ಪ್ರಸವಿಸಿದ ತಾಸಿನೊಳಗಾಗಿ ತಾಯಿ ತನ್ನ ಪ್ರಥಮ ಸ್ತನ್ಯವನ್ನು ಶಿಶುವಿಗೆ ಕುಡಿಸುವುದು ಅತ್ಯಂತ ಆವಶ್ಯಕವಾಗಿದೆ. ಪ್ರಥಮ ಸ್ತನ್ಯ ಎಂದರೇನು?, ಅದನ್ನು ಮಗುವಿಗೆ ಕುಡಿಸುವುದರ ಆವಶ್ಯಕತೆ ಮತ್ತು ಅದು ಮಗುವಿನ ಆರೋಗ್ಯ ಮತ್ತು ಬೆಳವಣಿಗೆಗೆ ಎಷ್ಟು ಪ್ರಯೋಜನಕಾರಿ?, ಪ್ರಥಮ ಸ್ತನ್ಯ ಕುಡಿಸದಿದ್ದರೆ ಶಿಶುಗಳ ಬೆಳವಣಿಗೆಯ ಮೇಲಾಗುವ ಪರಿಣಾಮಗಳೇನು?… ಎಂಬೆಲ್ಲ ವಿಷಯಗಳ ಬಗೆಗೆ ಮಕ್ಕಳ ತಜ್ಞರು ಇಲ್ಲಿ ಸಮಗ್ರವಾಗಿ ಬೆಳಕು ಚೆಲ್ಲಿದ್ದಾರೆ.

ಭಾರತದಲ್ಲಿ ಆಯುರ್ವೇದ ವೈದ್ಯರು
18ನೇ ಶತಮಾನ ದಲ್ಲಿಯೇ(ಪಾಶ್ಚಾತ್ಯ ತಜ್ಞರಿ ಗಿಂತಲೂ ಎಷ್ಟೋ ಮೊದಲೇ) ಜಾನುವಾರು ಗಳ ಪ್ರಥಮ ಸ್ತನ್ಯ (ಕೊಲೊಸ್ಟ್ರಮ್) ಹಾಲನ್ನು ಅನೇಕ ಸೋಂಕು ಗುಣಪಡಿಸಲು ಬಳಕೆ ಮಾಡುತ್ತಿದ್ದರು ಎನ್ನುವುದು ಗಮನಾರ್ಹ. ಮಹಿಳೆಯು ಮಗುವನ್ನು ಪ್ರಸವಿಸಿದ ಕೂಡಲೇ ಆಕೆಯಲ್ಲಿ ಉತ್ಪತ್ತಿಯಾಗುವ ಹಾಲಿಗೆ ಪ್ರಥಮ ಸ್ತನ್ಯ (ಕೊಲೊಸ್ಟ್ರಮ್) ಎನ್ನುತ್ತಾರೆ. ಚಿನ್ನದ ವರ್ಣ ಹಾಗೂ ದಪ್ಪವಾಗಿ ಇರುವುದರಿಂದ ಇದನ್ನು ದ್ರವರೂಪದ ಚಿನ್ನವೆಂದೂ ಕರೆಯುತ್ತಾರೆ. ಪ್ರೊಟೀನ್, ಇಮ್ಯುನೋ ಗ್ಲೋಬ್ಯುಲಿನ್ಗಳಿಂದ ಸಮೃದ್ಧವಾಗಿರುವ ದ್ರವವಿದು. ಮಗು ಹುಟ್ಟಿದ ಒಂದು ಗಂಟೆಯೊಳಗೆ ಇದನ್ನು ನವಜಾತ ಶಿಶುವಿಗೆ ಊಡಿಸಬೇಕು. ಇದರಿಂದ ಮಗುವಿನ ಆರೋಗ್ಯವೂ ಸುರಕ್ಷಿತವಾಗುತ್ತದೆ. ಪ್ರೌಢಾವಸ್ಥೆಯಲ್ಲಿ ಆರೋಗ್ಯಯುತವಾಗಿರಬೇಕಾದರೆ ಮಗುವಿಗೆ ತಾಯಿಯು ಕೊಲೊಸ್ಟ್ರಮ್ ಕುಡಿಸುವುದು ಆವಶ್ಯಕವಾಗಿದೆ.
ಮಗು ಜನಿಸಿ ಒಂದು ಗಂಟೆಯೊಳಗೆ ಕೊಲೊಸ್ಟ್ರಮ್ ಕುಡಿಸುವುದರಿಂದ ನವಜಾತ ಶಿಶುಗೆ ಅತ್ಯಗತ್ಯವಾಗಿ ಬೇಕಾಗುವ ಶಕ್ತಿಯ ಮೂಲವು ಸಿಕ್ಕಿದಂತಾಗುತ್ತದೆ. ಹೈಪೋಗ್ಲೆಸೇಮಿಯಾ ಎನ್ನುವ ಸ್ಥಿತಿಯಿಂದ ಮಗುವಿನ ಮೆದುಳು ಘಾಸಿಗೊಂಡು ಅಪಸ್ಮಾರ, ಮಾನಸಿಕ ಕ್ಷೀಣತೆ, ಸೆರೆಬ್ರಲ್ಪಾಲ್ಸಿಯಂತಹ ಸಮಸ್ಯೆಗೆ ತುತ್ತಾಗುವುದನ್ನು ತಪ್ಪಿಸುತ್ತದೆ.
ನವಜಾತ ಶಿಶುವಿನ ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ ಹಾಗೂ ಆ ಮೂಲಕ ಶಿಶುವಿನಲ್ಲಿ ಸೋಂಕು ಉಂಟಾಗುವುದನ್ನು ತಡೆಯುತ್ತದೆ. ಮಗುವಿನ ಕರುಳಿನ ಪಕ್ವತೆಯನ್ನು ಪ್ರೇರೇಪಿಸುವ ಮೂಲಕ ಜೀರ್ಣಾಂಗವ್ಯೂಹವನ್ನು ಬಲಪಡಿಸುತ್ತದೆ. ಕರುಳಿನ ಚತುರತೆಯನ್ನು ಪ್ರೋತ್ಸಾಹಿಸುವ ಮೂಲಕ ನವಜಾತ ಶಿಶುವಿನ ಕರುಳಿನಲ್ಲಿ ಉಂಟಾಗುವ ಮೆಕೋನಿಯಂ(ಮೊದಲ ಬಾರಿಯ ಮಲ) ಎನ್ನುವ ತ್ಯಾಜ್ಯವನ್ನು ಹೊರಹಾಕಿಸುತ್ತದೆ.
ನವಜಾತ ಶಿಶುವಿನ ಮಲವಿಸರ್ಜನೆಗೆ ನೆರವಾಗುತ್ತದೆ. ಹಸಿವು ಹಾಗೂ ಸಂತೃಪ್ತತೆಯನ್ನು ನಿಯಂತ್ರಿಸುವ ಮೆದುಳಿನಲ್ಲಿರುವ ಕೇಂದ್ರಗಳನ್ನು ರೂಪುಗೊಳಿಸುವುದಕ್ಕೆ ನರವಾಗುತ್ತದೆ. ಕೊಲೊಸ್ಟ್ರಮ್ ಹಾಲಿನಲ್ಲಿರುವ ಇನ್ಸುಲಿನ್ ಹಾಗೂ ಲೆಪ್ಟಿನ್ ಹಾರ್ಮೋನ್ಗಳಿಂದ ಈ ರೂಪುಗೊಳ್ಳುವಿಕೆ ನಡೆಯುತ್ತದೆ. ಇದು ಮುಂದೆ ಮಗುವಿನ ಭವಿಷ್ಯದ ಬದುಕಿನಲ್ಲಿ ಆಹಾರ ಸೇವನೆಯ ಮೇಲೆ ದೂರಗಾಮಿ ಪ್ರಭಾವವನ್ನು ಬೀರುವುದು ಎನ್ನುವುದು ಮಹತ್ವದ ವಿಚಾರ. ಈ ರೀತಿ ಹೆಚ್ಚಿನ ನವಜಾತ ಶಿಶುಗಳಿಗೆ ಹುಟ್ಟಿದ ಒಂದು ಗಂಟೆಯೊಳಗೆ ಸಿಗುವ ಕೊಲೊಸ್ಟ್ರಮ್ ಹಾಲು ಜೀವವಾಹಿನಿಯಾಗಿ ಕೆಲಸ ಮಾಡುತ್ತದೆ. ಮೊದಲ ದಿನವೇ ಎದೆಹಾಲು ಕುಡಿಯದಿರುವ ನವಜಾತ ಶಿಶುಗಳ ಮರಣ ಪ್ರಮಾಣವು ಮೂರು ಪಟ್ಟು ಜಾಸ್ತಿಯಾಗಿರುತ್ತದೆ. ಎಲ್ಲ ತಾಯಂದಿರೂ ನವಜಾತ ಶಿಶುಗಳಿಗೆ ಒಂದು ಗಂಟೆಯೊಳಗೆ ಸ್ತನ್ಯಪಾನ ಮಾಡಿಸಿದರೆ ಭಾರತದಲ್ಲೇ 2.5 ಲಕ್ಷ ಮಕ್ಕಳನ್ನು ಉಳಿಸಬಹುದು ಹಾಗೂ ವಿಶ್ವದಲ್ಲಿ ಒಂದು ಮಿಲಿಯನ್ ಮಕ್ಕಳ ಜೀವ ಕಾಪಾಡಬಹುದು.
ಕೊಲೊಸ್ಟ್ರಮ್ನಲ್ಲಿ ಏನಿದೆ?
ಕೊಲೊಸ್ಟ್ರಮ್ ಹಾಲು ಐಜಿ-ಜಿ/ ಐಜಿ-ಎ ಆ್ಯಂಟಿ ಬಾಡಿಗಳನ್ನು ಹೊಂದಿದ್ದು, ತಾಯಿಗೆ ಎದುರಾಗಬಹುದಾದ ಎಲ್ಲ ಸೋಂಕುಗಳಿಂದ ಮಗುವನ್ನು ರಕ್ಷಿಸುತ್ತದೆ. ಐಜಿ-ಎ ಆ್ಯಂಟಿಬಾಡಿಗಳು ಕರುಳಿನಲ್ಲಿ ಒಂದು ಕವಚದಂತೆ ಸೇರಿಕೊಂಡು ಅಂಟಿಕೊಳ್ಳಬಹುದಾದ ರೋಗಕಾರಕ ಬ್ಯಾಕ್ಟೀರಿಯಾ ಗಳಿಂದ ಕಾಪಾಡುತ್ತದೆ. ಕೊಲೊಸ್ಟ್ರಮ್ನಲ್ಲಿ ಈ ಕೆಳಗಿನ ಪ್ರಮುಖ ಅಂಶಗಳಿವೆ.
ಅತ್ಯಧಿಕ ಪ್ರಮಾಣದ ಪ್ರೊಟೀನ್ ಹಾಗೂ ಸಕ್ಕರೆ ಮತ್ತು ಕೊಬ್ಬಿನ ಅತೀ ಕಡಿಮೆ ಒಳಗೊಳ್ಳುವಿಕೆ. ಇಮ್ಯುನೋಗ್ಲೋಬ್ಯುಲಿನ್ಗಳಾದ ಐಜಿ-ಜಿ ಮತ್ತು ಐಜಿ-ಎ ಸತು ಮತ್ತು ವಿಟಮಿನ್-ಎ, ಈ ಮೂಲಕ ರೋಗಪ್ರತಿಕಾರಕ ಶಕ್ತಿ ಹೆಚ್ಚಳ ಹಾಗೂ ದೃಷ್ಟಿಯ ಬೆಳವಣಿಗೆಗೆ ಪೂರಕ. ಲ್ಯಾಕ್ಟೊಫೆರಿನ್, ಲ್ಯಾಕ್ಟೊಪೆರೋಕ್ಸಿಡೇಸ್ ಹಾಗೂ ಇತರ ಅನೇಕ ಜೀವಕ್ರಿಯಾ ಪದಾರ್ಥಗಳಿದ್ದು, ಇವು ಬೆಳವಣಿಗೆಗೆ ಸಹಕಾರಿ ಹಾಗೂ ಪೂರಕ ಪೋಷಕಾಂಶಗಳಾಗಿ ಕಾರ್ಯನಿರ್ವಹಿಸುತ್ತವೆ.
