ಬಹರೈನ್ ಕನ್ನಡ ಸಂಘದ ನೂತನ ಅಧ್ಯಕ್ಷ ಅಮರನಾಥ ರೈ ಅವರ ನೇತೃತ್ವದ ಹೊಸ ಸಮಿತಿಯ ಪದಗ್ರಹಣವು ಬಹರೈನ್ ಕನ್ನಡ ಭವನದಲ್ಲಿ ನೆರವೇರಿತು. ಭಾರತೀಯ ರಾಯಭಾರಿ ವಿನೋದ್ ಕೆ. ಜಾಕಬ್ ಮಾತನಾಡಿ, ಕರ್ನಾಟಕದ ಸಾಧನೆಗಳನ್ನು ಶ್ಲಾಘಿಸಿ, ರಾಜ್ಯವು ಬಹರೈನ್ ನ ಸ್ಥಳೀಯ ಮತ್ತು ಎನ್ ಆರ್ ಐ ಗಳಿಗೆ ಅತ್ಯುತ್ತಮ ಹೂಡಿಕೆಯ ತಾಣವಾಗಿದೆ ಎಂದರು.
ಸಂಘವು ನಾಲ್ಕು ದಶಕಗಳಿಂದ ಸಮುದಾಯಕ್ಕೆ ಸಲ್ಲಿಸಿದ ಸೇವೆ ಮತ್ತು ಹೊಸ ಕನ್ನಡ ಭವನವನ್ನು ನಿರ್ಮಿಸುವಲ್ಲಿ ಅದರ ಪ್ರಯತ್ನವನ್ನು ಅವರು ಶ್ಲಾಘಿಸಿದರು. ಕರ್ನಾಟಕದ ಗೃಹ ಸಚಿವ ಡಾ. ಪರಮೇಶ್ವರ ಅವರು ಕರ್ನಾಟಕದ ಆರ್ಥಿಕ ಪ್ರಗತಿ ಮತ್ತು ಬಡತನ ನಿರ್ಮೂಲನೆ ಮತ್ತು ಸಮಾಜದ ಸ್ವಾಸ್ಥ್ಯದ ಬದ್ಧತೆಯ ಮೇಲೆ ಬೆಳಕು ಚೆಲ್ಲಿದರು. ರಾಜ್ಯವು ಪ್ರಸ್ತುತಪಡಿಸಿದ ಅನನ್ಯ ಹೂಡಿಕೆ ಅವಕಾಶಗಳನ್ನು ಬಳಸಿಕೊಳ್ಳಲು ಅವರು ಹೂಡಿಕೆದಾರರನ್ನು ವಿನಂತಿಸಿದರು. ಇದೇ ವೇಳೆ ಕನ್ನಡ ಭವನಕ್ಕೆ ತಮ್ಮ ಕುಟುಂಬದ ಪ್ರತಿಷ್ಠಾನದಿಂದ 1 ಕೋಟಿ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು.
ಅತಿಥಿಗಳಾಗಿ ಡಾ. ಆರತಿ ಕೃಷ್ಣ ರವಿಕುಮಾರ್ ಗೌಡ, ಮಿಥುನ್ ರೈ, ಬಹರೈನ್ ದಕ್ಷಿಣ ಕನ್ನಡ ಸುನ್ನಿ ಮುಸ್ಲಿಂ ಅಸೋಸಿಯೇಷನ್ ನ ಅಧ್ಯಕ್ಷ ಹಾಜಿ ಅಬ್ದುಲ್ ರಜಾಕ್ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಅಮರನಾಥ ರೈ ಅವರು ಸಂಘದ ಇತಿಹಾಸ ಮತ್ತು ಅದರ ಸದಸ್ಯರು ಮತ್ತು ಸಮಿತಿಗಳು ಭಾರತದ ಹೊರಗೆ ಮೊದಲ ಕನ್ನಡ ಭವನವನ್ನು ಸ್ಥಾಪಿಸಲು ಮಾಡಿದ ಪ್ರಯತ್ನಗಳನ್ನು ವಿವರಿಸಿ, ಭವನಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದಕ್ಕೆ ರಾಜ್ಯ ಸರಕಾರದಿಂದ ಹೆಚ್ಚಿನ ಸಹಕಾರ ಕೋರಿದರು.
ಡಾ. ರಿಚಾರ್ಡ್ ಕೊಲಾಸೋ ಅವರ ಬದುಕು ಕುರಿತ ಪುಸ್ತಕವನ್ನು ಅನಾವರಣಗೊಳಿಸಲಾಯಿತು. ನಿಕಟ ಪೂರ್ವ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕನ್ನಡ ಸಂಘದ ಹಿರಿಯ ಸದಸ್ಯ ಹಾಜಿ ಅಬ್ದುಲ್ ರಜಾಕ್ ಮತ್ತು ಸಮುದಾಯದ ಮುಖಂಡರಾದ ಆನಂದ್ ಲೋಬೋ ಅವರನ್ನು ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮನಡ್ಕ ಸ್ವಾಗತಿಸಿ ಸಂಧ್ಯಾ ಪೈ ಮತ್ತು ಶಿವಾನಂದ ಪಾಟೀಲ ನಿರೂಪಿಸಿದರು.