ಕ್ಯಾಪ್ಟನ್ ಬ್ರಜೇಶ್ ಚೌಟ ಸಾರಥ್ಯದಲ್ಲಿ 7 ನೇ ವರ್ಷದ ಮಂಗಳೂರು ಕಂಬಳ ಡಿ. 30 ರಂದು ಗೋಲ್ಡ್ ಫಿಂಚ್ ಸಿಟಿಯ ರಾಮ ಲಕ್ಷ್ಮಣ ಜೋಡು ಕೆರೆಯಲ್ಲಿ ನಡೆಯಲಿದ್ದು ಆ ಪ್ರಯುಕ್ತ ಕಂಬಳದ ಪೂರ್ವಭಾವಿ ಸಭೆಯು ಶುಕ್ರವಾರ ಮಂಗಳೂರಿನ ಪತ್ತುಮುಡಿ ಸೌಧದಲ್ಲಿ ನಡೆಯಿತು. ಸಭೆಯನ್ನು ಮಂಗಳೂರು ಕಂಬಳ ಸಮಿತಿಯ ಗೌರವ ಸಲಹೆಗರಾದ ಪ್ರಸಾದ್ ಕುಮಾರ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಬೃಜೇಶ್ ಶೆಟ್ಟಿ ಮಾತನಾಡಿ 7 ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಕಂಬಳವನ್ನು ಮುಂದಿನ ತಲೆಮಾರುಗಳಿಗೆ ಉಳಿಸುವ ಉದ್ದೇಶದಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯೋನ್ಮುಖರಾಗುವಂತೆ ಹಾಗೂ ಕಂಬಳಕ್ಕೆ ಮೆರುಗನ್ನು ನೀಡುವ ದೃಷ್ಟಿಯಿಂದ ಕರಾವಳಿಯ ಸಂಸ್ಕೃತಿಯನ್ನು ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಮಾತನಾಡಿ, ಮಂಗಳೂರು ನಗರದಲ್ಲಿ ನಡೆಯುವ ಕಂಬಳ ಜನ ಆಕರ್ಷಣೀಯ ಕೇಂದ್ರವಾಗುತ್ತಿದ್ದು ಕಂಬಳಕ್ಕೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಜಿಲ್ಲಾ ಕಂಬಳ ಸಮಿತಿಯ ವತಿಯಿಂದ ಸರ್ವ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಂಗಳೂರು ಕಂಬಳ ಸಮಿತಿಯ ಕಾರ್ಯದರ್ಶಿಗಳಾದ ಮನ್ಮತ್ ಶೆಟ್ಟಿಯವರನ್ನು ಮಂಗಳೂರು ಕಂಬಳ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಪಿ. ಆರ್. ಶೆಟ್ಟಿ, ವಿಜಯ್ ಕುಮಾರ್ ಕಂಗಿನಮನೆ, ಮಹಾನಗರ ಪಾಲಿಕೆ ಸದಸ್ಯರಾದ ಅನಿಲ್ ಕುಮಾರ್, ಮಂಗಳೂರು ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ, ಕಂಬಳ ಸಮಿತಿಯ ಕೋಶಾಧಿಕಾರಿ ಪ್ರೀತಮ್ ರೈ ಉಪಸ್ಥಿತರಿದ್ದರು. ಸಂಚಾಲಕ ಸಚಿನ್ ಶೆಟ್ಟಿ ಸಾಂತ್ಯ ಸ್ವಾಗತಿಸಿ, ಉಪಾಧ್ಯಕ್ಷ ಪ್ರಕಾಶ್ ಪೂಜಾರಿ ಗರೋಡಿ ವಂದಿಸಿದರು. ಉಪಾಧ್ಯಕ್ಷ ಈಶ್ವರ್ ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.