ದೇವರಲ್ಲಿ ಅರ್ಪಣಾ ಭಾವದ ಭಕ್ತಿ, ಸತತ ಪರಿಶ್ರಮ, ಸಮಾಜದ ಸತತ ಸಂಪರ್ಕಗಳಿಂದ ಇಂದು ಬಂಟ ಸಮುದಾಯ ಮಾತ್ರವಲ್ಲ ಸಮಸ್ತ ಮಾನವ ಸಮುದಾಯದ ಮಧ್ಯೆ ಧ್ರುವತಾರೆಯಂತೆ ಪ್ರಕಾಶಮಾನರಾಗಿರುವ ಪ್ರಕಾಶ್ ಶೆಟ್ಟರ ಹೆಸರು ಇಂದು ಅನ್ವರ್ಥವಾಗಿದೆ. ಪ್ರಕಾಶ್ ಶೆಟ್ಟರು ತಾನು ಬೆಳೆಯುತ್ತಿರುವಂತೆಯೇ ತಾನು ಹುಟ್ಟಿದ ಸಮುದಾಯದ ಏಳಿಗೆಗೂ ಕಂಕಣ ಬದ್ಧರಾಗಿ ದುಡಿಯುತ್ತಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಬಹು ಎತ್ತರಕ್ಕೇರಿದರೂ ತಮ್ಮ ಸ್ನೇಹ ಸೌಹಾರ್ದ ಆತ್ಮೀಯತೆಗಳಿಂದ ಎಂಥವರನ್ನೂ ತನ್ನ ಮಿತ್ರವಲಯಕ್ಕೆ ಸೇರಿಸಿಕೊಳ್ಳುವ ಅತ್ಯಂತ ಉದಾರಿ ಸಜ್ಜನ. ತನ್ನ ಹೋಟೆಲ್ ಉದ್ಯಮದಲ್ಲಿ ಗ್ರಾಹಕರನ್ನೂ ತನ್ನ ಕುಟುಂಬದ ಸದಸ್ಯರಂತೆ ಪ್ರೀತಿಸುತ್ತಾ ಅವರ ಅವಶ್ಯಕತೆ ಏನೇ ಇರಲಿ, ದೂರುಗಳಿರಲಿ, ಶ್ಲಾಘನೆ ಇರಲಿ ಎಲ್ಲವನ್ನೂ ಸಮಚಿತ್ತದಿಂದ ಆಲಿಸುವ ತಮ್ಮ ವಿಶಿಷ್ಟ ಗುಣ ಇಂದು ಹೋಟೆಲ್ ಹಾಸ್ಪಿಟಾಲಿಟಿ ಉದ್ಯಮದಲ್ಲಿ ಕೀರ್ತಿಶಿಖರದ ತುತ್ತ ತುದಿಯಲ್ಲಿದ್ದರೂ ತಮ್ಮ ದೃಷ್ಠಿ ತಾನು ಹುಟ್ಟಿ ಬೆಳೆದ ನೆಲದ ತಳದಲ್ಲಿದೆ.
1959ರಲ್ಲಿ ಉಡುಪಿ ಜಿಲ್ಲೆಯ ಕೊರಂಗ್ರಪಾಡಿ ಎಂಬಲ್ಲಿ ಕೊರಂಗ್ರಪಾಡಿ ಮಾಧವ ಶೆಟ್ಟಿ ಮತ್ತು ರತ್ನಾ ಶೆಟ್ಟಿ ಇರ್ವತ್ತೂರು ಹೊಸಮನೆ ದಂಪತಿಗೆ ಜನಿಸಿದ ಪ್ರಕಾಶಣ್ಣ ಮಾತಾಪಿತರ ಹೆಸರನ್ನು ದಿಗ್ ದಿಗಂತ ವ್ಯಾಪ್ತಿಗೊಳಿಸಿದ ಸಾರ್ಥಕ ಸಂತಾನ ಎಂದರೆ ಅತಿಶಯೋಕ್ತಿಯಾಗದು. ಹುಟ್ಟುವಾಗ ಚಿನ್ನದ ಚಮಚ ಬಾಯಿಯಲ್ಲಿಟ್ಟುಕೊಂಡು ಹುಟ್ಟಿದವರಲ್ಲ. ತಂದೆ ಮಾಧವ ಶೆಟ್ಟರದ್ದು ಕೊರಂಗ್ರಪಾಡಿಯಲ್ಲೊಂದು ಸಣ್ಣಮನೆ. ಅರ್ಧ ಎಕರೆ ಬೇಸಾಯ ಭೂಮಿ. ಅಲ್ಲಿಯೇ ತನ್ನ ಬಾಲ್ಯದ ಜೀವನ ಕಳೆದವರು ತನ್ನ ಸಹೋದರ ಸಹೋದರಿ ಜೊತೆಗೆ. ಐದನೇ ವರ್ಷಕ್ಕೆ ಕಾಲಿಟ್ಟಾಗ ಅವರನ್ನು ಬೈಲೂರಿನ ಮಹಿಷ ಮರ್ದಿನಿ ಶಾಲೆಗೆ ಸೇರಿಸಲಾಯಿತು. ಪ್ರೌಢ ಶಿಕ್ಷಣವನ್ನು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಪೂರೈಸಿ ಬಳಿಕ ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮುಖಾಂತರ ಮುಗಿಸಿದರು.
ತನಗೆ ಬಾಲ್ಯ ನೆನಪಾಗುವಾಗ ಕಣ್ಣೆದುರು ಕಟ್ಟಿ ನಿಲ್ಲುವುದು ಆ ಬಡತನ, ಸಂಘರ್ಷದ ದಿನಗಳು ಎಂದು ಮುಕ್ತ ಮನಸ್ಸಿನಿಂದ ಹೇಳುತ್ತಾರೆ. ಶಾಲಾ ಕಾಲೇಜು ದಿನಗಳು ಬಡತನದಲ್ಲೇ ಮುಗಿದು ಹೋಗಿದೆ ಎಂದು ನಿಟ್ಟುಸಿರು ಬಿಡುವ ಪ್ರಕಾಶಣ್ಣನ ಒಡಲೊಳಗೆ ಛಲದ ಬೆಂಕಿ ಹುಟ್ಟಿಸಿದ್ದೇ ಬಡತನ. ತನ್ನ ಪದವಿ ಶಿಕ್ಷಣ ಮುಗಿಸಿದ ಪ್ರಕಾಶ್ ಶೆಟ್ಟಿ ಅವರು ತಂದೆಯ ಆಶೀರ್ವಾದ ಪಡೆದು ಬೆಂಗಳೂರು ಕಡೆ ಮುಖ ಮಾಡಿದಾಗ ಅವರ ತಂದೆಯವರು ಹೇಳಿದ ಹಿತವಚನಗಳನ್ನು ಈಗಲೂ ನೆನಪಿಸಿಕೊಳ್ಳುವ ಶೆಟ್ಟರು, ಮಾತಾಪಿತರ ಆಶೀರ್ವಾದ ಇರುವ ಮಕ್ಕಳು ಖಂಡಿತಾ ಜೀವನದಲ್ಲಿ ಯಶಸ್ಸು ಸಂಪಾದಿಸುತ್ತಾರೆ ಎನ್ನುವ ಮಾತು ಹೇಳಲು ಮರೆಯುವುದಿಲ್ಲ. ಕೆಎಸ್ಸಾರ್ಟಿಸಿ ಬಸ್ ಹತ್ತಿದ ಅವರ ತಲೆಯಲ್ಲಿ ಸುಳಿಯುತ್ತಿದ್ದ ವಿಚಾರವನ್ನು ತನ್ನ ಆತ್ಮ ಕಥನದಲ್ಲಿ ಹೃದಯಂಗಮವಾಗಿ ವರ್ಣಿಸುತ್ತಾರೆ. ನೀರಿನ ಆಳ ತಿಳಿಯದೆ ನೀರಿಗಿಳಿಯಬಾರದು. ಇಳಿದ ಮೇಲೆ ಈಜಲು ಕೈ ಕಾಲು ಬಡಿಯಲೇಬೇಕು ಎನ್ನುವ ಪ್ರಕಾಶ್ ಶೆಟ್ಟರು ಬಂಜಾರ ಹೊಟೇಲ್ ಮಾಲಿಕರಾಗುವ ಮುನ್ನ ಸವೆಸಿದ ಸಂಘರ್ಷಮಯ ದಾರಿ ನೆನಪು ಎಂಥಾ ಹೇಡಿಗಳಲ್ಲೂ ಧೈರ್ಯ ತುಂಬಬಲ್ಲುದು. ಸಿಕ್ಕ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದರು. ತನ್ನ ಶಿಕ್ಷಣಕ್ಕೆ ಸರಿ ಹೊಂದದ ಕೆಲಸಗಳನ್ನೂ ಮಾಡಿದರು. ಆ ಅನುಭವಗಳನ್ನು ಅವರ ಮಾತುಗಳಲ್ಲೇ ಕೇಳಬೇಕು.
ಇಂದು ಪ್ರಕಾಶ್ ಶೆಟ್ಟರು ಬಂಜಾರ ಪ್ರಕಾಶಣ್ಣ ಎಂದೇ ಖ್ಯಾತರು. ಈ ಹೋಟೆಲ್ ತನ್ನ ಆಡಳಿತ ಹಾಗೂ ಗ್ರಾಹಕ ಸೇವೆಗೆ ವಿಶ್ವ ಪ್ರಸಿದ್ಧಿ ಪಡೆದಿದೆ. ರಾಜ್ಯದ ರಾಜಧಾನಿಯಲ್ಲಿ ಪ್ರಕಾಶಣ್ಣ ಓರ್ವ ಅತ್ಯಂತ ಪ್ರಭಾವಿ ವ್ಯಕ್ತಿ. ಸ್ವತಃ ರಾಜ್ಯದ ಮುಖ್ಯಮಂತ್ರಿ ಇವರ ಶಿಸ್ತು ಸೌಜನ್ಯ ಸಾಧನೆ ಕುರಿತಂತೆ ಶ್ಲಾಘನೆಯ ಮಾತುಗಳನ್ನಾಡುತ್ತಾರೆ. ಹೋಟೆಲ್ ಸ್ಥಾಪನೆಗೂ ಮುನ್ನ ಸ್ಟೇಟ್ ಬ್ಯಾಂಕ್ ನಿಂದ ಐವತ್ತು ಸಾವಿರ ಸಾಲ ಪಡೆದು ಸ್ಥಾಪಿಸಿದ ಪ್ರಿಂಟಿಂಗ್ ಪ್ರೆಸ್ ಕುರಿತಂತೆ ಅವರ ಪರಿಶ್ರಮ ಅದರ ಹಿಂದೆ ಅನುಭವಿಸಿದ ಆರ್ಥಿಕ ಸಂಕಷ್ಟ ಎಲ್ಲವನ್ನೂ ವರ್ಣಿಸುತ್ತಾರೆ. ಕೊನೆಗೂ ಪ್ರಿಂಟಿಂಗ್ ಪ್ರೆಸ್ ಉದ್ಯಮ ಅವರನ್ನು ಆಧರಿಸಿ ಹಿಡಿಯಿತು. ಕೆಲವು ಕಂಪನಿಗಳು ಇವರ ಪ್ರೆಸ್ ನ ಉತ್ತಮ ಗುಣಮಟ್ಟದ ಪ್ರಿಂಟಿಂಗ್, ಬೈಂಡಿಂಗ್, ಎಡಿಟಿಂಗ್ ಹಾಗೂ ವಿನ್ಯಾಸಗಳಿಂದ ಪ್ರಭಾವಿತರಾಗಿ ತಮ್ಮ ಪ್ರೆಸ್ ಸಂಬಂಧಿ ಅವಶ್ಯಕತೆಗಳನ್ನು ಇವರ ಮೂಲಕ ವ್ಯವಹರಿಸ ತೊಡಗಿ ಉದ್ಯಮ ವ್ಯವಹಾರ ಕುದುರ ತೊಡಗಿತು. ಬಳಿಕದ ದಿನಗಳಲ್ಲಿ ಅನೇಕ ಬ್ಯಾಂಕುಗಳು ಹಾಗೂ ಸರ್ಕಾರಿ ಕಛೇರಿಗಳ ಕಾಂಟ್ರಾಕ್ಟ್ ದೊರೆತು ಆರ್ಥಿಕ ಸ್ಥಿತಿ ಸುಧಾರಿಸುತ್ತಿರುವಂತೆ ಸಮೀಪದಲ್ಲಿ ವಾಸ್ತವ್ಯಕ್ಕೆಂದು ಮನೆ ಮಾಡಿಕೊಂಡರು. ಗೌರವ್ ಪ್ರಿಂಟಿಂಗ್ ಪ್ರೆಸ್ ಉದ್ಯಮ ಯಶಸ್ಸು ಕಂಡ ಮೇಲೆ ಪ್ರಕಾಶ್ ಶೆಟ್ಟಿ ಅವರು ಹೋಟೆಲ್ ಉದ್ಯಮದಲ್ಲಿ ತನ್ನ ಅದೃಷ್ಟ ಪರೀಕ್ಷಿಸಿಕೊಂಡರು. ಅವರ ಸತತ ಪರಿಶ್ರಮ ಯಶಸ್ಸು ಕಾಣಲೇಬೇಕೆಂಬ ಛಲದಿಂದ ಇಳಿದ ಉದ್ಯಮ ಶೆಟ್ಟರ ಕೈಬಿಡಲಿಲ್ಲ. ಈ ಮೊದಲೇ ನಗರದಲ್ಲಿ ಜನಪ್ರಿಯತೆ ಹೊಂದಿದ್ದ ಶೆಟ್ಟರ ಹೊಟೇಲ್ ವ್ಯವಸಾಯದಲ್ಲಿ ಕ್ಯಾಟರಿಂಗ್ ಕಾಂಟ್ರಾಕ್ಟ್ ಗಳು ಸಿಗತೊಡಗಿದವು. ಪರಿಣಾಮ ಹೋಟೆಲ್ ಉದ್ಯಮ ಪ್ರಗತಿ ಕಾಣತೊಡಗಿತು. ಆಹಾರ ಖಾದ್ಯಗಳ ಗುಣಮಟ್ಟದ ಮೇಲ್ವಿಚಾರಣೆಯನ್ನು ಸ್ವತಃ ನೋಡಿಕೊಳ್ಳುತ್ತಿದ್ದರು. ಇದರಿಂದ ಇವರ ಹೋಟೆಲ್ ಇಡೀ ಬೆಂಗಳೂರು ನಗರದಲ್ಲಿ ಪ್ರಸಿದ್ಧಿ ಪಡೆಯಿತು.
ಕ್ರಮೇಣ ದೊಡ್ಡ ದೊಡ್ಡ ಕಾಂಟ್ರಾಕ್ಟ್ ಗಳು ದೊರೆಯತೊಡಗಿದವು. ಒಮ್ಮೆ ಆಗಿನ ಕರ್ನಾಟಕ ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಅವರ ಅಧಿಕಾರ ಅವಧಿಯಲ್ಲಿ ನಡೆದ ಅಖಿಲ ಭಾರತ ಮಟ್ಟದ ಕ್ರೀಡಾಕೂಟದ ಸಂಪೂರ್ಣ ಊಟೋಪಚಾರ ವ್ಯವಸ್ಥೆ ಕಾಂಟ್ರಾಕ್ಟ್ ಶೆಟ್ಟರಿಗೆ ದೊರೆಯಿತು. ಅದನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದ ಹೊಣೆ ಶೆಟ್ಟರಿಗಿತ್ತು. ಅದು ಅವರ ಉದ್ಯಮದ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಶೆಟ್ಟರು ಹಗಲಿರುಳು ಶ್ರಮಿಸಿದರು. ಅವರು ನಂಬಿಕೊಂಡು ಬಂದ ದೈವ ದೇವರು ಹಾಗೂ ತಾನು ಅಪಾರವಾಗಿ ಪ್ರೀತಿಸುತ್ತಿದ್ದ ಮಾತಾಪಿತರ ಆಶೀರ್ವಾದ ಅವರ ಕೈ ಬಿಡಲಿಲ್ಲ. ಅಭೂತಪೂರ್ವ ಯಶಸ್ಸು ದೊರೆತು ಮಂತ್ರಾಲಯದ ಮುಕ್ತ ಕಂಠದ ಪ್ರಶಂಸೆಗೆ ಪಾತ್ರರಾದರು.
