಾಗಿ ನಿರ್ವಹಿಸಿರುವ ಜನಮನ್ನಣೆಯೂ ಲಭಿಸಿರುವ ಅತ್ಯಂತ ಅಪರೂಪದ ವಿಚಕ್ಷಣ ಪ್ರತಿಭೆಯ ಸ್ನೇಹ ಶೀಲದ ಸಮಚಿತ್ತದ ಸದ್ಗುಣ ಸಂಪನ್ನತೆಯ ಶ್ರೀ ಅಶೋಕ ಪಕ್ಕಳರಿಗೆ ಸಮಾಜದಲ್ಲಿ ಸಮುದಾಯದಲ್ಲಿ ಇನ್ನಷ್ಟು ಗೌರವದ ಸ್ಥಾನಮಾನಗಳು ಲಭ್ಯವಾಗಲಿ ಎಂದು ನಾವೆಲ್ಲ ಹಾರೈಸೋಣ. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಶುಭ ಹಾರೈಕೆಗಳೂ ಜೊತೆಗಿರಲಿ.
ಶುಭಂ ಭದ್ರಂ ಮಂಗಲಂ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು