ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ಆಡಳಿತ ಮಂಡಳಿಯ ಸದಸ್ಯರ ಸಭೆಯು ಸೆಪ್ಟೆಂಬರ್ 4 ರಂದು ಮುಲ್ಕಿ ಬಳಿಯ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿರುವ ಶ್ರೀ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಛೇರಿಯಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿಯವರು ವಹಿಸಿದ್ದರು. ಸಭೆಯಲ್ಲಿ ಹಿಂದಿನ ಆಡಳಿತ ಮಂಡಳಿ ಸಭೆಯ ನಿರ್ಣಯವನ್ನು ದಾಖಲು ಮಾಡಲಾಯಿತು ಹಾಗೂ ಪರಿಶೋಧಿತ ಲೆಕ್ಕಪತ್ರಗಳ ಮಂಡನೆ ಮತ್ತು ಮಂಜೂರಾತಿ ಪಡೆಯಲಾಯಿತು.
ಜೊತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿಯವರಿಂದ ತೆರವಾದ ಸ್ಥಾನಕ್ಕೆ ಚಂದ್ರಹಾಸ ಶೆಟ್ಟಿ ರಂಗೋಲಿ ಅವರನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿಯವರು ಸ್ವಾಗತಿಸಿ ವರದಿ ಮಂಡಿಸಿದರು. ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿಯವರು ಲೆಕ್ಕಪತ್ರ ಮಂಡಿಸಿದರು.
ಬಳಿಕ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಕಳ ಹರೀಶ್ ಶೆಟ್ಟಿ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸಮಾಜದ ಅಭಿವೃದ್ದಿ ಮತ್ತು ಏಳಿಗೆಗಾಗಿ ಕೆಲಸ ಮಾಡುತ್ತಿದೆ. ಇದಕ್ಕೆ ದಾನಿಗಳು ಉತ್ತಮ ರೀತಿಯಲ್ಲಿ ನೆರವು ನೀಡಿ ಸ್ಪಂದಿಸುತ್ತಿದ್ದಾರೆ ಎಂದರು ಹಾಗೂ ಉಪಾಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿಯವರು ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮೇಳನದ ಕುರಿತು ಮಾತನಾಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ ನವೆಂಬರ್ 28 ಮತ್ತು 29 ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆಯುವ ವಿಶ್ವ ಬಂಟರ ಸಾಂಸ್ಕೃತಿಕ ಸ್ಪರ್ಧೆ ಮತ್ತು ವಿಶ್ವ ಬಂಟರ ಕ್ರೀಡಾಕೂಟಕ್ಕೆ ಸಮಾಜ ಬಾಂಧವರ ಸಹಕಾರ ಬೇಕು ಎಂದರು.
ಕ್ರೀಡೋತ್ಸವ ಸಮಿತಿಯ ಸಂಚಾಲಕ ಹಾಗೂ ಒಕ್ಕೂಟದ ಪೋಷಕ ಸದಸ್ಯರಾದ ಶ್ರೀ ಗಿರೀಶ್ ಶೆಟ್ಟಿ ತೆಳ್ಳಾರ್ ಮಾತನಾಡಿ ಕಬ್ಬಡಿ, ವಾಲಿಬಾಲ್, ಹಗ್ಗಜಗ್ಗಾಟ, ತ್ರೋಬಾಲ್, ಪಂದ್ಯಾಟಗಳಿಗೆ ಉತ್ತಮ ನಗದು ಬಹುಮಾನಗಳನ್ನು ನೀಡಲಾಗುವುದು. ಅಲ್ಲದೆ ಪಥ ಸಂಚಲನದಲ್ಲಿ ಭಾಗವಹಿಸುವ ತಂಡಗಳಿಗೂ ಸ್ಪರ್ಧೆ ಇದೆ. ಪ್ರಥಮ ಬಹುಮಾನ 1 ಲಕ್ಷ ರೂಪಾಯಿ, ದ್ವಿತೀಯ ಬಹುಮಾನ 75 ಸಾವಿರ, ತೃತೀಯ ಬಹುಮಾನ 50 ಸಾವಿರ ಹಾಗೂ ನಾಲ್ಕನೇ ಬಹುಮಾನ 25 ಸಾವಿರ ನಗದು ನೀಡಲಾಗುವುದು ಎಂದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕ ಹಾಗೂ ಒಕ್ಕೂಟದ ಪೋಷಕ ಸದಸ್ಯರಾದ ಶ್ರೀ ಚಂದ್ರಹಾಸ ಡಿ.ಶೆಟ್ಟಿ ಮಾತನಾಡಿ, ಸಾಂಸ್ಕೃತಿಕ ಸಮಿತಿಗೆ ಸದಸ್ಯರನ್ನು ಸೇರಿಸಿ ಒಂದು ತಂಡವನ್ನು ರಚಿಸಲಾಗಿದೆ. ಐದು ನಿಮಿಷಗಳ ಕಾಲಾವಧಿಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಒಂದು ಲಕ್ಷ ರೂಪಾಯಿ, ದ್ವಿತೀಯ 75 ಸಾವಿರ, ತೃತೀಯ 50 ಸಾವಿರ ಹಾಗೂ ಚತುರ್ಥ ಮತ್ತು ಪಂಚಮ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಮಹಾದಾನಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿ, ಮಹಾ ಪೋಷಕರಾದ ಶ್ರೀ ಶಶಿಧರ್ ಶೆಟ್ಟಿ ಇನ್ನಂಜೆ, ಪೋಷಕರಾದ ಶ್ರೀ ಪುರುಷೋತ್ತಮ್ ಶೆಟ್ಟಿ, ಶ್ರೀ ಶ್ರೀನಾಗೇಶ್ ಹೆಗ್ಡೆ, ಶ್ರೀ ಸುಧೀರ್ ಶೆಟ್ಟಿ, ಶ್ರೀ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಶ್ರೀ ಶ್ರೀಧರ್ ಶೆಟ್ಟಿ ಆರೂರು, ಸುಮಾರು 50 ಬಂಟರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಾಂಸ್ಕೃತಿಕ ಮತ್ತು ಕ್ರೀಡಾ ಸಮಿತಿಯ ಸದಸ್ಯರುಗಳು, ಮಹಿಳಾ ವಿಭಾಗದ ಅಧ್ಯಕ್ಷರು ಮತ್ತು ಸದಸ್ಯರುಗಳು, ಮಾಧ್ಯಮ ಮಿತ್ರರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.