ಆ ಬಳಿಕ ಪ್ರಕಾಶಣ್ಣ ಅನೇಕ ಉದ್ಯಮಗಳ ನಿರ್ದೇಶಕರಾದರೂ ಜನ ಅವರನ್ನು ಬಂಜಾರ ಪ್ರಕಾಶಣ್ಣ ಎಂದೇ ಗುರುತಿಸಿಕೊಂಡಿದ್ದಾರೆ. ಬಳಿಕದ ದಿನಗಳಲ್ಲಿ ಸಾರ್ವಜನಿಕ ಸೇವೆಗಳ ಮುಖಾಂತರ ಮಹತ್ವದ ಕಾರ್ಯಗಳನ್ನು ಮಾಡಿ ತೋರಿಸಿದ ಹೆಗ್ಗಳಿಕೆ ಇವರಿಗಿದೆ. ಇವರೊಬ್ಬ ಏಕ ವ್ಯಕ್ತಿ ಸರಕಾರದಂತೆ. ಪರಿಸರದ ಜನರ, ಸಮಾಜದ ಸಾವಿರಾರು ಸಮಸ್ಯೆಗಳಿಗೆ ತನ್ನ ಪ್ರಭಾವಿ ವ್ಯಕ್ತಿತ್ವದಿಂದ ಪರಿಹಾರ ಒದಗಿಸುತ್ತಾರೆ. ಇಂದು ಅವರ ಹೆಸರು ವಿಶ್ವದಗಲ ಹಬ್ಬಿದೆ. ಅವರ ಅಭಿಮಾನಿಗಳು ಅವರನ್ನು ಜನನಾಯಕನನ್ನಾಗಿ ಕಾಣ ಬಯಸುತ್ತಾರೆ. ಅವರಿಗೆ ಲೋಕಸಭೆ, ರಾಜ್ಯಸಭೆಗಳಲ್ಲಿ ಸ್ಥಾನ ಸಿಗಬೇಕೆಂಬ ಅಪೇಕ್ಷೆ ಪಡುತ್ತಾರೆ. ಅವರ ಅರುವತ್ತರ ಸಂಭ್ರಮೋತ್ಸವ ಮಂಗಳೂರಿನಲ್ಲಿ ವ್ಯಾಪಕ ಪ್ರಸಿದ್ಧಿ ಪಡೆಯಿತು. ವಿವಿಧ ಕ್ಷೇತ್ರಗಳ ಅಸಾಮಾನ್ಯ ಸಾಧಕರು, ರಾಜಕೀಯ ಮುಖಂಡರೂ ಭಾಗವಹಿಸಿದ್ದರು. ಅದೇ ಸಂದರ್ಭದಲ್ಲಿ ಅವರ ಜೀವನ ಸಾಧನೆ ಕುರಿತ ಬೃಹತ್ ಅಭಿನಂದನಾ ಗ್ರಂಥವೂ ಅರ್ಪಣೆಯಾಯಿತು. ಅವರು ಮಾಡಿದ ಸಮಾಜ ಸೇವೆ ಹಾಗೂ ಬಂಟರ ಸಂಘಟನೆಗಳಿಗೆ ನೀಡಿದ ದೊಡ್ಡ ಮೊತ್ತದ ಅನುದಾನಗಳು ಅವರ ದಾನ ಗುಣವನ್ನು ದಾಖಲಿಸಿವೆ. ಅವರ ಸಾಧನೆ, ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವೂ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಕೀರ್ತಿ ಅಜರಾಮರವಾಗಲಿ. ಅವರ ಸಾಧನೆ ಇತರರಿಗೆ ಮಾದರಿಯಾಗಲಿ. ಅವರ ಸಾಧನೆಗೆ ಬೆಂಗಾವಳಾಗಿ ಇರುವ ಆಶಾ ಪ್ರಕಾಶ್ ಶೆಟ್ಟಿ, ಮಗ ಗೌರವ್ ಶೆಟ್ಟಿ ಹಾಗೂ ಅವರ ಕುಟುಂಬ ಪರಿವಾರಕ್ಕೆ ಉತ್ತರೋತ್ತರ ಶ್ರೇಯವಾಗಲೆಂದು ಹಾರೈಸೋಣ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು