ನಿರಂತರವಾಗಿ ಯಕ್ಷಗಾನದಲ್ಲಿ ತೊಡಗಿಸಿಕೊಂಡವರೂ ಸಹ ಸಿ.ಎ. ಯಂತಹ ದೇಶದ ಅತ್ಯುನ್ನತ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಯಕ್ಷಗಾನ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಶಕ್ತಿ ಹೆಚ್ಚಾಗುತ್ತದೆ ಹೊರತು, ಪಠ್ಯ ಕಲಿಕೆಗೆ ಯಾವುದೇ ತೊಡಕು ಉಂಟು ಮಾಡುವುದಿಲ್ಲ ಎಂದು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಹೇಳಿದರು. ಮುಲ್ಲಕಾಡಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಯಕ್ಷಧ್ರುವ – ಯಕ್ಷ ಶಿಕ್ಷಣ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಈ ಬಾರಿ ಸುಮಾರು 40 ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಗತಿ ಆರಂಭಿಸಿದ್ದು, ಈ ವಿನೂತನ ಯೋಜನೆಯನ್ನು ಕಾವೂರು ಮುಲ್ಲಕಾಡು ಶಾಲೆಯಲ್ಲಿ ಆರಂಭಿಸಲಾಯಿತು. ಸಹ ಪಠ್ಯದಲ್ಲಿ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಿ, ಆ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಮಾತುಗಾರಿಕೆ, ನಾಟ್ಯ, ಹಾಡುಗಾರಿಕೆ, ವೇಷಭೂಷಣದಂತಹ ಸಂಸ್ಕಾರಯುತ ವಿಷಯ, ವಿಚಾರಗಳು ಮಕ್ಕಳಿಗೆ ಸಿಗಲಿ ಎಂಬುದು ಈ ತರಬೇತಿಯ ಉದ್ದೇಶವಾಗಿದೆ.
ಸ್ಥಳೀಯ ಕಾರ್ಪೊರೇಟರ್ ಗಾಯತ್ರಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷಧ್ರುವ ಫೌಂಡೇಶನ್ ನ ಪದಾಧಿಕಾರಿಗಳಾದ ವೃಂದಾ ಕೊನ್ನಾರ್, ಸಿ.ಎ ಸುದೇಶ್ ಕುಮಾರ್ ರೈ, ಪುರೊಷೋತ್ತಮ ಭಂಡಾರಿ ಅಡ್ಯಾರ್, ದಿವಿತ್ ಪೆರಾಡಿ, ದಂತವೈದ್ಯ, ಭಾಗವತ ಡಾ. ಪ್ರಖ್ಯಾತ್ ಶೆಟ್ಟಿ, ಮಂಗಳೂರು ಉತ್ತರ ವಲಯದ ಸಮನ್ವಯಾಧಿಕಾರಿ, ಪ್ರೌಢ ಶಾಲಾ ಮುಖ್ಯ ಉಪಾಧ್ಯಾಯ ಜಿ. ಉಸ್ಮಾನ್, ಪ್ರಾಥಮಿಕ ಶಾಲೆಯ ಮುಖ್ಯ ಉಪಾಧ್ಯಾಯ ವೇಣು ಗೋಪಾಲ, ಯಕ್ಷ ಗುರುಗಳಾದ ರಾಕೇಶ್ ರೈ ಅಡ್ಕ, ಎಸ್.ಡಿ.ಎಂ. ಸಿ. ಅಧ್ಯಕ್ಷೆ ಸುರೇಖಾ, ಮಲ್ಲಪ್ಪ ಉಪಸ್ಥಿತರಿದ್ದರು. ಉಸ್ಮಾನ್ ಜಿ. ಸ್ವಾಗತಿಸಿ, ವೀಣಾ ವಂದಿಸಿದರು. ನಾಗರಾಜ ಖಾರ್ವಿ ಸಹಕರಿಸಿದರು. ಹಿಲ್ಡಾ ಕ್ಲೆಮೆನ್ಸಿಯಾ ಪಿಂಟೋ ನಿರೂಪಿಸಿದರು.