ಮುಂಬಯಿ ಸಾರಸ್ವತ ಲೋಕದ ಸಜ್ಜನ ಸಾಹಿತಿ, ಅಜಾತ ಶತ್ರು ‘ಶಿಮುಂಜೆ ಪರಾರಿ’ ಎಂಬ ವಿಶಿಷ್ಟ ಕಾವ್ಯ ನಾಮದಿಂದ ಪ್ರಸಿದ್ದಿಯಾದ ತುಳು ಕನ್ನಡ ಕವಿ, ನಾಟಕಗಾರ, ಅನುವಾದಕಾರ, ಅಧ್ಯಾಪಕ ಕಂಠದಾನ ಕಲಾವಿದ ಮತ್ತು ನಟ ಹೀಗೆ ಬಹುಮುಖ ಪ್ರತಿಭೆಗಳಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದ ಶಿಮುಂಜೆ ಪರಾರಿ ಸೀತಾರಾಮ ಮುದ್ದಣ್ಣ ಶೆಟ್ಟಿ ಅವರನ್ನು ಈ ಸಾರಿಯ ‘ವಯೋ ಸಮ್ಮಾನ’ದ ಗೌರವಕ್ಕೆ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ಸಂಸ್ಥೆ ಆಯ್ಕೆ ಮಾಡಿದೆ. ಬೆಂಗಳೂರಿನ ಐಲೇಸಾ ಅಂತಾರಾಷ್ಟ್ರೀಯ ಡಿಜಿಟಲ್ ಸಂಸ್ಥೆ ತನ್ನ ಸ್ಥಾಪನೆಯ ಮೂರನೇ ವರ್ಷವನ್ನು ಇದೇ ಆಗಸ್ಟ್ ತಿಂಗಳಲ್ಲಿ ಪೂರ್ಣಗೊಳಿಸಲಿದ್ದು ಆ ಪ್ರಯುಕ್ತ ಈ ವಯೋ ಸಮ್ಮಾನ ಗೌರವವನ್ನು ಶಿಮುಂಜೆ ಪರಾರಿಯವರಿಗೆ ಜುಲೈ ತಿಂಗಳ 29 ನೇ ತಾರೀಕಿನಂದು ಸಲ್ಲಿಸುವುದರೊಂದಿಗೆ ವಿಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ.
ಖ್ಯಾತ ಹಿನ್ನಲೆ ಗಾಯಕ ರಮೇಶ್ಚಂದ್ರರ ಸಾರಥ್ಯದ ಐಲೇಸಾ ಸಂಸ್ಥೆಯ ವಯೋ ಸಮ್ಮಾನ್ ಗೌರವ ಸಮಿತಿಯು ಅನಂತರಾವ್ ನೇತೃತ್ವದಲ್ಲಿ ಮುಂಬಯಿಯ ಸಾಹಿತಿ ಪೇತ್ರಿ ವಿಶ್ವನಾಥ್ ಶೆಟ್ಟಿ ಅವರ ಸಹಕಾರದೊಂದಿಗೆ, ಶ್ಯಾಮ್ ಎನ್ ಶೆಟ್ಟಿ, ದಿವಾಕರ್ ಎನ್ ಶೆಟ್ಟಿ ಮುದ್ರಾಡಿ, ಡಿ. ಕೆ. ಶೆಟ್ಟಿ ಪೊವಾಯಿ, ಖ್ಯಾತ ನ್ಯಾಯವಾದಿಗಳಾದ ಪ್ರಕಾಶ್ ಎಲ್ ಶೆಟ್ಟಿ ಮತ್ತು ಗುಣಕರ ಶೆಟ್ಟಿ, ಕರ್ನಾಟಕ ಮಲ್ಲ ದಿನ ಪತ್ರಿಕೆಯ ಸಂಪಾದಕರಾದ ಚಂದ್ರಶೇಖರ್ ಪಾಳೆತ್ತಾಡಿ, ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ. ಜೆ ಎನ್ ಉಪಾಧ್ಯ, ಮಾತೃಭೂಮಿ ಕೋ – ಆಪರೇಟಿವ್ ಸೊಸೈಟಿಯ ಪ್ರವೀಣ್ ಶೆಟ್ಟಿ, ಶ್ರೀನಿವಾಸ ಸಾಫಲ್ಯ, ಡಾ. ಸಾಯಿಗೀತಾ, ವೀಣಾ ಟಿ ಶೆಟ್ಟಿ, ಆಲ್ ಅಮೇರಿಕ ತುಳುಕೂಟದ ಅಧ್ಯಕ್ಷೆ ಶ್ರೀವಲ್ಲಿ ಮಾರ್ಟೆಲ್ ರೈ, ಭಾಸ್ಕರ್ ಶೇರಿಗಾರ್ ಖೋಸ್ಟನ್, ನರೇಂದ್ರ ಶೆಟ್ಟಿ ಸೌದಿ ಅರೇಬಿಯಾ, ರಘು ಪೂಜಾರಿ ಕುವೈಟ್, ಕವಿ ಲಕ್ಷ್ಮೀಶ ಶೆಟ್ಟಿ ಮುಂಬಯಿ ಇವರನ್ನೊಳಗೊಂಡ ಸಲಹಾ ಸಮಿತಿಯೊಂದಿಗೆ ಚರ್ಚಿಸಿ ಸರ್ವ ಸಮ್ಮತಿಯೊಂದಿಗೆ ಆಯ್ಕೆ ಮಾಡಲಾಯಿತು.
ಕವಿಯ ಬಂಧು, ಅಭಿಮಾನಿಗಳು ಮತ್ತು ಶಿಷ್ಯ ವೃಂದ ಸೇರಿ ಕಂಟ್ರಿ ಕ್ಲಬ್ ಅಂಧೇರಿ( ಪ) ಇಲ್ಲಿ ಮಧ್ಯಾಹ್ನ ಎರಡು ಗಂಟೆಗೆ ಸರಳವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಕವಿಯ ಸಾಹಿತ್ಯ ವಾಚನ, ವಿಮರ್ಶೆ ಮತ್ತು ಶಿಮುಂಜೆಯವರ ಇಷ್ಟದ ತಿನಸು ಮತ್ತು ಉಡುಗೊರೆಗಳನ್ನು ಅರ್ಪಿಸಿ, ಹಾಡುಗಳನ್ನು ಕವಿಯ ಸಮ್ಮುಖದಲ್ಲಿ ಹಾಡಿ, ಎಂಬತ್ತ ನಾಲ್ಕು ವರ್ಷ ಹರೆಯದ ವಯೋ ಸಾಧನೆಯ ನೆನಪಿಗೆ 84000 ರೂ. ಗಳ ಗೌರವ ಗುರು ದಕ್ಷಿಣೆಯೊಂದಿಗೆ ಈ ವಯೋಸಮ್ಮಾನವನ್ನು ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿಯವರು ಪ್ರದಾನ ಮಾಡಲಿದ್ದು, ಅಬುಧಾಬಿಯ ಸರ್ವೋತ್ತಮ ಶೆಟ್ಟಿ, ಕತಾರಿನ ರವಿ ಶೆಟ್ಟಿ ಮೂಡಂಬೈಲು ಮತ್ತು ಮಂಗಳೂರಿನ ಯುವ ಲೇಖಕಿ ಅಕ್ಷತಾ ರಾಜ್ ಪೆರ್ಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಐಲೇಸಾದ ಮುಂಬಯಿ ಸಂಚಾಲಕ ಸುರೇಂದ್ರ ಶೆಟ್ಟಿ ಮಾರ್ನಾಡು ತಿಳಿಸಿದ್ದಾರೆ.