ವಿದ್ಯಾಗಿರಿ: ಇಲ್ಲಿ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ 29ನೇ ಆಳ್ವಾಸ್ ವಿರಾಸತ್ನ ಅಂತಿಮ ದಿನವಾದ ಭಾನುವಾರ ಆಳ್ವಾಸ್ ಸಾಂಸ್ಕೃತಿಕ ಹಾಗೂ ಕ್ರೀಡಾ ತಂಡದ ವಿದ್ಯಾರ್ಥಿಗಳು ರೋಚಕ ಅನುಭವ ನೀಡುವ ಪ್ರದರ್ಶನ ನೀಡಿ, ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ಮಲ್ಲಕಂಬ: ಆಳ್ವಾಸ್ ಕಾಲೇಜಿನ ಸುಮಾರು 130 ವಿದ್ಯಾರ್ಥಿಗಳು ಏಕಕಾಲದಲ್ಲಿ ಮಲ್ಲಕಂಬ ಸಾಹಸ ಪ್ರದರ್ಶನ ನೀಡಿದರು. ಪ್ರೇಕ್ಷಕರು ಬೆಕ್ಕಸ ಬೆರಗಾದರು. ಮಲ್ಲಕಂಬವು ಅಪ್ಪಟ ದೇಶೀಯ ಕ್ರೀಡೆ. ದೇಶಿ ಸಂಸ್ಕೃತಿ ಹಾಗೂ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿರುವ ಆಳ್ವಾಸ್, ಈ ಮಲ್ಲಕಂಬ ಸ್ಪರ್ಧೆಯಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕ್ರೀಡೆಯಾಗಿದ್ದ ಮಲ್ಲಕಂಬಕ್ಕೆ ಪ್ರೇಕ್ಷಕರನ್ನು ಸೆಳೆಯಬೇಕು ಎಂಬ ದೂರದೃಷ್ಟಿಯನ್ನು ಇರಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ಕಲಾ ರೂಪ ನೀಡಿದ್ದು, ಮಲ್ಲಕಂಬವು ವೇದಿಕೆ ಮೇಲೇರಿದೆ. ಎತ್ತರದ ಕಟ್ಟಿಗೆ ಕಂಬವನ್ನು ಕುಸ್ತಿ ಪಟ್ಟುಗಳ ಸಾಧನೆಗಾಗಿ ಬಳಸುತ್ತಿದ್ದರು. ಈ ಎತ್ತರದ ಕಂಬದ ಕುತ್ತಿಗೆ ಹಾಗೂ ಮೇಲಿನ ನಾಬ್ಗೆ ಎಣ್ಣೆಯನ್ನು ಸವರಿ ನಾಜೂಕುಗೊಳಿಸಲಾಗಿರುತ್ತದೆ. ಇನ್ನೊಂದೆಡೆ ಜೋತು ಬಿದ್ದ ಹಗ್ಗದಲ್ಲಿ ವಿದ್ಯಾರ್ಥಿನಿಯರ ಕಸರತ್ತು ಪ್ರೇಕ್ಷಕರನ್ನು ಮೂಕಸ್ಮಿತರನ್ನಾಗಿ ಮಾಡಿತು. ಸಾಹಸ ಕ್ರೀಡೆಯೊಂದು ಕಲಾರಸಿರಕರನ್ನು ರಂಜಿಸಿತು. ದಶರಂಗ, ವೇಲ್, ತಿರುವು, ಯೋಗಾಸನ ಮುಂತಾದ ವಿಶೇಷ ಚಾಕಚಕ್ಯತೆ, ಚಪಲತೆ, ವೇಗ ಹಾಗೂ ಮೈಮಣಿತದ ಆಧಾರಗಳನ್ನು ಮಲ್ಲಕಂಬ ಹೊಂದಿದ್ದು, ನೋಡುಗರನ್ನು ಎವೆಯಿಕ್ಕದೇ ನೋಡುವಂತೆ ಮಾಡಿತು. ವಿಶ್ವ ಮಲ್ಲಕಂಬ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿದ 6 ಪಟುಗಳಲ್ಲಿ ಒಬ್ಬ ಆಳ್ವಾಸ್ ವಿದ್ಯಾರ್ಥಿ. ಈ ಬಾರಿ ರಾಜ್ಯವನ್ನು ಪ್ರತಿನಿಧಿಸುವ 12 ಮಂದಿಯೂ ಆಳ್ವಾಸ್ ವಿದ್ಯಾರ್ಥಿಗಳು.
ಬೃಂದಾವನ ವೇಣು: ನೃತ್ಯ ಸಂಯೋಜಕಿ ವಿದೂಷಿ ಪ್ರವಿತಾ ಅಶೋಕ್ ಅವರ ಶಿಷ್ಯಂದಿರು ಸೇಂಟ್ ಬಾನು ದಾಸ್ ಸಂಗೀತ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದ ಭರತನಾಟ್ಯದ ನೃತ್ಯ ರೂಪಕ ಬೃಂದಾವನ ವೇಣು ಮನಸೂರೆಗೊಂಡಿತು. ಆದಿ ತಾಳ ಮತ್ತು ಭೀಮ್ ಪಾಲಸ್ ರಾಗದಿಂದ ಆರಿಸಿದ ಭರತ ನಾಟ್ಯದ ಒಂದು ಪ್ರಕಾರವಾದ ಬೃಂದಾವನ ವೇಣು ನಾಟ್ಯದಲ್ಲಿ ಬಾಲಕಿಯರು ಪ್ರೇಕ್ಷಕರ ಹೃದಯ ಗೆದ್ದರು. ವೇಣು ಸ್ತುತಿಯು ಮನ ಸೆಳೆಯಿತು. ಶ್ರೀ ಗಣೇಶ ವೈಭವ: ಬಿ.ವಿ. ಕಾರಂತರು ಬರೆದ ಗಜವದನ ಹೇ ರಂಭಾ..ರಂಗಗೀತೆಯನ್ನು ಖ್ಯಾತ ಗಾಯಕ ವಾಸುಕಿ ವೈಭವ್ ಹಾಡಿದ್ದು ಜನಪ್ರಿಯಗೊಂಡಿದೆ. ಈ ಗಜವದನ ಹೇ ರಂಭಾ ರಂಗಗೀತೆಗೆ ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ಅರೆಹೊಳೆ ಪ್ರತಿಷ್ಠಾನದ ತಂಡವು ಶ್ರೀ ಗಣೇಶ ವೈಭವ ನೃತ್ಯ ಕಾರ್ಯಕ್ರಮ ಪ್ರಸ್ತುತ ಪಡಿಸಿತು.
ಯಕ್ಷಗಾನ ರೂಪಕ: ದೇಶೀಯ ಕಲೆಗೆ ನೆಲೆ ನೀಡಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿದವರು ಡಾ.ಎಂ.ಮೋಹನ ಆಳ್ವ. ಅವರ ಮುತುವರ್ಜಿಯಿಂದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ರೂಪುಗೊಂಡಿದ್ದು, ವಿದ್ಯಾರ್ಥಿಗಳು ತರಬೇತಿ ಪಡೆದುಯಕ್ಷಗಾನ ಪ್ರದರ್ಶನವನ್ನು ನೀಡುತ್ತಿದ್ದಾರೆ. ಈ ತಂಡವು ಪ್ರಸ್ತುತ ಪಡಿಸುವ ಪೃಥ್ವಿಶ್ ಶೆಟ್ಟಿಗಾರ್ಹಾಗೂ ಶಬರೀಶ್ ಮುನಿಯಾಲ್ ನಿರ್ದೇಶನದ ಶಂಕರಾರ್ದ ಶರೀರಿಣಿ ಪ್ರಸಂಗವು ಬಡಗು ಯಕ್ಷ ಪ್ರಯೋಗ ಗಮನ ಸೆಳೆಯಿತು. ಮಯೂರ್ ನಾಯ್ಕ ಸಾಹಿತ್ಯಕ್ಕೆ, ಶೇಖರ್ ಡಿ ಶೆಟ್ಟಿಗಾರ್ ಮಾರ್ಗದರ್ಶನ ನೀಡಿದ್ದಾರೆ. ದಾಕ್ಷಯಿಣಿಯು ತನ್ನ ತಂದೆ ದಕ್ಷ ಪ್ರಜಾಪತಿಯು ಮಾಡುತ್ತಿರುವಂತಹ ಯಾಗಕ್ಕೆ ಹೋಗಬೇಕೆಂದು ತನ್ನ ಪತಿ ಶಿವನಲ್ಲಿ ನಿವೇದಿಸಿಕೊಂಡಳು. ದಕ್ಷಾಧ್ವರದ ಹಿಂದಿರುವ ದುರುದ್ದೇಶವನ್ನು ತಿಳಿದಿರುವ ಶಿವನು ಹೋಗಲು ನಿರಾಕರಿಸುತ್ತಾನೆ. ಆದರೂ ಸತಿ ತನ್ನ ಹಠವನ್ನು ಬಿಡದೆ ಪತಿಯ ಮಾತನ್ನು ಧಿಕ್ಕರಿಸಿ ತವರಿನೆಡೆಗೆ ನಡೆದೇ ಬಿಡುತ್ತಾಳೆ. ಅಲ್ಲಿ ನಡೆದ ಶಿವನಿಂದೆಯನ್ನು ತಾಳಲಾರದೆ ಪಶ್ಚಾತ್ತಾಪಗೊಂಡು ಯೋಗಾಗ್ನಿಯಿಂದ ತನ್ನನ್ನು ತಾನೆ ದಹಿಸಿಕೊಳ್ಳುತ್ತಾಳೆ.ಇದನ್ನು ತಿಳಿದು ಆಕ್ರೋಶಭರಿತನಾದ ಶಿವನು ಘೋರರೂಪಿಯಾದ ವೀರಭದ್ರನನ್ನು ಸೃಷ್ಟಿಸಿ ದಕ್ಷವಧೆಗಾಗಿ ಕಳುಹಿಸುತ್ತಾನೆ. ಅಂತೆಯೇ ವರಭದ್ರನು ದಕ್ಷಾಧ್ವರವನ್ನು ವಿಧ್ವಂಸಗೊಳಿಸಿ ದಕ್ಷನನ್ನು ಸಂಹರಿಸುತ್ತಾನೆ. ಅಧಾರ್ಂಗಿಣಿಯನ್ನು ಕಳೆದುಕೊಂಡ ಪರಶಿವನು ಮತ್ತೆ ಅವಳನ್ನು ಹೊಂದಬೇಕೆಂಬ ಪ್ರೇಮದಿಂದ ಅಂತರ್ಮುಖಿಯಾಗಿ ಸಮಾಧಿ ಸ್ಥಿತಿಯನ್ನು ಹೊಂದುತ್ತಾನೆ. ಶಿವ -ಸತಿಯರ ಅವಿನಾಶಿ ಪ್ರೇಮದ ಫಲಶ್ರುತಿಯೇ ಶಂಕರಾರ್ಧ ಶರೀರಿಣಿ. ನಿತೇಶ್ ಮಾರ್ನಾಡು ಕಾರ್ಯಕ್ರಮ ನಿರೂಪಿಸಿದರು.







































































