ಲ್ಯೂಕೋಸೈಟ್ಸ್ ಹಾಗೂ ಮ್ಯಾಕ್ರೊಫೇಜಸ್ ಎಂಬ ಜೀವಕಣಗಳನ್ನು ಕೊಲೊಸ್ಟ್ರಮ್ ಒಳಗೊಂಡಿದೆ. ಇವು ಮಗುವಿನ ದೇಹದಲ್ಲಿ ಆ್ಯಂಟಿ ಬಾಡಿಗಳ ಉತ್ಪಾದನೆಗೆ ಬೇಕಾದ ಸೂಚನೆಗಳನ್ನು ಮಗುವಿನ ಪ್ರತಿರೋಧಕ ವ್ಯವಸ್ಥೆಗೆ ರವಾನಿಸುತ್ತವೆ. ವಿಟಮಿನ್ ಎ, ಮೆಗ್ನಿಶಿಯಂ, ತಾಮ್ರವನ್ನೂ ಹೊಂದಿದೆ, ಈ ಮೂಲಕ ಚರ್ಮದ ಆರೋಗ್ಯ, ಎಲುಬು, ಹೃದಯದ ಆರೋಗ್ಯಕರ ಬೆಳವಣಿಗೆಗೆ ಕೊಲೊಸ್ಟ್ರಮ್ ನೆರವಾಗುತ್ತದೆ.
ಜೀವಕ್ರಿಯಾ ಪದಾರ್ಥಗಳು, ಹಾರ್ಮೋನ್ಗಳು, ಬೆಳವಣಿಗೆಯ ಅಂಶಗಳು ಮುಂತಾದವುಗಳನ್ನು ಹೊಂದಿದ್ದು, ಇವೆಲ್ಲವೂ ಮಗು ಹುಟ್ಟಿದ ಕೂಡಲೇ ಆರಂಭವಾಗುವ ದೇಹದ ವಿವಿಧ ಭಾಗಗಳ ಬೆಳವಣಿಗೆಗೆ ನೆರವಾಗುತ್ತವೆ.
ಒಟ್ಟಾರೆಯಾಗಿ ಸ್ತನ್ಯಪಾನಕ್ಕೆ ಉತ್ತೇಜನ ನೀಡುವುದು ಒಂದೇ ನವಜಾತ ಶಿಶುಗಳ, ಮಕ್ಕಳ ಮರಣವನ್ನು ಕಡಿಮೆ ಮಾಡಬಲ್ಲ ಕನಿಷ್ಠ ವೆಚ್ಚ ತಗಲುವ ಮಾರ್ಗವೆನ್ನುವುದನ್ನು ಎಲ್ಲರೂ ಅರ್ಥಮಾಡಿ ಕೊಳ್ಳಬೇಕು. ಎಲ್ಲ ಆರೋಗ್ಯ ಸೇವಾ ಪೂರೈಕೆದಾರರು ಸ್ತನ್ಯಪಾನದ ಉತ್ತೇಜನಕ್ಕೆ ಹಾಗೂ ಆ ಕುರಿತು ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನಿರಿಸುವುದು ಅವಶ್ಯವಾಗಿದೆ.
