ಮರೆಯಲಾಗದ ಬಂಟ ಸಮಾಜ ಸೇವಾ ಸಾಧಕರು ಶೀರ್ಷಿಕೆಯಡಿ ಬಂಟರವಾಣಿಯಲ್ಲಿ ಪ್ರಕಟವಾದ ವಿವಿಧ ಕ್ಷೇತ್ರದಲ್ಲಿ ಮಿಂಚಿ ಮರೆಯಾದ ಮಹನೀಯರ ಸಾಧನೆಯ ಹೆಜ್ಜೆಯ ಗುರುತುಗಳು ಅಳಿದರೂ ಉಳಿದವರು ಈ ಕೃತಿ. ಕಾಯ ಅಳಿದರೂ ಕಾಯಕದ ಕೀರ್ತಿ ಉಳಿಯುವುದು ಹೇಗೆ?ಅದನ್ನು ಉಳಿಸಿಕೊಳ್ಳುವುದು ಹೇಗೆ? ಎಂಬ ಅರಿವನ್ನು ಈ ಕೃತಿ ಓದುಗರಿಗೆ ನೀಡಲಿದೆ. ಬಂಟ ಸಮುದಾಯದ ಹಿರಿಯರು ನಮಗೆ ನಾವೇ ಶಿಲ್ಪಿಗಳು ಆದ ಪರಿಯನ್ನು, ಉನ್ನತಿಯ ಮೆಟ್ಟಿಲೇರಿದ ಶ್ರಮಜೀವಿಗಳ ಬದುಕಿನ ವಿವಿಧ ಮಗ್ಗುಲುಗಳ ಚಿತ್ರಣ ಈ ಕೃತಿಯಲ್ಲಿದೆ.
ಸಮಾಜದ ಜನರ ಮನದಲ್ಲಿ ಕುಟುಂಬಿಕರ ಹೃದಯದಲ್ಲಿ ಸದಾ ನೆಲೆ ನಿಂತ ಮಹಾ ಸಾಧಕರ ಜೀವನದ ಎತ್ತರ ಬಿತ್ತರಗಳನ್ನು ಅಕ್ಷರ ರೂಪಕ್ಕಿಳಿಸಿದಾಗ ಮೂಡಿ ಬಂದ ಕೃತಿ ಬಂಟರ ಸಂಘ ಮುಂಬಯಿ ಬಂಟರವಾಣಿಯ ಸಾಹಿತ್ಯ ಸಂಭ್ರಮದಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಹಾಸ ಕೆ ಶೆಟ್ಟಿಯವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿತು. ಮರೆಯಾದ ಮಹನೀಯರ ಪರಿಚಯ ಲೇಖನ ರೂಪದಲ್ಲಿ ಬಂಟರವಾಣಿಯ ಕೈ ಸೇರಿದ್ದನ್ನು ಒಂದುಗೂಡಿಸಿ ಕೃತಿರೂಪ ಕೊಟ್ಟು ಬಂಟರ ಸಂಘ ಮುಂಬಯಿ ಈ ಕೃತಿಯನ್ನು ಪ್ರಕಾಶಿಸಿದೆ. ಸಂಘದ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿಯವರ ಅಧ್ಯಕ್ಷೀಯ ನುಡಿ ಈ ಕೃತಿಯ ಶೋಭೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇಂತಹ ಮತ್ತಷ್ಟು ಮರೆಯಲಾಗದ ಬಂಟ ಸಾಧಕರನ್ನು ಗುರುತಿಸುವ ಯೋಜನೆ, ಯೋಚನೆಯ ಅಧ್ಯಕ್ಷರ ಸಕಾರಾತ್ಮಕ ನುಡಿ ಈ ಕೃತಿಯಲ್ಲಿದೆ.
ಅಳಿದರೂ ಉಳಿದವರು ಈ ಕೃತಿ ಓದಿದಾಗ ನನಗನಿಸಿದ್ದು ಹೀಗೆ ನಮ್ಮ ಹಿರಿಯರು ಕಾಲಿರಿಸದ ಕಾರ್ಯ ಕ್ಷೇತ್ರಗಳೇ ಇಲ್ಲ ಎಂದರೂ ತಪ್ಪಾಗಲಾರದು. ಉತ್ತಮ ವಿದ್ಯೆ ನೀಡಿ ಭವ್ಯ ಭಾರತ ಕಟ್ಟುವ ಸರದಾರರನ್ನಾಗಿ ರೂಪುಗೊಳಿಸಿದ ಶಿಕ್ಷಕರು, ಶಿಕ್ಷಣ ತಜ್ಞರನ್ನು ಇಲ್ಲಿ ಗುರುದೇವೋ ಭವ ಎನ್ನುವ ರೀತಿಯಲ್ಲಿ ಸ್ಮರಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಾಲಿರಿಸಿ ಹಲವರ ಜೀವ ಉಳಿಸಿದ ಕೀರ್ತಿ ಶೇಷ ವೈದ್ಯರು ವೈದ್ಯೋ ನಾರಾಯಣ ಹರಿ ಎಂಬಂತೆ ಈ ಕೃತಿ ಒಳಗೆ ಪ್ರಾರ್ಥ ಸ್ಮರಣಿಯರು.
ಆಯುರ್ ವೇದ ಪಂಡಿತರು, ನಾಟಿ ವೈದ್ಯರು, ಸಾಹಿತ್ಯ ಸೇವೆಗೈದ ಸರಸ್ವತಿ ಪುತ್ರರು. ಸಾಮಾಜಿಕ ರಂಗದಲ್ಲಿ ಮಿಂಚಿದವರು, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದಲ್ಲಿ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಿ ಅಜಾರಾಮರರಾದವರು. ಕಲೆಯನ್ನೇ ತಮ್ಮ ಜೀವವಾಗಿಸಿಕೊಂಡ ಕಲಾವಿದರು, ಕಲಾರಾಧಕರನ್ನು ಮರೆಯದೆ ಈ ಕೃತಿಯೊಳಗೆ ಸೇರಿಸಲಾಗಿದೆ. ಗಾಂಧಿಜೀಯೊಂದಿಗೆ ಉಪ್ಪಿನ ಸತ್ಯಾಗ್ರಹ ಮತ್ತು ಸ್ವಾತಂತ್ಯ ಹೋರಾಟದಲ್ಲಿ ಭಾಗಿಯಾದವರ ರೋಚಕ ಕಥನ ಈ ಕೃತಿಯೊಳಗಿದೆ. ಈ ಕೃತಿಗೆ ಬೆನ್ನುಡಿಯ ಬಲವನ್ನಿತ್ತವರು ರವೀಂದ್ರನಾಥ ಭಂಡಾರಿಯವರು ಕಾರ್ಯಾಧಕ್ಷ್ಯರು, ಬಂಟರವಾಣಿ. ಇವರ ಕಾರ್ಯಾವಧಿಯಲ್ಲಿ ಸಾಹಿತ್ಯ ಲೋಕಕ್ಕೆ ಇಂತಹ ಒಂದು ಅಪೂರ್ವ ಕೃತಿಯನ್ನು ಅರ್ಪಿಸುತ್ತಿರುವುದು ಅಭಿಮಾನ ಹಾಗೂ ಹೆಮ್ಮೆಯ ವಿಚಾರ. ಬಂಟ ಸಮಾಜದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ನಮ್ಮ ಹಿರಿಯರು ಕಷ್ಟಪಟ್ಟು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಸಿಗರು. ಹೆಚ್ಚು ವಿದ್ಯಾಭ್ಯಾಸ ಪಡೆಯದಿದ್ದರೂ ತಮ್ಮ ಜಾಣ್ಮೆ, ಕೌಶಲ್ಯ, ಶಿಸ್ತು, ನಿಷ್ಠೆ, ಶ್ರದ್ದೆಯಿಂದ ಹಂತ ಹಂತವಾಗಿ ಮೇಲೆರಿದವರು. ಈ ಕೃತಿಯಲ್ಲಿ ಇರುವ ಹಿರಿಯರು ನಮ್ಮ ಸಮಾಜದ ಮಾಣಿಕ್ಯವೇ ಸರಿ ಎಂದು ನುಡಿ ನಮನಗಳನ್ನು ಅರ್ಪಿಸಿದ್ದಾರೆ.
ಜೀವನ ಒಂದು ಸುಂದರವಾದ ತೋಟದಂತೆ. ತೋಟವೊಂದರಲ್ಲಿ ಫಲ ಪುಷ್ಪಾಧಿಗಳೊಂದಿಗೆ, ಕಸಕಡ್ಡಿ, ಕಲ್ಲುಮುಳ್ಳು ಇರುವಂತೆ ನಮ್ಮ ಹಿರಿಯರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಯೊಂದಿಗೆ ನೋವು, ನಲಿವು, ಕಷ್ಟ, ಕಾರ್ಪಣ್ಯಗಳು ಇತ್ತು. ಆದರೆ ಪಾಲಿಗೆ ಬಂದದ್ದು ಪಂಚಾಮೃತವೆಂಬಂತೆ ಬಾಳಿ ಬದುಕಿ ಇಂದಿಗೂ ನೆನಪಿನಂಗಳದಲ್ಲಿ ನೆಲೆಯೂರಿದ್ದ ಅನೇಕ ಮಹನೀಯರ ಬದುಕನ್ನು ಪುನಃ ನೆನಪಿಸಿಕೊಳ್ಳುವ ಸದಾವಕಾಶವಿದು. ಎಲ್ಲಿ ಮಾನವ ಪ್ರೀತಿ ಹೆಚ್ಚಿರುತ್ತದೆ. ಅಲ್ಲಿ ಸಾಮಾಜಿಕ ಕ್ಷೇಮಾಭಿವೃದ್ದಿಯೂ ಬೆಳೆಯುತ್ತದೆ. ತಾವು ಬೆಳೆಯುವುದರೊಂದಿಗೆ ತಮ್ಮವರನ್ನು ಬೆಳೆಸಿದ ಅನೇಕ ಮಹನಿಯರ ಸಾಧನೆ, ಅವರಿಟ್ಟ ಹೆಜ್ಜೆ ಗುರುತು ನಮಗೆಲ್ಲ ಆದರ್ಶಮಯ. ಅಂತವರನ್ನು ಪುನಃ ನೆನಪಿಸಿಕೊಳ್ಳುವ ಮಾದರಿ ಕಾರ್ಯ ಅನುಸರಿಸಿ, ಅನುಕರಿಸಬಹುದಾದ ಬಂಟರವಾಣಿ ಮೂಡಿಸಿದ ಹೆಜ್ಜೆ ಗುರುತು ಅಜರಾಮರ.
ಈ ಕೃತಿಯೊಳಗೆ 30 ಜನ ಮರೆಯಾದ ಮಹನಿಯರು ಸಮಾಜಕ್ಕೆ ನೀಡಿದ ಕೊಡುಗೆ, ಇಹ ಲೋಕ ತ್ಯಜಿಸಿ ಅದೇಷ್ಟೋ ವರ್ಷ ಕಳೆದರೂ ಸಮಾಜದ ಜನರ ಮನದಂಗಳದಲ್ಲಿ ಅಚ್ಚಳಿಯದೆ ಉಳಿಯಲು ಕಾರಣವಾದ ಮಹನೀಯರ ಕಾರ್ಯವೈಖರಿ, ಎಲ್ಲಕಿಂತ ಮುಖ್ಯವಾಗಿ ನಮ್ಮದೇ ಸಮಾಜದ ಯುವ ಪೀಳಿಗೆಗೆ ಈ ಮಹನೀಯರ ಕಿರು ಪರಿಚಯವಾದರೂ ಇರುವಂತಾಗಲು ಈ ಕೃತಿ ಸಹಕಾರ ನೀಡಲಿದೆ. ಡಾ. ಆರ್ ಕೆ ಶೆಟ್ಟಿಯವರು ಅತ್ಯಂತ ಗೌರವದಿಂದ ಪ್ರಕಾಶಕರ ನುಡಿಯಲ್ಲಿ “ನಮ್ಮ ಹಿರಿಯರ ಕಾಯ ಅಳಿದರೂ ಕಾಯಕಗಳು ಶಾಶ್ವತವಾಗಿ ಜನ ಮಾನಸದಲ್ಲಿ ಉಳಿದು ಮೆರೆದು, ಶೋಭಿಸಿ ರಾರಾಜಿಸುತ್ತಿದೆ. ಹತ್ತಾರು ಮಜಲುಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು, ತಮ್ಮ ಕೀರ್ತಿ ಪತಾಕೆಯನ್ನು ಅಷ್ಠ ದಿಕ್ಕುಗಳಿಗೂ ಕಾಣಿಸುವಷ್ಟು ಎತ್ತರಕ್ಕೇರಿಸಿದ್ದಾರೆ. ಅದು ಸಾಹಿತ್ಯ ಆಗಲಿ, ಸಮಾಜ ಸೇವೆಯಾಗಲಿ, ಸಾಂಸ್ಕ್ರತಿಕ ರಂಗ, ಕೃಷಿ ಭೂಮಿಯಾಗಲಿ, ಯಕ್ಷಗಾನ, ನಾಟಕ ರಂಗ, ಮಾತಿನಲ್ಲೂ ಕೃತಿಯಲ್ಲೂ ಆಡಿ ಮಾಡಿ ಮೆರೆದವರು ಬಂಟರೆನ್ನಲು ಹರ್ಷೊಲ್ಲಾಸವಾಗುತ್ತದೆ” ಎಂದು ಬರೆದಿದ್ದಾರೆ. ಅಷ್ಟೇ ಅಲ್ಲದೇ ಅನನ್ಯವಾದ ಲೇಖನಗಳನ್ನಿತ್ತ ಎಲ್ಲಾ ಲೇಖಕರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಕೃತಿಯ ಇನ್ನೊಂದು ವಿಶೇಷವೆಂದರೆ ಇಲ್ಲಿನ ಬರಹಗಳಲ್ಲಿ ಹೆಚ್ಚಿನವು ಮರೆಯಾದ ಮಹನೀಯರ ರಕ್ತ ಸಂಬಂಧಿಗಳ ನೆನಪಿನಂಗಳದಲ್ಲಿ ಉದುರಿದ ಅಕ್ಷರಗಳ ಸರ ಮಾಲೆ. ಅಳಿದರೂ ಉಳಿದವರು ಎಂಬ ರೂಪದಲ್ಲಿ ನಿಮ್ಮ ಮುಂದಿದೆ. ಮರೆಯಾದ ಮಹನೀಯರ ನೆನಪಿಸಿಕೊಳ್ಳುವ ಸದಾವಕಾಶ ಬಂಟರವಾಣಿ ನೀಡಿದ್ದು ಶ್ಲಾಘನೀಯ. ಕೃತಿಯ ಬಗ್ಗೆ ಹಲವು ಮಾಹಿತಿ ನೀಡುವ ಅಶೋಕ್ ಪಕ್ಕಳರ ಸಂಪಾದಕೀಯದ ಮೆರಗು ಇದೆ. ಅಳಿದರೂ ಉಳಿದವರು ಪುಸ್ತಕ ನಮಗೆಲ್ಲರಿಗೂ ಸ್ಷೂರ್ತಿಯ ಸೆಲೆಯಾಗಲೆಂದು ಅವರ ಹಾರೈಕೆಯೊಂದಿಗೆ ವಿವಿಧ ರಂಗಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಮಹನೀಯರು ನಮಗೆಲ್ಲಾ ಆದರ್ಶ ಮಾತ್ರವಲ್ಲ ಪ್ರಾತಃ ಸ್ಮರಣಿಯರು ಕೂಡ ಎಂಬ ಸಂಪಾದಕೀಯ ಬರಹವಿದೆ.
ಡಾ. ಸುನೀತಾ ಶೆಟ್ಟಿಯವರು ಈ ಕೃತಿಗೆ ಮುನ್ನುಡಿಯ ಸೇಸೆಯಿತ್ತು, ಸಮಾರೋಪದ ನುಡಿಯಲ್ಲಿ ನಮ್ಮನ್ನಗಲಿದ ಬಂಟ ಸಮಾಜದ ಕೆಲವು ಮಹಿಳಾ ಸಾಧಕಿಯರನ್ನು ಪರಿಚಯಿಸಿದ್ದಾರೆ. ಈ ಕೃತಿಯ ಪ್ರಧಾನ ಸಂಪಾದಕರು ಅಶೋಕ್ ಪಕ್ಕಳ, ಸಂಪಾದಕೀಯದಲ್ಲಿ ಪ್ರೇಮ್ ನಾಥ್ ಶೆಟ್ಟಿ ಮುಂಡ್ಕೂರು ಮತ್ತು ಲತಾ ಸಂತೋಷ್ ಶೆಟ್ಟಿ ಮುದ್ದುಮನೆಯವರಿದ್ದಾರೆ. ಇಹಲೋಕ ತ್ಯಜಿಸಿದರೂ ಎಲ್ಲರ ಮನದಂಗಳದಲ್ಲಿ ನೆಲೆ ನಿಂತು ಈ ಕೃತಿಯೊಳಗೆ ಅಮರವಾಗಿ ಅಕ್ಷರ ರೂಪದಲ್ಲಿ ಚಿರಸ್ಥಾಯಿಯಾದ 30 ಮರೆಯಾಲಾಗದ ಮಹನೀಯರಿಗೆ ಬಾಗಿದ ತಲೆಯ ಮುಗಿದ ಕೈಯ ನೂರು ನಮನಗಳನ್ನು ಸಲ್ಲಿಸುತ್ತೇವೆ.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ.