ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ಆಯೋಜಿಸಲಾದ ‘ಬಂಟ ಕಲಾ ಸಂಭ್ರಮ’ ದಲ್ಲಿ ಭಾರತ ದರ್ಶನ ಕಲ್ಪನೆಯ ಸ್ಪರ್ಧೆಯಲ್ಲಿ ಶ್ರೀಮತಿ ರಾಜೇಶ್ವರಿ ಡಿ ಶೆಟ್ಟಿ ನಿರ್ದೇಶನದಲ್ಲಿ ಸುರತ್ಕಲ್ ಬಂಟರ ಸಂಘ ಪ್ರದರ್ಶಿಸಿದ ಭಾರತ ದರ್ಶನ ಪ್ರಹಸನ ಒಂದು ಲಕ್ಷ ರೂಪಾಯಿ ನಗದು ಸಹಿತ ಶಾಶ್ವತ ಫಲಕದೊಂದಿಗೆ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿತು.
ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಕೆ ಅಜಿತ್ ಕುಮಾರ್ ರೈ ಅವರು ಪ್ರಶಸ್ತಿಯನ್ನು ವಿತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಸಾಂಸ್ಕೃತಿಕ ಕಾರ್ಯದರ್ಶಿ ಜಯರಾಮ ಶೆಟ್ಟಿ ಮತ್ತು ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ ಹಾಗೂ ಪದಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.
ಸಮಾಜದ ಸಂಘಟನೆಗಳಿಗೆ ಬಂಟ ಕಲಾ ಸಂಭ್ರಮದಂತಹ ಕಾರ್ಯಕ್ರಮಗಳು ಪೂರಕವಾಗಿರುತ್ತದೆ. ಜೊತೆಗೆ ಇಂತಹ ಕಾರ್ಯಕ್ರಮಗಳು ನಡೆದಾಗ ವಲಯ ಸಂಘಗಳು ಕೂಡಾ ಸಕ್ರೀಯವಾಗುತ್ತದೆ ಎಂದು ಅಜಿತ್ ಕುಮಾರ್ ರೈ ತಿಳಿಸಿದರು. ಸಮಾರಂಭದಲ್ಲಿ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆಎಂ ಶೆಟ್ಟಿ, ಕೋಶಾಧಿಕಾರಿ ರಾಮಮೋಹನ್ ರೈ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಭಂಡಾರಿ ಬಿಲ್ಡರ್ಸ್ ನ ಮಾಲಕ ಲಕ್ಷ್ಮೀಶ ಭಂಡಾರಿ, ಶ್ರೀ ಡೆವಲಪರ್ಸ್ ಸಂಸ್ಥೆಯ ಮಾಲಕ ಗಿರೀಶ್ ಶೆಟ್ಟಿ ಕಟೀಲು, ಗಣೇಶೋತ್ಸವ ಸಮಿತಿಯ ಜಿಲ್ಲಾ ಸಂಚಾಲಕರಾದ ನಾಗರಾಜ ಶೆಟ್ಟಿ, ಮುನಿಯಾಲ್ ಉದಯಕುಮಾರ್ ಶೆಟ್ಟಿ, ಸುಧಾಕರ ಪೂಂಜ, ಆಶಾಜ್ಯೋತಿ ರೈ ಮೊದಲಾದವರು ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಮೈಮ್ ರಮೇಶ್ ರಂಗಾಯಣ, ಸುರೇಂದ್ರನಾಥ ಶೆಟ್ಟಿ ಮಾರ್ನಾಡ್, ಅವಿನಾಶ್ ಕಾಮತ್ ಭಾಗವಹಿಸಿದ್ದರು. ಕಿರಣ್ ಪಕ್ಕಳ, ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ಕಾರ್ಯಕ್ರಮ ನಿರ್ವಹಿಸಿದರು. ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘ ಪ್ರಥಮ, ಬೆಳ್ತಂಗಡಿ ಬಂಟರ ಸಂಘ ದ್ವಿತೀಯ, ಹಾಗೂ ಉಳ್ಳಾಲ ಬಂಟರ ಸಂಘ ತೃತೀಯ ಪ್ರಶಸ್ತಿಯನ್ನು ಪಡೆಯಿತು.
205 ಮಂದಿಯ ಸುರತ್ಕಲ್ ತಂಡ :
ಸುರತ್ಕಲ್ ಬಂಟರ ಸಂಘ ತುಂಗಭದ್ರಾ ಹೆಸರಿನಲ್ಲಿ ಪ್ರಸ್ತುತ ಪಡಿಸಿದ ಕಲಾಹಂದರದಲ್ಲಿ ಭರತರಾಜನಿಂದ ನಮ್ಮ ರಾಷ್ಟ್ರ ಭಾರತವಾಯಿತು ಎಂಬ ನೃತ್ಯದ ಮೂಲಕ ಪ್ರಾರಂಭಗೊಂಡು, ದಟ್ಟಡವಿಗಳಲ್ಲಿ, ಕಣಿವೆಗಳಲ್ಲಿ ನಮ್ಮಲ್ಲಿರುವ ನೂರಾರು ಬುಡಕಟ್ಟು ಜನಾಂಗದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಜವಾಬ್ದಾರಿಯನ್ನು ನಾಗರಿಕ ಸಮಾಜ ಹೊರಬೇಕು ಎನ್ನುವ ಸಂದೇಶದ ಜೊತೆಗೆ ಆಧುನಿಕತೆಯ ಸೋಗಿನಲ್ಲಿ ಬುಡಕಟ್ಟು ಜನಾಂಗದವರ ಸಾಂಸ್ಕೃತಿಕ ವೈಭವ ನಶಿಸಿ ಹೋಗಬಾರದು ಎಂದು ಪ್ರಹಸನದ ಮೂಲಕ ಸಮಾಜಕ್ಕೆ ಸಂದೇಶವನ್ನು ನೀಡಲಾಯಿತು. ಓಡಿಸ್ಸಾದಲ್ಲಿರುವ ಡೋಂಗ್ರಿಯಾ ಬುಡಕಟ್ಟು ಸಮಾಜದ ಆಚಾರ ವಿಚಾರ ಪದ್ದತಿ, ಆ ಊರಿಗೆ ಬರುವ ವೇದಾಂತ ಗಣಿಗಾರಿಕಾ ಸಂಸ್ಥೆಯನ್ನು ಓಡಿಸಲು ಒಂದಾಗುವ ಸಮುದಾಯ, ಬುಡಕಟ್ಟು ಸಮಾಜದಿಂದ ಬಂದ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಬಗೆಗಿನ ಚಿತ್ರಣ, ತ್ರೇತಾಯುಗ, ದ್ವಾಪರಯುಗ, ಧಾರ್ಮಿಕ ವೈದಿಕ ಚಿಂತನೆಗಳು, ತದನಂತರ ನಮ್ಮ ತಾಯ್ನೆಲ ಕಂಡ ಒಂದೊಂದು ಘಟನೆಗಳು, ಪರಿವರ್ತನೆಗಳನ್ನು ಸಂಯೋಜಿಸಿ, ಭಾರತವನ್ನು ವಿಶ್ವಗುರುವನ್ನಾಗಿಸುವಲ್ಲಿ ಮುಂದಿನ ಪೀಳಿಗೆಯಾದ ಮೃದು ಮನಸ್ಸಿನ ಮಕ್ಕಳಲ್ಲಿ ಪ್ರೀತಿ, ವಿಶ್ವಾಸ ದೇಶ ಪ್ರೇಮವನ್ನು ಬಿತ್ತಬೇಕೆನುವ ಸಂದೇಶವು ಭಾರತ ದರ್ಶನದಲ್ಲಿ ಒಳಗೊಂಡಿತ್ತು. ರಾಜೇಶ್ವರಿ ಡಿ ಶೆಟ್ಟಿಯವರು ರಚಿಸಿ, ನಿರ್ದೇಶಿಸಿದ ಕತೆಗೆ ವಿನೋದ್ ಶೆಟ್ಟಿ ಸಾಥ್ ನೀಡಿದರು. ರಜತ್ ಸಸಿಹಿತ್ಲು ಮತ್ತು ದೀಕ್ಷಾ ನೃತ್ಯ ಸಂಯೋಜನೆ ಮಾಡಿದ್ದರು.
ಇಪ್ಪತ್ತು ನಿಮಿಷಗಳ ಕಾಲಾವಧಿಯ ಭಾರತ ದರ್ಶನ ಪ್ರಹಸನದಲ್ಲಿ ಸುಮಾರು ಎಪ್ಪತ್ತು ಪುಟಾಣಿ ಮಕ್ಕಳೊಂದಿಗೆ ಒಟ್ಟು 205 ಮಂದಿ ಕಲಾವಿದರು ಭಾಗವಹಿಸಿದ್ದರು.