ಮುಲ್ಕಿ ತಾಲ್ಲೂಕಿನ ಕರ್ನಿರೆ ಗ್ರಾಮದ ಕಾರ್ಣಿಕದ ದೈವ ಕ್ಷೇತ್ರವಾಗಿರುವ ಶ್ರೀ ಜಾರಂದಾಯ ದೈವಕ್ಕೆ ಗ್ರಾಮಸ್ಥರ ಸೇವಾ ರೂಪದ ಬಂಗಾರದ ಮೊಗವನ್ನು ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ತಂದು ಶ್ರೀ ಜಾರಂದಾಯ ಸ್ಥಾನಕ್ಕೆ ಸಮರ್ಪಣೆ ಮಾಡಿದರು.
ಕರ್ನಿರೆ ಧರ್ಮ ದೈವ ಜಾರಂದಾಯ ದೈವದ ಬಂಗಾರದ ಮುಗವನ್ನು ಗ್ರಾಮ ದೇವರು ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಪೂಜೆ ಮಾಡಿ, ದೈವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗ್ರಾಮದ ಮುಖ್ಯಸ್ಥರಾದ ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ನಿರ್ದೇಶಕ ಗಂಗಾಧರ ಎನ್ ಅಮೀನ್ ಕರ್ನಿರೆ, ಹರೀಶ್ಚಂದ್ರ ಶೆಟ್ಟಿ ಕರ್ನಿರೆ, ವಾಸುದೇವ ಶೆಟ್ಟಿ ಕರ್ನಿರೆ ಮತ್ತು ಊರ ಹತ್ತು ಸಮಸ್ತರ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ದೈವಸ್ಥಾನಕ್ಕೆ ಮುಗವನ್ನು ಅರ್ಪಿಸಲಾಯಿತು. ಜಾರಂದಾಯ ದೈವದ ಮುಗವನ್ನು ಬಂಗಾರದ ಮುಗವನ್ನಾಗಿ ಪರಿವರ್ತಿಸುವುದು ಊರಿನ ಪ್ರಮುಖರು ಹಾಗೂ ಊರಿನ ಸಮಸ್ತ ದೈವ ಭಕ್ತರ ಇಚ್ಛೆಯಾಗಿತ್ತು. ಇದುವರೆಗೆ ಮುಗಕ್ಕೆ ನಾಲಗೆ, ಕಿವಿ ಮತ್ತು ಸತ್ತಿಗೆಯನ್ನು ಬಂಗಾರದಿಂದ ಮಾಡಲಾಗಿತ್ತಾದರೂ ಅದನ್ನು ಸಂಪೂರ್ಣವಾಗಿ ಬಂಗಾರದಿಂದ ಮುಚ್ಚಿರಲಿಲ್ಲ. ಈ ವರ್ಷ ಸಮಯಾವಕಾಶ ಒದಗಿ ಬಂತು. ಹಾಗೆಯೇ ಆಟಿ ತಿಂಗಳಲ್ಲಿ ಬಾಗಿಲು ಹಾಕುವ ತುಡರ ಬಲಿ ಸೇವೆಯಲ್ಲಿ ದೈವದ ಅನುಮತಿ ಪಡೆದು ಸಂಕೋಚಗೊಳಿಸಿ ಒಂದು ತಿಂಗಳ ಸಮಯಾವಕಾಶ ಪಡೆದು ಮುಗವನ್ನು ಸಂಪೂರ್ಣ ಬಂಗಾರದಿಂದ ಮುಚ್ಚಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಹಾಗೂ ಗ್ರಾಮ ದೇವರಾದ ವಿಷ್ಣು ಮೂರ್ತಿ ದೇವರ ದೇವಾಲಯದಲ್ಲಿ ಪೂಜೆ ಮಾಡಿ ಬಳಿಕ ಮೆರವಣಿಗೆಯಲ್ಲಿ ದೈವಸ್ಥಾನಕ್ಕೆ ತಂದರು.
ಈ ಸಂದರ್ಭದಲ್ಲಿ ದೈವದ ಮೊಗವನ್ನು ಬಂಗಾರದ ಮುಗವನ್ನಾಗಿ ಪರಿವರ್ತಿಸಲು ತನು ಮನ ಧನಗಳಿಂದ ಸಹಕರಿಸಿದ ಸಮಸ್ತ ದೈವಭಕ್ತರಿಗೆ ಶ್ರೀ ಜಾರಂದಾಯ ದೈವಸ್ಥಾನದ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿತು. ಈ ಪುಣ್ಯ ಕಾರ್ಯದಲ್ಲಿ ಮುಲ್ಕಿ ಸೀಮೆಯ ಹಲವಾರು ಗಣ್ಯರು, ವಿವಿಧ ಧಾರ್ಮಿಕ ಕ್ಷೇತ್ರಗಳ ಮುಖಂಡರು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಉಪಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಸಾಯಿ ಕ್ಯಾರ್ ಲಾಜಿಸ್ಟಿಕ್ ನ ಆಡಳಿತ ನಿರ್ದೇಶಕ ಸುರೇಂದ್ರ ಎ ಪೂಜಾರಿ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ನಿರ್ದೇಶಕ ಪುರುಷೋತ್ತಮ್ ಎಸ್ ಕೋಟ್ಯಾನ್ ದಂಪತಿ ಮತ್ತಿತರ ಗಣ್ಯರು, ಗ್ರಾಮಸ್ಥರು ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿದರು.