ಆರ್ಥಿಕ ಸ್ವಾವಲಂಬನೆಯಿಂದ ಮಹಿಳೆಯರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡುತ್ತದೆ. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದ್ದು, ಸಂಘ ಸಂಸ್ಥೆಗಳು ಕೂಡ ಪ್ರೋತ್ಸಾಹ ನೀಡುವುದು ಅವಶ್ಯ ಎಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು. ರೆಡ್ ಕ್ರಾಸ್ ಸೊಸೈಟಿ ದ.ಕ. ಜಿಲ್ಲಾ ಘಟಕ ವತಿಯಿಂದ ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಮತ್ತು ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ವತಿಯಿಂದ ಯೆಯ್ಯಾಡಿಯ ಡಿಐಸಿಎಂ ಸಭಾಂಗಣದಲ್ಲಿ ಮಹಿಳೆಯರಿಗೆ ಆಯೋಜಿಸಿದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಅಧ್ಯಕ್ಷೆ ಚಂದ್ರಕಲಾ ಡಿ.ರಾವ್ ಮುಖ್ಯ ಅತಿಥಿಯಾಗಿದ್ದರು. ಕಾರ್ಯದರ್ಶಿ ಸುಮತಿ ದೇವದಾಸ್, ರೆಡ್ ಕ್ರಾಸ್ ಸೊಸೈಟಿ ನಿರ್ದೇಶಕ ಪಿ.ಬಿ.ಹರೀಶ್ ರೈ, ಸಂಪನ್ಮೂಲ ವ್ಯಕ್ತಿಗಳಾದ ಶಾಂತಿ ಆಚಾರ್ಯ, ರೇಖಲತಾ, ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿಯ ಪದಾಧಿಕಾರಿಗಳು ಇದ್ದರು. ರೆಡ್ ಕ್ರಾಸ್ ಸೊಸೈಟಿ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಉಪ ಸಮಿತಿ ನಿರ್ದೇಶಕಿ ಡಾ.ಸುಮನಾ ಬೋಳಾರ್ ಸ್ವಾಗತಿಸಿ, ಕಾರ್ಯದರ್ಶಿ ಸಂಜಯ ಶೆಟ್ಟಿ ವಂದಿಸಿದರು. ವಿದ್ಯಾ ರಾಕೇಶ್ ಮತ್ತು ಉಷಾ ನಾಯಕ್ ನಿರೂಪಿಸಿದರು. ಚಾಕಲೇಟ್ ತಯಾರಿ, ಹಣ್ಣುಗಳ ಜಾಮ್ ಮತ್ತು ಸ್ಮಾಶ್ ತಯಾರಿ ಬಗ್ಗೆ ಉಚಿತ ತರಬೇತಿ ನೀಡಲಾಯಿತು. 150 ಮಹಿಳೆಯರು ಭಾಗವಹಿಸಿದ್ದರು.