ಸಾಮಾನ್ಯ ಎದೆಹಾಲು ಹಾಗೂ ಕೊಲೊಸ್ಟ್ರಮ್ಗೆ ಇರುವ ವ್ಯತ್ಯಾಸ :
ಕೊಲೊಸ್ಟ್ರಮ್ ಸಾಮಾನ್ಯವಾಗಿ ಚಿನ್ನದ ವರ್ಣ ಹೊಂದಿದ್ದು, ಮೊಟ್ಟೆಯೊಳಗಿನ ಹಳದಿಗೆ ಹೋಲಿಕೆಯಾಗುತ್ತದೆ. ಕೊಲೊಸ್ಟ್ರಮ್ನ ಹಳದಿ ಬಣ್ಣವು ಕೊಬ್ಬಿನಲ್ಲಿ ಕರಗಬಹುದಾದ ಕೆರೊಟಿನಾಯ್ಡ ಎಂಬ ವರ್ಣದಿಂದ ಕೂಡಿದ್ದು ಇವು ಆ್ಯಂಟಿ ಓಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಕೊಲೊಸ್ಟ್ರಮ್ ಕೆಲವೊಮ್ಮೆ ಬಿಳಿ ಹಾಗೂ ಕೆನೆಯ ಬಣ್ಣದಿಂದಲೂ ಕೂಡಿರುತ್ತದೆ. ಇದು ಸಾಮಾನ್ಯ ಸಮಯದ ಎದೆಹಾಲಿಗಿಂತ ಹೆಚ್ಚು ಅಂಟಾಗಿರುತ್ತದೆ, ದಪ್ಪವಾಗಿರುತ್ತದೆ. ಕೆಲವೊಮ್ಮೆ ಸ್ವಲ್ಪಾಂಶ ರಕ್ತವೂ ಇರಬಹುದು. ಆದರೆ ಇದು ಯಾವುದೇ ಸಮಸ್ಯೆಯ ಸೂಚನೆಯಲ್ಲ. ಕೊಲೊಸ್ಟ್ರಮ್ ದಪ್ಪ ಇರುವ ಕಾರಣ ಬಿಂದುವಿನ ರೂಪದಲ್ಲಿ ಇರುತ್ತದೆಯಾದರೂ ಇದು ನವಜಾತ ಶಿಶುಗಳಿಗೆ ಸಾಕಾಗುತ್ತದೆ.
ಎದೆಹಾಲಿನ ಮೂರು ಹಂತಗಳು :
ಮೊದಲ ಹಂತ ಕೊಲೊಸ್ಟ್ರಮ್ ಆಗಿದ್ದು, ಪ್ರಸವದ ಕ್ಷಣದಿಂದಲೇ ಶುರುವಾಗುತ್ತದೆ. ಇದು ಎರಡರಿಂದ ಐದು ದಿನಗಳವರೆಗೆ ಇರುತ್ತದೆ. ಆ ಬಳಿಕ ಎದೆಹಾಲಿನ ಉತ್ಪಾದನೆ ಶುರುವಾಗುತ್ತದೆ. ಎರಡನೇ ಹಂತ ಹಾಲು ಹಾಗೂ ಕೊಲೊಸ್ಟ್ರಮ್ನ ನಡುವೆ ಇರುವಂಥದ್ದು, ಇದರಲ್ಲಿ ಹಾಲು ಹಾಗೂ ಕೊಲೊಸ್ಟ್ರಮ್ ಎರಡರ ಮಿಶ್ರಿತ ಅಂಶಗಳು ಇರುತ್ತವೆ. ಪ್ರಸವದಿಂದ ಐದು ದಿನದಿಂದ ತೊಡಗಿ ಎರಡು ವಾರಗಳವರೆಗೆ ಇದು ಇರುತ್ತದೆ. ಈ ವೇಳೆ ಹಾಲಿನ ಸ್ರವಿಸುವಿಕೆ ಗಣನೀಯವಾಗಿ ಹೆಚ್ಚುತ್ತದೆ.ಆ ಬಳಿಕ ಕೊಲೊಸ್ಟ್ರಮ್ ಹಾಲು ನಿಂತು ಎದೆಹಾಲಿನ ಉತ್ಪಾದನೆ ಶುರುವಾಗುತ್ತದೆ. ಇದು ತೆಳುವಾಗಿದ್ದು ಬಿಳಿ ವರ್ಣದಿಂದ ಕೂಡಿರುತ್ತದೆ, ಅಧಿಕ ಕೊಬ್ಬು, ಸಕ್ಕರೆ ಇರುತ್ತದೆ.








































































































