ಡ್ಯಾನ್ಸ್ ಇಂಡಿಯಾ ಡಾನ್ಸ್ (ಡಿ.ಐ.ಡಿ) ಖ್ಯಾತಿಯ ಕೊರಿಯೋಗ್ರಾಫರ್ ರಾಹುಲ್ ಶೆಟ್ಟಿ ಅವರು ‘ಡ್ಯಾನ್ಸ್ ಪ್ಲಸ್ ಪ್ರೊ’ ಶೋದ ಮೂಲಕ ಡಿ.16 ರಿಂದ ಪ್ರತಿ ಸೋಮವಾರ – ಗುರುವಾರ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಹಾಗೂ ಪ್ರತಿ ಶನಿವಾರ ಮತ್ತು ರವಿವಾರ ಸಂಜೆ 6 ಗಂಟೆಗೆ ಸ್ಟಾರ್ ಪ್ಲಸ್ ಚಾನೆಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಈ ಮೊದಲು ಚಾನೆಲ್ ನಲ್ಲಿ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದ ರಾಹುಲ್ ಶೆಟ್ಟಿ ಈ ಬಾರಿ ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ (ಕ್ಯಾಪ್ಟನ್ ) ಕಾಣಿಸಿಕೊಳ್ಳಲಿದ್ದಾರೆ. ಕಳೆದ 12 ವರ್ಷಗಳಿಂದ ರಿಯಾಲಿಟಿ ಶೋ ಉದ್ಯಮದಲ್ಲಿರುವ ಅವರು ಸಿನೆಮಾದಲ್ಲೂ ಕಾಣಿಸಿಕೊಂಡಿದ್ದು,100 ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿ ಉತ್ತಮ ಕೊರಿಯೋಗ್ರಾಫರ್ ಆಗಿ ಗುರುತಿಕೊಂಡಿದ್ದಾರೆ. ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಟೈಗರ್ ಶ್ರಾಫ್, ಹೃತಿಕ್ ರೋಶನ್ ಸಹಿತ ಹಲವರ ಜತೆಗೆ ಕೆಲಸ ಮಾಡಿರುವ ಅವರು ಹಲವು ನಟರಿಗೆ ನೃತ್ಯ ಅಭ್ಯಾಸ ಕೂಡ ನಡೆಸಿದ್ದಾರೆ.
ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನ ಡಬಲ್ ವಿನ್ನರ್ ಆಗಿರುವ ರಾಹುಲ್ ಶೆಟ್ಟಿ ಬಾಲಿವುಡ್ ನ ಪ್ರಸಿದ್ಧ ಕೊರಿಯೋಗ್ರಾಫರ್ ರೆಮೋ ಡಿ’ಸೋಜಾ ಜೊತೆ ಗುರುತಿಸಿಕೊಂಡಿರುವರು. ರಾಹುಲ್ ಶೆಟ್ಟಿ ‘ರೇಸ್ -3’ ಸಿನಿಮಾದ ಕೊರಿಯೋಗ್ರಾಫರ್ ಆಗಿ ಪ್ರಸಿದ್ಧರಾಗಿರುವರು. ಮೂರು ವರ್ಷಗಳ ಹಿಂದೆ ಕರ್ನಾಟಕದ ಬೆಳಗಾವಿಯ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್ ನಲ್ಲಿ ನಡೆದ 270 ಸ್ವರ್ಧಿಗಳನ್ನು ಒಳಗೊಂಡ ಅತೀ ದೊಡ್ಡ ರೋಲರ್ ಸ್ಕೇಟಿಂಗ್ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕೊರಿಯೋಗ್ರಾಫ್ ಮಾಡುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿರುವ ರಾಹುಲ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ‘ಇದೊಂದು ತನ್ನ ಜೀವಮಾನವಿಡೀ ನೆನಪಿನ ಸಂದರ್ಭ’ ಎಂದು ಬರೆದಿರುವರು.
ಮಂಗಳೂರು ಬಳಿಯ ಪಂಜ ಮೊಗಪಾಡಿ ಗ್ರಾಮದ ಗರಡಿಮನೆ ದಯಾನಂದ ಕೆ. ಶೆಟ್ಟಿ ಮತ್ತು ಪುಷ್ಪಲತಾ ಶೆಟ್ಟಿ ದಂಪತಿಯ ಮೂವರು ಮಕ್ಕಳಲ್ಲಿ ರಾಹುಲ್ ಶೆಟ್ಟಿ ಒಬ್ಬರು. ರೋಹಿತ್ ಶೆಟ್ಟಿ ಹಿರಿಯ ಸಹೋದರನಾದರೆ ರಶ್ಮಿತಾ ಶೆಟ್ಟಿ ಸಹೋದರಿಯಾಗಿರುವರು. ರಾಹುಲ್ ಶೆಟ್ಟಿ ಕುಟುಂಬ ಪ್ರಸ್ತುತ ಅಂಧೇರಿ ಪೂರ್ವದ ಚಕಾಲದ ಸಹಾರ ರೋಡ್ ನ ಸಾಲಿಟೇರ್ ಹೋಟೆಲ್ ಬಳಿಯ ಗೋಪೇಶ್ವರ್ ಅಪಾರ್ಟ್ ಮೆಂಟ್ ನಲ್ಲಿ ವಾಸ್ತವ್ಯವಿದೆ. ಹಿಂದಿ ಸಿನಿಮಾದಲ್ಲೂ ಕೆಲಸ ಮಾಡುವ ವಿಶೇಷ ಆಸಕ್ತಿ ಹೊಂದಿರುವ ರಾಹುಲ್ ಶೆಟ್ಟಿ ಹಲವು ಪ್ರಸಿದ್ಧ ತಾರೆಯರ ಜೊತೆಗಿನ ಸಂಪರ್ಕದ ಮೂಲಕ ಸಿನಿಮಾದಲ್ಲಿ ಉತ್ತಮ ಭವಿಷ್ಯಕ್ಕಾಗಿ ಎದುರು ನೋಡುತ್ತಿದ್ದಾರೆ. ಬಾಲಿವುಡ್ ನಲ್ಲಿನ ತಮ್ಮ ಕೆಲಸಕ್ಕಾಗಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿರುವ ರಾಹುಲ್ ಅವರು ಸೋಶಿಯಲ್ ಮೀಡಿಯಾದಲ್ಲೂ ಹೆಜ್ಜೆ ಗುರುತುಗಳನ್ನು ಮೂಡಿಸಿರುವರು. ಈಗ ಡ್ಯಾನ್ಸ್ ಪ್ಲಸ್ ಪ್ರೊ ನ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ವೃತ್ತಿ ಬದುಕಿನಲ್ಲಿ ಹೊಸದಾದ ಛಾಪು ಮೂಡಿಸುವ ನಿರೀಕ್ಷೆಯಲ್ಲಿದ್ದಾರೆ.