ಕ್ರೀಡಾ ಕ್ಷೇತ್ರದ ಪ್ರೋತ್ಸಾಹ, ಸಾಧನೆ, ಅವಿರತ ಚಟುವಟಿಕೆಗಳಿಂದ ಸಮಾಜದ ಗಮನ ಸೆಳೆದಿರುವ ಉದ್ಯಮಿ, ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಅತ್ತೂರು ಸದಾನಂದ ಶೆಟ್ಟಿ ಅವರಿಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ನ್ನು ನೀಡಿ ಗೌರವಿಸಿದರು. ಎ ಸದಾನಂದ ಶೆಟ್ಟಿ ಅವರು ಉದ್ಯಮಿಯಾಗಿ, ಶಿಕ್ಷಣ ಪ್ರೇಮಿಯಾಗಿ, ಕ್ರೀಡಾ ಪೋಷಕರಾಗಿ, ಯಶಸ್ವಿಯಾಗಿದ್ದಲ್ಲದೆ ಸಾವಿರಾರು ಮಂದಿಗೆ ಉದ್ಯೋಗ ಒದಗಿಸಿಕೊಡುವ ಮೂಲಕ ಅವರ ಬದುಕಿಗೆ ನೆರಳಾದವರು.
ಮಂಗಳೂರಿನಲ್ಲಿ ತಮ್ಮ ಉದ್ಯಮಶೀಲತೆ, ಕಠಿನ ಶ್ರಮದಿಂದಾಗಿ ಹೋಟೆಲ್ ಉದ್ಯಮದಲ್ಲಿ ಯಶಸ್ಸನ್ನು ಕಂಡವರು. 1992ರಲ್ಲಿ ಶ್ರೀದೇವಿ ಎಜುಕೇಶನ್ ಟ್ರಸ್ಟ್ ಸ್ಥಾಪಿಸಿ ಸಹಸ್ರಾರು ವಿದ್ಯಾರ್ಥಿಗಳಿಗೆ ಶಿಕ್ಷಣವಿತ್ತರು. ಅವರು ಗುಣಮಟ್ಟದ ಶಿಕ್ಷಣಕ್ಕೆ ಮಹತ್ವ ನೀಡಿದವರು. ಚಿಕ್ಕಂದಿನಿಂದಲೇ ಕ್ರೀಡೆ, ಆಟೋಟಗಳತ್ತ ಆಕರ್ಷಿತರಾದವರು. ಉದ್ಯಮಿಯಾಗಿರುವಾಗಲೂ ಸದಾ ಹತ್ತು ಹಲವು ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸುವುದು, ಪ್ರೋತ್ಸಾಹ ನೀಡುವ ಮೂಲಕ ಆ ಕ್ಷೇತ್ರಕ್ಕೆ ಇನ್ನಿಲ್ಲದ ಕೊಡುಗೆ ನೀಡಿದ್ದಾರೆ. 1985ರಲ್ಲಿ ಇಂಡಿಯನ್ ಸ್ಯಾಟಲೈಟ್ ಟೆನ್ನಿಸ್ ಟೀಂ ಟೂರ್ನಮೆಂಟ್ ಆಯೋಜಿಸಿದ್ದು, ಅದರಲ್ಲಿ 90ರಷ್ಟು ದೇಶ ವಿದೇಶಗಳ ಕ್ರೀಡಾಳುಗಳು ಭಾಗವಹಿಸಿದ್ದು ವಿಶೇಷ. 1997ರಲ್ಲಿ ಆಲ್ ಇಂಡಿಯನ್ ಮಹಿಳಾ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದು, 1993 ರಲ್ಲಿ ಸೇ ನೋ ಟು ಡ್ರಗ್ಸ್ ರನ್ ಆಯೋಜನೆ ಮಾಡಿದಾಗ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು.
ಸ್ಪೋರ್ಟ್ ಪ್ರಮೋಟರ್ಸ್ ಕ್ಲಬ್, ಅಮೆಚೂರು ಕಬಡ್ಡಿ ಅಸೋಸಿಯೇಶನ್, ಜಿಲ್ಲಾ ಬಾಸ್ಕೆಟ್ಬಾಲ್ ಅಸೋಸಿಯೇಶನ್, ಮಂಗಳಾ ಅಥ್ಲೆಟಿಕ್ಸ್, ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಅಸೋಸಿಯೇಶನ್, ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನ, ಕೆನರಾ ಕ್ಲಬ್ ಮಂಗಳೂರು, ರಾಮಕೃಷ್ಣ ಟೀಮ್ಸ್ ಕ್ಲಬ್, ರೈಡರ್ಸ್ ಕ್ಲಬ್, ಕದ್ರಿ ಜಿಮ್ಖಾನಾ ಕ್ಲಬ್ ಮುಂತಾದ ಕ್ಲಬ್ಗಳ ಅಧ್ಯಕ್ಷ -ಮಾಜಿ ಅಧ್ಯಕ್ಷರಾಗಿದ್ದಾರೆ. ಅವರು ಕ್ರೀಡೆಗೆ ನೀಡಿದ ಪ್ರೋತ್ಸಾಹಕ್ಕಾಗಿ ರಾಜ್ಯ ಸರಕಾರ ಅವರನ್ನು ಬ್ಯಾಂಕಾಕ್ನಲ್ಲಿ ನಡೆದ 1998ರ ಏಷ್ಯನ್ ಗೇಮ್ಸ್ಗೆ ತಾಂತ್ರಿಕ ವೀಕ್ಷಕರನ್ನಾಗಿ ಕಳುಹಿಸಿತ್ತು. 2000ರಲ್ಲಿ ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಜರಗಿದ ಒಲಿಂಪಿಕ್ಸ್ನ್ನೂ ವೀಕ್ಷಿಸುವ ಅವಕಾಶ ಅವರಿಗೆ ದೊರೆತಿತ್ತು. ಜಿಲ್ಲಾಡಳಿತ ಹಾಗೂ ಕ್ರೀಡಾ ಸಂಘಟನೆಗಳ ನಡುವೆ ಕೊಂಡಿಯಾಗಿದ್ದುಕೊಂಡು ಪ್ರೋತ್ಸಾಹ, ನಿರಂತರ ಸಹಕಾರದ ಮೂಲಕ ಕ್ರೀಡಾ ಲೋಕಕ್ಕೆ ಅವರ ಅಪಾರ ಕೊಡುಗೆ ಸಲ್ಲಿಕೆಯಾಗಿದೆ.