ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ ಅವರನ್ನು ಮಂಗಳೂರಿನ ಡಾ. ಎ. ಸದಾನಂದ ಶೆಟ್ಟಿ ಅಭಿನಂದನಾ ಸಮಿತಿ ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿಯವರು ಅಭಿನಂದನೆಯ ನುಡಿಗಳನ್ನಾಡಿ, ಸದಾನಂದ ಶೆಟ್ಟಿ ಅವರ ಯಶಸ್ಸಿನ ಹಿಂದೆ ಕಠಿನ ಪರಿಶ್ರಮ ಪ್ರಾಮಾಣಿಕತೆ ಇದೆ. ಆ ಮೂಲಕ ಅರ್ಹವಾಗಿಯೇ ಕುವೆಂಪು ವಿ.ವಿ. ಗೌರವ ಡಾಕ್ಟರೆಟ್ ನೀಡಿ ಗೌರವಿದೆ. ಶ್ರೀದೇವಿ ಶಿಕ್ಷಣ ಟ್ರಸ್ಟ್ನ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಎಲ್ಲಾ ವಿಧದ ಕ್ರೀಡೆಗಳಿಗೆ ಪ್ರೋತ್ಸಾಹಕರಾಗಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂಘಟನಾ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಜಾತಿ, ಮತಗಳ ಭೇದವಿಲ್ಲದೆ ಎಲ್ಲರಿಗೂ ಸ್ಪಂದಿಸುವ ಮೂಲಕ ಆದರ್ಶಪ್ರಾಯರಾಗಿದ್ದು, ತುಳುನಾಡಿನ ನಾಯಕನ ಸ್ಥಾನದಲ್ಲಿ ಸದಾನಂದ ಶೆಟ್ಟಿಯವರನ್ನು ಗುರುತಿಸಬಹುದಾಗಿದೆ ಎಂದರು.
ಡಾ. ಎ. ಸದಾನಂದ ಶೆಟ್ಟಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಈ ಅಭಿನಂದನೆಯಿಂದ ಮನಸ್ಸು ಹೆಚ್ಚಿದ ಗೌರವ ತುಂಬಿ ಬಂದಿದೆ. ಈ ನೆಪದಲ್ಲಿ ಎಲ್ಲಾ ಸ್ನೇಹಿತರು, ಬಂಧುಗಳು, ಹಿತೈಷಿಗಳು, ಅಭಿಮಾನಿಗಳನ್ನು ಒಂದೇ ಕಡೆಯಲ್ಲಿ ನೋಡುವ ಭಾಗ್ಯ ಸಿಕ್ಕಿದೆ ಎಂದರು.
ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಸಮಾಜಕ್ಕೆ ಮಾರ್ಗದರ್ಶನ ನೀಡುವ ಸ್ಥಾನದಲ್ಲಿ ಗೌರವವೂ ಹೆಚ್ಚಾಗಿದೆ ಎಂದರು. ಸದಾನಂದ ಶೆಟ್ಟಿಯವರ ಜೀವನ ಯುವ ಸಮುದಾಯಕ್ಕೆ ಮಾದರಿ ಯಾಗಿದೆ. ವಿದ್ಯಾರ್ಥಿ ಜೀವನದಿಂದ ರಾಜಕೀಯದವರೆಗೆ ಎಲ್ಲಾ ಹಂತದಲ್ಲೂ ಅವರು ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಜಾತ್ಯಾತೀಯ ಮನೋಭಾವ ಹೊಂದಿರುವ ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಎಲ್ಲರನ್ನೂ ಪ್ರೀತಿಯಿಂದ ಕಾಣುವ ವ್ಯಕ್ತಿತ್ವ ಅಜಾತಶತ್ರು ಸದಾನಂದ ಶೆಟ್ಟಿಯವರದ್ದು, ಅವರಿಗೆ ಡಾಕ್ಟರೆಟ್ ಪದವಿ ಸಿಗುವ ಮೂಲಕ ಅದರ ಗೌರವವೂ ಹೆಚ್ಚಾಗಿದೆ ಎಂದರು. ಈ ಸಂದರ್ಭದಲ್ಲಿ ಸದಾನಂದ ಶೆಟ್ಟಿಯವರು ನಡೆದು ಬಂದ ಹೆಜ್ಜೆ ಗುರುತಿನ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
ಮುರಳೀಧರ ಕಾಮತ್ ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು.
ಮೇಯರ್ ಜಯಾನಂದ ಅಂಚನ್, ಮಾಜಿ ಸಚಿವರಾದ ಬಿ. ರಮಾನಾಥ ರೈ, ಕೆ. ಅಭಯಚಂದ್ರ ಜೈನ್, ಮುಂಬಯಿ ಉದ್ಯಮಿ ಪಾದೆ ಅಜಿತ್ ರೈ, ಸಂಗೀತ ನಿರ್ದೇಶಕ ಗುರುಕಿರಣ್, ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಎಂಆರ್ಜಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿ, ಶಾಸಕ ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಸುರೇಶ ಶೆಟ್ಟಿ ಗುರ್ಮೆ ಉಪಸ್ಥಿತರಿದ್ದರು. ಅಭಿನಂದನಾ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಈಶ್ವರ ಕಟೀಲು, ಕದ್ರಿ ನವನೀತ ಶೆಟ್ಟಿ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ, ನಿರ್ವಹಿಸಿದರು.